ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾತೂರ: ಮುಂದುವರಿದ ಕಾಡಾನೆಗಳ ದಾಳಿ

Last Updated 12 ಡಿಸೆಂಬರ್ 2013, 7:19 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಕಾತೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಡಸಾಲಿ ಗ್ರಾಮದ ಹೊಲಗದ್ದೆಗಳಿಗೆ ಮಂಗಳವಾರ ರಾತ್ರಿ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ತೋಟ, ಪೈರನ್ನು ಹಾನಿ ಪಡಿಸಿವೆ. ಶಿವಪ್ಪ ಜಾಧವ ಅವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಸುಮಾರು 30ಕ್ಕೂ ಹೆಚ್ಚು ಬಾಳೆ ಗಿಡಗಳು ಹಾಗೂ ಹತ್ತರಷ್ಟು ಅಡಿಕೆ ಮರಗಳನ್ನು ಮುರಿದು ಹಾಕಿವೆ.

  ಮಂಜುನಾಥ ಜಾಧವ ಅವರ ಭತ್ತದ ಗದ್ದೆಗೆ ನುಗ್ಗಿ ಕೊಯ್ಲಿಗೆ ಬಂದ ಭತ್ತವನ್ನು ನೆಲಕ್ಕೆ ಮಲಗಿಸಿವೆ.  ದುರ್ಗಪ್ಪ ಲಕ್ಮಾಪುರ ಅವರ  ಭತ್ತದ ಬಣವೆಯನ್ನು ನೆಲಸಮ ಮಾಡಿವೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತವನ್ನು ರಾಶಿ ಮಾಡಬೇಕೆನ್ನುವಷ್ಟರಲ್ಲಿ ಕಾಡಾನೆಗಳ ದಾಳಿಗೆ ಬಲಿಯಾಗಿದೆ.

ತೋಟ ಹಾಗೂ ಹೊಲಗದ್ದೆಗಳ ಸನಿಹವೇ ಅರಣ್ಯ ಪ್ರದೇಶವಿದ್ದು ರಾತ್ರಿ 8ಗಂಟೆ ಸುಮಾರಿಗೆ 8–10 ಕಾಡಾನೆಗಳು ಹೊಲಗದ್ದೆಗಳಿಗೆ ದಾಳಿ ನಡೆಸಿವೆ. ಎರಡು ತಂಡಗಳಾಗಿ ಬೇರ್ಪಟ್ಟು ಒಂದು ತಂಡ ತೋಟಕ್ಕೆ ದಾಳಿ ನಡೆಸಿದರೇ ಮತ್ತೊಂದು ತಂಡದ ಎರಡು ಆನೆಗಳು ಭತ್ತದ ಗದ್ದೆಯತ್ತ ನುಗ್ಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಗುಂಪಿನಲ್ಲಿ ಎರಡು ಮರಿ ಆನೆಗಳು ಇದ್ದು ಅವು ಗುಂಪಿನಿಂದ ತಪ್ಪಿಸಿಕೊಂಡು ಮುಂದಿನ ಗದ್ದೆಯತ್ತ ತೆರಳಿದ್ದರಿಂದ  ಕಾಡಾನೆಗಳು ಮರಿ ಆನೆಗಳ ರಕ್ಷಣೆಗಾಗಿ ಹೊಲಗದ್ದೆಯ ತುಂಬೆಲ್ಲ ಓಡಾಡಿ ಬೆಳೆ ಹಾಳು ಮಾಡಿವೆ. ಬುಧವಾರ ಮಧ್ಯಾಹ್ನ ಸನಿಹದ ಅರಣ್ಯದಿಂದ ಕಾಡಾನೆಗಳ ಶಬ್ಧ ಕೇಳಿಬರುತ್ತಿತ್ತು’ ಎಂದು ರೈತರು ಹೇಳಿದರು.

‘ಮಂಗಳವಾರ ರಾತ್ರಿ  ಕಾಡಾನೆಗಳು ಶಬ್ಧ ಮಾಡುತ್ತ ತೋಟದಲ್ಲಿ ನುಗ್ಗುತ್ತಿರುವುದು ಕಂಡುಬಂತು. ಗಾಬರಿಗೊಂಡು ದೂರದಲ್ಲಿ ಓಡಿ ಹೋದೆ. ಅಷ್ಟರಲ್ಲಿ ಗ್ರಾಮಸ್ಥರಿಗೆ ವಿಷಯ ತಿಳಿದು ಜನರು ದೂರದಿಂದಲೇ ಬೆಂಕಿ ಹಾಕಿ ಕೂಗಾಟ ನಡೆಸಿದ್ದರಿಂದ ಕಾಡಾನೆಗಳು ಮುಂದಿನ ಗದ್ದೆಯತ್ತ ತೆರಳಿದವು.

ಮಧ್ಯರಾತ್ರಿ ನಂತರವೂ ಕಾಡಾನೆಗಳು ಹೊಲಗದ್ದೆಗಳಲ್ಲಿ ಬೀಡುಬಿಟ್ಟಿರುವ ಶಬ್ಧ ಕೇಳಿಬರುತ್ತಿತ್ತು. ಇಲ್ಲಿಯೇ ಸನಿಹದ ಅರಣ್ಯ ಪ್ರದೇಶಕ್ಕೆ ತೆರಳಿದ್ದು ವಾಪಸ್‌ ಮರಳುವ ಸಾಧ್ಯತೆಯಿದೆ’ ಎಂದು ಮಂಜುನಾಥ ಜಾಧವ ತಿಳಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ  ಹಾನಿಯಾದ ಬಗ್ಗೆ ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT