ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಐಜಿ ರೂಪಾ ವರ್ಗಾವಣೆ, ಶರತ್‌ ಹತ್ಯೆಗೆ ಖಂಡನೆ

ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 20 ಜುಲೈ 2017, 7:05 IST
ಅಕ್ಷರ ಗಾತ್ರ

ರಾಯಚೂರು: ಡಿಐಜಿ ರೂಪಾ ಅವರ ವರ್ಗಾವಣೆ ಹಾಗೂ ಶರತ್‌ ಮಡಿವಾಳ ಹತ್ಯೆ ಘಟನೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕಾಂಗ್ರೆಸ್‌ ಆಡಳಿತವಿರುವ ರಾಜ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ. ಡಿಐಜಿ ರೂಪಾ ಅವರ ವರ್ಗಾವಣೆ ಮೂಲಕ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬುದು ತೋರಿಸಿಕೊಟ್ಟಿದೆ ಎಂದು ಆರೋಪಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಕ್ಕಾಗಿಯೇ ಕಾರಾಗೃಹ ಇರುವುದು. ಆದರೆ, ಸರ್ಕಾರ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುವವರಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ನೀಡಿ ಜೈಲನ್ನು ಪಂಚತಾರಾ ಹೊಟೇಲ್‌ ಮಾಡಲು ಹೊರಟಿದೆ ಎಂದು ದೂರಿದರು.

ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಶಶಿಕಲಾ ಹಾಗೂ ನಕಲಿ ಸ್ಟಾಂಪ್ ಹಗರಣ ಆರೋಪಿ ತೆಲಗಿಗೆ ಐಷಾರಾಮಿ ಜೀವನ ನಡೆಸಲು ಸರ್ಕಾರ ಅವಕಾಶ ನೀಡಿರುವುದು ನಾಚಿಗೇಡಿನ ಸಂಗತಿ. ಕಾರಾಗೃಹದ ಹಿರಿಯ ಅಧಿಕಾರಿ ಡಿಜಿಪಿ ಎರಡು ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ವರದಿ ರೂಪಾ ಅವರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಾದ ಸರ್ಕಾರ ವರದಿ ನೀಡಿರುವ ಅಧಿಕಾರಿಯನ್ನೇ   ವರ್ಗಾವಣೆ ಮಾಡಿದ್ದು, ಸರಿಯಾದ ಕ್ರಮವಲ್ಲ. ಕೂಡಲೇ ವರ್ಗಾವಣೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮಂಗಳೂರಿನಲ್ಲಿ ಶರತ್‌ ಮಡಿವಾಳರ ಹತ್ಯೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಈ ಎಲ್ಲ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮುಖಂಡರಾದ ಎ.ಪಾಪಾರೆಡ್ಡಿ, ಆರ್‌.ತಿಮ್ಮಯ್ಯ, ದೊಡ್ಡಮಲ್ಲೇಶಪ್ಪ, ಶಿವಬಸಪ್ಪ, ಶಶಿರಾಜ ಮಸ್ಕಿ, ಬಂಡೇಶ ವಲ್ಕಂದಿನ್ನಿ, ಶ್ರೀನಿವಾಸರೆಡ್ಡಿ, ಆಂಜನೇಯ ಯಕ್ಲಾಸಪೂರು, ಮಹಾಲಿಂಗ ರಾಂಪೂರ, ರಾಜೇಶ ಜೈನ್, ನರಸಪ್ಪ ಯಕ್ಲಾಸಪೂರು, ರಾಮುಗಿಲ್ಲೇರಿ, ಈ.ವಿನಯಕುಮಾರ, ಮಲ್ಲೇಶ ನಾಯಕ, ಗಿರಿಶ್ ಕನಕವೀಡು, ಹರವಿ ನಾಗನಗೌಡ, ಸುರಗಿಮಠ, ಚಂದ್ರಶೇಖರ, ಕಡಗೋಲು ರಾಮು, ಸಂದಿಪ್ ಸಿಂಗನೋಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT