ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಕಾಲದ ಶಾಸನ ಪತ್ತೆ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಉಡುಪಿ: ವಿಜಯನಗರದ ಮಹಾರಾಜ ಒಂದನೇ ದೇವರಾಯನ ಕಾಲದ ಅಪರೂಪದ ಶಾಸನವೊಂದು ಕುಂದಾಪುರ ತಾಲ್ಲೂಕಿನ ರಟ್ಟಾಡಿಯಲ್ಲಿ ಪತ್ತೆಯಾಗಿದೆ ಎಂದು ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಪುರಾತತ್ವ ಉಪನ್ಯಾಸಕ ಪ್ರೊ. ಟಿ.ಮುರುಗೇಶಿ ಬುಧವಾರ ತಿಳಿಸಿದ್ದಾರೆ.

ಕುಂದಾಪುರ ಭಂಡಾರ್‌ಕರ್ಸ್‌ ಕಾಲೇಜಿನಲ್ಲಿ ಸಂರಕ್ಷಿಸಲಾಗಿರುವ ಶಾಸನದ ಬಗ್ಗೆ, ಕಾಲೇಜಿನ ಇತಿಹಾಸ ವಿಭಾಗದ ಪ್ರೊ. ಉದಯ ಕುಮಾರ್ ಮತ್ತು ಪ್ರೊ. ಗೋಪಾಲ್ ಮಾಹಿತಿ ನೀಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರು. ಹಾಗಾಗಿ ವಿಜಯನಗರ ಮತ್ತು ತುಳುನಾಡಿನ ಇತಿಹಾಸ ಅಧ್ಯಯನ ದೃಷ್ಟಿಯಿಂದ ಅತ್ಯಂತ ಪ್ರಮುಖ ಶಾಸನವೊಂದನ್ನು ಶೋಧಿಸಿದಂತಾಗಿದೆ ಎಂದಿದ್ದಾರೆ.

4 ಅಡಿ ಎತ್ತರದ ಆಯತಾಕಾರದ ನೀಸ್ ಶಿಲೆಯ ಫಲಕದ ಮೇಲ್ಭಾಗವನ್ನು ಕುದುರೆ ಲಾಳಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅನುಕ್ರಮವಾಗಿ ಎಡದಿಂದ ಬಲಕ್ಕೆ ನಿಂತಿರುವ ನಂದಿ, ಪ್ರಭಾವಳಿ ಸಹಿತವಾದ ಶಿವಲಿಂಗ, ದೀಪಸ್ಥಂಭ, ಪದ್ಮಾಸನದಲ್ಲಿ ಅಂಜಲೀಬದ್ಧನಾಗಿ ಕುಳಿತ ಭಕ್ತನೊಬ್ಬನ ಶಿಲ್ಪವಿದೆ. ಮೇಲೆ ಸೂರ್ಯ ಮತ್ತು ಚಂದ್ರರ ಉಬ್ಬು ಶಿಲ್ಪಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶಾಸನ‘ ಶ್ರೀ ಗಣಾಧಿ ಪತವೇ ನಮ: ಶ್ರೀ ದೇವ ದೇವ ಭೃಂಗನಾಥ, ಶ್ರೀ ನಮಸ್ತುಂಗ ಸಿರಶ್ಚುಂಬಿ ಚಂದ್ರ ಚಾಮರ ತಾರವೇ ತ್ರೈಲೋಕ್ಯ ನಗರಾರಂಭ ಮೂಲ ಸ್ತಂಭಾಯ ಸಂಭವೇ’ ಎಂಬ ಶಿವಸ್ತುತಿಯೊಂದಿಗೆ ಆರಂಭವಾಗಿದೆ. ಜಯಾಭ್ಯುದಯ ಶಕ ವರ್ಷ 1345, ಸರ್ವಧಾರಿ ಸಂವತ್ಸರ ಬಹುಳ 12, ಭಾನುವಾರ ಎಂದು ಕಾಲ ಉಲ್ಲೇಖಿಸಲಾಗಿದ್ದು, ಅದು ಕ್ರಿ.ಶ. 1408ಕ್ಕೆ ಸರಿ ಹೊಂದುತ್ತದೆ ಎಂದು ಅವರು ತಿಳಿಸಿದ್ದಾರೆ.

ಶಾಸನ 1ನೇ ದೇವರಾಯನನ್ನು ರಾಜಾಧಿರಾಜ ರಾಜ ಪರಮೇಶ್ವರ ಭಾಷೆಗೆ ತಪ್ಪುವ ರಾಯರ ಗಂಡ ಪ್ರೌಢ ದೇವರಾಯ ಒಡೆಯರು ಎಂದು ಉಲ್ಲೇಖಿಸಿ, ಆತನ ಆಳ್ವಿಕೆ ಕಾಲದಲ್ಲಿ ಬಾಚಂಣ ಒಡೆಯರು ಕಬ್ಬನಾಳ ದುರ್ಗದ ನಾಯಕನನ್ನು ದಮನಿಸಿದಂತೆ ತಿಳಿಸುತ್ತದೆ.

ಬಹುಶಃ ಬಾಚಣ್ಣ ಒಡೆಯನ ಬಾರಕೂರಿನ ಮೇಲಿನ ಆಳ್ವಿಕೆ ತಿಳಿಸುವ ಮೊಟ್ಟ ಮೊದಲ ಶಾಸನವಿದು. ಶಾಸನದ ಪೂರ್ಣ ಅಧ್ಯಯನ ಇತಿಹಾಸದ ಮತ್ತಷ್ಟು ಮಹತ್ವದ ಸಂಗತಿಗಳನ್ನು ಬಯಲಿಗೆ ತರುವ ಸಾಧ್ಯತೆಯಿದ್ದು, ಆ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಪ್ರಶಾಂತ್ ಶೆಟ್ಟಿ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಭಂಡಾರ್‌ಕರ್ಸ್‌ ಕಾಲೇಜಿನ ವಿದ್ಯಾರ್ಥಿಗಳು ಶಾಸನ ಅಧ್ಯಯನದಲ್ಲಿ ಬಹಳವಾಗಿ ಸಹಕರಿಸಿದರು ಎಂದು ಸ್ಮರಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT