ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹದ ಕೆರೆಗೆ ಚರಂಡಿ ನೀರಿನಿಂದ ಮುಕ್ತಿ..!

Last Updated 23 ಜೂನ್ 2017, 5:48 IST
ಅಕ್ಷರ ಗಾತ್ರ

ಗದಗ: ನಗರದ ಹೃದಯ ಭಾಗದಲ್ಲೇ ಇರುವ, 103 ಎಕರೆ ವಿಸ್ತೀರ್ಣದ ಐತಿಹಾಸಿಕ ಭೀಷ್ಮಕರೆಗೆ ಹೊಂದಿಕೊಂಡಿರುವ ಸಿಂಹದ ಕೆರೆಗೆ (ಹಸಿರು ಕೆರೆ) ಚರಂಡಿ ನೀರಿನಿಂದ ಮುಕ್ತಿ ಸಿಗುವ ದಿನಗಳು ಹತ್ತಿರ ಬಂದಿವೆ. ಸಿಂಹ ಕೆರೆಗೆ ಬಂದು ಸೇರುತ್ತಿದ್ದ ಕೊಳಚೆ ನೀರನ್ನು ಮುಖ್ಯ ಗಟಾರಿಗೆ ಹರಿಸಲು ಹೊಸ ಪೈಪ್‌ ಅಳವಡಿಸುವ ಕಾಮಗಾರಿ ಕಳೆದೊಂದು ವಾರದಿಂದ ಭರದಿಂದ ನಡೆದಿದೆ.

ಈ ಕೆರೆ ತಗ್ಗು ಪ್ರದೇಶದಲ್ಲಿದೆ. ಚರಂಡಿ ಮೇಲ್ಮಟ್ಟದಲ್ಲಿ ಇದೆ. ಹೀಗಾಗಿ, ಸಹಜವಾಗಿ ಮಳೆ ಬಂದಾಗ ಮಾಲಿನ್ಯ ಕೆರೆಯ ಒಡಲಿಗೆ ಹರಿದುಬರುತ್ತಿತ್ತು. ವಡ್ಡರಗೇರಿ, ಹುಡ್ಕೊ ಕಾಲೊನಿ, ಸಿದ್ದರಾಮೇಶ್ವರ ನಗರ, ಬುಳ್ಳಾ ಪ್ಲಾಟ್, ಪೊಲೀಸ್ ಕ್ವಾಟರ್ಸ್, ಡಂಬಳನಾಕಾ, ಸಿಕ್ಕಲಗಾರ ಓಣಿ ಸುತ್ತಮುತ್ತಲಿನ ಪ್ರದೇಶ ಗಳಿಂದ ಹರಿದು ಬರುವ ಚರಂಡಿ ನೀರು ನೇರವಾಗಿ ಈ ಕೆರೆಗೆ ಬಂದು ಸೇರು ತ್ತಿತ್ತು. ಹೀಗೆ ಸದಾ ಮಾಲಿನ್ಯ ತುಂಬಿ, ಪಾಚಿ ಗಟ್ಟಿ, ಹಸಿರು ಬಣ್ಣದಿಂದ ಕೂಡಿರುತ್ತಿದ್ದ ರಿಂದ ಸಿಂಹದ ಕೆರೆ ಎನ್ನುವ ಹೆಸರೇ ಕ್ರಮೇಣ ‘ಹಸಿರು ಕೆರೆ’ ಎಂದಾಗಿತ್ತು.

ನಗರಸಭೆ ಕಳೆದ ಸೆಪ್ಟೆಂಬರ್‌ನಲ್ಲೇ ಈ ಕೆರೆಯಿಂದ ಕೊಳಚೆ ನೀರನ್ನು ಪಂಪ್‌ ಮಾಡಿ ಹೊರತೆಗೆದು, ಹೂಳು ತೆಗೆದು ಸ್ವಚ್ಚಗೊಳಿಸಿತ್ತು. ಇದೀಗ ಕೆರೆಗೆ ಹರಿದು ಬರುವ ಕೊಳಚೆ ನೀರಿನ ಮಾರ್ಗ ಬದ ಲಿಸಿ, ಇನ್ನೊಂದು ಪೈಪ್‌ ಲೈನ್‌ ಮೂಲಕ ಮುಖ್ಯ ಗಟಾರಿಗೆ ಹರಿಸಲು ಯೋಜನೆ ರೂಪಿಸಿದೆ. 

ಅಂದರೆ ಹುಯಿಲಗೋಳ ಆಸ್ಪತ್ರೆಯ ಬಳಿ ಇರುವ ಚರಂಡಿಯಿಂದ ಪಂಚರ ಹೊಂಡದ ಪ್ರದೇಶದ ಮೂಲಕ ಹಾಯ್ದು ಹೋಗುವ ಜವಳದ ಮುಖ್ಯ ಚರಂಡಿಗೆ ‘ಮಾರ್ಗ ಬದಲಿಸುವ’ ಕಾಮ ಗಾರಿ ನಡೆಯುತ್ತಿದೆ.

ಚರಂಡಿ ನೀರು ಮುಖ್ಯ ಗಟಾರಿಗೆ ಸರಾಗವಾಗಿ ಹರಿದು ಹೋಗಲು, ಈ ಭಾಗದಲ್ಲಿ ಹೊಸ ಪೈಪ್‌ಲೈನ್‌ ಅಳವಡಿಕೆ ನಡೆಯುತ್ತಿದೆ. ಅಂದರೆ ದಶಕಗಳ ಹಿಂದೆ ಹಾಕಿದ್ದ 20 ಇಂಚಿನ ಪೈಪ್‌ ತೆಗೆದು, ಹೊಸದಾಗಿ 30 ಇಂಚಿನ ಪೈಪ್‌ ಅಳವ ಡಿಕೆ ಕಾರ್ಯ ನಡೆಯುತ್ತಿದೆ.

ಜೆ.ಟಿ.ಎಂಜಿನಿಯರಿಂಗ್ ಕಾಲೇಜಿ ನಿಂದ ವಡ್ಡರಗೇರಿ, ಡಂಬಳನಾಕಾ, ಜಿಲ್ಲಾ ತೋಟಗಾರಿ ಇಲಾಖೆ ಎದುರಿನ ಮಾರ್ಗವಾಗಿ ಹುಯಿಲಗೋಳ ಆಸ್ಪತ್ರೆ ಸಮೀಪವಿರುವ ಚರಂಡಿವರೆಗೆ ಈ ಪೈಪ್‌ಲೈನ್‌ ಅಳವಡಿಕೆ ನಡೆಯಲಿದೆ. ಕಳೆದ 15 ದಿನಗಳಿಂದ ಕಾಮಗಾರಿ ನಡೆ ದಿದ್ದು, ಶೇ 50ರಷ್ಟು ಪೂರ್ಣಗೊಂಡಿದೆ.

ಸಂಚಾರಕ್ಕೆ ಅಡ್ಡಿ: ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಯಿಂದ ಗದಗ–ಹುಬ್ಬಳ್ಳಿ ರಸ್ತೆ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ಭೀಷ್ಮಕೆರೆ ಕೆಎಂ ಕಾರ್ಯಪ್ಪ ವೃತ್ತದಿಂದ, ಹೊಸ ಬಸ್‌ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ್‌ ವೃತ್ತ, ಅಲ್ಲಿಂದ ಡಂಬಳ ನಾಕಾ, ಕಿತ್ತೂರ ಚೆನ್ನಮ್ಮ ವೃತ್ತದ ಮೂಲಕ ಹುಬ್ಬಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. 

ಕೆರೆಗೆ ಬೇಕಿದೆ ಕಾಯಕಲ್ಪ: ಸಿಂಹದ ಕೆರೆಯಿಂದ ಕೊಳಚೆ ನೀರು ಪಂಪ್‌ ಮಾಡಿ ಸ್ವಚ್ಛಗೊಳಿಸಲಾಗಿದೆ. ನೀರು ಬತ್ತಿದ ನಂತರ ಅಲ್ಲಿದ್ದ ಹೂಳನ್ನು ಹೊರತೆಗೆಯಲಾಗಿದೆ. ಆದರೆ, ಸಮತಟ್ಟಾಗಿ ಹೂಳು ತೆಗೆಯದೇ ಇರುವುದರಿಂದ ಕೆರೆಯಲ್ಲಿ ಅಲ್ಲಲ್ಲಿ ಮೂರು ನಾಲ್ಕು ಬೃಹತ್‌ ಗುಂಡಿಗಳು ನಿರ್ಮಾಣವಾಗಿವೆ. ಇದರಲ್ಲಿ ಪಕ್ಕದ ಭೀಷ್ಮಕೆರೆಯ ಅಂತರ್ಜಲದಿಂದ ನೀರು ತುಂಬಿದೆ. ಪತ್ರಿನಿತ್ಯ ಸುತ್ತಲಿನ ಪ್ರದೇಶದ ಮಹಿಳೆಯರು ಇದೇ ನೀರಿನಲ್ಲಿ ಬಟ್ಟೆ ತೊಳೆಯುತ್ತಿದ್ದಾರೆ.

‘ಕೆರೆಯ ಹೂಳು ತೆಗೆದ ಮಾತ್ರಕ್ಕೆ ನಗರಸಭೆ ಕಾರ್ಯ ಮುಗಿದಿಲ್ಲ. ಈ ಕೆರೆಯ ಅಭಿವೃದ್ಧಿಗೆ ಗಮನ ಹರಿಸಬೇಕು. ಕರೆಯ ಸುತ್ತ ಗಿಡಮರ ಬೆಳೆಸಬೇಕು. ಸುತ್ತ ಬೇಲಿ ಹಾಕಬೇಕು. ಬಯಲು ಬಹಿರ್ದೆಸೆ ತಡೆಯಬೇಕು. ಭೀಷ್ಮ ಮತ್ತು ಸಿಂಹದ ಕೆರೆಗೆ ಕಾವಲುಗಾರರನ್ನು ನೇಮಿಸಿ, ಕಾಯಕಲ್ಪ ಒದಗಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಕೃಷ್ಣಾ ಮತ್ತು ಬಸವರಾಜ ಹಿತ್ತಲಮನಿ.

‘ಈ ಭಾಗದಲ್ಲಿ ಸ್ವಲ್ಪ ಮಳೆಯಾ ದರೂ ಮಾಲಿನ್ಯ ಕೆರೆಯ ಒಡಲಿಗೆ ಹರಿದು ಬರುತ್ತಿತ್ತು. ಕಲುಷಿತ ನೀರನ್ನು ಪಂಪ್ ಮಾಡಿ, ಮುಖ್ಯ ಚರಂಡಿಗೆ ಹರಿಸಿದರೂ, ಪುನಃ ಇಲ್ಲಿಗೇ ಬಂದು ಸೇರುತ್ತಿತ್ತು. ಇದನ್ನು ತಡೆಯಲು ದೊಡ್ಡ ಗಾತ್ರದ ಪೈಪ್‌ಲೈನ್‌ ಅಳವಡಿಸುತ್ತಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಕಾಮಗಾರಿ ಕಾರ್ಯ ಮುಗಿಸಬೇಕು’ ಎಂದು ಡಂಬಳ ನಾಕಾದ ನಿವಾಸಿ ಕಿರಣ ವಡ್ಡರ ಆಗ್ರಹಿಸಿದರು.

*  * 

ಜೆ.ಟಿ.ಎಂಜಿನಿಯರಿಂಗ್ ಕಾಲೇಜಿನಿಂದ ಹುಯಿಲಗೋಳ ಆಸ್ಪತ್ರೆವರೆಗೆ ಪೈಪ್‌ ಅಳವಡಿಸುವ ಕಾರ್ಯ ನಡೆದಿದೆ. ಈ ತಿಂಗಳೊಳಗೆ ಎಲ್ಲ ಕಾರ್ಯ ಮುಗಿಯಲಿದೆ
ಮನ್ಸೂರ್ ಅಲಿ
ನಗರಸಭೆ ಪೌರ ಆಯುಕ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT