ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲವೊಂದು, ಬೆಳೆ ಹಲವು...

ಕೃಷಿ ಖುಷಿ
Last Updated 16 ಜನವರಿ 2014, 7:07 IST
ಅಕ್ಷರ ಗಾತ್ರ

ಕುಂದಗೋಳ (ಧಾರವಾಡ ಜಿಲ್ಲೆ): ‘ಏನ್ರೀ ಕರಿಮಣ್ಣಿನ್ಯಾಗ ಮೆಣಸಿನಕಾಯಿ, ಹತ್ತಿ ಬೆಳೆ ಬಿಟ್ರ ಏನ್‌ ಮಾಡ್ಲಿಕ್ಕೆ ಸಾಧ್ಯ ಐತ್ರಿ ಎಂದು ಗೇಲಿ ಮಾಡಿದವರಿಗೆ ನಾ ಚಾಲೆಂಜ್‌ ಮಾಡಿ ತೋರಿಸಿದ್ದೇನೆ. ಕರಿಮಣ್ಣಿನ್ಯಾಗೂ ಬಿಳಿ ಮತ್ತು ಹಳದಿ ರೇಷ್ಮೆ ಬೆಳೆದು ತೋರಿಸಿ, ಎಲ್ಲರಿಂದಲೂ ಸೈ ಎನಿಸಿಕೊಂಡು, ಎಷ್ಟೋ ಸಲ ಪ್ರಶಸ್ತಿಗಳ ಸರಮಾಲೆಗಳು ನನ್ನನ್ನೇ ಹುಡುಕಿಕೊಂಡು ಬಂದಿದ್ದರ ನೆನೆಪು ಮಾಡಿಕೊಂಡು ಕೃಷಿ ಬದುಕನ್ನು ಸಾರ್ಥಕ ಮಾಡಿಕೊಂಡು ಖುಷಿ ಪಡುತ್ತಿದ್ದೇನೆ...’

‘ಕೃಷಿ ಖುಷಿ ನೀಡಿದಿಯಾ?’ ಎನ್ನುವ ಪ್ರಶ್ನೆಗೆ ತಾಲ್ಲೂಕಿನ ಸಂಶಿ ಗ್ರಾಮದ ಮೌನೇಶ್ವರ ಈಶ್ವರಪ್ಪ ಬಡಿಗೇರ ಅವರು ಈ ರೀತಿ ಉತ್ತರಿಸಿದರು. ಛಲವಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಇವರ ರೇಷ್ಮೆ ಕೃಷಿ ಇನ್ನೊಬ್ಬರಿಗೆ ಮಾದರಿಯಾಗಿದೆ. ‘ದುಡಿ ಸುಖ ಪಡಿ’ ಎನ್ನುವ ಕಾಯಕ ಜೀವಿ ಮೌನೇಶ್ವರ ಅವರಿಂದ ಪ್ರೇರಣೆಗೊಂಡು ಗ್ರಾಮದಲ್ಲಿಯೇ ಇನ್ನೂ 3–4 ರೈತರು ರೇಷ್ಮೆ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ ಜಿಲ್ಲೆಯ ಬಹುತೇಕ ರೈತರು ಒಣ ಬೇಸಾಯವನ್ನೆ ನಂಬಿಕೊಂಡವರು. ಆದರೆ ರಾಜ್ಯದ ರೈತರು ಸಂಶಿಯ ಕಡೆಗೆ ಮುಖ ಮಾಡುವಂತೆ ಮಾಡಿದ್ದಾರೆ ಮೌನೇಶ್ವರ.

‘ರೇಷ್ಮೆ  ಇಲಾಖಾಧಿಕಾರಿಗಳ ಮಾರ್ಗದರ್ಶನ  ಹೆಚ್ಚು ಸಹಕಾರಿ’ ಎನ್ನುವ ಅವರು. ಕರಿಮಣ್ಣಿನಲ್ಲಿ ಅದ್ಭುತ ಪವಾಡವನ್ನೆ ಮಾಡಿ ತೋರಿಸಿದ್ದಾರೆ. ‘2006ರಲ್ಲಿ ನಮ್ಮ ತಂದೆಯವರು ರೇಷ್ಮೆ ಕೃಷಿಯತ್ತ ಮನಸ್ಸು ಮಾಡಿದರು.  ನಾಲ್ಕು ಎಕರೆಯಲ್ಲಿ ಒಂದು ಎಕರೆ ಹಿಪ್ಪು ನೇರಳೆ ಸಸಿ ನಾಟಿ ಮಾಡಿದರು. ಮೊದಲು ಅಲ್ಪ ಪ್ರಮಾಣದಲ್ಲಿ ಚಂದ್ರಿಕೆಗಳನ್ನು ತಂದು, ನೂರು ಲಿಂಗ್ಸ್‌ ರೇಷ್ಮೆ ಹುಳಗಳ ಮೊಟ್ಟೆಗಳನ್ನು ತಂದು ಸಾಕಿದರು. ಕ್ರಮೇಣ ಈಗ 350 ಲಿಂಗ್ಸ್‌ ರೇಷ್ಮೆ ಮೊಟ್ಟೆಗಳನ್ನು ತಂದು ರೇಷ್ಮೆ ಸಾಕಾಣಿಕೆ ನಡೆಸುತ್ತಿರುವುದನ್ನು ಕಂಡು ರೇಷ್ಮೆ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಒಂದೇ ಕೊಳವೆಬಾವಿ ಇತ್ತು, ಈಗ ಎರಡು ಬಾವಿ ತೆಗೆಯಿಸಿದ್ದಾರೆ. ನಾಲ್ಕು ಎಕರೆ ಹಿಪ್ಪುನೇರಳೆ ಸಸಿ ಬೆಳೆಸಿದ್ದಾರೆ. ಒಮ್ಮೆ ನಾಟಿದರೆ ಮೂವತ್ತು ವರ್ಷಗಳವರೆಗೂ ಯಾವ ಚಿಂತೆಯಿಲ್ಲ. ಕಟಾವು ಮಾಡಿದಂತೆ ಮತ್ತೆ ಚಿಗುರುತ್ತಾ ಹೋಗುತ್ತದೆ’ ಎಂದು ಅವರು ವಿವರಿಸಿತ್ತಾರೆ.

ದೇವನಹಳ್ಳಿ ಹತ್ತಿರ ಇರುವ ಶಿಡ್ಲಘಟ್ಟದಿಂದ ಹಳದಿ ರೇಷ್ಮೆ ಗೂಡು ಮತ್ತು ರಾಮನಗರದಿಂದ ಬಿಳಿ ರೇಷ್ಮೆ ಗೂಡು ತಂದು ಇವರು ರೇಷ್ಮೆ ಸಾಕಾಣಿಕೆ ನಡೆಸುತ್ತಿದ್ದಾರೆ. ವರ್ಷದ ಎಲ್ಲ ತಿಂಗಳುಗಳಲ್ಲಿ ರೇಷ್ಮೆ ಸಾಕಾಣಿಕೆ ನಡೆಸುತ್ತಾರೆ. ಒಂದು ತಿಂಗಳು ಬಿಡುವಿಲ್ಲದೇ ಪರಿಶ್ರಮ ಪಡುತ್ತಾರೆ.

‘ಒಮ್ಮೆ ರೇಷ್ಮೆ ಗೂಡು ತಂದು ಸಾಕಾಣಿಕೆ ಅರಂಭಿಸಿದರೆಂದರೆ 28 ದಿನಗಳಲ್ಲಿ ರೇಷ್ಮೆ ತಯಾರಾಗುತ್ತದೆ. 14 ದಿನಗಳಲ್ಲಿ ಮಾರಾಟವಾಗಲೇ ಬೇಕು. ರೇಷ್ಮೆ  ಮಾರಾ­ಟವನ್ನು ರೇಷ್ಮೆ ಅಧಿಕಾರಿಗಳೇ ಮಾಡಿಕೊಡು­ತ್ತಾರೆ. ಅಲ್ಲಿ ರೈತರಿಗೆ ಮೋಸವೆನ್ನುವುದು ಇಲ್ಲವೇ ಇಲ್ಲ’ ಎನ್ನುತ್ತಾರೆ ಮೌನೇಶ್ವರ.

ಚಿಕ್ಕು ಬೇಸಾಯ: ಒಟ್ಟು ಐದು ಎಕರೆಯಲ್ಲಿ ಒಂದು ಎಕರೆ ಚಿಕ್ಕು, ಬಾಳೆ, ಪಪ್ಪಾಯಿ ತೋಟಕ್ಕೆ ಮೀಸಲಿಟ್ಟಿದ್ದಾರೆ. ಚಿಕ್ಕು ವರ್ಷಕ್ಕೆ ಮೂರು ಬಾರಿ ಫಲ ನೀಡುತ್ತದೆ. ಕ್ವಿಂಟಲ್‌ ಒಂದಕ್ಕೆ ₨ 1500ನಂತೆ ಮಾರಾಟ ಮಾಡು­ತ್ತಾರೆ. ಮನೆಗೆ ಬೇಕಾಗುವ ಟೊಮೆಟೋ, ಕೋತಂಬರಿ ಇನ್ನಿತರ ತರಕಾರಿಗಳನ್ನೂ ಚಿಕ್ಕು ತೋಟದಲ್ಲಿ ಬೆಳೆಯುತ್ತಾರೆ. ಹೀಗಾಗಿ ಸಂತೆಯ ಚಿಂತೆ ಇವರಿಗಿಲ್ಲ.

ಮೀನು ಸಾಕಾಣಿಕೆ: ಮೌನೇಶ್ವರ ಅವರ ಹಿರಿಯ ಮಗ ವಿಜಯಕುಮಾರ ಸ್ವಲ್ಪ ತಲೆ ಓಡಿಸಿ, ಇರುವ ಹೊಲದಲ್ಲಿಯೇ 33/33 ಅಡಿ ಸುತ್ತಳತೆಯ ಮತ್ತು 15 ಫೂಟ್‌ ಆಳವಿರುವ ಒಂದು ನೀರಿನ ಟ್ಯಾಂಕ್‌ ನಿರ್ಮಿಸಿದ್ದಾರೆ. ಅಲ್ಲಿಗೆ ಕೊಳವೆಬಾವಿ ನೀರನ್ನು ಬಿಟ್ಟು ಮೀನು­ಗಾರಿ­ಕೆಯನ್ನು ಇದೇ ವರ್ಷವೇ ಆರಂಭಿಸಿದ್ದಾರೆ. ಇದು ಇವರಿಗೆ ಹೊಸ ಸವಾಲಾಗಿದೆ. ಇದ­ರಲ್ಲಿಯೂ ಯಶಸ್ವಿಗೊಳ್ಳುತ್ತೇನೆ ಎನ್ನುವ  ಭರ­ವಸೆ ಇಟ್ಟುಕೊಂಡಿದ್ದಾರೆ. ಈ ಟ್ಯಾಂಕಿನಲ್ಲಿರುವ ನೀರನ್ನೇ ಹಿಪ್ಪು ನೇರಳೆಗೆ ಮತ್ತು ಚಿಕ್ಕು ತೋಟಕ್ಕೆ ಬೀಡುತ್ತಾರೆ.

‘ಈ ಟ್ಯಾಂಕಿನಲ್ಲಿ ನೀರನ್ನು ಸಂಗ್ರಹಿಸಿಡುತ್ತೇನೆ. ಇದರಲ್ಲಿ ಮೀನು ಸಾಕಾಣಿಕೆಗೆ ನಡೆಸುತ್ತಿರುವುದರಿಂದ ಈ ಮೀನುಗಳಿಗೆ ಸಗಣಿ ಗೊಬ್ಬರ ಹಾಕುವುದರಿಂದ ಈ ನೀರು ಕೂಡಾ ಬೇಸಾಯಕ್ಕೆ  ಸಹಕಾರಿಯಾಗಿದೆ’ ಎನ್ನುತ್ತಾರೆ ವಿಜಯಕುಮಾರ.

‘ಒಂದು ತಿಂಗಳಲ್ಲಿ ಮೂರರಿಂದ ನಾಲ್ಕು ಕ್ವಿಂಟಲ್‌ ರೇಷ್ಮೆ ತಯಾರಿಸಿ ರಾಮನಗರಕ್ಕೆ ಮಾರಾಟಕ್ಕೆ ಕಳಿಸಿಕೊಡುತ್ತೇವೆ. ತಿಂಗಳಿಗೆ ಖರ್ಚು ಮಾಡುವುದು ₨ 25 ಸಾವಿರವಾದರೂ ರೇಷ್ಮೆ  ಫಲ ಕೊಡುವುದು ಸುಮಾರು  ₨ 1 ಲಕ್ಷ . ಅಂದರೆ ತಿಂಗಳಿಗೆ  ₨ 75 ಸಾವಿರ ಲಾಭ ತೆಗೆ ದಂತಾಯಿತು’ ಎನ್ನುತ್ತಾರೆ ವಿಜಯಕುಮಾರ.

‘ಒಮ್ಮೆ ಕಾಯಕದಲ್ಲಿ ತೊಡಗಿಸಿಕೊಂಡರೆ ಸಾಕಾಣಿಕೆ ಕೇಂದ್ರವನ್ನು ಬಿಟ್ಟು ಎಲ್ಲಿಯೂ  ಹೋಗುವಂತಿಲ್ಲ. ರೇಷ್ಮೆ ಸಾಕಾಣಿಕೆಗೆ ವಾತಾವರಣವೇ ಮುಖ್ಯವಾಗಿರುತ್ತದೆ. ಹೆಚ್ಚು ಶೀತವಾಗುವಂತಿಲ್ಲ, ಹೆಚ್ಚು ಉಷ್ಣವಾ ಗುವಂತಿಲ್ಲ. ಒಟ್ಟಿನಲ್ಲಿ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಇರದಿದ್ದರೆ ಇಡಬೇಕಾಗುತ್ತದೆ. ಒಂದು ವರ್ಷಕ್ಕೆ 9ರಿಂದ 10 ರೇಷ್ಮೆ ಫಲ ಪಡೆಯುತ್ತೇವೆ’ ಎನ್ನುತ್ತಾರೆ ಮೌನೇಶ್ವರ ಬಡಿಗೇರ.

ಇವರ ಕುಟುಂಬದಲ್ಲಿನ 10–15 ಜನರು ರೇಷ್ಮೆ ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಾರೆ. ಮೌನೇಶ್ವರ ಅವರ ಮಕ್ಕಳಾದ ವಿಜಯಕುಮಾರ, ವಿಕ್ರಮ ಈ ತೋಟವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡಿರುವುದಕ್ಕೆ ಮೌನೇಶ್ವರ ಹೆಮ್ಮೆಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT