ತಾಯಿ–ತಂಗಿಯ ಕೊಂದ ವೈದ್ಯ

7
ಮದುವೆಯಾಗಿಲ್ಲವೆಂದು ನೊಂದಿದ್ದ ಗೋವಿಂದಪ್ರಕಾಶ್‌; ಕೊಲೆ ಬಳಿಕ ಆತ್ಮಹತ್ಯೆಗೆ ಯತ್ನ

ತಾಯಿ–ತಂಗಿಯ ಕೊಂದ ವೈದ್ಯ

Published:
Updated:
Deccan Herald

ಬೆಂಗಳೂರು: ತನಗೆ ಮದುವೆಯಾಗಿಲ್ಲವೆಂದು ಮಾನಸಿಕವಾಗಿ ನೊಂದಿದ್ದ ಎನ್ನಲಾದ ವೈದ್ಯ ಗೋವಿಂದಪ್ರಕಾಶ್‌ (45) ಎಂಬಾತ ತನ್ನ ತಾಯಿ ಮೂಕಾಂಬಿಕಾ (75) ಹಾಗೂ ತಂಗಿ ಶ್ಯಾಮಲಾ (40) ಅವರನ್ನು ಕೊಂದು, ನಂತರ ತಾನೂ ಆತ್ನಹತ್ಯೆಗೆ ಯತ್ನಿಸಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಅಸ್ವಸ್ಥಗೊಂಡಿರುವ ಗೋವಿಂದಪ್ರಕಾಶ್‌ನನ್ನು ರಾಜರಾಜೇಶ್ವರಿ ನಗರದ ಎಸ್‌.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಂದೆ ಸುಬ್ಬರಾಯ್ ಭಟ್‌ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಮೂಕಾಂಬಿಕಾ ಹಾಗೂ ಶ್ಯಾಮಲಾರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನವರಾದ ಸುಬ್ಬರಾಯ ಭಟ್, ನಿವೃತ್ತ ಶಿಕ್ಷಕ. 2002ರಲ್ಲಿ ಬೆಂಗಳೂರಿಗೆ ಬಂದಿದ್ದ ಅವರು ಐಡಿಯಲ್ ಹೋಮ್ಸ್‌ನ 2ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಪತ್ನಿ ಮೂಕಾಂಬಿಕಾ, ಮಗ ಗೋವಿಂದಪ್ರಕಾಶ್ ಜೊತೆ ವಾಸವಿದ್ದರು. ಮದುವೆಯಾಗಿದ್ದ ಮಗಳು ಶ್ಯಾಮಲಾ, ಕೌಟುಂಬಿಕ ಕಲಹದಿಂದಾಗಿ ಗಂಡನ ಮನೆ ತೊರೆದು ತವರು ಮನೆಗೆ ಬಂದು ನೆಲೆಸಿದ್ದರು. 

ವಿಷದ ಚುಚ್ಚುಮದ್ದು ನೀಡಿ ಕೊಲೆ: ‘ಶುಕ್ರವಾರ ರಾತ್ರಿ 10 ಗಂಟೆಗೆ ಎಲ್ಲರೂ ಒಟ್ಟಿಗೆ ಊಟ ಮಾಡಿದ್ದೆವು. ಪತ್ನಿ ಹಾಗೂ ಮಗಳು ಒಂದು ಕೊಠಡಿಗೆ ಹೋಗಿ ಮಲಗಿದ್ದರು. ಇನ್ನೊಂದು ಕೊಠಡಿಯಲ್ಲಿ ಮಗ ಕೆಲಸ ಮಾಡುತ್ತಿದ್ದ. ನನಗೆ ಕಾಲು ನೋವು ಇದ್ದಿದ್ದರಿಂದಾಗಿ ಮಾತ್ರೆ ತೆಗೆದುಕೊಂಡು ಮತ್ತೊಂದು ಕೊಠಡಿಗೆ ಹೋಗಿ ಮಲಗಿಕೊಂಡಿದ್ದೆ’ ಎಂದು ಸುಬ್ಬರಾಯ ಭಟ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಶನಿವಾರ ಬೆಳಿಗ್ಗೆ 8ಕ್ಕೆ ಎಚ್ಚರವಾಗಿತ್ತು. ಮಗಳ ಕೊಠಡಿಗೆ ಹೋಗಿ ನೋಡಿದಾಗ, ಮೂವರು ಅಂಗಾತ ಮಲಗಿದ್ದು ಕಂಡುಬಂತು. ಪತ್ನಿ ಹಾಗೂ ಮಗಳ ಕಣ್ಣಿನಲ್ಲಿ ಹತ್ತಿ ಇಟ್ಟಿದ್ದನ್ನು ನೋಡಿ ಗಾಬರಿಯಾಗಿ ಪಕ್ಕದ ಮನೆಯ ಕೃಷ್ಣ ಅವರನ್ನು ಕರೆದೆ. ಮೂವರನ್ನು ಗಮನಿಸಿದ ಕೃಷ್ಣ, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಿದರು. ಬಳಿಕ, ವೈದ್ಯರೊಬ್ಬರನ್ನು ಕರೆಸಿ ತಪಾಸಣೆ ನಡೆಸಿದಾಗ ಪತ್ನಿ ಹಾಗೂ ಮಗಳು ಮೃತಪಟ್ಟಿದ್ದು ಗೊತ್ತಾಯಿತು. ಉಸಿರಾಡುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದೊಯ್ದೆವು’

‘ಕೊಠಡಿಯಲ್ಲಿ ಮಗ ಬರೆದಿಟ್ಟಿದ್ದ ಮರಣಪತ್ರ ಸಿಕ್ಕಿದೆ. ಸ್ವ–ಇಚ್ಛೆಯಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮೂವರು ಅದರಲ್ಲಿ ಬರೆದಿದ್ದಾರೆ. ಮಗನೇ ವೈದ್ಯನಾಗಿದ್ದರಿಂದ, ತನಗೆ ಗೊತ್ತಿದ್ದ ವಿಷದ ಚುಚ್ಚುಮದ್ದನ್ನು ಅವರಿಬ್ಬರಿಗೂ ಕೊಟ್ಟು ಕೊಂದಿದ್ದಾನೆ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ಸುಬ್ಬರಾಯ ಭಟ್‌ ಹೇಳಿದ್ದಾರೆ.

ಕುಟುಂಬದವರನ್ನು ಕಾಡುತ್ತಿದ್ದ ಅನಾರೋಗ್ಯ: ಗಂಡನಿಂದ ವಿಚ್ಛೇದನ ಪಡೆದಿದ್ದ ಶ್ಯಾಮಲಾ, ವಕೀಲ ವೃತ್ತಿ ಆರಂಭಿಸಿದ್ದರು. ಗೋವಿಂದಪ್ರಕಾಶ್‌, ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಹಾಗೂ ವಿಜಯನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದ. ಅಲ್ಲಿಯ ಕೆಲಸಕ್ಕೆ ರಾಜೀನಾಮೆ ನೀಡಿ, ವಿಜಯನಗರದ ಹಂಪಿನಗರದಲ್ಲಿ ಸ್ವಂತ ಕ್ಲಿನಿಕ್ ಆರಂಭಿಸಿದ್ದ. ಎರಡು ತಿಂಗಳ ಹಿಂದೆ ಕ್ಲಿನಿಕ್ ಬಂದ್‌ ಮಾಡಿದ್ದ ಆತ, ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಗೋವಿಂದಪ್ರಕಾಶ್‌ಗೆ 10 ವರ್ಷಗಳಿಂದ ತಲೆನೋವು ಇತ್ತು. ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಶ್ಯಾಮಲಾಗೂ ಬೆನ್ನು ಹುರಿ, ತಲೆ ನೋವು ಹಾಗೂ ಮೈ-ಕೈ ಸೆಳೆತ ಸಮಸ್ಯೆ ಇತ್ತು. ತಾಯಿ ಮೂಕಾಂಬಿಕಾರ ಆರೋಗ್ಯ ಹದಗೆಟ್ಟಿತ್ತು. ಇಡೀ ಕುಟುಂದವರು ನಿತ್ಯವೂ ಮಾತ್ರೆ ತೆಗೆದುಕೊಳ್ಳಲೇ ಬೇಕಾದ ಸ್ಥಿತಿ ಇತ್ತು. ಅದರಿಂದಲೇ ಕುಟುಂಬ ನೊಂದಿತ್ತು’ ಎಂದು ವಿವರಿಸಿದರು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !