ಮಂಗಳವಾರ, ಮಾರ್ಚ್ 2, 2021
29 °C
ಬಿಗಡಾಯಿಸಿದ ಸಮಸ್ಯೆ; 252 ಟ್ಯಾಂಕರ್‌ಗಳಿಂದ ನೀರು ಪೂರೈಕೆ

ವಿಜಯಪುರ ಜಿಲ್ಲೆ 71 ಗ್ರಾಮಗಳಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಬೇಸಿಗೆ ಆರಂಭಕ್ಕೆ ಇನ್ನೂ ಮೂರು ತಿಂಗಳಿದೆ. ಡಿಸೆಂಬರ್‌ನಲ್ಲೇ ಜಿಲ್ಲೆಯ 71ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಕೆಲವೆಡೆ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು; ದಿನ ಕಳೆದಂತೆ ಸಮಸ್ಯೆ ಬಿಗಡಾಯಿಸುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆಡೆ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಈಗಾಗಲೇ ಜಿಲ್ಲೆಯ 27 ಗ್ರಾಮಗಳಿಗೆ 90ಕ್ಕೂ ಹೆಚ್ಚು ದಿನಗಳಿಂದಲೂ, 85 ಟ್ಯಾಂಕರ್‌ಗಳ ಮೂಲಕ 256 ಟ್ರಿಪ್ ನೀರು ಪೂರೈಸಲಾಗುತ್ತಿದೆ.

ಈಚೆಗೆ ಇಂಡಿ, ವಿಜಯಪುರ, ಸಿಂದಗಿ ತಾಲ್ಲೂಕಿನ 44 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಂಡು ಬಂದಿದೆ. ಸ್ಥಳೀಯ ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ, ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿಫಾರಸಿನಂತೆ ಜಿಲ್ಲಾಡಳಿತ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ತೆಗೆದುಕೊಂಡಿದೆ.

ಇಂಡಿ ತಾಲ್ಲೂಕಿನ 28 ಗ್ರಾಮಗಳಿಗೆ 124 ಟ್ಯಾಂಕರ್ ಮೂಲಕ 351 ಟ್ರಿಪ್‌ ನೀರು ಪೂರೈಸಲಾಗುತ್ತಿದೆ. ವಿಜಯಪುರ ತಾಲ್ಲೂಕಿನ 10 ಗ್ರಾಮಗಳಿಗೆ 31 ಟ್ಯಾಂಕರ್‌ ಮೂಲಕ 91 ಟ್ರಿಪ್‌ ಹಾಗೂ ಸಿಂದಗಿ ತಾಲ್ಲೂಕಿನ ಆರು ಗ್ರಾಮಗಳಿಗೆ 12 ಟ್ಯಾಂಕರ್‌ ಬಳಸಿಕೊಂಡು 26 ಟ್ಯಾಂಕರ್‌ ನೀರನ್ನು ಹಿಂಗಾರು ಹಂಗಾಮಿನ ಮಳೆಗಾಲದಿಂದಲೇ ಪೂರೈಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಬಸವನಬಾಗೇವಾಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದೂವರೆಗೂ ಯಾವೊಂದು ಹಳ್ಳಿಯೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿಲ್ಲ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲೂ ಮೂರು ತಿಂಗಳಿಂದ ಸಮಸ್ಯೆ ಉಲ್ಭಣಿಸಿಲ್ಲ.

90 ದಿನಗಳಿಗಿಂತಲೂ ಹೆಚ್ಚು ಅವಧಿಯಿಂದ ಇಂಡಿ ತಾಲ್ಲೂಕಿನ 11 ಗ್ರಾಮಗಳಿಗೆ 35 ಟ್ಯಾಂಕರ್ ಮೂಲಕ 105 ಟ್ರಿಪ್‌, ವಿಜಯಪುರ ತಾಲ್ಲೂಕಿನ 8 ಗ್ರಾಮಗಳಿಗೆ 25 ಟ್ಯಾಂಕರ್‌ ಮೂಲಕ 75 ಟ್ರಿಪ್‌, ಸಿಂದಗಿ ತಾಲ್ಲೂಕಿನ ಆರು ಗ್ರಾಮಗಳಿಗೆ 23 ಟ್ಯಾಂಕರ್ ಮೂಲಕ 69 ಟ್ರಿಪ್‌, ಮುದ್ದೇಬಿಹಾಳ ತಾಲ್ಲೂಕಿನ ಎರಡು ಗ್ರಾಮಗಳಿಗೆ ಎರಡು ಟ್ಯಾಂಕರ್‌ಗಳ ಮೂಲಕ ಏಳು ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಂಕಿ–ಅಂಶಗಳು ತಿಳಿಸಿವೆ.

ಬೇಸಿಗೆ ನೆನೆದರೆ ಭಯ

ಮುಂಗಾರು–ಹಿಂಗಾರು ಮಳೆಯಾಗಲಿಲ್ಲ. ಕೃಷ್ಣಾ ಕೊಳ್ಳದಲ್ಲಿ ಸುರಿದ ಮಳೆಯಿಂದ ಆಲಮಟ್ಟಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಸಾಗರ ಜಲಾಶಯ, ನೆರೆಯ ನಾರಾಯಣಪುರದ ಬಸವಸಾಗರ ಜಲಾಶಯ ಮೈದುಂಬಿದವು.

ನಾರಾಯಣಪುರ ಜಲಾಶಯದಿಂದ ಆಂಧ್ರಪ್ರದೇಶಕ್ಕೆ ಬರೋಬ್ಬರಿ 350ಕ್ಕೂ ಹೆಚ್ಚು ಟಿಎಂಸಿ ಅಡಿ ನೀರು ಹರಿದಿದೆ. ಇದೀಗ ಆಲಮಟ್ಟಿ ಜಲಾಶಯದಲ್ಲೂ ನೀರಿನ ಸಂಗ್ರಹ ದಿನೇ ದಿನೇ ಕಡಿಮೆಯಾಗುತ್ತಿದೆ. ಕಾಲುವೆ ಮೂಲಕ ನೀರು ಹರಿಸಿ, ಕೆರೆ ತುಂಬಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕೆಲಸವನ್ನು ಮೊದಲೇ ಮಾಡದಿರುವುದರಿಂದ ಸಾಕಷ್ಟು ಕೆರೆಗಳು ಭರ್ತಿಯಾಗಿಲ್ಲ. ಇದರಿಂದ ಬೇಸಿಗೆ, ಕಡು ಬೇಸಿಗೆಯಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾಳಾ ತ್ರಾಸ್‌ ಆಗಲಿದೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದಲೇ ಕೇಳಿ ಬರುತ್ತಿರುವುದು ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ.

ಫೆಬ್ರುವರಿ ಆರಂಭದಿಂದಲೇ ಸಿಂದಗಿ, ಮುದ್ದೇಬಿಹಾಳ, ದೇವರಹಿಪ್ಪರಗಿ, ತಾಳಿಕೋಟೆ ಸೇರಿದಂತೆ ಇನ್ನಿತರೆ ಪಟ್ಟಣಗಳು ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಎದುರಿಸಲಾರಂಭಿಸಲಿವೆ. ಸಿಂದಗಿ ಪಟ್ಟಣದ ಕಲ್ಯಾಣ ನಗರದ ಭಾಗದಲ್ಲಿ ಈಗಾಗಲೇ ನೀರಿನ ಹಾಹಾಕಾರ ಆರಂಭವಾಗಿದೆ. ಈ ಭಾಗದಲ್ಲಿನ ಅಂತರ್ಜಲ ಬತ್ತಿದ್ದು, ಒಂಬತ್ತು ಕೊಳವೆಬಾವಿಗಳು ಸ್ಥಗಿತಗೊಂಡಿವೆ.

ಇಂಡಿ, ಚಡಚಣ ಪಟ್ಟಣದಲ್ಲಿ ಕುಡಿಯುವ ನೀರಿನ ತ್ರಾಸ್ ಈಗಾಗಲೇ ಆರಂಭಗೊಂಡಿದೆ. ಇಂಡಿ ಪುರಸಭಾ ಮುಖ್ಯಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ಈಗಾಗಲೇ ಜನರ ಸಹಕಾರ ಕೋರಿದ್ದಾರೆ. 15 ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದ್ದು, ಸಂಗ್ರಹಿಸಿಟ್ಟುಕೊಳ್ಳುವ ಪರಿಪಾಠ ಈಗಲೇ ಶುರುವಾಗಿದೆ ಎಂಬ ಅಸಮಾಧಾನ ಇಂಡಿ ಪಟ್ಟಣಿಗರದ್ದು. ಈಗಲೇ ಹೀಗಾದರೆ ಮುಂದಿನ ದಿನಗಳನ್ನು ಯಾವ ರೀತಿ ಕಳೆಯಬೇಕು ಎಂಬ ಪ್ರಶ್ನೆ ಅವರದ್ದಾಗಿದೆ. ಬೇಸಿಗೆ ನೆನೆದರೆ ಭಯ ಆಗುತ್ತಿದೆ ಎನ್ನುತ್ತಾರೆ ಇಂಡಿ ತಾಲ್ಲೂಕಿನ ವಿವಿಧ ಹಳ್ಳಿಗಳ ಜನರು.

ತಾಳಿಕೋಟೆ ತಾಲ್ಲೂಕಿನ ಬಳಗಾನೂರ, ಹಿರೂರ, ಗೋಟಖಂಡ್ಕಿ, ಕೊಡಗಾನೂರ, ಬೇಲೂರ, ಲಕ್ಕುಂಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ಮೂಕಿಹಾಳದಲ್ಲಿ ಬಹುಹಳ್ಳಿ ಕುಡಿಯುವ ನೀರಿನ ವ್ಯವಸ್ಥೆಯಿದ್ದರೂ; ಪೂರೈಕೆ ಸಮರ್ಪಕವಾಗಿಲ್ಲ ಎಂಬ ದೂರು ಗ್ರಾಮಸ್ಥರದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು