ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಮಿಲಿಟರಿ ಪಡೆಗಳಲ್ಲಿ 39,481 ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ ಹುದ್ದೆಗಳು!

SSC ವತಿಯಿಂದ ನೇಮಕಾತಿ ಪ್ರಕ್ರಿಯೆ ಆರಂಭ
Published : 18 ಸೆಪ್ಟೆಂಬರ್ 2024, 21:59 IST
Last Updated : 18 ಸೆಪ್ಟೆಂಬರ್ 2024, 22:45 IST
ಫಾಲೋ ಮಾಡಿ
Comments

ಭಾರತದ ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಯೋಧನಾಗಿ ಸೇವೆ ಮಾಡಬೇಕೆಂಬ ಗುರಿ ಹೊಂದಿರುವ ಯುವಕ–ಯುವತಿಯರಿಗೆ ಮತ್ತೊಂದು ಅವಕಾಶ ಒದಗಿಬಂದಿದೆ. ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ವಿವಿಧ ವಿಭಾಗಗಳಲ್ಲಿ ‘ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ ನೇಮಕಾತಿ –2025’ ಪ್ರಕ್ರಿಯೆಯನ್ನು 'ಸಿಬ್ಬಂದಿ ನೇಮಕಾತಿ ಆಯೋಗ’ (SSC) ಆರಂಭಿಸಿದೆ.

ಒಟ್ಟು 39,481 ಪುರುಷ ಮತ್ತು ಮಹಿಳಾ ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಅಕ್ಟೋಬರ್ 14 ಅರ್ಜಿ ಸಲ್ಲಿಸಲು ಕಡೆಯ ದಿನ.

ಸಿಎಪಿಎಫ್‌ನ ವಿಭಾಗಗಳಾಗಿರುವ ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB), ಹಾಗೂ ಸಿಎಪಿಎಫ್‌ ಹೊರತುಪಡಿಸಿ ಗೃಹ ಇಲಾಖೆಯ ಪ್ರತ್ಯೇಕ ಭದ್ರತಾ ಘಟಕಗಳಾದ ಅಸ್ಸಾಂ ರೈಫಲ್ಸ್ (AR) ಸೆಕ್ರೇಟಿರಿಯೆಟ್ ಸೆಕ್ಯೂರಿಟಿ ಫೋರ್ಸ್‌ (SSF) ಮತ್ತು ನಾರ್ಕೋಟಿಕ್ ಕಂಟ್ರೋಲಿಂಗ್ ಬ್ಯೂರೊಗಳಲ್ಲಿ (NCB) ಕಾನ್‌ಸ್ಟೆಬಲ್‌ ಜನರಲ್ ಡ್ಯೂಟಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 

ಕಾನ್‌ಸ್ಟೆಬಲ್‌ ಜಿಡಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳ ಒಟ್ಟು ಹುದ್ದೆಗಳ ಸಂಖ್ಯೆ 39,481. ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 35,612 ಹುದ್ದೆಗಳು. ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರುವ ಹುದ್ದೆಗಳು 3,869.

ಆನ್‌ಲೈನ್ ಅರ್ಜಿ ಸಲ್ಲಿಸಲು ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ₹100 ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ, ನಿವೃತ್ತ ಯೋಧರಿಗೆ ಶುಲ್ಕ ವಿನಾಯಿತಿ ಇದೆ. ಯುಪಿಐ ಸೌಲಭ್ಯ ಬಳಸಿಯೂ ಶುಲ್ಕವನ್ನು ಪಾವತಿ ಮಾಡಬಹುದು.

ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 23. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 28, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ಸಡಿಲಿಕೆ ಇದೆ. ಸೇನೆಯ ನಿವೃತ್ತ ಯೋಧರು ನಿವೃತ್ತಿ ಆದಾಗಿನಿಂದ ಮೂರು ವರ್ಷದವೊಳಗೆ ಅರ್ಜಿ ಸಲ್ಲಿಸಬಹುದು.

ಇತರೆ ಹೆಚ್ಚಿನ ಮಾಹಿತಿ ಬಗ್ಗೆ ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.gov.in ನೋಡಬಹುದು.

SSC ವತಿಯಿಂದ ನೇಮಕಾತಿ ಪ್ರಕ್ರಿಯೆ ಆರಂಭ –ಇದೇ ಅಕ್ಟೋಬರ್ 14 ಅರ್ಜಿ ಸಲ್ಲಿಸಲು ಕಡೆಯ ದಿನ –BSFನಲ್ಲಿ ಅತಿ ಹೆಚ್ಚು 15,654 ಜಿಡಿ ಹುದ್ದೆಗಳು

ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆ: ನಾಲ್ಕು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಸಾಮರ್ಥ್ಯ ಪರೀಕ್ಷೆ (PST/PET), ವೈದ್ಯಕೀಯ ಪರೀಕ್ಷೆ (DME/MRE) ಹಾಗೂ ದಾಖಲಾತಿಗಳ ತಪಾಸಣೆ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ.

ಮೊದಲ ಹಂತವಾದ ಸಿಬಿಟಿ ಪರೀಕ್ಷೆಯಲ್ಲಿ 160 ಅಂಕಗಳಿಗೆ 80 ಪ್ರಶ್ನೆಗಳ 1 ಪತ್ರಿಕೆ ಮಾತ್ರ ಇರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕ. ಅವಧಿ 1 ಗಂಟೆ ಮಾತ್ರ. ಪ್ರತಿ 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ. ಬಹುಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಸಿಬಿಟಿ ಪರೀಕ್ಷೆ ಇಂಗ್ಲಿಷ್ ಹಿಂದಿ ಹಾಗೂ ಕನ್ನಡವೂ ಒಳಗೊಂಡಂತೆ ಇತರ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಅಭ್ಯರ್ಥಿಗಳು ಕನಿಷ್ಠ ಶೇ 30ರಷ್ಟು ಅಂಕಗಳನ್ನು ಇದರಲ್ಲಿ ಪಡೆಯುವುದು ಕಡ್ಡಾಯ.

ಕರ್ನಾಟಕದವರಿಗೆ ಪರೀಕ್ಷಾ ಕೇಂದ್ರಗಳು: ಸಿಬಿಟಿ ಪರೀಕ್ಷೆಗಳು ಎಸ್‌ಎಸ್‌ಸಿಯ 9 ವಲಯಗಳಿಂದ ನಡೆಯುತ್ತವೆ. ಅದರಲ್ಲಿ ಕರ್ನಾಟಕ ಕೇರಳ ಅಭ್ಯರ್ಥಿಗಳಿಗೆ ‘ಎಸ್‌ಎಸ್‌ಸಿ ಕರ್ನಾಟಕ–ಕೇರಳ ಸರ್ಕಲ್’ 14 ಕಡೆ ಸಿಬಿಟಿ ಪರೀಕ್ಷೆ ನಡೆಸಲಿದೆ. ಬೆಂಗಳೂರು ಬೆಳಗಾವಿ ಕಲಬುರಗಿ ಮಂಗಳೂರು ಮೈಸೂರು ಶಿವಮೊಗ್ಗ ಹುಬ್ಬಳ್ಳಿ ಉಡುಪಿ ಎರ್ನಾಕುಲಂ ಕೊಲ್ಲಂ ಕೊಟ್ಟಾಯಂ ಕೋಯಿಕ್ಕೋಡ್‌ ತಿರುವನಂತಪುರಂ ತ್ರಿಶೂರ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ  ಪರೀಕ್ಷೆ ನಡೆಯುವ ಸಂಭವವಿದೆ. ಅಭ್ಯರ್ಥಿಗಳು ತಮಗೆ ಸಿಎಪಿಎಫ್‌ನ ಯಾವ ವಿಭಾಗ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಅರ್ಜಿ ಸಲ್ಲಿಸುವಾಗಲೇ ಆದ್ಯತಾನುಸಾರ ಆಯ್ಕೆ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT