ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಇಂಧನ

ಹನುಮಾನಾಯಕ್ ರಾಥೋಡ್
Published 11 ಜನವರಿ 2024, 0:30 IST
Last Updated 11 ಜನವರಿ 2024, 0:30 IST
ಅಕ್ಷರ ಗಾತ್ರ

ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನವೇ ಜೈವಿಕ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. 

ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲೀನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ ಆಲ್ಗಿ ಬೆಳೆಗಳಿಂದಲೂ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಚಲಾಯಿಸಲು ಹಾಗೂ ಇತರೆ ಕಾರ್ಯಗಳಿಗೆ ಬಳಸುವ ಬಗ್ಗೆಯೂ ಪ್ರಯೋಗ ನಡೆದಿದೆ. 

ಜೈವಿಕ ಡೀಸೆಲ್ ಮತ್ತು ಜೈವಿಕ ಎಥೆನಾಲ್

ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಎಣ್ಣೆ ಅಥವಾ ಕೊಬ್ಬನ್ನು ಮೀಥೆನಾಲ್ ಅಥವಾ ಎಥೆನಾಲ್ ಜೊತೆ ಸೇರಿಸಿ NaOH/ KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್ ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸೆಲ್‌ ತಯಾರಿಸಲಾಗುತ್ತದೆ. ಇದನ್ನು ನೇರವಾಗಿ ಅಥವಾ ಡೀಸೆಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಣಮಾಡಿ ಉಪಯೋಗಿಸಬಹುದು.

ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೊಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರ ಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥೆನಾಲ್ ಅನ್ನು ಬಟ್ಟಿ ಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು. 

ಜೈವಿಕ ಇಂಧನದ ಅನುಕೂಲಗಳು

ಹಲವರಿಗೆ ಉದ್ಯೋಗಾವಕಾಶಗಳು ಸಿಗಲಿದೆ. ಬೀಜ ಸಂಗ್ರಹಣೆ ಹಾಗೂ ಮಾರಾಟದಿಂದ ರೈತರು, ಕೃಷಿ ಕಾರ್ಮಿಕರು ಲಾಭ ಪಡೆಯಬಹುದು. 

 ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಸಂಶೋಧನೆಗಳು ಹೇಳಿವೆ.  ಜೈವಿಕ ಇಂಧನವು ಪರಿಸರಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನವಾಗಿದೆ.

ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ.  ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಣೆಯು ಸುರಕ್ಷಿತವಾಗಿರುತ್ತದೆ. 

ಇದರ ಬಳಕೆಯಿಂದ ಇಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.
  ಜೈವಿಕ ಇಂಧನಕ್ಕಾಗಿ ಮರಗಳನ್ನು ಬೆಳೆಯುವುದರಿಂದ  ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುತ್ತದೆ. 

ಜೈವಿಕ ಇಂಧನ ಕಾರ್ಯಪಡೆ

ಜೈವಿಕ ಇಂಧನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತವಾಗಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ.  ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2008ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆಯನ್ನು  ಸರ್ಕಾರ ರಚಿಸಿದೆ.  ಈ ಕಾರ್ಯಪಡೆಯು ಜೈವಿಕ ಇಂಧನ ನೀತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುತ್ತದೆ.

ಧ್ಯೇಯೋದ್ದೇಶಗಳು

ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮ ರೂಪಿಸುವುದು. ಸರ್ಕಾರಕ್ಕೆ ಮಾರ್ಗದರ್ಶನ ಅಥವಾ ಶಿಫಾರಸು ನೀಡುವುದು.

ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಯೋಗ್ಯವಾದ ಕೃಷಿಯೇತರ ಭೂಮಿಯನ್ನು ಗುರುತಿಸುವುದು. ವಿವಿಧ ಪ್ರದೇಶಗಳಿಗೆ ಯೋಗ್ಯವಾದ ಜೈವಿಕ ಇಂಧನ ಸಸ್ಯಗಳನ್ನು ಗುರುತಿಸುವುದು.
 ಎಥೆನಾಲ್ ಉತ್ಪಾದನೆಗಾಗಿ ಪ್ರೋತ್ಸಾಹ ನೀಡುವುದು.
ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪಾದನೆಗಾಗಿ ಉತ್ತೇಜನ ನೀಡುವುದು.

ಜೈವಿಕ ಎಥೆನಾಲ್ ಉತ್ಪಾದನೆಗಾಗಿ ಕಬ್ಬು, ಬೀಟ್‌ರೂಟ್, ಗೋವಿನ ಜೋಳ ಬೇಸಾಯವನ್ನು ಪ್ರೋತ್ಸಾಹಿಸುವುದು.

ರಾಜ್ಯ ಜೈವಿಕ ಇಂಧನ ನೀತಿ

ಜೈವಿಕ ಇಂಧನ ಕಾರ್ಯಪಡೆ ರಾಜ್ಯದ ಜೈವಿಕ ಇಂಧನ ನೀತಿ ರೂಪಿಸಿ, 2009ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ಜಾರಿಗೊಳಿಸಿದೆ. 

ರಾಜ್ಯದ 25,000 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲೂ ಹಾಗೂ ರೈತರ ಹೊಲದ ಬದುಗಳಲ್ಲಿ ಒಟ್ಟು 3 ಕೋಟಿ ಸಸಿಗಳನ್ನು ಹಾಗೂ 20 ಲಕ್ಷ ಕಸಿ ಮಾಡಿದ ಉತ್ತಮ ತಳಿಯ ಮತ್ತು 3 ವರ್ಷಕ್ಕೇ ಅಧಿಕ ಇಳುವರಿ ನೀಡುವ ಹೊಂಗೆ ಮತ್ತು ಇತರ ಜೈವಿಕ ಇಂಧನ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT