ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ: ಕರ್ನಾಟಕದ ಸಾಂಸ್ಕೃತಿಕ ಇತಿಹಾಸ

Last Updated 17 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಭಾಗ-3

ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ವಿಷಯದಲ್ಲಿ ‘ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ’ ವಿಭಾಗದಲ್ಲಿ ಸಾಂಸ್ಕೃತಿಕ ಇತಿಹಾಸ ವಿಷಯದ ಕುರಿತ ಬಹುಆಯ್ಕೆ ಪ್ರಶ್ನೆಗಳು.

1. ಈ ಕೆಳಗಿನ ಯಾವ ದೇವಾಲಯದಲ್ಲಿ ಪಂಚತಂತ್ರದ ಕಥೆಗಳು ಶಿಲ್ಪದಲ್ಲಿ ಮೂಡಿ ಬಂದಿವೆ ಹಾಗೂ ಮೊಲ, ಆಮೆ, ನರಿ, ಕೋತಿ, ಹಂಸಗಳ ಕಥೆಯನ್ನು ಸುಂದರವಾಗಿ ಕೆತ್ತಲಾಗಿದೆ?

ಎ. ಇಟಗಿಯ ಮಹಾದೇವ

ಬಿ. ಬೆಳ್ಳಿಗಾವಿಯ ತ್ರಿಪುರಾಂತಕ ದೇವಾಲಯ

ಸಿ. ಲಕ್ಕುಂಡಿಯ ಬ್ರಹ್ಮ ಜಿನಾಲಯ

ಡಿ. ಗದಗಿನ ಸರಸ್ವತಿ ದೇವಾಲಯ

⇒ಉತ್ತರ: ಬಿ (ಇದು ಕಲ್ಯಾಣ ಚಾಲುಕ್ಯರ⇒ಕೊಡುಗೆಯಾಗಿದೆ)

2. ನಮ್ಮ ನಾಡದೇವತೆಯ ದೇವಾಲಯಗಳನ್ನು ಎಲ್ಲೆಲ್ಲಿ ನೋಡಬಹುದು?

ಎ. ಉತ್ತರ ಕನ್ನಡದ ಭುವನಗಿರಿ ಮತ್ತು ಹಂಪಿ

ಬಿ. ಮಂಗಳೂರು ಮತ್ತು ಹಂಪಿ

ಸಿ. ಉತ್ತರ ಕನ್ನಡದ ಭುವನಗಿರಿ ಮತ್ತು ಹುಮ್ನಾಬಾದ್

ಡಿ. ಚಾಮರಾಜ ನಗರ ಮತ್ತು ಧರ್ಮಸ್ಥಳ

⇒ಉತ್ತರ:ಎ

3. …………… ದೇವಾಲಯದ ದಕ್ಷಿಣದ ಬಾಗಿಲನ್ನು ‘ಶುಕ್ರವಾರದ ಬಾಗಿಲು’ ಎಂದೇ ಕರೆಯುತ್ತಾರೆ. ಅಲ್ಲದೇ ಇದನ್ನು ‘ಸ್ವರ್ಗದ ಬಾಗಿಲು’ ಎಂದೂ ಕರೆಯುವುದು ವಾಡಿಕೆ.

ಎ. ಬೇಲೂರಿನ ಚೆನ್ನಕೇಶವ ದೇವಾಲಯ

ಬಿ. ಹಂಪಿಯ ವಿರೂಪಾಕ್ಷ ದೇವಾಲಯ

ಸಿ. ಶೃಂಗೇರಿಯ ವಿದ್ಯಾಶಂಕರ ದೇವಾಲಯ

ಡಿ. ಸೋಮನಾಥಪುರದ ಕೇಶವ ದೇವಾಲಯ

ಉತ್ತರ: ಎ

4. ದೇವಾಲಯದ ಗೋಡೆಯೊಂದರ ಮೇಲೆ ಶಿಲ್ಪದಲ್ಲಿರುವ ವರ್ಣನೆ ಹೀಗಿದೆ

ಕುದುರೆ ಸವಾರರು ಹಾಕಿರುವ ಬೂಟುಗಳು, ಉದ್ದವಾದ ನಿಲುವಂಗಿ, ರಥದ ಚಕ್ರಗಳಿಗಿರುವ ಸ್ಪ್ರಿಂಗ್ ಮಾದರಿಯ ರಚನೆಯನ್ನು ಶಿಲ್ಪಕಲಾಕೃತಿಯಲ್ಲಿ ಮೂಡಿ ಬಂದ ರೀತಿ ನೋಡಿದರೆ ಆಧುನಿಕ ಕಾಲವನ್ನು ಅದು ನೆನಪಿಸುತ್ತದೆ, ಯೋಧರು ಉದ್ದವಾದ ಕೊಳವೆಯನ್ನು ಹಿಡಿದು ನೋಡುವ ದೃಶ್ಯದ ಶಿಲ್ಪಗಳ ಚಿತ್ರಣವು ಆ ಕಾಲದಲ್ಲಿಯೇ ದೂರದರ್ಶಕ ಉಪಯೋಗದಲ್ಲಿತ್ತೇನೋ ಎಂಬಂತೆ ಭಾಸವಾಗುತ್ತದೆ.

ಮೇಲಿನ ವರ್ಣನೆಯು ಯಾವ ದೇವಾಲಯದಲ್ಲಿರುವ ಶಿಲ್ಪ ಕಲಾಕೃತಿಗಳ ಬಗ್ಗೆ ತಿಳಿಸುತ್ತದೆ?

ಎ. ಹಂಪಿಯ ವಿರೂಪಾಕ್ಷ ದೇವಾಲಯ

ಬಿ. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ

ಸಿ. ಬಾದಾಮಿಯ ಭೂತನಾಥ ದೇವಾಲಯ

ಡಿ. ಐಹೊಳೆಯ ಲಾಡ್ ಖಾನ್ ಮಂದಿರ

⇒ಉತ್ತರ: ಬಿ

5. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಹೊಯ್ಸಳರ ಕಾಲದ ದೊಡ್ಡಗೆದ್ದವನಹಳ್ಳಿಯ ಲಕ್ಷ್ಮಿ ದೇವಾಲಯವು ಬೇಲೂರಿನ ಚೆನ್ನಕೇಶವ ದೇವಾಲಯಕ್ಕಿಂತ 4 ವರ್ಷ ಮೊದಲು ನಿರ್ಮಿಸಿದ ದೇವಾಲಯವಾಗಿದ್ದು ನಾಲ್ಕು ಗರ್ಭಗೃಹಗಳನ್ನು ಹೊಂದಿರುವ ಚತುರ್ (4) ಕೂಟ ದೇವಾಲಯವಾಗಿದೆ.

2. ಐಹೊಳೆಯಲ್ಲಿರುವ ಲಾಡ್‌ಖಾನ್ ಮಂದಿರಕ್ಕೆ ಆ ಹೆಸರು ಬರಲು ಕಾರಣ ದೇವಾಲಯದ ಹತ್ತಿರದಲ್ಲಿದ್ದ ಗುಡಿಸಲಿನಲ್ಲಿ ಒಬ್ಬ ಮುಸಲ್ಮಾನ ವಾಸಿಸುತ್ತಿದ್ದ. ಹೀಗಾಗಿ ಅದಕ್ಕೆ ಆ ಹೆಸರೇ ರೂಢಿಯಾಯಿತು. ಆದರೆ ಇದೊಂದು ಶಿವ ದೇವಾಲಯವಾಗಿದೆ.

3. ಐಹೊಳೆಯ ಪಕ್ಕದಲ್ಲಿ ಒಂದು ಚಿಕ್ಕ ಗುಡ್ಡವಿದೆ. ಅದರ ಮೇಲೆ ಎದ್ದು ಕಾಣುವ ದೇವಾಲಯವೇ ಮೇಗುತಿ ಗುಡಿ. ಇದನ್ನು 2ನೇ ಪುಲಕೇಶಿ ಕಾಲದ ರವಿ ಕೀರ್ತಿ ಕಟ್ಟಿಸಿದ. ಇದು ಗುಡ್ಡದ ಮೇಲಿರುವುದರಿಂದ ಜನರು ಮೇಲ್‌ಗುಡಿ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಅದೂ ಮೇಗುತಿ ಗುಡಿಯಾಗಿ ಜನರ ಬಾಯಲ್ಲಿ ಜನಜನಿತವಾಯಿತು.

4. ಮಲಪ್ರಭಾ ನದಿಯ ದಂಡೆಯ ಮೇಲೆ ಸ್ಥಿತ ಕಿಸವೊಳಲು ಎಂಬ ಪಟ್ಟಣವು ಪಟ್ಟದಕಲ್ಲು ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದು ಯುನೆಸ್ಕೋ ವಿಶ್ವ ಪರಂಪರಾ ತಾಣಗಳ ಪಟ್ಟಿಯಲ್ಲಿರುವ ಕರ್ನಾಟಕದ ಸಾಂಸ್ಕೃತಿಕ ಕೇಂದ್ರ. ಇಲ್ಲಿರುವ ಲೋಕೇಶ್ವರ ದೇವಾಲಯ ಪ್ರಸಿದ್ಧವಾದದ್ದು. ಇದನ್ನು ಇತ್ತೀಚಿಗೆ ವಿರೂಪಾಕ್ಷ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವನ್ನು ಅನಿವಾರಿತ ಗುಂಡ ಎಂಬ ಶಿಲ್ಪಿಯ ನೇತೃತ್ವದಲ್ಲಿ ಕಟ್ಟಲಾಯಿತು.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 2, 3 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

⇒ಉತ್ತರ: ಸಿ

6. ಭುವನೇಶ್ವರಿ ಹೊಯ್ಸಳರ ವಾಸ್ತು ಶಿಲ್ಪದ ವೈಶಿಷ್ಟ್ಯವಾಗಿದೆ. ಹಾಗಾದರೆ ಭುವನೇಶ್ವರಿ ಎಂದರೆ...

ಎ. ಹೊಯ್ಸಳ ದೇವಾಲಯಗಳ ನವರಂಗದ ಮೇಲ್ಛಾವಣಿಯಲ್ಲಿನ ನಾಲ್ಕು ಕಂಬಗಳ ಮಧ್ಯೆ ನಿರ್ಮಿಸಲಾದ ಅಲಂಕಾರಕ್ಕೆ ಭುವನೇಶ್ವರಿ ಎಂದು ಹೆಸರು.

ಬಿ. ಲೇಥ್ ಯಂತ್ರದಿಂದ ನಿರ್ಮಿಸಿದಂತೆ ನುಣುಪಾಗಿ, ನಾಜೂಕಾಗಿ ಕಡೆದ ಕಂಬಗಳೆಲ್ಲ ಮೇಲ್ನೋಟಕ್ಕೆ ಒಂದೇ ರೀತಿ ಕಂಡರೂ ಕೂಡ ಒಂದು ಇನ್ನೊಂದರಂತೆ ಇರುವುದಿಲ್ಲ. ಅವುಗಳಿಗೆ ಭುವನೇಶ್ವರಿಗಳು ಎಂದು ಹೆಸರು.

ಸಿ. ಹೊಯ್ಸಳ ಕಾಲದ ದೇವಾಲಯಗಳು ಸಾಮಾನ್ಯವಾಗಿ 3 ರಿಂದ 5 ಅಡಿಗಳ ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲೆ ನಿರ್ಮಿಸಲಾಗಿದೆ. ಅವುಗಳಿಗೆ ಭುವನೇಶ್ವರಿಗಳು ಎಂದು ಹೆಸರು

ಡಿ. ಮೇಲಿನ ಯಾವುದೂ ಅಲ್ಲ.

⇒ಉತ್ತರ: ಎ

7. ಯಾವ ದೇವಸ್ಥಾನವನ್ನು ‘ದೇವಾಲಯ ಚಕ್ರವರ್ತಿ’ ಎಂದು ಕಲ್ಯಾಣ ಚಾಲುಕ್ಯರ ಕಾಲದ ಶಾಸನವೊಂದು ತಿಳಿಸುತ್ತದೆ?

ಎ. ಕುಕ್ಕನೂರಿನ ನವಲಿಂಗ ದೇವಾಲಯ

ಬಿ. ಲಕ್ಕುಂಡಿಯ ಕಾಶಿವಿಶ್ವೇಶ್ವರ ದೇವಾಲಯ

ಸಿ. ಬಾದಾಮಿಯ ಭೂತನಾಥ ದೇವಾಲಯ

ಡಿ. ಇಟಗಿಯ ಮಹಾದೇವ ದೇವಾಲಯ

⇒ಉತ್ತರ: ಡಿ

8. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಪ್ರಸ್ತುತ ಕರ್ನಾಟಕದಲ್ಲಿರುವ 3 ಸ್ಥಳಗಳು ಯುನೆಸ್ಕೋ ವಿಶ್ವ ಪರಂಪರಾ ಪಟ್ಟಿಯಲ್ಲಿದ್ದು ಅದರಲ್ಲಿ ಎರಡು ಸಾಂಸ್ಕೃತಿಕ ಕರ್ನಾಟಕಕ್ಕೆ ಸೇರಿದ ಪಟ್ಟದಕಲ್ಲು ಮತ್ತು ಹಂಪಿ ಎನ್ನೋದು ವಿಶೇಷವಾಗಿದೆ

2. ಐಹೊಳೆಯನ್ನು ‘ವಾಸ್ತುಶಿಲ್ಪದ ಪ್ರಯೋಗಶಾಲೆ’ ಎಂದಿದ್ದಾರೆ. ಯಾಕೆಂದರೆ ಇಲ್ಲಿ 70ಕ್ಕೂ ಹೆಚ್ಚು ಸಣ್ಣ ಪುಟ್ಟ ದೇವಾಲಯಗಳು ದೊರಕಿವೆ. ಇಲ್ಲಿನ ವಿವಿಧ ದೇವಾಲಯಗಳಲ್ಲಿ ಅನೇಕ ತರಹದ ಪ್ರಯೋಗಗಳನ್ನು ನಡೆಸಿ ವಿಜಯ ಸಾಧಿಸಿದ ಬಾದಾಮಿ ಚಾಳುಕ್ಯರ ಕಾಲದ ಶಿಲ್ಪಕಾರರು ಆ ಸಾಮ್ರಾಜ್ಯದ ಇತರ ನಗರಗಳಾದ ಪಟ್ಟದಕಲ್ಲು
ಮತ್ತು ಬಾದಾಮಿಯಲ್ಲಿ ದೊಡ್ಡ ದೇವಾಲಯಗಳನ್ನು ಕಟ್ಟಲು ಪ್ರಾರಂಭಿಸಿದರು. ಐಹೊಳೆಯಲ್ಲಿ ಕಟ್ಟಿದ ಕಟ್ಟಡಗಳ ಅನುಭವವು ಮಾಗಿ ಪರಿಪಕ್ವವಾದ ಶಿಲ್ಪಕಲೆಯು ಪಟ್ಟದಕಲ್ಲಿನಲ್ಲಿ ಅರಳಿರುವುದನ್ನು ನೋಡುತ್ತೇವೆ.

3. ಬಾದಾಮಿಯಲ್ಲಿ ಭೂತನಾಥ ದೇವಾಲಯದ ಉತ್ತರಕ್ಕೆ ಮುಖ ಮಾಡಿದ ದೊಡ್ಡ ಕಲ್ಲು ಗುಡ್ಡೆಯನ್ನು ಕೊರೆದು ಗುಹಾಲಯಗಳನ್ನು ನಿರ್ಮಿಸಲಾಗಿದೆ. ನಾಲ್ಕು ಗುಹಾಲಯಗಳಿವೆ. ಇದರ ಪಕ್ಕದಲ್ಲಿ ಅಗತ್ಸ್ಯತೀರ್ಥ ಎಂಬ ಕೆರೆಯೂ ಇದೆ.

4. ಐಹೊಳೆಯಲ್ಲಿ ಮೇಗುತಿ ದೇವಾಲಯದ ಎದುರಿನಲ್ಲಿ ಉತ್ತರಕ್ಕಿರುವ ಚಿಕ್ಕ ಗುಡ್ಡದಲ್ಲಿ ಗುಹಾಲಯಗಳನ್ನು ನಿರ್ಮಿಸಲಾಗಿದೆ. ಮೊದಲ ಗುಹೆಯು ಶಿವ ದೇವಾಲಯವಾಗಿದೆ. ಎರಡನೇ ಗುಹೆಯಲ್ಲಿ ನಟರಾಜನ ವಿಗ್ರಹವಿದೆ. ಇದು ಹತ್ತು ಕೈಗಳನ್ನು ಹೊಂದಿದ್ದು ಹಾವುಗಳನ್ನು ಹಿಡಿದುಕೊಂಡಿದೆ, ಹತ್ತು ಕೈ ಉಳ್ಳ ವಿಗ್ರಹವನ್ನು ಜನರು ತಪ್ಪಾಗಿ ಅರ್ಥೈಸಿ ಅದನ್ನು ‘ಹತ್ತು ಕೈಗಳ ರಾವಣ ಗುಡಿ’ ಎಂದು ಕರೆಯುತ್ತಾರೆ. ಕಾಲಾನಂತರದಲ್ಲಿ ಜನಸಾಮಾನ್ಯರ ಬಾಯಲ್ಲಿ ‘ರಾವಳಗುಡಿ’ ನಂತರ ‘ರಾವಳಪಿಡಿ’ ಎಂದಾಗಿ ಹೆಸರು ಪಡೆಯಿತು. ಆದರೆ ಈ ಗುಹೆಯ ಮುಖ್ಯ ಭಾಗದಲ್ಲಿ ಶಿವಲಿಂಗ ಹಾಗೂ ಎದುರಿಗೆ ನಂದಿ ವಿಗ್ರಹ ಇರೋದನ್ನು ಗಮನಿಸಿದರೆ ಇದೊಂದು ಪಕ್ಕಾ ಶಿವ ದೇವಾಲಯವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

⇒ಉತ್ತರ: ಸಿ

9. ವಿಜಯನಗರ ಕಾಲದಲ್ಲಿ ಯಾವ ದೇವಾಲಯವು ರಾಜ ಪರಿವಾರದವರ ಪೂಜೆಗಾಗಿಯೇ ಬಳಸಲು ಕೃಷ್ಣದೇವರಾಯನು ಕಟ್ಟಿಸಿದ್ದನು?

ಎ. ವಿರೂಪಾಕ್ಷ ದೇವಾಲಯ

ಬಿ. ವಿಜಯ ವಿಠಲ ದೇವಾಲಯ

ಸಿ. ಹಜಾರ ರಾಮಸ್ವಾಮಿ ದೇವಾಲಯ

ಡಿ. ಬಾಲಕೃಷ್ಣ ದೇವಾಲಯ

⇒ಉತ್ತರ: ಸಿ

10. ಮಹಾನವಮಿ ದಿಬ್ಬವನ್ನು 1513ರ ಹೊತ್ತಿಗೆ ಉದಯಗಿರಿಯನ್ನು ಗೆದ್ದು ಬಂದ ಕೃಷ್ಣ ದೇವರಾಯ ಕಟ್ಟಿಸಿದ. ಇಲ್ಲಿ ವಿಜಯನಗರದ ಕಾಲದಲ್ಲಿ ನಾಡಹಬ್ಬ ಮಹಾನವಮಿಯನ್ನು ಆಚರಿಸಲಾಗುತ್ತಿತ್ತು. ಹಾಗಾದರೆ ಇದು ಹಂಪಿಯಲ್ಲಿ ಯಾವ ದೇವಾಲಯದ ಹತ್ತಿರದಲ್ಲಿದೆ?

ಎ. ಹಜಾರ ರಾಮಸ್ವಾಮಿ ದೇವಾಲಯ

ಬಿ. ವಿರೂಪಾಕ್ಷ ದೇವಾಲಯ

ಸಿ. ಬಾಲಕೃಷ್ಣ ದೇವಾಲಯ

ಡಿ. ಗಾಣಗಿತ್ತಿ ದೇವಾಲಯ

⇒ಉತ್ತರ: ಎ

11. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರವು ಯುನೆಸ್ಕೋ ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಸೇರಿದೆ. ಅಲ್ಲಿ 34 ಗುಹಾಲಯಗಳನ್ನು ನೋಡಬಹುದು. ಈ ಗುಹೆಗಳಲ್ಲಿ 15ನೇ ಗುಹೆಯಾದ ದಶಾವತಾರ ಗುಹೆಯು ಅತಿ ವಿಶಾಲವಾಗಿದ್ದು, 2 ಅಂತಸ್ತುಗಳನ್ನು ಒಳಗೊಂಡಿದೆ. ಇಲ್ಲಿಯೇ ದಂತಿದುರ್ಗನ ಶಾಸನವೂ ಇದೆ.

2. ಎಲ್ಲೋರದ ಗುಹೆಗಳಲ್ಲಿ 16ನೇ ಗುಹೆಯೇ ಪ್ರಸಿದ್ಧ ಕೈಲಾಸನಾಥ ದೇವಾಲಯವಾಗಿದೆ. ಇದು ರಾಷ್ಟ್ರಕೂಟರ ಸ್ಮಾರಕ ಕಟ್ಟಡಗಳಲ್ಲಿ ಅತ್ಯುತ್ತಮವಾದ್ದದ್ದು.

3. ಪ್ರಸ್ತುತ ಮಹಾರಾಷ್ಟ್ರದ ಔರಂಗಾಬಾದ್ ಬಳಿ ಎಲ್ಲೋರದ ದೇವಾಲಯವನ್ನು ಕನ್ನಡಿಗ ರಾಷ್ಟ್ರಕೂಟ ದೊರೆ 1ನೇ ಕೃಷ್ಣ ಕಟ್ಟಿಸಿದ್ದ ಎಂಬುದು ಹೆಮ್ಮೆಯ ಸಂಗತಿ

4. ಮುಂಬೈಯಿಂದ 7 ಮೈಲು ದೂರದಲ್ಲಿರುವ ನಡುಗಡ್ಡೆಯೇ ಎಲಿಫೆಂಟಾ. ‘ಘಾರಾಪುರಿ’ ಅಥವಾ ಗೋರವಪುರಿ ಎಂಬುದು ಅದರ ಪ್ರಾಚೀನ ಹೆಸರು. ಆಲ್ಲಿ ಮೂರು ಮುಖಗಳುಳ್ಳ ಶಿವನ ಭವ್ಯ ಶಿಲ್ಪವಿದೆ. ಈ ಮೂರು ಮುಖಗಳು ಶಿವನ ಮೂರು ಸ್ವರೂಪವನ್ನು ಸಂಕೇತಿಸುತ್ತವೆ. ಆ ಸ್ವರೂಪಗಳೆಂದರೆ, ಭಯಂಕರವಾದ ಭೈರವ ರೂಪ, ಶಾಂತವಾದ ಶಿವರೂಪ ಹಾಗೂ ಅರ್ಧನಾರೀಶ್ವರ ರೂಪ. ಇದೂ ಕೂಡಾ ರಾಷ್ಟ್ರಕೂಟರ ಕೊಡುಗೆಯಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

⇒ಉತ್ತರ: ಬಿ

ಮಾಹಿತಿ : Spardha Bharati UPSC

ಯೂಟ್ಯೂಬ್‌ ಚಾನೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT