ಸೋಮವಾರ, ಜೂನ್ 27, 2022
22 °C
ಆರ್‌ಆರ್‌ಬಿಯ ಪೂರ್ವಭಾವಿ–ಮುಖ್ಯಪರೀಕ್ಷೆ : ಕರ್ನಾಟಕದ ಶಾಖೆಗಳಲ್ಲಿ ಹುದ್ದೆಗಳೇ ಇಲ್ಲ

ಬ್ಯಾಂಕ್‌ ನೇಮಕಾತಿ: ಕನ್ನಡದಲ್ಲೇ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ ನೇಮಕಾತಿ ಪರೀಕ್ಷೆ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಐಬಿಪಿಎಸ್‌ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್‌ (ಆರ್‌ಆರ್‌ಬಿ) ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಗಳೆರಡೂ ಇದೇ ಮೊದಲ ಬಾರಿಗೆ ಕನ್ನಡದಲ್ಲಿಯೂ ನಡೆಯಲಿವೆ.

ಆದರೆ, 11,687ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ, ರಾಜ್ಯದಲ್ಲಿರುವ ಬ್ಯಾಂಕ್‌ ಶಾಖೆಗಳಲ್ಲಿ ಒಂದೂ ಹುದ್ದೆ ಇಲ್ಲ. ಈ ಬಾರಿ ಪರೀಕ್ಷೆಯಲ್ಲಿ ಆಯ್ಕೆಯಾದ ಕನ್ನಡಿಗರು ಬೇರೆ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ. 

’ರಾಜ್ಯದ ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರದಲ್ಲಿಯೂ ಕೆವಿಜಿ, ಕೆವಿಜಿಬಿ ಬ್ಯಾಂಕ್‌ಗಳು ಇವೆ. ಆದರೆ, ಒಂದೇ ಒಂದು ಹುದ್ದೆಯನ್ನೂ ಇಲ್ಲಿ ನಿಗದಿ ಮಾಡಿಲ್ಲ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದರೂ, ರಾಜ್ಯದಲ್ಲಿ ಕೆಲಸ ಮಾಡಲು ಅವಕಾಶವಿಲ್ಲದಂತಾಗಿದೆ’ ಎಂದು ಅಭ್ಯರ್ಥಿ ಬಿ.ಎಚ್. ಕಿರಣ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು. 

’ರಾಜ್ಯದ ಪ್ರಾದೇಶಿಕ, ಗ್ರಾಮೀಣ ಬ್ಯಾಂಕ್‌ಗಳಲ್ಲಿಯೂ ನಿಗದಿ ಮಾಡಿ ಮತ್ತೊಮ್ಮೆ ಅರ್ಜಿ ಆಹ್ವಾನಿಸಬೇಕು. ರಾಜ್ಯದ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಒತ್ತಡ ಹೇರಬೇಕು’ ಎಂದು ಅವರು ಒತ್ತಾಯಿಸಿದರು.

‘ಈ ಬಾರಿ ನಿರಾಸೆಯಾದರೂ ಮುಂದಿನ ಬಾರಿ ಕನ್ನಡಿಗರು ಇಲ್ಲಿಯೇ ಕೆಲಸ ಮಾಡುವ ಅವಕಾಶ ಸಿಗಬಹುದು. ಈ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು, ಆಯ್ಕೆಯಾದ ರಾಜ್ಯದ ಭಾಷಾ ಪರೀಕ್ಷೆಯನ್ನು ಮೂರು ಅಥವಾ ಆರು ತಿಂಗಳಲ್ಲಿ ಉತ್ತೀರ್ಣಗೊಳಿಸಬೇಕಾಗುತ್ತದೆ’ ಎಂದು ಧಾರವಾಡದ ಬುಲಬುಲೆ ಸ್ಕೂಲ್‌ ಆಫ್‌ ಬ್ಯಾಂಕಿಂಗ್‌ನ ಮುಖ್ಯಸ್ಥ ಡಾ. ಗುರುರಾಜ ಬುಲಬುಲೆ ‘ಪ್ರಜಾವಾಣಿ‌’ಗೆ ತಿಳಿಸಿದರು.

ಪಠ್ಯಕ್ರಮ ಬದಲಾಗಬೇಕು:

‘ಎಸ್‌ಎಸ್‌ಸಿ ಪರೀಕ್ಷೆ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಪರೀಕ್ಷೆಗಳಿಗಿರುವ ಪಠ್ಯಕ್ರಮದ ಮಾದರಿಯಲ್ಲಿಯೇ ಆಯಾ ರಾಜ್ಯದ ಲೋಕಸೇವಾ ಆಯೋಗಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮವೂ ಇರುತ್ತದೆ. ಆದರೆ, ನಮ್ಮ ರಾಜ್ಯದಲ್ಲಿನ ಪಠ್ಯಕ್ರಮ ಮತ್ತು ಬ್ಯಾಂಕಿಂಗ್‌ ಪರೀಕ್ಷೆಗಳ ಪಠ್ಯಕ್ರಮದಲ್ಲಿ ತುಂಬಾ ವ್ಯತ್ಯಾಸವಿದೆ. ಹೊರ ರಾಜ್ಯದ ಅಭ್ಯರ್ಥಿಗಳಿಗೆ ಈ ಎರಡೂ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲಕರವಾದ ವ್ಯವಸ್ಥೆ ಇದೆ. ಆದರೆ, ಇಲ್ಲಿ ಕೆಎಎಸ್‌ಗೆ ಸಿದ್ಧವಾಗುತ್ತಿರುವ ಅಭ್ಯರ್ಥಿ, ಬ್ಯಾಂಕಿಂಗ್‌ಗೂ ಪ್ರತ್ಯೇಕವಾಗಿಯೇ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮ, ಕೇಂದ್ರದ ಪರೀಕ್ಷೆಗಳ ಮಾದರಿಯಂತೆಯೇ ಬದಲಿಸುವ ಅವಶ್ಯಕತೆ ಇದೆ’ ಎಂದು ಅವರು ಹೇಳಿದರು.

ದೋಷ ಸರಿಪಡಿಸಬೇಕು:

‘2008ರಲ್ಲಿ ಆರ್‌ಆರ್‌ಬಿ (ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್‌) ಪರೀಕ್ಷೆ ಕನ್ನಡದಲ್ಲಿಯೇ ನಡೆದಿತ್ತು. ಆದರೆ, ಅದರಲ್ಲಿ ಮುದ್ರಣ ಮತ್ತು ವಾಕ್ಯರಚನೆ ದೋಷಗಳೇ ತುಂಬಿಕೊಂಡಿದ್ದವು. ಪ್ರಶ್ನೆ ಪತ್ರಿಕೆ ಅರ್ಥ ಮಾಡಿಕೊಳ್ಳಲು ಇಂಗ್ಲಿಷ್‌ ಪ್ರಶ್ನೆಗಳನ್ನೇ ನೋಡಬೇಕಾಗಿತ್ತು. ಐಬಿಪಿಎಸ್‌ ಆದರೂ ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿ, ತಪ್ಪಿಲ್ಲದ ಕನ್ನಡ ಪ್ರಶ್ನೆಪತ್ರಿಕೆ ನೀಡಬೇಕು’ ಎಂದು ಅವರು ಗುರುರಾಜ ಒತ್ತಾಯಿಸಿದರು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜೂನ್ 28. ಆಗಸ್ಟ್‌ ಮೂರನೇ ವಾರದಲ್ಲಿ ಪರೀಕ್ಷೆ ನಡೆಯಬಹುದು. ಮಾಹಿತಿಗೆ, www.ibps.in ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು