ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ಭಾರತೀಯ ಕೃತಿಗಳಿಗೆ ‘ಮೆಮೊರಿ ಆಫ್‌ ವರ್ಲ್ಡ್‌’ ಗರಿ

ಏನಿದು ಮೆಮೊರಿ ಆಫ್ ದಿ ವರ್ಲ್ಡ್?
Published 19 ಜೂನ್ 2024, 21:12 IST
Last Updated 19 ಜೂನ್ 2024, 21:12 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆ UNESCO (United Nations Educational, Scientific and Cultural Organization) ತನ್ನ ‘Memory of the World’ (MOW) ಅಭಿಯಾನಕ್ಕೆ ಭಾರತದ ಮೂರು ಸಾಹಿತ್ಯ ಕೃತಿಗಳನ್ನು ಸೇರಿಸಿದೆ. ‘MOW’ಗೆ ಸೇರ್ಪಡೆಯಾದ ಭಾರತೀಯ ಕೃತಿಗಳೆಂದರೆ; ರಾಮಚರಿತಮಾನಸ, ಪಂಚತಂತ್ರ ಮತ್ತು ಸಹೃದಯಲೋಕ–ಲೋಕನ. ಮಂಗೋಲಿಯಾದ ರಾಜಧಾನಿ ಉಲಾನ್‌ಬಾಟರ್‌ನಲ್ಲಿ ನಡೆದ ‘MOW’ನ ಏಷ್ಯಾ ಮತ್ತು ಪೆಸಿಫಿಕ್‌ ವಿಶ್ವ ಸಮಿತಿಯ (MOWCAP) 10ನೇ ಸಭೆಯಲ್ಲಿ ಈ ಭಾರತೀಯ ಕೃತಿಗಳ ಸೇರ್ಪಡೆಯ ನಿರ್ಣಯ ಕೈಗೊಳ್ಳಲಾಯಿತು.

IGNCA ಮಹತ್ವದ ಪಾತ್ರ: ‘ಇಂಟರ್‌ನ್ಯಾಷನಲ್ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌’ನಲ್ಲಿ ಭಾರತದ ಕೃತಿಗಳನ್ನು ಸೇರಿಸುವಲ್ಲಿ ದೆಹಲಿಯಲ್ಲಿರುವ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ಮಹತ್ವದ ಪಾತ್ರ ವಹಿಸಿದೆ. IGNCA ಈ ಕುರಿತು MOWCAP ಗೆ ಮುಂಚೆಯೇ ನಾಮನಿರ್ದೇಶನ ಸಲ್ಲಿಸಿತ್ತು. ನಂತರ MOWCAP ನ 10ನೇ ಸಭೆಯಲ್ಲಿ ಉಪಸ್ಥಿತರಿದ್ದ IGNCA ಕಲಾ ನಿಧಿ ವಿಭಾಗದ ಡೀನ್ (ಆಡಳಿತ) ಮತ್ತು ವಿಭಾಗದ ಮುಖ್ಯಸ್ಥ ರಮೇಶ್ ಚಂದ್ರ ಗೌರ್, ರಾಮಚರಿತಮಾನಸ, ಪಂಚತಂತ್ರ ಮತ್ತು ಸಹೃದಯಲೋಕ–ಲೋಕನ ಕೃತಿಗಳನ್ನು ‘MOW’ ಪಟ್ಟಿಗೆ ಸೇರಿಸುವ ಕುರಿತು ಪ್ರಸ್ತಾಪ ಮಂಡಿಸಿ, ಈ ಕೃತಿಗಳ ಮಹತ್ವವನ್ನು ಸಭೆಗೆ ವಿವರಿಸಿದರು. ತದನಂತರ ಯುನೆಸ್ಕೋದ ಮಹಾನಿರ್ದೇಶಕಿ ಆಡ್ರೆ ಅಜೌಲೆ ನೇತೃತ್ವದಲ್ಲಿ ಸಭೆ ಸೇರಿದ್ದ ಸದಸ್ಯ ರಾಷ್ಟ್ರಗಳ 38 ಪ್ರತಿನಿಧಿಗಳು, 40 ವೀಕ್ಷಕರು ಮತ್ತು ನಾಮನಿರ್ದೇಶಿತರು ಈ ಪ್ರಸ್ತಾವಕ್ಕೆ ಒಪ್ಪಿಗೆ ಸಲ್ಲಿಸಿದರು.

ಈ ಬಾರಿ 56 ದೇಶಗಳು ಮತ್ತು ಸಂಸ್ಥೆಗಳಿಂದ 64 ಹೊಸ ಸಂಗ್ರಹಗಳನ್ನು ಹೊಸದಾಗಿ, ‘ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್’ಗೆ ಸೇರಿಸಲು UNESCO ಕಾರ್ಯನಿರ್ವಾಹಕ ಮಂಡಳಿ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಈ 64 ಸಂಗ್ರಹಗಳಲ್ಲಿ ಭಾರತದ ಮೂರು ಕೃತಿಗಳು ಸೇರಿದಂತೆ ಸೂಫಿ ಕವಿ ಮತ್ತು ತತ್ವಜ್ಞಾನಿ ಮಾವ್ಲಾನಾ ಅವರ ಕೃತಿಗಳು, EMI ಆರ್ಕೈವ್ ಟ್ರಸ್ಟ್‌ನ ದಾಖಲೆಗಳು ಮತ್ತು ಧ್ವನಿ ದಾಖಲೆಗಳು (100,000 ಕ್ಕೂ ಹೆಚ್ಚು ರೆಕಾರ್ಡಿಂಗ್‌ಗಳು, ಸಂಗೀತ, ನಗರ ಮತ್ತು ಗ್ರಾಮೀಣ ಸಂಪ್ರದಾಯಗಳು ಮತ್ತು 1897 ರಿಂದ 1914 ರವರೆಗಿನ ಮೌಖಿಕ ರಚನೆಗಳು), ಅಲಿಪ್ತ ಚಳವಳಿ ಅನುಮೋದಿಸಿದ ರಾಷ್ಟ್ರಗಳ ಮೊದಲ ಸಭೆಯ ದಾಖಲೆಗಳು, ಕೆನಡಾದ ಸ್ಥಳೀಯ ಮಕ್ಕಳ ಸಮೀಕರಣ, ಉಕ್ರೇನ್ ಸಲ್ಲಿಸಿದ ಬಾಬಿ ಯಾರ್ ನಾಜಿ ಹತ್ಯಾಕಾಂಡಗಳ ಆರ್ಕೈವ್‌ಗಳು ಮತ್ತು ಕ್ಲೌಡ್ ಲ್ಯಾಂಜ್‌ಮನ್‌ರ ಹತ್ಯಾಕಾಂಡದ ಚಿತ್ರ, ಶೋಹ್ ಮತ್ತು ಅದರ 200 ಗಂಟೆಗಳ ಆರ್ಕೈವಲ್ ದೃಶ್ಯಾವಳಿಗಳು, ಫ್ರಾನ್ಸ್‌ ಮತ್ತು ಜರ್ಮನಿ ಸಲ್ಲಿಸಿದ ಗುಲಾಮಗಿರಿ ಸ್ಮರಣೆಯ ಚಿತ್ರಗಳು ಪ್ರಮುಖವಾಗಿವೆ.

ರಾಮಚರಿತಮಾನಸ

16ನೇ ಶತಮಾನದಲ್ಲಿ ಗೋಸ್ವಾಮಿ ತುಳಸಿದಾಸರಿಂದ ರಚನೆಗೊಂಡಿರುವ ‘ರಾಮಚರಿತಮಾನಸ’ ಕೃತಿಯನ್ನು ಮೂಲತಃ ಅವಧಿ ಉಪಭಾಷೆಯಲ್ಲಿ ಬರೆಯಲಾಗಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿ, ಇದು ಶಿವನ ಪರಿಚಾರಕರ ಮೇಲಿನ ಶಾಪದಿಂದ ಪ್ರಾರಂಭವಾಗುತ್ತದೆ. ತುಳಸಿದಾಸರು ಅಕ್ಬರನ ಆಳ್ವಿಕೆ ಕಾಲದಲ್ಲಿ ಇದನ್ನು ರಚಿಸಿದರು. ಈ ಕೃತಿಯು ಏಳು ಕಾಂಡಗಳನ್ನು ಒಳಗೊಂಡಿದೆ. ತುಳಸಿದಾಸರು ತಮ್ಮ ಈ ಕೃತಿಯಲ್ಲಿ ಹನುಮ ಮತ್ತು ಶಿವ ದರ್ಶನಗಳನ್ನು ಪ್ರತಿಬಿಂಬಿಸಿದ್ದು, ಈ ಕೃತಿ ವೇದಾಂತ ಮತ್ತು ಭಕ್ತಿಯ ತತ್ತ್ವಚಿಂತನೆಗಳನ್ನು ಹುದುಗಿಸಿಕೊಂಡಿದೆ ಮತ್ತು ರಾಮಾಯಣ ಮಾದರಿಯ ಚೌಪೈಗಳು ಮತ್ತು ದೋಹಾಗಳಿಂದಾಗಿ ಹೆಸರುವಾಸಿಯಾಗಿದೆ.

ಪಂಚತಂತ್ರ

ವಿಷ್ಣುಶರ್ಮ ವಿರಚಿತ ಕೃತಿ ‘ಪಂಚತಂತ್ರ’, ಪದ್ಯ ಮತ್ತು ಗದ್ಯ ರೂಪದಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ಪಾತ್ರದ ಮೂಲಕ ನಿರೂಪಿತವಾದ ಪ್ರಾಚೀನ ಭಾರತದ ನೀತಿಕಥೆಗಳ ಸಂಗ್ರಹವಾಗಿದೆ. ಕ್ರಿ.ಪೂ. 3 ನೇ ಶತಮಾನದಲ್ಲಿ ಈ ಕೃತಿ ರಚಿಸಲಾಗಿದೆ. ಈ ಕೃತಿಯನ್ನು ಮಂದಬುದ್ಧಿಯ ರಾಜಕುಮಾರರಿಗೆ ಶಿಕ್ಷಣ ನೀಡಲು ಅನುಕೂಲವಾಗುವಂತೆ ನೀತಿ ಬೋಧಕ ತತ್ವಗಳ ಆಧಾರದ ಮೇಲೆ ಕೈಪಿಡಿಯ ರೂಪದಲ್ಲಿ ರಚಿಸಲಾಗಿದೆ. ಈಗಾಗಲೇ ಪಂಚತಂತ್ರವು 50 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿತವಾಗಿದೆ, 60 ಕ್ಕೂ ಹೆಚ್ಚು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಪ್ರಕಟಿತವಾಗಿದೆ. ದಿ ಅರೇಬಿಯನ್ ನೈಟ್ಸ್, ದ ಡೆಕಾಮೆರಾನ್, ದಿ ಕ್ಯಾಂಟರ್ಬರಿ ಟೇಲ್ಸ್, ಮತ್ತು ದಿ ಫೇಬಲ್ಸ್ ಆಫ್ ಲಾ ಫಾಂಟೈನ್‌ನಂಥ ವಿಶ್ವಪ್ರಸಿದ್ಧ ಜಾನಪದ ನೀತಿಕತೆಗಳು ಪಂಚತಂತ್ರದಿಂದ ನೇರ ಪ್ರೇರಣೆ ಪಡೆದಿವೆ.

ಸಹೃದಯಲೋಕ–ಲೋಕನ

ಕ್ರಿ.ಶ. 9ನೇ ಶತಮಾನದ ಕಾಶ್ಮೀರಿ ಸಾಹಿತಿ ಆಚಾರ್ಯ ಆನಂದವರ್ಧನ ಅವರಿಂದ ರಚನೆಗೊಂಡಿರುವ ‘ಸಹೃದಯಲೋಕ–ಲೋಕನ’ ಕೃತಿ ಕಾವ್ಯಮಿಮಾಂಸಾ ಕೃತಿಯಾಗಿದ್ದು, ಸೌಂದರ್ಯ ಸಿದ್ಧಾಂತಗಳ ಸಂಶ್ಲೇಷಣೆಯಿಂದ ಹೆಸರುವಾಸಿಯಾಗಿದೆ. ಈ ಕೃತಿ ಸಂಸ್ಕೃತ ನಾಟಕ ಸಂಪ್ರದಾಯಗಳ ಒಳನೋಟಗಳನ್ನು ಒದಗಿಸುತ್ತದೆ. ನಾಟ್ಯಶಾಸ್ತ್ರದಲ್ಲಿ ಭರತನು ರೂಪಿಸಿದ ‘ರಾಸ್’ ಸಿದ್ಧಾಂತದ ಸುತ್ತ ಪರಿಕಲ್ಪನೆಗಳನ್ನು ಈ ಕೃತಿ ನಿರ್ಮಿಸುತ್ತದೆ.

ಏನಿದು ಮೆಮೊರಿ ಆಫ್ ದಿ ವರ್ಲ್ಡ್?

ಮೆಮೋರಿ ಆಫ್ ದಿ ವರ್ಲ್ಡ್ (MOW) ಕಾರ್ಯಕ್ರಮವು UNESCO 1992 ರಲ್ಲಿ ಪ್ರಾರಂಭಿಸಿದ ಜಾಗತಿಕ ಉಪಕ್ರಮವಾಗಿದೆ. ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿನ ದಾಖಲೆಗಳನ್ನು ಸಂರಕ್ಷಿಸಲು 1998 ರಲ್ಲಿ ‘ಮೆಮೊರಿ ಆಫ್ ದಿ ವರ್ಲ್ಡ್ ಕಮಿಟಿ ಫಾರ್ ಏಷ್ಯಾ ಮತ್ತು ಪೆಸಿಫಿಕ್’ (MOWCAP) ಎಂಬ ನಿರ್ದಿಷ್ಟ ಶಾಖೆ ಸ್ಥಾಪಿಸಲಾಯಿತು. MOWCAP ಯುನೆಸ್ಕೋದ 43 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

‘ಮೆಮೊರಿ ಆಫ್ ದಿ ವರ್ಲ್ಡ್’ (MOW) ಜಾಗತಿಕವಾಗಿ ಮನ್ನಣೆ ಪಡೆದಿರುವ ಮಾನವೀಯ ಪರಂಪರೆಯ ಸಾಕ್ಷ್ಯಚಿತ್ರಗಳು, ಶಾಸನಗಳು, ಕೃತಿಗಳು, ಕಾವ್ಯಗಳು, ಹಸ್ತಪ್ರತಿಗಳು, ಚಿತ್ರಗಳು, ಮತ್ತಿತರ ಅತ್ಯಮೂಲ್ಯ ದಾಖಲೆಗಳನ್ನು ಸಂರಕ್ಷಿಸುವ ಹಾಗೂ ಈ ಹಿರಿದಾದ ಪರಂಪರೆ ಸಾರ್ವಜನಿಕ ಸ್ಮರಣೆಯಿಂದ ಮರೆಯಾಗದೇ ಇರುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ. MOW ವಿಶ್ವಾದ್ಯಂತ ಇರುವ ಗ್ರಂಥಾಲಯ ಪ್ರತಿಗಳು, ಸಂಗ್ರಹಣೆಗಳ ಸಂರಕ್ಷಣೆ ಹಾಗೂ ಪ್ರಸರಣವನ್ನು ಉತ್ತೇಜಿಸುತ್ತದೆ. ಅಂತರರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿರುವ ಪರಂಪರಾತ್ಮಕ ದಾಖಲೆಗಳನ್ನು ಗುರುತಿಸಲು, ಸಂರಕ್ಷಿಸಲು ಮತ್ತು ನಿರ್ವಹಿಸಲು MOW ಸಹಾಯ ಮಾಡುತ್ತದೆ. ಇದರಿಂದ ಸಂಶೋಧನೆ, ಶಿಕ್ಷಣಕ್ಕೂ ಅನುಕೂಲವಾಗುತ್ತದೆ. ಇಲ್ಲಿಯವರೆಗೆ, ‘Memory of the World’ನ  ‘ಇಂಟರ್‌ನ್ಯಾಷನಲ್ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌’ನಲ್ಲಿ 494 ಅತ್ಯಮೂಲ್ಯ ದಾಖಲೆಗಳನ್ನು ನೋಂದಾಯಿಸಲಾಗಿದೆ.

ಡಿಜಿಟಲೀಕರಣದ ಮೂಲಕ ಅಂತರ್ಜಾಲದಲ್ಲಿ ಈ ಅತ್ಯಮೂಲ್ಯ ದಾಖಲೆಗಳನ್ನು ಪ್ರಕಟಿಸುವ ಮೂಲಕ ಅವುಗಳನ್ನು ಸಂರಕ್ಷಿಸುವ ಹಾಗೂ ಅವುಗಳು ಎಲ್ಲರಿಗೂ ಲಭಿಸುವಂತೆ ನೋಡಿಕೊಳ್ಳುವ ಕಾರ್ಯವನ್ನು MOW ಮಾಡುತ್ತದೆ. ಡಿಜಿಟಲೀಕರಣ ಪ್ರಕ್ರಿಯೆ ದುಬಾರಿ ಆಗಿರುವುದರಿಂದ UNESCO ಈ ಕಾರ್ಯಕ್ಕೆ ಸಾಕಷ್ಟು ಹಣಕಾಸು ಬೆಂಬಲವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಕಳೆದ ಮೂರು ದಶಕಗಳಲ್ಲಿ, UNESCO 94 ರಾಷ್ಟ್ರಗಳಲ್ಲಿ ‘ನ್ಯಾಷನಲ್ ಮೆಮೊರಿ ಆಫ್ ದಿ ವರ್ಲ್ಡ್’ ಸಮಿತಿಗಳನ್ನು ಸ್ಥಾಪಿಸಿದೆ.

IGNCA ಬಗ್ಗೆ ಒಂದಿಷ್ಟು

ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ಅನ್ನು 1987 ರಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇದು ಕಲಾ ಕ್ಷೇತ್ರದಲ್ಲಿ ಸಂಶೋಧನೆ, ಶೈಕ್ಷಣಿಕ ಅನ್ವೇಷಣೆ ನಡೆಸುವ ಮತ್ತು ವಿವಿಧ ಕಲಾ ಪ್ರಕಾರಗಳ ಪ್ರಸರಣ ಕೇಂದ್ರವಾಗಿದೆ. IGNCA ಆಡಳಿತ ಟ್ರಸ್ಟ್ (ಬೋರ್ಡ್ ಆಫ್ ಟ್ರಸ್ಟಿಗಳು) ಮೂಲಕ ನಡೆಯುತ್ತದೆ. ಇದರ ಕೇಂದ್ರ ಕಚೇರಿ ದೆಹಲಿಯಲ್ಲಿದ್ದು, ಪ್ರಾದೇಶಿಕ ಕೇಂದ್ರಗಳು ವಾರಾಣಸಿ, ಗುವಾಹಟಿ, ಬೆಂಗಳೂರು, ರಾಂಚಿ, ಪುದುಚೇರಿ, ತ್ರಿಶೂರ್, ಗೋವಾ, ವಡೋದರಾ ಹಾಗೂ ಶ್ರೀನಗರಗಳಲ್ಲಿ ನೆಲೆಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT