ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯಲ್ಲಿ ಯಶಸ್ಸಿಗೆ ‘ಸಿತಾರ್‌’ ತಂತ್ರ

Last Updated 16 ಜೂನ್ 2021, 19:30 IST
ಅಕ್ಷರ ಗಾತ್ರ

ಪರೀಕ್ಷೆ ಒಂದು ರೀತಿಯ ತಪಸ್ಸು. ಅದಕ್ಕೆ ಸತತ ಅಭ್ಯಾಸ ಬಹಳ ಮುಖ್ಯವಾದುದು. ಅಭ್ಯಾಸಕ್ಕೆ ಅನೇಕ ತಂತ್ರಗಳಿವೆ. ಸತತ ಅಭ್ಯಾಸದ ಫಲವು ಫಲಿತಾಂಶದಲ್ಲಿ ಪ್ರತಿಫಲಿತವಾಗುತ್ತದೆ. ಹೀಗಾಗಿ ಪರೀಕ್ಷಾ ಸಿದ್ಧತೆಯು ವಿಶೇಷ ತಂತ್ರಗಾರಿಕೆಯಿಂದ ಕೂಡಿರಬೇಕು. ಇಲ್ಲಿ ಅಂತಹ ಒಂದು ತಂತ್ರಗಾರಿಕೆಯನ್ನು ಪರಿಚಯಿಸಲಾಗಿದೆ. ಅದೇ ಸಿತಾರ್‌ (SITAR) ತಂತ್ರ.

ಸಿತಾರ್‌ ಒಂದು ತಂತಿ ವಾದ್ಯ. ತಂತಿಯನ್ನು ನಿರ್ದಿಷ್ಟ ಸ್ಥಾನಗಳಲ್ಲಿ ನುಡಿಸುವ ಮೂಲಕ ಸಂಗೀತದ ಸಪ್ತ ಸ್ವರಗಳನ್ನು ಹೊರಡಿಸಲಾಗುತ್ತದೆ. ಈ ವಾದ್ಯ ಕಲಿಯಲು ಸತತ ಅಭ್ಯಾಸ ಅಗತ್ಯವಿರುವಂತೆ ಪರೀಕ್ಷಾ ಸಿದ್ಧತೆಗೆ ಈ ವಾದ್ಯದ ಆಂಗ್ಲ ಅಕ್ಷರಗಳನ್ನೇ ಸಂಕೇತಾಕ್ಷರಗಳಾಗಿ ಬಳಸಿಕೊಂಡು ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ.

ಮೊದಲು ಸಿತಾರ್‌ನಲ್ಲಿನ ಸಂಕೇತಾಕ್ಷರಗಳ ವಿವರಣೆ ಬಗ್ಗೆ ತಿಳಿಯೋಣ. ಇಲ್ಲಿ 5 ಅಕ್ಷರಗಳಿದ್ದು, ಪ್ರತಿ ಅಕ್ಷರವು ಒಂದೊಂದು ಅಭ್ಯಾಸದ ಹಂತವನ್ನು ತಿಳಿಸುತ್ತದೆ. ಎಸ್‌– ಸಿಲೆಕ್ಷನ್‌– ಆಯ್ಕೆ, ಐ– ಇಂಟರ್‌ಬ್ಲೆಂಡ್‌ - ಸಮ್ಮಿಶ್ರಮಾಡು, ಟಿ– ಟೆಸ್ಟ್‌ – ಪರೀಕ್ಷೆ, ಎ– ಆನ್ಸರ್‌ – ಉತ್ತರಿಸುವುದು, ಆರ್‌– ರಿವ್ಯೂ– ಪರಿಶೀಲನೆ. ಹೀಗೆ ಐದು ಅಕ್ಷರಗಳು ಐದು ಹಂತಗಳನ್ನು ಪ್ರತಿನಿಧಿಸುತ್ತವೆ.

ಆಯ್ಕೆ: ಪರೀಕ್ಷಾ ಸಿದ್ಧತೆಗೆ ತೊಡಗುವ ಮೊದಲು ಆಯ್ಕೆ ಬಹಳ ಮುಖ್ಯ. ಏಕೆ ಓದಬೇಕು? ಹೇಗೆ ಓದಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು ಯಾವುದನ್ನು ಓದಬೇಕು? ಎಂಬುದು ಮುಖ್ಯ. ಪ್ರತಿ ಪರೀಕ್ಷೆಗೂ ನಿರ್ದಿಷ್ಟವಾದ ಪಠ್ಯ ಇರುತ್ತದೆ. ಆ ಪಠ್ಯದಲ್ಲಿನ ಅಂಶಗಳನ್ನು ಈಗಾಗಲೇ ನಿರ್ದಿಷ್ಟ ಪರಿಕಲ್ಪನೆ ಅಥವಾ ಘಟಕಗಳಾಗಿ ವಿಂಗಡಿಸಲಾಗಿರುತ್ತದೆ. ವಿಂಗಡಿಸದೇ ಇದ್ದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಘಟಕ/ಪರಿಕಲ್ಪನೆಗಳಾಗಿ ವಿಂಗಡಿಸಿಕೊಂಡು ಅದರಲ್ಲಿ ನಿರ್ದಿಷ್ಟ ಘಟಕ/ಪರಿಕಲ್ಪನೆಯನ್ನು ಓದಲು ಆಯ್ಕೆ ಮಾಡಿಕೊಳ್ಳಬೇಕು.

ಸಮ್ಮಿಶ್ರ: ಆಯ್ಕೆ ಮಾಡಿಕೊಂಡ ಪರಿಕಲ್ಪನೆ /ಘಟಕದಲ್ಲಿ ಮಾಹಿತಿಯನ್ನು ನಮ್ಮ ಪೂರ್ವಜ್ಞಾನದೊಂದಿಗೆ ಸಮ್ಮಿಶ್ರ ಮಾಡಬೇಕು. ಅಂದರೆ ಈ ಹಿಂದೆ ಪಡೆದ ಜ್ಞಾನವನ್ನು ಹೊಸ ಜ್ಞಾನ/ಮಾಹಿತಿಯೊಂದಿಗೆ ಬೆರೆಸಿ, ಹೊಸ ಉತ್ಪನ್ನವನ್ನು ಪಡೆಯಬೇಕು. ಪರಿಕಲ್ಪನೆಯನ್ನು ವಿಮರ್ಶಾತ್ಮಕವಾಗಿ ವಿವಿಧ ಆಯಾಮಗಳಿಂದ ಅಧ್ಯಯನ ಮಾಡಬೇಕು. ಆಗ ಮಾತ್ರ ವಿವಿಧ ಮಾಹಿತಿ ಮತ್ತು ಜ್ಞಾನವನ್ನು ಸಮ್ಮಿಶ್ರ ಮಾಡಲು ಸಾಧ್ಯವಾಗುತ್ತದೆ. ಪರಿಕಲ್ಪನೆಗೆ ಪೂರಕ ಮಾಹಿತಿಯನ್ನು ವಿವಿಧ ಆಕರಗಳಿಂದ ಸಂಗ್ರಹಿಸಿಕೊಳ್ಳಬೇಕು. ವಿವಿಧ ಪರಿಕರಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಮಿಕ್ಸಿಗೆ ಹಾಕಿ ರುಬ್ಬಿ ಹೊಸ ಉತ್ಪನ್ನ ಪಡೆದಂತೆ, ಪೂರ್ವ ಜ್ಞಾನದೊಂದಿಗೆ ಹೊಸ ಮಾಹಿತಿಯನ್ನು ಸೇರಿಸಿ ನಮ್ಮದೇ ಆದ ಹೊಸ ಉತ್ಪನ್ನವನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಅದು ಬರಹರೂಪದಲ್ಲಿದ್ದರೆ ಇನ್ನೂ ಉತ್ತಮ.

ಪರೀಕ್ಷೆ: ಈ ಉತ್ಪನ್ನವನ್ನು ಪರೀಕ್ಷೆಗೆ ಒಳಪಡಿಸಬೇಕು. ಅದಕ್ಕಾಗಿ ಪ್ರಶ್ನೆಗಳು ಅಥವಾ ಪ್ರಶ್ನೆ ಪತ್ರಿಕೆ ಅಗತ್ಯ. ಪ್ರಶ್ನೆ ಪತ್ರಿಕೆಗಾಗಿ ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಳಸಬಹುದು. ಇಲ್ಲವೆ ನಾವೇ ಹೊಸ ಪ್ರಶ್ನೆಗಳನ್ನೂ ತಯಾರಿಸಿಕೊಳ್ಳಬಹುದು. ವಿವಿಧ ದೃಷ್ಟಿಕೋನದಿಂದ ಪ್ರಶ್ನೆಗಳನ್ನು ಸಿದ್ಧಪಡಿಸಬೇಕು. ಶೀರ್ಷಿಕೆ ಹಾಗೂ ಉಪಶೀರ್ಷಿಕೆಯ ಆಧಾರದ ಮೇಲೆ ಕಲಿಕಾಂಶದಲ್ಲಿನ ಸಂಭಾವ್ಯ ಪ್ರಶ್ನೆಗಳನ್ನು ಸೃಷ್ಟಿಸಿಕೊಳ್ಳುವುದು ಮತ್ತು ಪ್ರಶ್ನೆಗಳ ಸ್ವರೂಪ ಆಧರಿಸಿ (ವಸ್ತುನಿಷ್ಠ, ಕಿರು ಉತ್ತರ, ದೀರ್ಘ ಉತ್ತರ) ಪ್ರಶ್ನೆಗಳನ್ನು ಪ್ರತ್ಯೇಕಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗಾದರೆ ಪರೀಕ್ಷೆಯ ಸ್ವರೂಪವನ್ನಾಧರಿಸಿ ಪ್ರಶ್ನೆಗಳನ್ನು ಸಿದ್ಧಪಡಿಸಬೇಕು. ತರಗತಿ ಪರೀಕ್ಷೆಗಾದರೆ ಅಂಕಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ತಯಾರಿಸುವಲ್ಲಿ ಆತ್ಮವಂಚನೆ ಕಾಡಬಾರದು.

ಉತ್ತರಿಸುವುದು: ಇದು ಪ್ರಮುಖ ಹಂತ. ಸಿದ್ಧಪಡಿಸಿಕೊಂಡ ಪ್ರಶ್ನೆಗಳನ್ನಾಧರಿಸಿ ಸ್ವಯಂ ಪರೀಕ್ಷೆ ನಡೆಸಿಕೊಳ್ಳುವುದು ಈ ಹಂತದ ಉದ್ದೇಶ. ನಿಗದಿತ ಸಮಯಕ್ಕೆ ಅನುಗುಣವಾಗಿ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಪ್ರಕ್ರಿಯೆ ನಡೆಯಬೇಕು. ಗುಣಮಟ್ಟದ ಪ್ರಮಾಣೀಕೃತ ಉತ್ತರಗಳನ್ನು ಬರೆಯುವ ಕೌಶಲ ಬೆಳೆಸಿಕೊಳ್ಳಬೇಕು. ಉತ್ತರಗಳಲ್ಲಿ ಪ್ರಮುಖ ಅಂಶಗಳನ್ನು ಹೈಲೈಟ್ ಮಾಡುವ ಪ್ರಕ್ರಿಯೆ ಬೆಳೆಸಿಕೊಳ್ಳಬೇಕು.

ಪರಿಶೀಲನೆ: ಉತ್ತರಿಸುವ ಪ್ರಕ್ರಿಯೆ ಮುಗಿದ ನಂತರ ಉತ್ತರಗಳನ್ನು ಪರಿಶೀಲನೆ ಮಾಡುವುದು ಬಹಳ ಪ್ರಮುಖ ಹಂತ. ಇದು ನೀವು ಯಾವ ಹಂತದಲ್ಲಿದ್ದೀರಿ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚುವ ಹಂತ. ಯಾವುದೇ ಪೂರ್ವಾಗ್ರಹಗಳಿಲ್ಲದೆ ಪ್ರಾಮಾಣಿಕ ಮನಸ್ಸಿನಿಂದ ಸ್ವಮೌಲ್ಯಮಾಪನ ಮಾಡಿಕೊಂಡು ನಿಮ್ಮ ಉತ್ತರಗಳನ್ನು ಪರಿಶೀಲನೆ ಮಾಡಬೇಕು. ಪರಿಶೀಲನೆ ನಂತರ ಅಗತ್ಯ ಎನಿಸಿದರೆ ಉತ್ತರಗಳನ್ನು ಪರಿಷ್ಕರಣೆ ಮಾಡಿಕೊಳ್ಳಬೇಕು. ಆಗ ಮಾತ್ರ ಓದು ಅಥವಾ ಅಭ್ಯಾಸ ಯಶಸ್ವಿ ಆಗುತ್ತದೆ. ಗುರಿ ತಲುಪುವ ಮಾರ್ಗ ಸುಲಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT