ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC ಟಾಪರ್ ಸಾಹಿತ್ಯ ಆಲದಕಟ್ಟಿ ಸಂದರ್ಶನ: ‘ಏನು ಓದಬಾರದು ಎಂಬುದೂ ಮುಖ್ಯ’

ಯುಪಿಎಸ್‌ಸಿ ಪರೀಕ್ಷೆಯಲ್ಲಿ 250ನೇ ರ್‍ಯಾಂಕ್‌ ಪಡೆದ ಸಾಹಿತ್ಯ ಅವರ ಸಲಹೆ
Last Updated 15 ಜೂನ್ 2022, 20:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಅವರು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 250ನೇ ರ್‍ಯಾಂಕ್‌ ಪಡೆದಿದ್ದಾರೆ. ಅವರ ಈ ಸಾಧನೆಗೆ ಸ್ಫೂರ್ತಿ ಏನು, ಪರೀಕ್ಷೆಗೆ ಸಿದ್ಧತೆ ಹೇಗಿತ್ತು ಎಂಬ ಬಗ್ಗೆ ‘ಸ್ಪರ್ಧಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸುಗಳಿಸಿದ್ದೀರಿ, ಅಭಿನಂದನೆಗಳು. ನಿಮ್ಮ ಮುಂದಿನ ಹೆಜ್ಜೆ?

ಗ್ರಾಮೀಣ ಆರೋಗ್ಯ ಸುಧಾರಣೆ ಮಾಡಬೇಕು ಎಂಬುದು ನನ್ನ ಕನಸು. ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಎರಡನೇ ಬಯಕೆ. ನಾಗರಿಕ ಸೇವಾ ಕ್ಷೇತ್ರ ಆಯ್ಕೆ ಮಾಡಿಕೊಂಡ ಮೇಲೆ ಎಲ್ಲ ಕ್ಷೇತ್ರಗಳನ್ನೂ ನಿರ್ವಹಿಸಬೇಕಾಗುತ್ತದೆ. ಆದರೆ, ಹಳ್ಳಿಗರ ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಯಾದರೆ ಉಳಿದ ಎಲ್ಲದರಲ್ಲೂ ಅವರು ಸಶಕ್ತರಾಗುತ್ತಾರೆ. ಹಾಗಾಗಿ, ನಾನು ಐಎಎಸ್‌ ಸೇರುತ್ತೇನೆ. ನಂತರ ಗ್ರಾಮೀಣ ಆರೋಗ್ಯಕ್ಕೇ ಹೆಚ್ಚು ಒತ್ತುನೀಡುತ್ತೇನೆ.

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳನ್ನು ಎಷ್ಟನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದಿರಿ? ಹಿಂದಿನ ಪ್ರಯತ್ನ ಫಲಿಸದಿರಲು ಕಾರಣಗಳೇನು?

ನಾಲ್ಕು ಪ್ರಯತ್ನಗಳಲ್ಲಿ ವಿಫಲವಾಗಿ, ಐದನೇ ಬಾರಿ ಯಶಸ್ವಿಯಾದೆ. ಮೊದಲ ಯತ್ನದಲ್ಲಿ ಪ್ರಿಲಿಮ್ಸ್‌ ಪಾಸಾಗಲಿಲ್ಲ. ಯಾವ ಪುಸ್ತಕ ಓದಬೇಕು ಎಂಬುದು ಸ್ಪಷ್ಟವಾಗಿ ಗೊತ್ತಿರದ ಕಾರಣ ಫೇಲ್‌ ಆದೆ. ಎರಡನೇ ಬಾರಿ ಮೇನ್ಸ್‌ನಲ್ಲಿ ಅನುತ್ತೀರ್ಣಳಾದೆ. ಆ ಸಂದರ್ಭದಲ್ಲಿ ನಾನು ಪ್ರಿಲಿಮ್ಸ್‌ಗೆ ಮಾತ್ರ ಆದ್ಯತೆ ನೀಡಿದ್ದರಿಂದ ಮೇನ್ಸ್‌ನಲ್ಲಿ ಹಿಂದುಳಿದೆ. ಮೂರನೇ ಬಾರಿ ಎರಡೂ ಹಂತ ಪಾಸಾದರೂ ಸಂದರ್ಶನದಲ್ಲಿ ಹಿಂದೆ ಬಿದ್ದೆ. ಇದಾಗಿ, ಒಂದೇ ತಿಂಗಳಿಗೆ ಮತ್ತೆ ಪರೀಕ್ಷೆ ಎದುರಿಸಿದೆ. ಸಿದ್ಧತೆ ಇಲ್ಲದ ಕಾರಣ ನಾಲ್ಕನೇ ಬಾರಿ ಪ್ರಿಲಿಮ್ಸ್‌ ಕೂಡ ಪಾಸಾಗಲಿಲ್ಲ. ಹೀಗೆ ವಿಫಲವಾದಾಗ ಒಂದೊಂದು ಪಾಠ ಕಲಿತೆ. ನಾನು ಮಾಡುತ್ತಿದ್ದ ತ‍ಪ್ಪುಗಳ ಅರಿವಾಯಿತು. ಐದನೇ ಬಾರಿಗೆ ಪ್ರಿಲಿಮ್ಸ್‌, ಮುಖ್ಯಪರೀಕ್ಷೆ ಹಾಗೂ ಸಂದರ್ಶನಕ್ಕೂ ಸಮಾನ ಆದ್ಯತೆ ಕೊಟ್ಟು ಓದಿದೆ.

ನೀವು ಬಳಸಿದ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ

ಮುಖ್ಯವಾಗಿ 6 ರಿಂದ 12ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ವಿವರವಾಗಿ ಓದಿದೆ. ಲಕ್ಷ್ಮಿಕಾಂತ ಅವರ ‘ರಾಜನೀತಿ ಶಾಸ್ತ್ರ‘, ರಮೇಶ್‌ ಸಿಂಗ್‌ ಅವರ ‘ಅರ್ಥಶಾಸ್ತ್ರ‘ ಪುಸ್ತಕಗಳನ್ನು ಅಭ್ಯಾಸ ಮಾಡಿದೆ. ಪರಿಸರ ವಿಷಯಗಳ ಅಧ್ಯಯನಕ್ಕೆ ದಿನ ಪತ್ರಿಕೆಗಳನ್ನೇ ಅವಲಂಬಿಸಿದೆ. ಭೂಗೋಳ ಹಾಗೂ ಇತಿಹಾಸ ಅಧ್ಯಯನಕ್ಕೆ ಎನ್‌ಸಿಇಆರ್‌ಟಿ ‍ಪುಸ್ತಕಗಳೇ ಸಾಕಾದವು. ‘ಆಧುನಿಕ ಇತಿಹಾಸ (ಮಾಡರ್ನ್‌ ಹಿಸ್ಟರಿ)’ ಎಂಬ ಪುಸ್ತಕ ಬಹಳ ಉಪಯೋಗವಾಯಿತು. ಪ್ರತಿ ದಿನ ಕನಿಷ್ಠ ಎರಡು ತಾಸು ಪತ್ರಿಕೆ ಓದುವುದು ರೂಢಿ. ಸ್ಥಳೀಯ ಮಟ್ಟದಿಂದ ಅಂತರರಾಷ್ಟ್ರೀಯ ಸಂಗತಿಗಳನ್ನು ಪ್ರತಿ ದಿನ ನೀಡುವುದು ಪತ್ರಿಕೆಗಳು ಮಾತ್ರ. ಹಾಗಾಗಿ, ಪತ್ರಿಕೆ ಓದದೇ ಯಶಸ್ಸು ಸಾಧ್ಯವಿಲ್ಲ.

ನೀವು ಕೋಚಿಂಗ್‌ಗೆ ಹೋಗಿ‌ದ್ದಿರಾ? ಇದು ಅನಿವಾರ್ಯವೇ?

ಒಂದೂವರೆ ವರ್ಷ ದೆಹಲಿಯಲ್ಲಿ ಕೋಚಿಂಗ್‌ ಪಡೆದೆ. ಎಂಜಿನಿಯರಿಂಗ್‌ ಪದವಿ ಪಡೆದ ಕಾರಣ ಇತರ ವಿಷಯಗಳ ಬಗ್ಗೆ ನನಗೆ ತರಬೇತಿ ಅನಿವಾರ್ಯವಾಗಿತ್ತು. ಆದರೆ, ಕೋಚಿಂಗ್‌ ಎಲ್ಲರಿಗೂ ಅನಿವಾರ್ಯವಲ್ಲ. ನಾವು ಓದಿದ ಕ್ಷೇತ್ರಕ್ಕೂ ನಾಗರಿಕ ಸೇವಾ ಕ್ಷೇತ್ರಕ್ಕೂ ತುಂಬ ವ್ಯತ್ಯಾಸ ಇದ್ದರೆ ಅಂಥವರು ಕೋಚಿಂಗ್ ಪಡೆಯಬಹುದು.

ಎಷ್ಟು ಸಮಯದಿಂದ ಪರೀಕ್ಷೆಗೆ ಸಿದ್ಧತೆ ಮಾಡಿದ್ದೀರಿ?

ಆರು ವರ್ಷದಿಂದ ನಿರಂತರ ಸಿದ್ಧತೆ ಮಾಡಿಕೊಂಡಿದ್ದೆ. ಓದು, ಪುನರ್‌ ಮನನ, ಪರೀಕ್ಷೆ ಬಿಟ್ಟರೆ ಬೇರೆ ಯಾವುದೇ ಸಂಗತಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪದವಿ ಮುಗಿದ ಮೇಲೆ ಒಮ್ಮೆಲೇ ಎಲ್ಲವನ್ನೂ ಓದಬೇಕು ಎಂದು ಕುಳಿತು ಕೊಳ್ಳುವುದು ನನ್ನ ರೂಢಿಯಲ್ಲ. ಹಾಗಾಗಿ ಪಿಯುಸಿ ಮುಗಿದ ದಿನದಿಂದಲೇ ಸಿದ್ಧತೆ ಅಗತ್ಯ.

ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ?

ಏನು ಓದಬೇಕು ಎನ್ನುವುದಕ್ಕಿಂತ ಏನು ಓದಬಾರದು ಎಂದು ತಿಳಿಯುವುದು ಮುಖ್ಯ. ಬಹಳ ಜನ ಮೂಟೆಗಟ್ಟಲೇ ಪುಸ್ತಕಗಳನ್ನು ಓದುತ್ತಾರೆ. ಆದರೆ, ಈ ಪರೀಕ್ಷೆಗೆ ಸರಿಯಾದ ಪುಸ್ತಕಗಳ ಆಯ್ಕೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT