ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಟಾಪರ್ಸ್‌ ಟಿಪ್ಸ್‌: 'ಛಲಬಿಡದೇ ಪ್ರಯತ್ನ ಮುಂದುವರಿಸಿ'-ವಿನಯಕುಮಾರ

Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಕೌಠಾದ ವಿನಯಕುಮಾರ ಸಂಗಶೆಟ್ಟಿ ಗಾದಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 151ನೇ ರ್‍ಯಾಂಕ್‌ ಪಡೆದಿದ್ದಾರೆ. ವೈದ್ಯಕೀಯ ಪದವಿಗೆ ತೃಪ್ತರಾಗದೇ, 2020ರಲ್ಲಿ ಕೆಎಎಸ್‌ನಲ್ಲಿ ಉತ್ತೀರ್ಣರಾಗಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಯುಪಿಎಸ್‌ಸಿ ಪರೀಕ್ಷೆಗೆ ನಡೆಸಿದ ಪ್ರಯತ್ನದಲ್ಲೂ ಯಶ ಸಾಧಿಸಿದ್ದಾರೆ. ಈ ಸಾಧನೆಯ ಹಿಂದಿನ ಸಿದ್ಧತೆ ಕುರಿತು ‘ಸ್ಪರ್ಧಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೀರಿ, ನಿಮ್ಮ ಮುಂದಿನ ಹೆಜ್ಜೆ ಏನು?

ನಾನು ವೈದ್ಯನಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸ ಬಹುದಿತ್ತು. ಆದರೆ, ಅದು ಒಂದು ನಗರ ಅಥವಾ ಒಂದು ಆಸ್ಪತ್ರೆಗೆ ಸೀಮಿತವಾಗುತ್ತಿತ್ತು. ಭಾರತೀಯ ಆಡಳಿತ ಸೇವೆಯಲ್ಲಿ ಎಲ್ಲ ವಿಧದಿಂದ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅವಕಾಶ ದೊರೆಯುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಜನಸ್ನೇಹಿ ಆಡಳಿತ ಕೊಡಲು ಬಯಸುವೆ.

ಯುಪಿಎಸ್‌ಸಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಎಷ್ಟನೇ ಪ್ರಯತ್ನದಲ್ಲಿ ಯಶ ಸಾಧಿಸಿದ್ದೀರಿ?

ಮೊದಲು ನಾನು ಪ್ರಿಲಿಮ್ಸ್‌ನಲ್ಲೇ ಪಾಸ್‌ ಆಗಲಿಲ್ಲ. ಒಟ್ಟು ನಾಲ್ಕು ಬಾರಿ ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣವಾದರೂ ಮುಖ್ಯ ಪರೀಕ್ಷೆ ಪಾಸಾಗಿರಲಿಲ್ಲ. ಆದರೆ, ಪ್ರಯತ್ನ ಬಿಡಲಿಲ್ಲ. 5ನೇ ಬಾರಿಗೆ ಮುಖ್ಯ ಪರೀಕ್ಷೆಯಲ್ಲಿ ಪಾಸಾದೆ.

ಹಿಂದಿನ ನಾಲ್ಕು ಪ್ರಯತ್ನಗಳು ಫಲಿಸದಿರಲು ಕಾರಣವೇನು? ಆ ನ್ಯೂನತೆಗಳನ್ನು 5ನೇ ಪ್ರಯತ್ನದಲ್ಲಿ ಹೇಗೆ ಸರಿಪಡಿಸಿಕೊಂಡಿದ್ದೀರಿ?

ಪ್ರತಿ ಬಾರಿಯೂ ಪರೀಕ್ಷೆಯಲ್ಲಿ ಹೊಸ ಪ್ರಶ್ನೆಗಳು ಬರುತ್ತಿದ್ದವು. ಇನ್ನಷ್ಟು ಸಮಗ್ರ ಮಾಹಿತಿ ಬೇಕೆನಿ ಸುತ್ತಿತ್ತು. ಹಿಂದಿನ ಪರೀಕ್ಷೆಗಳಲ್ಲಿನ ಕೊರತೆಗಳನ್ನು ನೀಗಿಸಿಕೊಂಡೆ. ಹಿಂದಿನ ಐದು ವರ್ಷಗಳ ಯುಪಿಎಸ್‌ಸಿ ಪ್ರಶ್ನೆ ಪತ್ರಿಕೆ ಹಾಗೂ ಟಾಪರ್‌ಗಳ ಉತ್ತರ ಪತ್ರಿಕೆ ನೋಡುತ್ತಿದ್ದೆ. ಆ ಮೂಲಕ ಬಹಳಷ್ಟು ತಿಳಿದುಕೊಂಡೆ. ಹೀಗಾಗಿ ಈ ಬಾರಿ ಹೆಚ್ಚು ಪರಿಶ್ರಮ ಪಡುವ ಅಗತ್ಯತೆ ಎದುರಾಗಲಿಲ್ಲ.

ಪರೀಕ್ಷೆಯಲ್ಲಿ ಪಾಸಾಗಲು ನೀವು ಅಳವಡಿಸಿಕೊಂಡಿದ್ದ ಅಧ್ಯಯನ ತಂತ್ರಗಳೇನು?

ನಾನು ಯಾವತ್ತೂ ನಿದ್ದೆಗೆಟ್ಟು ಓದಿಲ್ಲ. ಸರಾಸರಿ 5 ರಿಂದ 7 ತಾಸು ಓದುತ್ತಿದ್ದೆ. ವಾರದಲ್ಲಿ ಒಂದು ದಿನ ವಿಶ್ರಾಂತಿ ಪಡೆಯುತ್ತಿದ್ದೆ. ನಾನು ಸರಳ ಎನ್ನುವಂತಹ ವಿಷಯವನ್ನೇ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಂಡಿದ್ದೆ. ಮುಖ್ಯ ಪರೀಕ್ಷೆಯಲ್ಲಿ 9 ಪತ್ರಿಕೆಗಳಿಗೆ ಉತ್ತರ ಬರೆಯಬೇಕು. ಯಾವ ವಿಷಯದಲ್ಲಿ ಹಿಂದೆ ಉಳಿದಿದ್ದೇನೆ ಎನ್ನುವ ಕುರಿತು ಪಟ್ಟಿ ಮಾಡಿಕೊಂಡು ಸರಿ ಪಡಿಸಿಕೊಳ್ಳುತ್ತಿದ್ದೆ. ಪ್ರಮುಖ ವಿಷಯಗಳ ಪುನರಾವರ್ತನೆ ಮಾಡುತ್ತಿದ್ದ ಕಾರಣ ಸ್ಮರಣೆಯಲ್ಲಿ ಉಳಿಯುತ್ತಿತ್ತು. ಇದು ಪರೀಕ್ಷೆಗೆ ನೆರವಾಯಿತು.

ನೀವು ಬಳಸುತ್ತಿದ್ದ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ?

ನಾನು ನಿರ್ದಿಷ್ಟವಾಗಿ ಇಂತಹದ್ದೇ ಪತ್ರಿಕೆ ಓದುತ್ತಿರಲಿಲ್ಲ. ಆದರೆ, ಪ್ರಚಲಿತ ವಿಷಯಗಳ ಬಗ್ಗೆ ಅರಿತುಕೊಳ್ಳುತ್ತಿದ್ದೆ. ಪ್ರಸ್ತುತ ಕೋಚಿಂಗ್‌ ಸಂಸ್ಥೆಗಳೇ ಪ್ರಚಲಿತ ವಿಷಯಗಳ ಪಟ್ಟಿ ಮಾಡಿ ಪತ್ರಿಕೆಗಳ ತುಣುಕು ಗಳನ್ನೇ ಒದಗಿಸುತ್ತವೆ. ಅವುಗಳನ್ನು ಓದುತ್ತಿದ್ದೆ. ನಾನು ಆಯ್ಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಗಳನ್ನೇ ಹೆಚ್ಚು ಓದುತ್ತಿದ್ದೆ.

ಯುಪಿಎಸ್‌ಸಿ ಪರೀಕ್ಷೆಗೆ ಹೆಚ್ಚುವರಿ ಕೋಚಿಂಗ್‌ ಅಗತ್ಯವಿದೆಯೇ? ಯಾವ ರೀತಿ ತರಬೇತಿ ನೆರವಾಗುತ್ತದೆ?

ಯಾವುದಕ್ಕೂ ಮಾರ್ಗದರ್ಶನ ನೀಡುವವರು ಬೇಕೇ ಬೇಕು. ಮಾರ್ಗದರ್ಶಕರು ಇಲ್ಲದಾಗ ಕೋಚಿಂಗ್ ಅನಿವಾರ್ಯವಾಗಬಹುದು. ಕೋಚಿಂಗ್‌ ಸಂಸ್ಥೆಗಳು ಮಾರ್ಗ ಮಾತ್ರ ತೋರಿಸುತ್ತವೆ. ಸ್ಪರ್ಧೆಯಲ್ಲಿ ಅನೇಕ ಜನ ಇರುತ್ತಾರೆ. ಪರಸ್ಪರ ಚರ್ಚೆಯಿಂದ ಹೆಚ್ಚು ವಿಷಯಗಳನ್ನು ತಿಳಿದು ಕೊಳ್ಳಲು ಹಾಗೂ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನಾನೂ ಸಹ ದೆಹಲಿಯಲ್ಲಿ ಒಂದು ವರ್ಷ ಕೋಚಿಂಗ್‌ ಸಂಸ್ಥೆಯಲ್ಲಿ ಇದ್ದೆ. ನಂತರ ಬೆಂಗಳೂರಿನಲ್ಲಿ ಎರಡು ವರ್ಷ ತಯಾರಿ ನಡೆಸಿದೆ.

ಎಷ್ಟು ಸಮಯದಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೀರಿ? ಸಿದ್ಧತೆಗೆ ಸಮಯ ಹೊಂದಾಣಿಕೆ ಹೇಗೆ ಮಾಡಿಕೊಂಡಿದ್ದೀರಿ?

5 ವರ್ಷಗಳಿಂದ ತಯಾರಿ ನಡೆಸಿದ್ದೆ. 2020ರಲ್ಲಿ ಕೆಎಎಸ್‌ನಲ್ಲಿ ಪಾಸಾಗಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ಮಾನವ ಶರೀರ ಶಾಸ್ತ್ರ ಆಯ್ದುಕೊಂಡು ನಿತ್ಯ ಏಳು ತಾಸು ಅಧ್ಯಯನ ಮಾಡುತ್ತಿದೆ. ಸಮಯ ಸಾಲದ ಕಾರಣ ವೇತನ ರಹಿತ ರಜೆ ಪಡೆದು ಪೂರ್ಣ ಸಮಯ ಓದಿಗೆ ಮೀಸಲಿಟ್ಟಿದ್ದೆ.

ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ ಏನು?

ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಮೊದಲು ಚೆನ್ನಾಗಿ ಅರಿತುಕೊಳ್ಳಬೇಕು. ಮೈನಸ್ ಅಂಕಗಳು, ಯಾವುದನ್ನು ಎಷ್ಟು ಓದಬೇಕು ಎನ್ನುವ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳಬೇಕು. ದೃಢ ಸಂಕಲ್ಪ ಮಾಡಿ ಆಸಕ್ತಿಯಿಂದ ಓದಿದರೆ ಗುರಿ ಸಾಧಿಸುವುದು ಕಷ್ಟವೇನಲ್ಲ. ನಾಲ್ಕು ವರ್ಷ ಓದಿದರೂ ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದವು. ಆದರೆ, ನನ್ನ ಪ್ರಯತ್ನ ನಿಲ್ಲಿಸಲಿಲ್ಲ. ಸತತ ಪರಿಶ್ರಮವೇ ನಾನು ಇಟ್ಟುಕೊಂಡಿದ್ದ ಗುರಿ ತಲುಪಿಸಿತು.

ನಮ್ಮಲ್ಲಿ ಆರನೇ ಪ್ರಯತ್ನದಲ್ಲಿ ಪಾಸಾದವರೂ ಇದ್ದಾರೆ. ಅಂತಹವರ ಪ್ರಯತ್ನ ಹೊಸದಾಗಿ ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳಿಗೆ ಪ್ರೇರಣೆ. ಎಂತಹ ಪರಿಸ್ಥಿತಿಯಲ್ಲೂ ಛಲಬಿಡದೆ ಓದಬೇಕು. ಮುಂದಿನ ದಾರಿ ಸಹಜವಾಗಿ ಸುಗಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT