ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಂಪೂರ್ಣ ವಿವರ ಇಲ್ಲಿದೆ..

ಈ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆ
Published 23 ನವೆಂಬರ್ 2023, 0:17 IST
Last Updated 23 ನವೆಂಬರ್ 2023, 0:17 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆಯು ದೇಶದ ಕೋಟ್ಯಂತರ ಕುಶಲಕರ್ಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ. ಮುಂಬರಲಿರುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಮಾಹಿತಿ ಸಹಾಯಕವಾಗಲಿದೆ.

––––

ಕರಕುಶಲಿಗಳ ಸಮುದಾಯ ಒಂದು ಬಹುದೊಡ್ಡ ಅಸಂಘಟಿತ ಸಮುದಾಯ. ಇದೀಗ ಕೇಂದ್ರ ಸರ್ಕಾರವು, ಈ ಸಮುದಾಯದ ಅಭಿವೃದ್ಧಿಗೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ–2023’ ಎಂಬ ಪ್ರಮುಖ ಯೋಜನೆ ಜಾರಿಗೊಳಿಸಿದೆ.

ಕೇಂದ್ರ ಸರ್ಕಾರದ 2023–24ನೇ ಸಾಲಿನ ಬಜೆಟ್‌ನಲ್ಲಿ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಅಥವಾ ‘ಪಿಎಂ ವಿಶ್ವಕರ್ಮ ಯೋಜನೆಯನ್ನು’ ಪ್ರಸ್ತಾಪಿಸಲಾಗಿತ್ತು. ಅದರಂತೆ ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ನರೇಂದ್ರ ಮೋದಿ ಅವರು ಪಿಎಂ ವಿಶ್ವಕರ್ಮ ಯೋಜನೆ ಘೋಷಣೆ ಮಾಡಿದರು. ಘೋಷಣೆಯ ಭರವಸೆಯಂತೆ ಕಳೆದ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದರು.

ಏನಿದು ಯೋಜನೆ?

ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು 13 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದೆ.

ದೇಶದಾದ್ಯಂತ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್‌ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಅವರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಯೋಜನೆಯ ಮೂಲ ಗುರಿಯಾಗಿದೆ.

ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಈ ಯೋಜನೆಯ ಅನುದಾನವನ್ನು ಭರಿಸಲಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಒಟ್ಟು 30 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯವು ಈ ಯೋಜನೆಯ ನೋಡಲ್‌ ಏಜೆನ್ಸಿಯಾಗಿರುತ್ತದೆ. ಮುಖ್ಯವಾಗಿ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಪ್ರಮಾಣದ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕ‍ಂಪನಿಗಳು, ಸಣ್ಣ ಹಣಕಾಸು ಸಂಸ್ಥೆಗಳಿಂದ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.

ಫಲಾನುಭವಿಗಳಿಗೆ ಶೇ 5ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಸಂಬಂಧಪಟ್ಟ ಬ್ಯಾಂಕ್‌ಗಳು ಅಥವಾ ಇತರೆ ಹಣಕಾಸು ಸಂಸ್ಥೆಗಳಿಗೆ ಶೇ 8ರಷ್ಟು ಬಡ್ಡಿ ಸಹಾಯಧನ ನೀಡಲಿದೆ.

ಫಲಾನುಭವಿಗೆ ಟೂಲ್‌ ಕಿಟ್‌ ಖರೀದಿಗಾಗಿ ಯೋಜನೆಯಡಿ ₹15 ಸಾವಿರ ಮೌಲ್ಯದ ಇ–ವೋಚರ್ಸ್‌ ಅಥವಾ ಇ–ರುಪಿ ನೀಡಲಾಗುತ್ತದೆ. ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ವೋಚರ್ಸ್‌ಗಳನ್ನು ಬ್ಯಾಂಕ್‌ ಮೂಲಕ ನೀಡಲಾಗುತ್ತದೆ. ಯೋಜನೆಯಡಿ ನೋಂದಣಿಯಾದ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ತರಬೇತಿಯನ್ನು ನೀಡಲಾಗುತ್ತದೆ.

ಶೇ 5ರಷ್ಟು ಬಡ್ಡಿದರದ ಅಡಿ ಒಟ್ಟು 3 ಲಕ್ಷ ರೂಪಾಯಿಯ ಖಾತರಿ ರಹಿತ ಬ್ಯಾಂಕ್ ಸಾಲ ದೊರೆಯಲಿದೆ. ಮೊದಲ ಕಂತಿನಲ್ಲಿ ದೊರೆತ 1 ಲಕ್ಷ ರೂಪಾಯಿ ಸಾಲಕ್ಕೆ 18 ತಿಂಗಳ ಮರುಪಾವತಿ ಗಡುವು ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ ದೊರೆತ 2 ಲಕ್ಷ ರೂಪಾಯಿ ಸಾಲ ಮರುಪಾವತಿಗೆ 30 ತಿಂಗಳ ಗಡುವು ನೀಡಲಾಗುತ್ತದೆ.

 ಈ ಯೋಜನೆಗೆ ನೋಂದಣಿ ಹೇಗೆ?

ಫಲಾನುಭವಿಯು ಗ್ರಾಮ ಪಂಚಾಯಿತಿ ಹಾಗೂ ನಗರ ಮಟ್ಟದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್‌ ಆಧಾರಿತ ‘ಪಿಎಂ ವಿಶ್ವಕರ್ಮ’ ವೆಬ್ ಪೋರ್ಟಲ್‌ www.pmvishwakarma.gov.in ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿಯಾದವರಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಲಭಿಸಲಿದೆ. ನೋಂದಣಿ ದಿನದ ವೇಳೆಗೆ ಫಲಾನುಭವಿಯ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸ್ವಉದ್ಯೋಗ ಅಥವಾ ವ್ಯಾಪಾರ ಅಭಿವೃದ್ಧಿಗೆ ಸಾಲ ಸೌಲಭ್ಯ ಪಡೆದವರಿಗೆ ಈ ಯೋಜನೆಯಡಿ ಮತ್ತೆ ಸಾಲ ಸಿಗುವುದಿಲ್ಲ.

 ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಷ್ಟೇ ಯೋಜನೆಯ ಸೌಲಭ್ಯ ಪಡೆಯಲು ಅರ್ಹರು. ಸರ್ಕಾರಿ ನೌಕರ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೌಲಭ್ಯ ಸಿಗುವುದಿಲ್ಲ ಎಂಬುವುದು ಗಮನಿಸಬೇಕಾದ ಸಂಗತಿ. ಮೊದಲ ವರ್ಷ ಐದು ಲಕ್ಷ ಕುಟುಂಬಗಳನ್ನು ಇದು ಒಳಗೊಳ್ಳುತ್ತದೆ. ಮುಂದಿನ ಐದು ವರ್ಷಗಳಲ್ಲಿ 30 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ ಎನ್ನಲಾಗಿದೆ.

ನೋಂದಣಿಗೆ ಅರ್ಹತೆಗಳೇನು?

ಅರ್ಜಿ ಸಲ್ಲಿಸಲು ಬಯಸುವವರು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿದ್ದು, 18 ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರು.

ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು, ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲಗಳನ್ನು ಪಡೆದಿರಬಾರದು. ಆದರೆ, ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ‌ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ, ಪರಿಶೀಲನೆ ಹಾಗೂ ಏನಾದರೂ ಸಂದೇಹಗಳಿದ್ದರೆ ಪಿಎಂ ವಿಶ್ವಕರ್ಮ ವೆಬ್‌ಸೈಟ್ pmvishwakarma.gov.in ಭೇಟಿ ನೀಡಿ.

16 ಲಕ್ಷಕ್ಕೂ ಅಧಿಕ ಅರ್ಜಿಗಳು!

ವಿಶೇಷವೆಂದರೆ ಒಂದೇ ತಿಂಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ವಿಶ್ವಕರ್ಮ ಪೋರ್ಟಲ್‌ನಲ್ಲಿ 16,58,015 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು 58,698 ಅರ್ಜಿಗಳು ಮೊದಲ ಹಂತದ ಪರಿಶೀಲನೆಗೆ ಒಳಪಟ್ಟಿವೆ. ಅರ್ಜಿ ಸಲ್ಲಿಕೆ, ಆಯ್ಕೆ ಪ್ರತಿಯೊಂದೂ ಆನ್‌ಲೈನ್ ಇದೆ.

ಈ ಯೋಜನೆಯ ವ್ಯಾಪ್ತಿಗೆ ಒಳಪಡುವ 18 ಬಗೆಯ ಕುಶಲಕರ್ಮಿಗಳು

l  ಬಡಿಗ ಅಥವಾ ಮರಗೆಲಸದವರು

l  ದೋಣಿ ತಯಾರಕರು

l ಸಾಂಪ್ರದಾಯಿಕ ಶಸ್ತ್ರಗಳನ್ನು ತಯಾರಿಸುವವರು

l ಕುಂಬಾರರು

l ಸುತ್ತಿಗೆ ಹಾಗೂ ಇತರ ವಸ್ತುಗಳ ತಯಾರಕರು

l  ಬೀಗ ಹಾಗೂ ಕೀಲಿ ತಯಾರಕರು

l  ಅಕ್ಕಸಾಲಿಗರು

l ಕಮ್ಮಾರರು

l ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು

l ಸಾಂಪ್ರದಾಯಿಕವಾಗಿ ಪಾದರಕ್ಷೆ ತಯಾರಿಸುವವರು

l ಕಲ್ಲು ಕುಟಿಗರು ಅಥವಾ ರಾಜಮೇಸ್ತ್ರಿಗಳು

l ಸಾಂಪ್ರದಾಯಿಕವಾಗಿ ಬುಟ್ಟಿ, ಚಾಪೆ, ಪೊರಕೆ, ತೆಂಗಿನನಾರಿನ ಹಗ್ಗ ತಯಾರಕರು

l ಸಾಂಪ್ರದಾಯಿಕವಾಗಿ ಗೊಂಬೆ ಮತ್ತು ಆಟಿಕೆ ತಯಾರಕರು

l ಕ್ಷೌರಿಕರು

l  ಹೂಮಾಲೆ ತಯಾರಕರು

l ಅಗಸರು ಅಥವಾ ಬಟ್ಟೆ ತೊಳೆಯುವವರು

l ದರ್ಜಿಗಳು

l ಮೀನಿನ ಬಲೆ ತಯಾರಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT