ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಕೋಲದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Last Updated 2 ನವೆಂಬರ್ 2022, 23:45 IST
ಅಕ್ಷರ ಗಾತ್ರ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ..

***

ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ‘ಭೂತಕೋಲ’ವು ಕನ್ನಡ ಚಲನಚಿತ್ರ ‘ಕಾಂತಾರ – ಒಂದು ದಂತಕತೆ’ ಬಿಡುಗಡೆಯಾದ ನಂತರ ಮತ್ತೊಮ್ಮೆ ಚರ್ಚೆಗೆ ಬಂದಿದೆ.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ‘ಭೂತಕೋಲ’ವನ್ನು ಹಲವು ಸಮುದಾಯ ಗಳು ನಿಷ್ಠೆಯಿಂದ ಆಚರಿಸಿಕೊಂಡು ಬಂದಿವೆ.

ತುಳುವರ ಭೂತ/ದೈವ ಎನ್ನುವ ಪದಕ್ಕೆ ಕನ್ನಡದ ಪ್ರೇತ ಎನ್ನುವ ಅರ್ಥವಿಲ್ಲ. ಇಲ್ಲಿ ಭೂತ/ದೈವ ಅಂದರೆ ಕ್ಷುದ್ರ ಶಕ್ತಿಯಲ್ಲ. ಬದಲಿಗೆ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು. ಹಾಗಾಗಿ ಈ ಶಕ್ತಿಯನ್ನು ತಲತಲಾಂ ತರಿಂದ ಜನ ಪೂಜಿಸುತ್ತಾ ಬಂದಿದ್ದಾರೆ.

ಯಾವೆಲ್ಲ ದೈವಗಳಿವೆ?

ಪಂಜುರ್ಲಿ, ಬೊಬ್ಬರ್ಯ, ಪಿಲಿಭೂತ, ಕಲ್ಕುಡ, ಕಲ್ಲುರ್ಟಿ, ಕೋಟಿ ಚೆನ್ನಯ ಸೇರಿ ಪೂಜಿಸಲ್ಪಡುವ ಕೆಲವು ಜನಪ್ರಿಯ ದೈವಗಳು. ದೈವ ಸ್ಥಾನಕ್ಕೆ ಏರಿ, ಆರಾಧನೆಗೆ ಒಳಪಡುವ ಈ ಸಾಂಸ್ಕೃತಿಕ ನಾಯಕರ ಸಂಖ್ಯೆ ಸಾವಿರಕ್ಕೂ ಮೀರಿ ಇದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ದೈವಗಳ ವರ್ಗೀಕರಣ

1)→ಪ್ರಾಣಿ ಮೂಲ: ಕಾಡು ಹಂದಿ (ಪಂಜುರ್ಲಿ), ಗೂಳಿಗಳು (ನಂದಿಗೋಣ, ಮೈಸಂದಾಯ), ಹುಲಿಗಳು (ಪಿಲಿಚಂಡಿ). ಕೃಷಿಕ ಕುಟುಂಬಗಳು ಹೆಚ್ಚಾಗಿ ಸಂಕಷ್ಟದಲ್ಲಿ ಈ ದೈವದ ಮೊರೆ ಹೋಗುತ್ತಾರೆ.

2)→ಮನುಷ್ಯ ಮೂಲ: ಊಳಿಗಮಾನ್ಯ ವ್ಯವಸ್ಥೆಯ (ಕೋಟಿ-ಚೆನ್ನಯ) ವಿರುದ್ಧ ಬಂಡಾಯವೆದ್ದು ಹೋರಾಟ ಮಾಡಿ ಕೆಲವು ಗಮನಾರ್ಹ ಸಾಧನೆಗಳಿಗಾಗಿ ಜನಸಾಮಾನ್ಯರ ನಡುವೆ ಅಸ್ತಿತ್ವದಲ್ಲಿದ್ದು ಬಳಿಕ ‘ದೈವ’ ಸ್ಥಾನಕ್ಕೆ ಏರಿದ ಶ್ರೀಸಾಮಾನ್ಯರು.

3)→ಅನ್ಯಾಯ ಮತ್ತು ಕ್ರೌರ್ಯದ ವಿರುದ್ಧ (ಕಲ್ಕುಡ-ಕಲ್ಲುರ್ಟಿ) ಹೋರಾಡಿ ಹುತಾತ್ಮರಾದವರು.

4)→ಪ್ರಕೃತಿ ಮೂಲ: ಇವು ಪ್ರಕೃತಿಯ ಐದು ಅಂಶಗಳಿಗೆ (ಅಂದರೆ, ಗಾಳಿ, ಬೆಂಕಿ, ನೀರು, ಮಣ್ಣು ಮತ್ತು ಆಕಾಶ) ಸಂಬಂಧಿಸಿದ ದೈವಗಳು.

4)→ಪೌರಾಣಿಕ ಮೂಲ: ಪೌರಾಣಿಕ ಪಾತ್ರಗಳು ಕ್ರಮೇಣ ದೈವಗಳಾಗಿ ಪೂಜಿಸಲ್ಪಟ್ಟವು. ಕೆಲವು ದೈವಗಳು ವೈದಿಕ
ಗ್ರಂಥಗಳಿಂದ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ. ಉದಾಹರಣೆಗೆ: ವೀರಭದ್ರ, ಗುಳಿಗ.

ಕೆಲ ಸಮುದಾಯಗಳ ನಾಯಕರು ಚಿಕ್ಕವಯಸ್ಸಿನಲ್ಲಿಯೇ ಮರಣಿಸಿ, ಮಾಯಕಶಕ್ತಿ ಯಾದವರು ಅಥವಾ ತಮ್ಮನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯೂ ಇದೆ. ಉದಾಹರಣೆಗೆ ಕಲ್ಕುಡ -ಕಲ್ಲುರ್ಟಿ. ‘ಜೀವ ಇರುವಾಗ ನೋಡಲಿಕ್ಕೆ ಆಗಲಿಲ್ಲ, ಸತ್ತು ನೋಡಿಕೊಳ್ಳುತ್ತೇವೆ’ ಎಂದು ಹೇಳಿ ಮಾಯಕದಲ್ಲಿ ಅರಸನ ಮನೆಗೆ ಬೆಂಕಿ ಇಡುವ ಕಥೆಯನ್ನು ನೋಡಬಹುದು. ಪ್ರತಿ ದೈವಕ್ಕೂ ತನ್ನದೇ ಒಂದು ಇತಿಹಾಸವಿದೆ. ಇದನ್ನು ಕರಾವಳಿಯ ಜನಪದ ಲೋಕ, ಪಾಡ್ದನಗಳು ಅದ್ಭುತವಾಗಿ ಕಟ್ಟಿಕೊಡುತ್ತವೆ.

ಭೂತಕೋಲ ಹೇಗೆ ನಡೆಯುತ್ತದೆ?

ದೈವಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆ ಮಾಡಲಾಗುತ್ತದೆ. ನಂತರ ಮೂರ್ತಿಗಳನ್ನು ಪೀಠದಲ್ಲಿ ಇರಿಸಲಾಗುತ್ತದೆ. ಖಡ್ಗ, ತಮಟೆ, ನಾದಸ್ವರದ ವಾದ್ಯದೊಂದಿಗೆ ಭೂತವೇಷಧಾರಿಯು ವಿಗ್ರಹದ ಸುತ್ತ ನರ್ತಿಸು ತ್ತಾರೆ. ಲಯಬದ್ಧವಾಗಿ ಹೆಜ್ಜೆ ಹಾಕುತ್ತ ದೈವ ಆವಾಹನೆಯಾದ ಸ್ಥಿತಿ ತಲುಪುತ್ತಾರೆ. ನಂತರ ಅವರು ಆಡುವ ಪ್ರತಿ ಮಾತನ್ನು ದೈವವೇ ಆಡುತ್ತಿದೆ ಎಂದು ಜನ ನಂಬಿ ಅದರಂತೆ ನಡೆಯುತ್ತಾರೆ. ಈ ಸಂದರ್ಭದಲ್ಲಿ ಸಮುದಾಯ ಎದುರಿಸುವ ಸಮಸ್ಯೆಗಳ ಬಗ್ಗೆ ದೈವದ ಮುಂದೆ ಅಹವಾಲು ಇಡಲಾಗುತ್ತದೆ. ದೈವ ನಿರ್ಣಯಿಸಿದಂತೆ ನಡೆಯಲಾಗುತ್ತದೆ.

ಭೂತಕೋಲ ಕಟ್ಟುವವರು ಯಾರು?

ದೈವನರ್ತಕ ಕೆಲಸವನ್ನು ಸಾಧಾರ ಣವಾಗಿ ಅನುವಂಶಿಕವಾಗಿ ನಿರ್ವಹಿಸುತ್ತಾರೆ. ಈ ವೇಷಧಾರಿ ಅಥವಾ ದೈವ ನರ್ತಕನನ್ನು ಸಮುದಾಯ ಭಕ್ತಿ, ಗೌರವಗಳಿಂದ ಕಾಣುತ್ತದೆ. ಸಾಮಾನ್ಯ ವ್ಯಕ್ತಿಯು ದೈವವನ್ನು ಆವಾಹಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅಂತಹ ಪ್ರಯತ್ನ ಮಾಡಿದ್ದಲ್ಲಿ ತಕ್ಷಣವೇ ಸಾಯುತ್ತಾನೆ ಎಂಬ ನಂಬಿಕೆ ಇದೆ.

ಅತ್ಯಂತ ಹಿಂದುಳಿದ ಜಾತಿಗಳ ಜನರೇ ಹೆಚ್ಚಾಗಿ ದೈವದ ವೇಷಧಾರಿಗಳಾಗಿರುತ್ತಾರೆ. ದೈವ ನೀಡುವ ನ್ಯಾಯ ಮತ್ತು ಪರಿಹಾರಗಳನ್ನು ಜನ ನಿಷ್ಠೆಯಿಂದ ಪಾಲಿಸುತ್ತಾರೆ. ಬ್ರಾಹ್ಮಣರು, ದಲಿತರು, ಮುಸ್ಲಿಮರು, ಬಂಟರು ಸೇರಿ ಎಲ್ಲಾ ಜಾತಿಗಳು ಮತ್ತು ಸಮುದಾಯಗಳಿಂದ ಬಂದ ಭೂತಗಳಿರುವುದು ಇಲ್ಲಿನ ವೈಶಿಷ್ಟ್ಯ.ಉದಾಹರಣೆಗೆ, ಬೊಬ್ಬರ್ಯ ಒಬ್ಬ ಮುಸ್ಲಿಂ ದೈವವಾಗಿದ್ದು ಹಿಂದೂಗಳು ಶ್ರದ್ಧೆಯಿಂದ ಪೂಜಿಸುತ್ತಾರೆ. ಹಿಂದುಳಿದ ಜಾತಿಯ ವೇಷಧಾರಿಯ ಮುಂದೆ ಪ್ರಬಲಜಾತಿಯ ಭೂಮಾಲೀಕರು ಸಾಷ್ಟಾಂಗ ನಮಸ್ಕಾರ ಮಾಡುವುದು, ಭೂಮಾಲೀಕರನ್ನು ಏಕವಚನ ದಲ್ಲಿಯೇ ಸಂಬೋಧಿಸುವುದು ಜಾತಿಶ್ರೇಣಿಯ ಸಮೀಕರಣವನ್ನೇ ಬುಡಮೇಲು ಮಾಡುತ್ತದೆ.

ಜಾತಿ, ಧರ್ಮ ಮೀರಿದ ಬಾಂಧವ್ಯ:

ಮಂಜೇಶ್ವರದ ಉದ್ಯಾವರದಲ್ಲಿ ನಡೆಯುವ ಅರಸು ದೈವಗಳ ನೇಮದಲ್ಲಿ ಮುಸ್ಲಿಂ ಕುಟುಂಬಗಳ ಭಾಗವಹಿಸುವಿಕೆ ಕಡ್ಡಾಯ. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲದೇ ಇದ್ದರೂ ಈ ನೇಮವನ್ನು ಪಾಲಿಸಲಾಗುತ್ತದೆ. ಭೂತಾರಾಧನೆಯಲ್ಲಿ ಇದು ಸಾಧ್ಯವಾಗಿರುವುದು ಕುತೂಹಲಕಾರಿ.

ಮತ್ತಷ್ಟು ಮಾಹಿತಿಗಾಗಿ

ಭೂತದ ಕೋಲ ಸೇರಿದಂತೆ ಮತ್ತಷ್ಟು ಸಮುದಾಯಗಳ ಆಚರಣೆ ಮತ್ತು ಸಂಸ್ಕೃತಿಯಂತಹ ಪ್ರಚಲಿತ ವಿದ್ಯಮಾನಗಳು ಹಾಗೂ ನಾಗರಿಕ ಸೇವಾ ಪರೀಕ್ಷೆಗಳಿಗೆ ಅಗತ್ಯವಾದ ಮಾಹಿತಿ ಹಾಗೂ ವಿಡಿಯೊಗಳಿಗಾಗಿ ’ಪ್ರಜಾವಾಣಿ – ಡೆಕ್ಕನ್‌ಹೆರಾಲ್ಡ್‌‘ ಪತ್ರಿಕೆಯ ’ಎಕ್ಸಾಮ್‌ ಮಾಸ್ಟರ್‌ ಮೈಂಡ್‌‘ ಇ–ಪತ್ರಿಕೆಗೆ ಚಂದಾದಾರರಾಗಿ. ಚಂದಾಕ್ಕಾಗಿ ಪಕ್ಕದಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT