ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಭಯದಿಂದ ಪಾರಾಗಿ

ಸುಭಾಷ್ ಎಚ್‌.ಜೆ
Published 17 ಮಾರ್ಚ್ 2024, 23:34 IST
Last Updated 17 ಮಾರ್ಚ್ 2024, 23:34 IST
ಅಕ್ಷರ ಗಾತ್ರ

ಪರೀಕ್ಷೆಯ ಕುರಿತ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟುಬಿಡಿ. ಓದುವುದು ಮತ್ತು ಬರೆಯುವುದು ಪ್ರೀತಿಯ ಕಾಯಕವಾದರೆ ಪರೀಕ್ಷೆಯ ಕುರಿತ ಭಯ ತನ್ನಿಂತಾನೆ ಮಾಯವಾಗುತ್ತದೆ. ಹಾಗೆ ಮಾಡಲು ಒಮ್ಮೆ ಪ್ರಯತ್ನಿಸಿ ನೋಡಿ.

ಮಾರ್ಚ್ ಎಂದರೆ ಪರೀಕ್ಷೆಯ ಭಯ ನೆನಪಾಗುತ್ತದೆ. ಸೂಕ್ತ ಮಾರ್ಗದರ್ಶನ , ಸಿದ್ಧತೆ ಹಾಗೂ ಪರೀಕ್ಷೆಯನ್ನು ಸಮರ್ಪಕವಾಗಿ ಎದುರಿಸುವ ಧೈರ್ಯವಿದ್ದರೆ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಿದೆ.  ಪರೀಕ್ಷೆ  ಬರೆಯಲು ಬೇಕಿರುವುದು ಜಾಣ ತಯಾರಿ. 

ಓದಿದ್ದು ಮರೆತು ಹೋಗುತ್ತಾ?

ಒಮ್ಮೆ ಓದಿದ್ದನ್ನು ನೆನಪಿಟ್ಟುಕೊಳ್ಳಲು ಏನಾದರೂ ಉಪಾಯವಿದೆಯೇ? ಇದು ಬಹುತೇಕ ಮಕ್ಕಳು ಹಾಗೂ ಪೋಷಕರ ಪ್ರಶ್ನೆ. ಪ್ರಯತ್ನವಿಲ್ಲದೇ, ನಿರಾಯಾಸವಾಗಿ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮತ್ತೆ ಮತ್ತೆ ಓದುವುದು, ಅದನ್ನು ಪುನರಾವರ್ತನೆ ಮಾಡಿಕೊಳ್ಳುವುದು, ನೆನಪಿಗೆ ಬಾರದೆ ಇರುವ ಸಂಗತಿಯನ್ನು ಮತ್ತೊಮ್ಮೆ ಓದುವುದು ಇದೇ ಅದಕ್ಕಿರುವ ಪರ್ಯಾಯ ಉಪಾಯ. ಆದರೆ, ಪರೀಕ್ಷೆ ಸಮಯದಲ್ಲಿ ಓದಿದ್ದನ್ನು ಮರೆಯುವುದಕ್ಕೆ ಮುಖ್ಯ ಕಾರಣ ಪರೀಕ್ಷೆಯ ಒತ್ತಡ ಮತ್ತು ಅದರೆಡಗಿನ ಭಯ. ಜತೆಗೆ ವಿಷಯವನ್ನು ಅರ್ಥಮಾಡಿಕೊಳ್ಳದೇ ಕಂಠಪಾಠ ಮಾಡುವುದು. 

ಹೀಗೆ ಮಾಡಿ:   ಓದಿದ ವಿಷಯವನ್ನು ನಿಮ್ಮದೇ ಪದಗಳಲ್ಲಿ ಬರೆದಿಡಿ. ಕಲಿತಿದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದರಿಂದ ಜ್ಞಾಪಕಶಕ್ತಿ ವೃದ್ಧಿಸುತ್ತದೆ. ಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ.  ಕಲಿತ ವಿಷಯಗಳನ್ನು ಚಿತ್ರ, ನಕ್ಷೆಗಳ ಸಾರಾಂಶವನ್ನು ರೂಪಿಸಿ. ಇದು ನೆನಪಿಟ್ಟುಕೊಳ್ಳುವುದು ಮತ್ತಷ್ಟು ಸುಲಭವಾಗುತ್ತದೆ. ಇದಕ್ಕೆ 'ಮೈಂಡ್ ಮ್ಯಾಪ್' ಎಂದು ಕರೆಯುತ್ತಾರೆ. 

ಫ್ಯಾಷ್‌ಕಾರ್ಡ್ಸ್‌ನ ನೆರವು:  ಒಂದು ಪಾಠವನ್ನು ಓದಿದ ನಂತರ  ಅಂಚೆ ಚೀಟಿಯಷ್ಟು ಪುಟ್ಟ ಕಾಗದ ಅಥವಾ ಕಾರ್ಡ್‌ನ ಮೇಲೆ, ಇಡೀ ಪಾಠದ ಸಾರಾಂಶವನ್ನು ತಿಳಿಸುವಂಥ ಮುಖ್ಯ ವಿಷಯಗಳನ್ನು ಕಡಿಮೆ ಪದಗಳಲ್ಲಿ ಬರೆದಿಡಿ. ಇದಕ್ಕೆ 'ಫ್ಲಾಷ್‌ ಕಾರ್ಡ್ಸ್' ಎನ್ನುತ್ತಾರೆ.  ಉದಾಹರಣೆಗೆ, ಇತಿಹಾಸ ವಿಷಯದ ಯಾವುದಾದರೊಂದು ಪಾಠದ 'ಫ್ಲಾಷ್‌ ಕಾರ್ಡ್' ಸಿದ್ಧಪಡಿಸಿದರೆ, ಅದರಲ್ಲಿ ಬರುವ ಮುಖ್ಯ ಹೆಸರುಗಳು, ಘಟನೆಗಳು, ಸೇವೆಗಳು, ಕಾಲಮಾನ ಇತ್ಯಾದಿಯನ್ನು ಕಡಿಮೆ ಪದ ಅಥವಾ ಅಕ್ಷರಗಳಲ್ಲಿ (ಆಕ್ರೋನಿಂ) ಬರೆಡಿದಿ. ಪರೀಕ್ಷೆಯ ಹಿಂದಿನ ದಿನ ಕಡಿಮೆ ಸಮಯದಲ್ಲಿ ಮೆಲುಕು ಹಾಕಲು ಈ ಕಾರ್ಡ್‌ಗಳನ್ನು ಬಳಸಿ.

ಒಂದೇ ವಿಚಾರವನ್ನು ಹಲವು ಪುಸ್ತಕಗಳ ಮೂಲಕ ತಿಳಿದು, ವಿವಿಧ ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಹೆಚ್ಚು ಗಮನಕೊಡಿ. ಹೀಗೆ ಮಾಡುವುದರಿಂದ ವಿಷಯ ಚೆನ್ನಾಗಿ ಮನದಟ್ಟಾಗುತ್ತದೆ. ಅರ್ಥವಾದ ವಿಷಯ ಸದಾ ನೆನಪಿನಲ್ಲಿ ಉಳಿಯುತ್ತದೆ. ಅರ್ಥವಾಗದ ಯಾವುದೋ ವಿದೇಶಿ ಭಾಷೆಯ ಹಾಡನ್ನು ಕಲಿಯಲು ತೆಗೆದುಕೊಳ್ಳುವ ಸಮಯಕ್ಕೆ ಹೋಲಿಸಿದರೆ ಅರ್ಥವಾಗುವ ಮಾತೃ ಭಾಷೆಯ ಹಾಡನ್ನು ಕಲಿಯಲು ತೆಗೆದುಕೊಳ್ಳುವ ಸಮಯ ತುಂಬಾ ಕಡಿಮೆ ಇರುತ್ತದೆ. 

ನಕಾರಾತ್ಮಕ ಆಲೋಚನೆ ಬೇಡ

ಪರೀಕ್ಷೆ ಕುರಿತ  ನಕಾರಾತ್ಮಕ ಆಲೋಚನೆಗಳನ್ನು ಬರೆದಿಡಿ (ಉದಾಹರಣೆಗೆ ಫೇಲಾದರೆ ನಮ್ಮ ಮನೆಯಲ್ಲಿ ಹೊಡೆಯುತ್ತಾರೆ) ಅದರ ಬದಲು ಸಕಾರಾತ್ಮಕ ಆಲೋಚನೆಗಳನ್ನು ತುಂಬಿಕೊಳ್ಳಿ (ಉದಾ: ನಾನು ಈ ಬಾರಿ ಒಳ್ಳೆಯ ತಯಾರಿ ನಡೆಸಿದ್ದೇನೆ, ಈ ಬಾರಿ ಖಂಡಿತವಾಗಿ ಉತ್ತೀರ್ಣನಾಗುತ್ತೇನೆ) ಪರೀಕ್ಷೆಯ ದಿನ, ಕೊನೆಯ ಕ್ಷಣದಲ್ಲಿ ಹೊಸ ವಿಚಾರಗಳನ್ನು ಕಲಿಯುವುದು ಬೇಡ. ಪರೀಕ್ಷೆಗೂ ಮುಂಚೆಯೇ ಸಾಕಷ್ಟು ಓದಿ, ಪರೀಕ್ಷೆಯ ದಿನ ಕೇವಲ ಅದರ ಪುನರಾವರ್ತನೆ ನಡೆಸಿ. ಪರೀಕ್ಷೆಯ ಹಿಂದಿನ ದಿನವೇ ಹಾಲ್ ಟಿಕೆಟ್, ಪೆನ್ನು ಅವಶ್ಯಕ ವಸ್ತುಗಳನ್ನು ಜೋಡಿಸಿಕೊಳ್ಳಿ.

ಪರೀಕ್ಷೆಗೂ ಮುನ್ನ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ, ಎಷ್ಟರ ಮಟ್ಟಿಗೆ ಅಭ್ಯಾಸ ನಡೆಸಿದ್ದೀರಿ ಎಂಬುದನ್ನು ಅರಿಯಿರಿ. ಇದು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸರಿಯಾಗಿ ತಿಳಿದಿರುವ ಪ್ರಶ್ನೆಗೆ ಮೊದಲು ಉತ್ತರವನ್ನು ಬರೆಯಿರಿ. ಪರೀಕ್ಷೆ ಬರೆಯುವಾಗ ಸಮಾಧಾನದಿಂದಿರಿ, ಯಾವುದೇ ಪ್ರಶ್ನೆಗೆ ಉತ್ತರ ತಿಳಿಯದಿದ್ದರೆ ಗಾಬರಿಯಾಗಬೇಡಿ. ದೊಡ್ಡ ಪ್ರಶ್ನೆಗಳನ್ನು ಉತ್ತರಿಸುವ ಮುನ್ನ ಅರೆಕ್ಷಣ ಉತ್ತರವನ್ನು ಮನದಲ್ಲಿ ನೆನಪಿಸಿಕೊಂಡ ನಂತರ ಉತ್ತರ ಬರೆಯಿರಿ.

ಪರೀಕ್ಷೆಯ ನಂತರ ಪ್ರಶ್ನೆ ಪತ್ರಿಕೆಯನ್ನು ಸ್ನೇಹಿತರೊಂದಿಗೆ ಚರ್ಚಿಸುವುದರಿಂದ ಆತಂಕ  ಉಂಟಾಗಬಹುದು.  ಮುಗಿದು ಹೋದ ವಿಷಯದ ಬಗ್ಗೆ ಚಿಂತಿಸಬೇಡಿ. ಬದಲಾಗಿ ಮರುದಿನ ಇರುವ ಪರೀಕ್ಷೆಗೆ ತಯಾರಿ ನಡೆಸಿ. ಪರೀಕ್ಷೆಯ ಬಗ್ಗೆ ಗಮನ ಕೊಡಿ, ಫಲಿತಾಂಶದ ಕಡೆ ಅಲ್ಲ.

ಪರೀಕ್ಷಾ ಸಮಯದಲ್ಲಿ ಉತ್ತಮ ಆಹಾರ, ಏಳರಿಂದ ಎಂಟು ಗಂಟೆಯ ಕಾಲ ನಿದ್ರೆ, ಧ್ಯಾನ, ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಓದುವ ಜಾಗದಲ್ಲಿ ಊಟ, ನಿದ್ರೆ, ಮೊಬೈಲ್ ಬಳಸುವುದನ್ನು ಮಾಡಬೇಡಿ. 

ಓದಲು ಮನಸ್ಸು ಬರುತ್ತಿಲ್ಲವೇ?

ಓದಲು ನಿಗದಿತ ಸಮಯವನ್ನು ಮತ್ತು ಸ್ಥಳವನ್ನು ಆಯ್ಕಜೆ ಮಾಡಿಕೊಳ್ಳಿ. ಏಕಾಗ್ರತೆಗೆ ಭಂಗ ತರುವ ಟಿ.ವಿ, ಮೊಬೈಲ್‌, ಮನೆಯ ಇತರೆ ಸದಸ್ಯರ ಸಂಪರ್ಕದಿಂದ ದೂರವಿರಿ. ಒಂದೇ ದಿನ ಹತ್ತು ಗಂಟೆ ಓದುತ್ತೇನೆ ಎಂಬ ಸಾಹಸ ಮಾಡಬೇಡಿ. ಮೊದಲ ದಿನ ಕೆಲ ಹೊತ್ತು ಅಭ್ಯಾಸ ಮಾಡಿ. ಕ್ರಮೇಣ ಓದಿನ ಸಮಯವನ್ನು ಹೆಚ್ಚಿಸಿಕೊಳ್ಳಿ. 

ಮೊದಲಿಗೆ ಓದುವಾಗ ಕೇವಲ 25 ನಿಮಿಷಗಳ ಕಾಲ ಏಕಚಿತ್ತದಿಂದ ಓದಲು ಪ್ರಯತ್ನಿಸಿ. ಐದು ನಿಮಿಷಗಳ ವಿರಾಮ ಪಡೆಯಿರಿ. ಇದು ಏಕಾಗ್ರತೆ ಮತ್ತು ಆಸಕ್ತಿಯನ್ನು ಹೆಚ್ಚಿಸುತ್ತದೆ. ಈ ತಂತ್ರವನ್ನು ಪೋಮೊಡೋರೋ ಎಂದೂ ಕರೆಯುತ್ತಾರೆ. ಇಂದಿನ ವಿಷಯಗಳನ್ನು ಓದುವ ಮೊದಲು ಹಿಂದಿನ ದಿನದ ಓದನ್ನು ಪುನರಾವರ್ತನೆ ಮಾಡಿ. ನಿರಂತರ ಓದುವಿಕೆಯ ನಡುವೆ ವಿರಾಮ ಪಡೆದಾಗ ಮೊಬೈಲ್‌, ಟಿ.ವಿಯನ್ನು ನೋಡದೇ ನಡಿಗೆ, ಧ್ಯಾನ, ಆಟ ಆಡುವುದನ್ನು ರೂಢಿಸಿಕೊಳ್ಳಿ. 

 ಆತ್ಮಸ್ಥೈರ್ಯ, ಸಕಾರಾತ್ಮಕ ಆಲೋಚನೆಗಳು  ಮಾನಸಿಕವಾಗಿ ಪರೀಕ್ಷೆಗೆ ಸಿದ್ಧ ಮಾಡುತ್ತವೆ. ಪರೀಕ್ಷೆಯ ಭಯದಿಂದ ಪಾರಾಗಿ, ಮುಂಬರುವ ದಿನಗಳಲ್ಲಿ ಶ್ರದ್ಧೆಯಿಂದ ಪ್ರತಿಯೊಂದು ದಿನವನ್ನು, ಹಿಂದಿನ ದಿನವೇ  ಯೋಜಿಸಿಕೊಳ್ಳುವುದನ್ನು ಮರೆಯಬೇಡಿ. 

ಸಹಾಯವಾಣಿಗೆ ಕರೆ ಮಾಡಿ

ಎಲ್ಲ ಸೂಚನೆಗಳನ್ನು ಪಾಲಿಸಿದ ನಂತರವೂ ಕೆಲವು ವಿದ್ಯಾರ್ಥಿಗಳಲ್ಲಿ  ಪರೀಕ್ಷೆಯ ಕುರಿತು ಭಯ ಮೂಡುವುದು ವಿರಳವೇನಲ್ಲ. ಒಂದು ವೇಳೆ ಪರೀಕ್ಷೆಯ ಭಯ ನಿವಾರಿಸಿಕೊಳ್ಳಲು ಕಷ್ಟವಾದರೆ ನಿಸ್ಸಂಕೋಚವಾಗಿ  ‌ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿ  ಮಾತನಾಡಿ. ಈ ಸಂಖ್ಯೆಗೆ ಕರೆ ಮಾಡುವುದರ ಮೂಲಕ ನೀವು ನಿಮ್ಹಾನ್ಸ್‌ನಲ್ಲಿ ಸ್ಥಾಪಿತವಾಗಿರುವ ಭಾರತ ಸರ್ಕಾರದ ರಾಷ್ಟ್ರೀಯ ಟೆಲಿ ಮಾನಸ್ ಸೇವೆಯ ಆಪ್ತ ಸಮಾಲೋಚಕರೊಂದಿಗೆ ಮಾತನಾಡಬಹುದು.

–ಲೇಖಕರು ಮಾನಸಿಕ ಆರೋಗ್ಯತಜ್ಞ, ನಿಮ್ಹಾನ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT