ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಬಿಎಸ್ಸಿ ಕಲಿತವರು ಟೆಕ್ನಿಕಲ್‌ ಕೋರ್ಸ್‌ ಮಾಡಬಹುದೇ?

Last Updated 9 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

1. ನಾನು ಬಿ.ಎಸ್ಸಿ (ಪಿಸಿಎಂ) ಮುಗಿಸಿದ್ದೇನೆ. ಯಾವುದಾದರೂ ಟೆಕ್ನಿಕಲ್ ಕೋರ್ಸ್ ಮಾಡಬಹುದೇ?. ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ ಕೊಡಿ.

ಹೆಸರು, ಊರು ತಿಳಿಸಿಲ್ಲ.

ಮೊದಲಿಗೆ, ಬಿ.ಎಸ್ಸಿ ನಂತರದ ನಿಮ್ಮ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಈ ಅವಕಾಶಗಳನ್ನು ಪರಿಶೀಲಿಸಿ:

l ಬಿ.ಎಸ್ಸಿ ನಂತರ ನಿಮಗಿಷ್ಟವಿರುವ ವಿಷಯದಲ್ಲಿ ಎಂ.ಎಸ್ಸಿ/ಪಿಎಚ್.ಡಿ ಮಾಡಬಹುದು. ಇದಾದ ನಂತರ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಬೋಧಿಸಬಹುದು.

l ಟೆಕ್ನಿಕಲ್ ಕೋರ್ಸ್ ಮಾಡುವ ಇಚ್ಛೆಯಿದ್ದರೆ, ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಬಹುದು. ಹೆಚ್ಚಿನ ತಜ್ಞತೆಗಾಗಿ, ಪರ್ಯಾಯ ಪ್ರವೇಶದ ಮೂಲಕ ಎಂಜಿನಿಯರಿಂಗ್ ಮಾಡಬಹುದು.

l ಎಂಬಿಎ ಮಾಡಿ ಆಕರ್ಷಕ ವೃತ್ತಿಯ ಅವಕಾಶಗಳನ್ನು ಬಳಸಿಕೊಳ್ಳಬಹುದು.

l ಬಿ.ಎಸ್ಸಿ ನಂತರ ವೃತ್ತಿಯನ್ನು ಅರಸಿ, ದೂರಶಿಕ್ಷಣದ ಮೂಲಕ ವಿದ್ಯಾಭ್ಯಾಸ ಮುಂದುವರೆಸಬಹುದು.
ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯನ್ನು ಮಾಡದೆ ಕೋರ್ಸ್ ಮಾಡಿದರೆ, ಇಂತಹ ಗೊಂದಲಗಳಿಂದ, ಮುಂದಿನ ಬದುಕಿನ ಬಗ್ಗೆ ಗೊಂದಲಗಳು ಮೂಡುವುದು ಸಹಜ. ನಿಮ್ಮ ಭವಿಷ್ಯದ ಕನಸಿನಂತೆ, ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

2. ನಾನು ಪಿಯುಸಿ ಮುಗಿಸಿದ್ದೇನೆ. ಫೊರೆನ್ಸಿಕ್ ಸೈನ್ಸ್ ಮಾಡಬೇಕೆಂದಿದ್ದೇನೆ. ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.

ಪವನ್, ಊರು ತಿಳಿಸಿಲ್ಲ.

ನಿಮ್ಮ ಇಚ್ಛೆಯಂತೆ ಬಿ.ಎಸ್ಸಿ ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕೋರ್ಸ್ ಮಾಡಬಹುದು. ವಿಧಿ ವಿಜ್ಞಾನ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ
ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

4. ನಾನು ಎಂಎ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್) ಮಾಡುತ್ತಿದ್ದೇನೆ. ಈ ವಿಷಯಕ್ಕೆ ಸಂಬಂಧಪಟ್ಟ ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಎಂಎ ಪದವಿಯ ನಂತರ ಐಎಎಸ್/ಕೆಎಎಸ್ ಮುಂತಾದ ಸರ್ಕಾರಿ ವಲಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಇನ್ನಿತರ ಕ್ಷೇತ್ರಗಳಾದ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಎನ್‌ಜಿಒ ಸಂಸ್ಥೆಗಳು, ಬ್ಯಾಂಕಿಂಗ್, ಗ್ರಾಮೀಣ ಕೈಗಾರಿಕೆಗಳು, ಸಂಶೋಧನಾ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.

3. ನಾನು 2018ರಲ್ಲಿ ಬಿಇ (ಸಿವಿಲ್) ಮಾಡಿದ್ದು, ಕಾರಣಾಂತರಗಳಿಂದ ವೃತ್ತಿಜೀವನವನ್ನು ಕ್ರಮಬದ್ದವಾಗಿ ರೂಪಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಸ್ಥಿರವಾದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು, ಈಗ ನನಗಿರುವ ಆಯ್ಕೆಗಳಾದ ಬಿ.ಇಡಿ, ಎಂಇ, ಎಂಬಿಎ ಕೋರ್ಸ್‌ಗಳಲ್ಲಿ ಯಾವುದನ್ನು ಆರಿಸಿಕೊಳ್ಳಬಹುದು?

ಲತಾ ಎಂ, ಊರು ತಿಳಿಸಿಲ್ಲ.

ನೀವು ಗುರುತಿಸಿರುವ ಮೂರೂ ಆಯ್ಕೆಗಳಿಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳು ವಿಭಿನ್ನ ಮತ್ತು ಈ ಎಲ್ಲಾ ಕ್ಷೇತ್ರಗಳಲ್ಲೂ ವೃತ್ತಿಯ ಅವಕಾಶಗಳಿವೆ. ಉನ್ನತ ಶಿಕ್ಷಣದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

5. ನಮಸ್ತೆ ಸರ್. ನಾನು ಬಿ.ಇಡಿ ಮಾಡುತ್ತಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಮಾಡಬಹುದೇ? ದಯವಿಟ್ಟು ಉತ್ತರಿಸಿ.
ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ, ಈಗ ಎರಡು ಕೋರ್ಸ್ಗಳನ್ನು ಏಕಕಾಲದಲ್ಲಿ ಮಾಡಬಹುದು. ಹೆಚ್ಚಿನ ಮಾಹಿತಿ, ನಿಯಮಗಳು ಮತ್ತು ನಿಬಂಧನೆಗಳಿಗಾಗಿ, ಗಮನಿಸಿ: https://uni-mysore.ac.in/

6. ನನಗೆ 12ನೇ ತರಗತಿಯಲ್ಲಿ 8.1 ಸಿಜಿಪಿಎ ಬಂದಿದ್ದು, ಬಿ.ಎಸ್ಸಿ ಕೋರ್ಸಿಗೆ ಕರ್ನಾಟಕದಲ್ಲಿ ಸೇರಬೇಕು. ಪ್ರವೇಶ ಪರೀಕ್ಷೆಯಿರುತ್ತದೆಯೇ? ಶುಲ್ಕ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿ.

ಬಿ.ಎಸ್ಸಿ ಕೋರ್ಸಿಗೆ ಸಾಮಾನ್ಯವಾಗಿ 12ನೇ ತರಗತಿಯ ಫಲಿತಾಂಶದ ಆಧಾರದ ಮೇಲೆ ಪ್ರವೇಶ ಸಿಗುತ್ತದೆ. ಆದರೆ, ಕೆಲವು ಪ್ರತಿಷ್ಠಿತ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪರೀಕ್ಷೆ, ವೈಯಕ್ತಿಕ ಸಂದರ್ಶನ ಇತ್ಯಾದಿ ಪ್ರಕ್ರಿಯೆಯೂ ಇರುತ್ತದೆ. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ ಇತ್ಯಾದಿಗಳು, ನೀವು ಯಾವ ಕಾಲೇಜು (ಸರ್ಕಾರಿ, ಖಾಸಗಿ) ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ. ಬಿ.ಎಸ್ಸಿ ನಂತರದ ಅವಕಾಶಗಳ ಕುರಿತ ಮಾಹಿತಿ ಇಂದಿನ ಪ್ರಶ್ನೋತ್ತರದಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT