–ಗುರುಶಂಕರ್
ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಕುರಿತ ಎರಡು ಪ್ರಮುಖ ಮಾಹಿತಿಗಳನ್ನು ಗುರುಶಂಕರ್ ಇಲ್ಲಿ ಹಂಚಿಕೊಂಡಿದ್ದಾರೆ.
1. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮ :
· 2014 ರಿಂದ ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮವನ್ನು ರಾಷ್ಟ್ರಾದ್ಯಂತ ಹಮ್ಮಿಕೊಂಡಿದೆ. ಇತ್ತೀಚೆಗೆ ಈ ಕಾರ್ಯಕ್ರಮದ ಪ್ರಗತಿಗೆ ಸಂಬಂಧಿಸಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು.
· ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದ ಅನ್ವಯ ಹಾಲಿನ ಗುಣಮಟ್ಟವನ್ನು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲಾಗುತ್ತದೆ ಹಾಗೂ ಹೈನುಗಾರಿಕೆ ಚಟುವಟಿಕೆಗಳು ಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಯೋಜನೆಯ ಪ್ರಮುಖಾಂಶಗಳು :
· ಯೋಜನೆಯಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, A- ಘಟಕ ಮತ್ತು B- ಘಟಕ ಎಂದು ವರ್ಗೀಕರಿಸಬಹುದು.
ಘಟಕ-A :
· ಈ ಘಟಕದ ಅಡಿಯಲ್ಲಿ ಗುಣಮಟ್ಟದ ಹಾಲನ್ನು ಉತ್ಪಾದಿಸಲು ಬೇಕಾದ ಅವಶ್ಯಕ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಒಕ್ಕೂಟಗಳು, ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಒಕ್ಕೂಟಗಳು, ಸ್ವಸಹಾಯ ಗುಂಪುಗಳ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದನಾ ಘಟಕಗಳು, ಹಾಲು ಉತ್ಪಾದಕ ಕಂಪನಿಗಳು, ರೈತ ಉತ್ಪಾದಕ ಸಂಘಟನೆಗಳು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಖಾಸಗಿ ವಲಯದ ಸಂಸ್ಥೆಗಳಿಗೆ ಬೇಕಾದ ಶೀತಲೀಕರಣ ಸೌಲಭ್ಯಗಳನ್ನು ಮೊದಲನೇ ಘಟಕದ ಅಡಿಯಲ್ಲಿ ಕಲ್ಪಿಸಲಾಗುತ್ತದೆ.
ಘಟಕ-B :
· ಈ ಘಟಕಕ್ಕೆ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಘಟನೆಯ ವತಿಯಿಂದ ಹಣಕಾಸಿನ ಸಹಕಾರ ಹರಿದುಬರುತ್ತಿದೆ. ಸಹಕಾರಿ ಸಂಘಗಳ ಮೂಲಕ ಹೈನುಗಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಪ್ರಾಥಮಿಕ ಹಂತದಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಹೈನುಗಾರಿಕೆಗೆ ಸಂಬಂಧಪಟ್ಟ ಮೂಲ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಮಟ್ಟದಿಂದ ಮಾರುಕಟ್ಟೆವರೆಗಿನ ಹಾಲಿನ ಪೂರೈಕೆ ಮಾಡುಂವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ವಿಶೇಷ ಸೂಚನೆ : ಈ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ.
ಯೋಜನೆಯ ಉದ್ದೇಶಗಳು :
· ಹಾಲಿನ ಗುಣಮಟ್ಟವನ್ನು ಹೆಚ್ಚಿಸಲು ಬೇಕಾದ ಅವಶ್ಯಕ ಮೂಲ ಸವಲತ್ತುಗಳನ್ನು ಕಲ್ಪಿಸುವುದು ಮತ್ತು ಪ್ರಸ್ತುತ ಲಭ್ಯವಿರುವ ಮೂಲಭೂತ ಸವಲತ್ತುಗಳನ್ನು ಸಬಲೀಕರಣ ಗೊಳಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಕೆಯಾಗುವಂತೆ ನೋಡಿಕೊಳ್ಳುವುದು.
· ಹೈನುಗಾರಿಕೆ ಉದ್ದಿಮೆಯಲ್ಲಿ ತೊಡಗಿಕೊಂಡಿರುವ ರೈತ ಸಮುದಾಯಕ್ಕೆ ಬೇಕಾದ ತರಬೇತಿಯನ್ನು ಕಲ್ಪಿಸುವುದು.
· ಗುಣಮಟ್ಟದ ಹಾಲು ಉತ್ಪಾದನೆ ಸಂಬಂಧಿತ ಅರಿವನ್ನು ಮೂಡಿಸುವುದು.
· ಗುಣಮಟ್ಟದ ಹಾಲು ಮತ್ತು ಗುಣಮಟ್ಟದ ಹಾಲು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವುದು.
2. ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಮಾಂದ್ಯತೆ ನಿಯಂತ್ರಣ ಕಾರ್ಯಕ್ರಮ
· ಇತ್ತೀಚೆಗೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಮಾಂದ್ಯತಾ ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ಪ್ರಸ್ತುತ ಕಾರ್ಯಕ್ರಮದ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಸಚಿವಾಲಯದ ವತಿಯಿಂದ ತೆಗೆದುಕೊಳ್ಳುವ ಕ್ರಮಗಳು ಹಾಗೂ ಇತರೆ ಅಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಸತ್ತಿಗೆ ಒದಗಿಸಿತು.
· ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿ 1976 ರಲ್ಲಿ ಹಮ್ಮಿಕೊಂಡಿದ್ದು ಅಂಧತ್ವದ ಹರಡುವಿಕೆಯನ್ನು ಶೇ 1.4 ರಿಂದ ಶೇ 0.3ಕ್ಕೆ ತಗ್ಗಿಸುವ ಗುರಿಯೊಂದಿಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು.
ಉದ್ದೇಶಗಳು :
· ದೃಷ್ಟಿಮಾಂದ್ಯತೆ ಮತ್ತು ಅಂಧತ್ವವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ವೈದ್ಯಕೀಯ ಸವಲತ್ತುಗಳನ್ನು ಕಲ್ಪಿಸುವುದು.
· ದೃಷ್ಟಿ ಮಾಂದ್ಯತೆಯನ್ನು ಎರಡನೇ ಮತ್ತು ಮೂರನೇ ಹಂತದ ಸಮಸ್ಯೆಗಳೆಂದು ವರ್ಗೀಕರಿಸಿ ಈ ಹಂತದಲ್ಲಿಯೂ ಕೂಡ ವೈದ್ಯಕೀಯ ಸವಲತ್ತುಗಳನ್ನು ಕಲ್ಪಿಸುವ ಮೂಲಕ ರಾಷ್ಟ್ರಾದ್ಯಂತ ದೃಷ್ಟಿಮಾಂದ್ಯತೆ ಸಮಸ್ಯೆಯನ್ನು ಬಗೆಹರಿಸುವುದು.
· ರಾಷ್ಟ್ರದಾದ್ಯಂತ ಆರೋಗ್ಯಕರ ಕಣ್ಣು ಮತ್ತು ದೃಷ್ಟಿ ಸಂಬಂಧಿತ ಸೇವೆಗಳನ್ನು ಕಲ್ಪಿಸಲು ಸಮಗ್ರ ಯೋಜನೆಗಳನ್ನು ಹಮ್ಮಿಕೊಳ್ಳುವುದು.
· ದೃಷ್ಟಿ ಹೀನತೆಯನ್ನು ತಗ್ಗಿಸುವ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳನ್ನು ಮತ್ತಷ್ಟು ಬಲ ವರ್ಧಿಸುವುದು ಹಾಗೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು.
· ಭಾರತದ ಪ್ರತಿ ಜಿಲ್ಲೆಗಳಲ್ಲಿ ದೃಷ್ಟಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಂಧತ್ವವನ್ನು ತಗ್ಗಿಸುವುದು. ಪ್ರಸ್ತುತ ಈಗಾಗಲೇ ಅಸ್ತಿತ್ವದಲ್ಲಿರುವ ಕಣ್ಣಿನ ಆಸ್ಪತ್ರೆಗಳಿಗೆ ಬೇಕಾಗುವ ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು ಮತ್ತು ಮೂಲ ಸವಲತ್ತುಗಳನ್ನು ಕಲ್ಪಿಸುವುದು.
· ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮುದಾಯದ ಮಟ್ಟದಲ್ಲಿ ಅರಿವನ್ನು ಹೆಚ್ಚಿಸುವುದು ಮತ್ತು ದೃಷ್ಟಿ ಮಾಂದ್ಯತೆ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು.
· ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ತಡೆಗಟ್ಟಲು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆಯನ್ನು ಯೋಜನೆಯ ಅಡಿಯಲ್ಲಿ ಕಲ್ಪಿಸಲಾಗುತ್ತದೆ.
· ಖಾಸಗಿ ಸಂಸ್ಥೆಗಳು, ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸ್ವಯಂ ಪ್ರೇರಿತ ಸಂಘಟನೆಗಳನ್ನು ಸಕ್ರಿಯವಾಗಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವಂತೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.