ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಮಾಧ್ಯಮ: ವ್ಯಾಪ್ತಿ ಅಗಾಧ

Last Updated 31 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮವು ಸಾಕಷ್ಟು ಅವಕಾಶಗಳನ್ನು ಒದಗಿಸಿದೆ. ವಿದ್ಯಾರ್ಥಿಗಳು ಈ ಮಾಧ್ಯಮದ ಅವಶ್ಯಕತೆ ಮತ್ತು ಆಳವನ್ನು ವಿಸ್ತೃತವಾಗಿ ತಿಳಿದುಕೊಂಡರೆ ಭವಿಷ್ಯದಲ್ಲಿ ಪೂರಕ ಉದ್ಯೋಗ ಸಂಪಾದಿಸಬಹುದು.

***

ಕೆಲವು ವರ್ಷಗಳ ಹಿಂದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೈರ್‌ಲೆಸ್ ಫೋನ್‌ಗಳನ್ನು ಬಳಸುವುದು ಚಿತ್ರಗಳಲ್ಲಿ ಅಥವಾ ಯಾವುದಾದರೂ ಜಾಹೀರಾತಿನಲ್ಲಿ ನೋಡಿದಾಗ ಅವರು ಬಳಸುತ್ತಿರುವ ಸಾಧನ ಯಾವುದೆಂಬುದನ್ನು ತಿಳಿದುಕೊಳ್ಳಲು ಸುಮಾರು ದಿನಗಳೇ ಬೇಕಾಗು
ತ್ತಿದ್ದವು. ಆದರೆ ಈಗ ಕಾಲಘಟ್ಟ ಬದಲಾಗಿದೆ. ಕೊರೊನೋತ್ತರ ಪ್ರಪಂಚವು ಜಗತ್ತಿನಲ್ಲಿ ಆಗು-ಹೋಗುಗಳ ಕುರಿತು ಸಕಲ
ಮಾಹಿತಿಯನ್ನು ಬೆರಳ ತುದಿಗೆ ತಂದು ನಿಲ್ಲಿಸಿದೆ. ರೈಲ್ವೆ ಟಿಕೆಟ್ ಬುಕಿಂಗ್ ಮೊದಲು ಮಾಡಿ ಮನೆಯ ಎಲ್ಲ ರೀತಿಯ ಶುಲ್ಕಗಳನ್ನು
ಪಾವತಿಸಲು ಅನೇಕ ರೀತಿಯ ಡಿಜಿಟಲ್ ಆ್ಯಪ್‌ಗಳು ಲಭ್ಯ. ಮಾಧ್ಯಮ ರಂಗವು ಕೋವಿಡ್ ವಿಷಯ ಸ್ಥಿತಿಯಲ್ಲಿ ಜಗ್ಗದೆ ಕಾರ್ಯ ನಿರ್ವಹಿಸಿ ಸೈಎನಿಸಿಕೊಂಡಿತು. ಹೀಗಿದ್ದಾಗ ಮಾಧ್ಯಮವೂ ತನ್ನ ಮೂಲರೂಪದಲ್ಲಿ ಬದಲಾವಣೆ ಅಗತ್ಯತೆಯ ಸೂಕ್ತ ಮಾರ್ಗ ಕಂಡುಕೊಂಡಿದ್ದು, ಅದುವೇ ಡಿಜಿಟಲ್ ಮಾಧ್ಯಮ.

ಸಾಂಪ್ರದಾಯಿಕ ವೃತ್ತಿಪರತೆಯಂತೆ ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮವನ್ನು ಆಯ್ದುಕೊಂಡ ಪತ್ರಕರ್ತರು ಈಗ ಆ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮಲ್ಟಿ ಟಾಸ್ಕಿಂಗ್ ಅಥವಾ ಬಹು ಕೌಶಲ ರೂಢಿಗತ ಮಾದರಿ ಮುನ್ನೆಲೆಗೆ ಬಂದಿದೆ. ಇದರ ಪ್ರತಿರೂಪವೇ ಡಿಜಿಟಲ್ ಮಾಧ್ಯಮ. ಈಗ ಕಾರ್ಯಗತವಾಗಿರುವಂತೆ ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳು ತಮ್ಮ ಡಿಜಿಟಲ್ ಆವೃತ್ತಿಯನ್ನು ಜನಪ್ರಿಯಗೊಳಿಸಲು ವೆಬ್‌ಸೈಟ್, ಪಾಡ್‌ಕಾಸ್ಟ್, ಸಂದರ್ಶನ, ಪರಾಮರ್ಶೆ, ಲೈವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಸಾಮಾಜಿಕ ಮಾಧ್ಯಮಗಳ ಸಮರ್ಪಕ ಬಳಕೆ ಮೂಲಕ ಡಿಜಿಟಲ್ ಜರ್ನಲಿಸಂನತ್ತ ಮುಖ ಮಾಡುತ್ತಿವೆ. ವಿಶಾಲ ವ್ಯಾಪ್ತಿ, ಸಾಮಾಜಿಕ ಸಂವಹನದ ಸರಳ ಮಾರ್ಗ, ತ್ವರಿತಗತಿಯ ಸುದ್ದಿ ತಲುಪುವಿಕೆಯಿಂದ ಡಿಜಿಟಲ್ ಮಾಧ್ಯಮವು ಉತ್ಸಾಹಿ ಯುವ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಡಿಜಿಟಲ್ ಎಂದರೆ ಅಂತರ್ಜಾಲ ಆಧಾರಿತ ಕಾರ್ಯ ನಿರ್ವಹಿಸುವ ಮಾಧ್ಯಮ ಎಂದರ್ಥ. ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದ ಸಮಾಗಮವೇ ಡಿಜಿಟಲ್ ಮಾಧ್ಯಮ. ಇಲ್ಲಿ ಕಲಾತ್ಮಕ ಪ್ರತಿಭೆ, ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ ಮೇಳೈಸಿಕೊಂಡ ಜನರೇ ಜೀವಾಳ. ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ಕೋರ್ಸ್‌ಗಳಲ್ಲಿ ‘ಡಿಜಿಟಲ್ ಮೀಡಿಯಾ’ ಎಂಬ ಶೀರ್ಷಿಕೆಯ ಪೇಪರ್ ಒಂದನ್ನು ತಮ್ಮ ಪಠ್ಯಕ್ರಮದ ಭಾಗವಾಗಿ ರಚನೆ ಮಾಡಿಕೊಂಡಿವೆ.

ಅವಕಾಶಗಳು ಎಲ್ಲಿವೆ?

ವೆಬ್ ಡೆವೆಲಪರ್ಸ್‌ ಮತ್ತು ಡಿಸೈನರ್ಸ್‌: ಸಾಫ್ಟ್‌ವೇರ್ ಪದವೀಧರರು ಮಾತ್ರ ಅಭಿವೃದ್ಧಿಪಡಿಸಬಹುದು ಎಂಬ ಎಲ್ಲೆ
ಯನ್ನು ತೊಡೆದುಹಾಕಿ ಡಿಜಿಟಲ್ ಮೀಡಿಯಾ ಕೋರ್ಸ್ ಓದಿದ ವಿದ್ಯಾರ್ಥಿಗಳು ಸಹ ಕಂಪ್ಯೂಟರ್ ಕೋಡಿಂಗ್ ಭಾಷೆಯನ್ನು ಅರಿತುಕೊಂಡು ವೆಬ್‌ಸೈಟ್ ಅಭಿವೃದ್ಧಿಪಡಿಸಬಹುದು. ಸಂಶೋಧನೆ, ನಾವಿನ್ಯತೆ ಮತ್ತು ಸ್ವ ಪ್ರಯತ್ನದಿಂದ ನೀವೂ ಸಹ ವೆಬ್ ಡೆವೆಲಪರ್‌ ಆಗಬಹುದು.

ಗ್ರಾಫಿಕ್ ಡಿಸೈನರ್ಸ್‌ ಮತ್ತು ಕಲಾತ್ಮಕ ಸೃಷ್ಟಿಕಾರ: ಡಿಜಿಟಲ್ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಎಂಬ ಸೂರಿನಡಿ ಕಂಪನಿಯೊಂದರ ಬ್ರ್ಯಾಂಡ್ ಪ್ರಚುರಪಡಿಸಲು, ಮಾರುಕಟ್ಟೆ ಪ್ರಚಾರ ಶಿಬಿರಗಳಿಗಾಗಿ ಹಲವು ಬಗೆಯ ಸೃಜನಾತ್ಮಕ, ಕಲಾತ್ಮಕ ಮತ್ತು ವೈವಿಧ್ಯ ವಿನ್ಯಾಸಗಳನ್ನು ಬಿಂಬಿಸಲು ಗ್ರಾಫಿಕ್ ಡಿಸೈನರ್‌ಗಳು ಬೇಕು. ಡಿಜಿಟಲ್ ಮೀಡಿಯಾ ಅಧ್ಯಯನದಿಂದ ನಿಮಗೆ ಈ ಪಟ್ಟ ದೊರಕಲು ಸಾಧ್ಯವಿದೆ.

ವಿಡಿಯೋ ಗೇಮ್ ಡಿಸೈನರ್: ಪಬ್ ಜಿ, ಕಾಲ್ ಆಫ್ ಡ್ಯೂಟಿ, ಫ್ರೀ ಫೈರ್ ಇಂತಹ ಗೇಮ್‌ಗಳು ಜಗತ್ತಿನಾದ್ಯಂತ ಸೃಷ್ಟಿಸಿದ ಜನಪ್ರಿಯತೆ ಬಹುಶಃ ಗೇಮಿಂಗ್ ಲೋಕಕ್ಕೆ ಹೊಸ ಹುಟ್ಟು ನೀಡಿವೆ. ಈ ಕ್ಷೇತ್ರದಲ್ಲೂ ಡಿಜಿಟಲ್ ಮಾಧ್ಯಮದ ವಿದ್ಯಾರ್ಥಿಗಳು ಸೇರಿಕೊಳ್ಳಲು ಅವಕಾಶಗಳಿವೆ.

ಡಿಜಿಟಲ್ ಮೀಡಿಯಾ ಫೋಟೊಗ್ರಾಫರ್: ಡಿಜಿಟಲ್ ಮಾಧ್ಯಮಗಳಿಗೆ ಮತ್ತು ಸುದ್ದಿ ಆ್ಯಪ್‌ಗಳಿಗಾಗಿ ಕಣ್ಮನ ಸೆಳೆಯುವ ಛಾಯಾಚಿತ್ರಗಳನ್ನು ಸೆರೆಹಿಡಿದು ಅವುಗಳನ್ನು ಅಗತ್ಯತೆಗೆ ತಕ್ಕಂತೆ ಎಡಿಟ್ ಮಾಡಬಲ್ಲ ಸಾಮರ್ಥ್ಯ ನಿಮ್ಮಲ್ಲಿ ಡಿಜಿಟಲ್ ಮಾಧ್ಯಮ ಓದುವುದರಿಂದ ಬರುತ್ತದೆ.

ಸಾಮಾಜಿಕ ಜಾಲತಾಣ ತಜ್ಞ: ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ಬರವಣಿಗೆ ಮತ್ತು ಆಕರ್ಷಕ ಕಾಮೆಂಟ್‌ಗಳನ್ನು ಸೃಷ್ಟಿಸಲು ಡಿಜಿಟಲ್ ಟ್ರೆಂಡ್ ನಿರ್ಮಿಸುವುದು ಅವಶ್ಯಕ. ಇವುಗಳಲ್ಲಿ ಆಸಕ್ತಿ ಇರುವವರು ಡಿಜಿಟಲ್ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬಹುದು.

ಅನಿಮೇಶನ್ ಮತ್ತು ಎಐ: ಮೋಷನ್ ಪಿಕ್ಸ್‌, 2ಡಿ, 3ಡಿ ತಂತ್ರಾಂಶಗಳ ಪ್ರಾಥಮಿಕ ಹಂತಗಳನ್ನು ಡಿಜಿಟಲ್ ಮೀಡಿಯಾದಲ್ಲಿ ಕಲಿಯಬಹುದು. ಇದರಿಂದ ಮುಂದೆ ಎಐ (ಕೃತಕ ಬುದ್ಧಿಮತ್ತೆ) ನಿರ್ಮಾತೃವಾಗಿ ವೃತ್ತಿಮಾರ್ಗವನ್ನು ರೂಪಿಸಿಕೊಳ್ಳಬಹುದು.

ರೇಡಿಯೊ ಮತ್ತು ಪಾಡ್‌ಕಾಸ್ಟ್: ಇತ್ತೀಚೆಗೆ ಡಿಜಿಟಲ್ ಮಾಧ್ಯಮದಲ್ಲಿ ಪಾಡ್‌ಕಾಸ್ಟ್ ಎಂಬ ಧ್ವನಿಮುದ್ರಿತ ಸರಣಿಕೆಯನ್ನು ಎಲ್ಲ ಮಾಧ್ಯಮಗಳಲ್ಲಿ ಕಾಣಬಹುದಾಗಿದೆ. ಉತ್ತಮ ಧ್ವನಿ, ಸಂಭಾಷಣೆ ಪಾಡ್‌ಕಾಸ್ಟ್ ತಜ್ಞರಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕ್ಲಬ್‌ಹೌಸ್ ಎಂಬ ಆ್ಯಪ್ ಸೃಷ್ಟಿಸಿರುವ ಅಲೆಯನ್ನು ಗಮನಿಸಿದರೆ ಇಲ್ಲಿಯೂ ಅವಕಾಶ ತೆರೆದ ಪುಸ್ತಕದಂತಿದೆ.

ಆನ್‌ಲೈನ್ ಕೋರ್ಸ್‌ಗಳು

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮತ್ತು ನಮ್ಮ ದೇಶದಲ್ಲಿ ಅನೇಕ ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಆನ್‌ಲೈನ್ ಡಿಜಿಟಲ್ ಮಾಧ್ಯಮ ಕೋರ್ಸ್ ಪರಿಚಯಿಸಿವೆ. ನ್ಯೂಯಾರ್ಕ್‌ ವಿಶ್ವವಿದ್ಯಾಲಯ, ಹಾರ್ವರ್ಡ್ ವಿವಿ, ಯುನಿವರ್ಸಿಟಿ ಆಫ್ ಡೆನ್ವರ್, ಹಾರ್ಡಿಂಗ್ ವಿಶ್ವವಿದ್ಯಾಲಯ, ಬಟ್ಲರ್ ವಿಶ್ವವಿದ್ಯಾಲಯ, ಭಾರತದಲ್ಲಿ ಐಐಎಂಸಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್), ಎಜೆಕೆ ಮಾಸ್ ಕಮ್ಯೂನಿಕೇಶನ್ ರಿಸರ್ಚ್ ಸೆಂಟರ್, ಎಸ್‌ಐಎಂಸಿ ಪುಣೆ, ಅಮಿಟಿ ವಿವಿ, ಕ್ರೈಸ್ಟ್ ಯುನಿವರ್ಸಿಟಿ ಮುಂತಾದ ವಿದ್ಯಾಲಯಗಳು ಮಲ್ಟಿಮೀಡಿಯಾ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಿವೆ.

ತಯಾರಿ ಹೇಗಿರಬೇಕು?

ಡಿಜಿಟಲ್ ಮಾಧ್ಯಮದ ಭಾಗವಾಗಲು ಇಚ್ಛಿಸುವ ಪ್ರತಿಯೊಬ್ಬರು ಪಾಲಿಸಬೇಕಾದ ಕೆಲವು ಮಾರ್ಗಗಳೆಂದರೆ,

l ಡಿಜಿಟಲ್ ಮಾಧ್ಯಮದ ಮೂಲಭೂತ ಅಂಶಗಳನ್ನು ಅಭ್ಯಸಿಸಿ

l ಡಿಜಿಟಲ್ ಮಾಧ್ಯಮ ವಿಷಯ ಪಠ್ಯಕ್ರಮದಲ್ಲಿರುವ ಮತ್ತು ಬೋಧಿಸುವ ವಿದ್ಯಾಲಯಗಳಿಂದ ಸಿಲಬಸ್ ಕಂಟೆಂಟ್ ಸಂಗ್ರಹಿಸಿರಿ

l ಡಿಜಿಟಲ್ ಮಾಧ್ಯಮದಲ್ಲಿ ಬಳಕೆ ಮಾಡುವ ಉಪಕರಣಗಳ, ಸಾಫ್ಟ್‌ವೇರ್‌ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಸಂಗ್ರಹಿಸಿ ಪ್ರಾಯೋಗಿಕ ತುಲನೆ ಪ್ರಾರಂಭಿಸಿ

l ನೀವು ಆಸಕ್ತಿ ಹೊಂದಿರುವ ವಸ್ತು ವಿಷಯವನ್ನು ಹುಡುಕಲು ಆರಂಭಿಸಿ. ಅದಕ್ಕೆ ಸಂಬಂಧಿಸಿದ ಬ್ಲಾಗ್‌ಗಳನ್ನು ಓದಿರಿ. ಸ್ವಂತ ಬ್ಲಾಗ್ ರಚನೆ ಮಾಡಿ ಅದರಲ್ಲಿ ಡಿಜಿಟಲ್ ಮಾಧ್ಯಮದ ಸಂಶೋಧನಾತ್ಮಕ ವರದಿಗಳನ್ನು ನಿಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿರಿ

l ದಿನ ಕಳೆದಂತೆ ನಿಮ್ಮ ಚಾಕಚಕ್ಯತೆ ಹಾಗೂ ಸೃಜನಾತ್ಮಕ ಕೌಶಲಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಿ

lದಿನವೊಂದಕ್ಕೆ ಕನಿಷ್ಠ 3-4 ಗಂಟೆ ಡಿಜಿಟಲ್ ಮಾಧ್ಯಮದ ಕಂಟೆಂಟ್ ಮತ್ತು ಅದರಿಂದ ಉಂಟಾದ ಪ್ರಭಾವಗಳ ಪಟ್ಟಿ ಮಾಡಿಟ್ಟುಕೊಳ್ಳಿ

l ಇ-ಮಾಧ್ಯಮ ಓದುಗರು ಹಾಗೂ ಆಯಾ ಸಂಸ್ಥೆಗಳ ಗ್ರಾಹಕರ ಪ್ರತಿಕ್ರಿಯೆ ಏನು ಎಂಬುದನ್ನು ಗ್ರಹಿಸಿಕೊಳ್ಳಿ

l ಡಿಜಿಟಲ್ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಆಧಾರದಲ್ಲಿ ಸೇರಿಕೊಂಡು ಅನುಭವ ಪಡೆಯಿರಿ

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT