ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿತದ್ದನ್ನು ರೂಢಿಸಿಕೊಳ್ಳುವುದು ಕಲೆ

Last Updated 11 ಜೂನ್ 2019, 14:02 IST
ಅಕ್ಷರ ಗಾತ್ರ

ಅದೊಂದು ಸಂಗೀತ ನೃತ್ಯ ಕಾರ್ಯಕ್ರಮವಿತ್ತು. ಅದರಲ್ಲಿ ಒಬ್ಬ ನೃತ್ಯಗಾರ್ತಿ ಮಯೂರ ಸಂದೇಶ ಎಂಬ ನೃತ್ಯವನ್ನು ಮಾಡಿದರು. ರಂಗದ ಮೇಲೆ ಒಂದೆಡೆ ಚೌಕಾಕಾರದಲ್ಲಿ ರಂಗೋಲಿಯನ್ನು ಉದುರಿಸಿದ್ದರು. ಅದರ ಮೇಲೆ ಈಕೆ ನೃತ್ಯದ ಮೂಲಕ ನವಿಲಿನ ಚಿತ್ರವನ್ನು ಬಿಡಿಸುವುದು.

ಕೈಯಲ್ಲಿಯೇ ಬರೆಯಲು ಆಗದೆ ಪರದಾಡುವ ಅನೇಕರಿದ್ದಾರೆ ಎಂದಾಗ ಈಕೆ ನೃತ್ಯ ಮಾಡುತ್ತ ಅದ್ಭುತವಾದ ಚಿತ್ರ ಬಿಡಿಸಿದರು ಎಂದರೆ ಎಂತಹ ಕೌಶಲ ಮತ್ತು ಎಷ್ಟರ ಮಟ್ಟಿಗಿನ ಅಭ್ಯಾಸವಾಗಿರಬೇಕು, ಯೋಚಿಸಿ ನೋಡಿ.

ಆಕೆಗೆ ಪ್ರಾಥಮಿಕ ನೃತ್ಯ ಹೇಳಿಕೊಟ್ಟ ಮತ್ತು ಈ ನೃತ್ಯಕ್ಕೆ ಆಕೆಯನ್ನು ಸಿದ್ಧಪಡಿಸಿದಇಬ್ಬರೂ ಗುರುಗಳನ್ನು ವೇದಿಕೆಯ ಮೇಲೆ ಆಹ್ವಾನಿಸಲಾಯಿತು. ಆಗ ಈಕೆ ಇಬ್ಬರ ಕಾಲಿಗೂ ನಮಸ್ಕರಿಸಿದರು.

ಅದೇ ವೇದಿಕೆಯಲ್ಲಿ ಮತ್ತೊಬ್ಬ ಗಾಯಕರನ್ನು ಸನ್ಮಾನಿಸಿದಾಗ ಅವರು ವೇದಿಕೆಯ ಮೇಲಿಂದ ಸಭಿಕರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ಗುರು ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ನಾಡಿನ ಸಂಪ್ರದಾಯ. ಗುರುವಿಗೆ ಮೊದಲ ಸ್ಥಾನ ಎನ್ನವುದು ನೆನಪಿರಲಿ.ಯಾವುದೇ ಸಾಧಕರ ಚರಿತ್ರೆ ಗಮನಿಸಿ. ಅವರು ಮೊದಲು ನೆನೆಸಿಕೊಳ್ಳುವುದು ತಮ್ಮ ಗುರುಗಳನ್ನು. ಅದರಲ್ಲಿಯೂ ಪ್ರಾಥಮಿಕ ವಿದ್ಯೆ ನೀಡಿದವರನ್ನು!

ಕುರು ಗುರುವಚೋ ನಿಪೀತಂ ಭೂಯೋ ಭೂಯೋ ವಿಚಿಂತಯಾಧೀತಂ
ವಿದ್ಯಾ ಗುರೋಪದಿಷ್ಟಾ ಚಿರ ಪರಿವೃಷ್ಟಾ ವಿಭೂಷಣಂ ವಪುಷಃ

ಹರಿಹರ ಸುಭಾಷಿತದ ಈ ಶ್ಲೋಕದ ಸಾರಾಂಶ- ಗುರುವಿನ ಉಪದೇಶವನ್ನು ಕಲಿತದ್ದನ್ನು ಮತ್ತೆ ಮತ್ತೆ ಚಿಂತನೆ ಮಾಡು. ಗುರೂಪದಿಷ್ಟವಾದ ವಿದ್ಯೆ ಬಹಳ ಕಾಲ ಚಿಂತನೆಗೊಳಗಾದರೆ ದೇಹಕ್ಕೆ ಭೂಷಣವಾಗಿರುತ್ತದೆ.

ಒಂದೇ ಉಪದೇಶ ನಿಮಗೆ ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ಅರ್ಥಗಳನ್ನು ಕೊಡಬಹುದು, ಬೇರೆ ಬೇರೆ ದಿಕ್ಕನ್ನು ತೋರಿಸಬಹುದು. ಅದಕ್ಕಾಗಿಯೇ ಮತ್ತೆ ಮತ್ತೆ ಚಿಂತನೆ ಮಾಡು ಎಂದು ಹೇಳಿರುವುದು.

ಗುರುಗಳನ್ನು ಗೌರವಿಸುವ ಸಂಪ್ರದಾಯ ಮುಂಚಿನಂತೆ ಇಂದು ವ್ಯಾಪಕವಾಗಿಲ್ಲ. ಆಗೊಮ್ಮೆ ಈಗೊಮ್ಮೆ ಗುರುವಂದನೆ ಮಾಡುವುದು, ನಮ್ಮ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸುವುದು ಬಿಟ್ಟರೆ ಮಿಕ್ಕ ಹಾಗೆ ನಾವು ಗುರುಗಳನ್ನು ನಡೆಸಿಕೊಳ್ಳಬೇಕಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ.

ಅದಕ್ಕೆ ಕಾರಣಗಳೇನೇ ಇರಲಿ. ಪ್ರಭಾವೀ ವಲಯಗಳ ಕಪಿಮುಷ್ಠಿಗೆ ಸಿಲುಕದೆ, ನಿಮ್ಮ ಜೀವನವನ್ನು ಸುಭದ್ರಗೊಳಿಸಿಕೊಳ್ಳಲು ಗುರುಗಳಿಂದ, ಹಿರಿಯರಿಂದ, ಹಿತೈಷಿಗಳಿಂದ ಕೇಳಿದ ಹಿತನುಡಿಗಳನ್ನು ಆಗಾಗ ಸ್ಮರಿಸಿಕೊಳ್ಳಿ.

ಕಲಿತರೆ ಸಾಲದು. ಕಲಿತದ್ದನ್ನು ರೂಢಿಸಿಕೊಂಡಾಗ ಕಲಿತ ವಿದ್ಯೆಯ ಲಾಭ ಸಿಗುತ್ತದೆ. ಯಾವುದೇ ಕಲಿಕೆಯನ್ನೂ ನಿರ್ಲಕ್ಷಿಸದೆ ನೆನಪಿನ ಖಜಾನೆಗೆ ಸೇರಿಸುತ್ತ ಹೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT