ಭಾನುವಾರ, ಮೇ 29, 2022
22 °C

ಕೋರ್ಸ್‌ ಕಾರ್ನರ್: ಮೈಕ್ರೊ ಸೆನ್ಸರ್‌ ತಂತ್ರಜ್ಞಾನ ಕಲಿಕೆಗೆ ಆನ್‌ಲೈನ್ ಕೋರ್ಸ್

ಗುರುರಾಜ್ ಎಸ್ ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ನಾವು ದಿನ ನಿತ್ಯ ಬಳಸುವ ಬಹುತೇಕ ಎಲೆಕ್ಟ್ರಾನಿಕ್ಸ್‌ ಉಪಕರಣಗಳಲ್ಲಿ ಮೈಕ್ರೊ ಸೆನ್ಸರ್‌ (ಸಣ್ಣ ಸಂವೇದಕ)ಗಳಿರುತ್ತವೆ. ಆಯಾ ನೈಸರ್ಗಿಕ ಪ್ರದೇಶಗಳಲ್ಲಿರುವ ಬಿಸಿ, ತಂಪು, ಅನಿಲ ಸಾಂದ್ರತೆ, ವಿದ್ಯುದಂಶಗಳನ್ನು ಅಳೆಯಬಲ್ಲ ಸಂವೇದಕಗಳೂ ಇವೆ. ಕಿವಿ ಕೇಳಿಸದವರು ಬಳಸುವ ಹಿಯರಿಂಗ್ ಏಯ್ಡ್‌ ಮತ್ತು ಅಂಧರು ಬಳಸುವ ಕೇನ್‌ಸ್ಟಿಕ್‌ನಲ್ಲೂ ಇಂಥ ಸಂವೇದಕಗಳಿರುತ್ತವೆ.

ನಮ್ಮ ಸ್ಮಾರ್ಟ್ ಫೋನ್‌ಗಳ ಕ್ಯಾಮೆರಾಗಳು ಕ್ಲಿಕ್ ಆಗುವುದಕ್ಕೂ ಮುಂಚೆ ಚಿತ್ರ ಚೆನ್ನಾಗಿ ಮೂಡಿಬರಲು ಸೂಕ್ತ ‘ವಾತಾವರಣ’ ಇದೆಯೇ ಎಂದು ಪರೀಕ್ಷಿಸಿ ನಿರ್ಧರಿಸುವ ಸೆನ್ಸರ್‌ಗಳಿರುತ್ತವೆ. ಇತ್ತೀಚೆಗೆ ರಸ್ತೆಗಿಳಿಯುತ್ತಿರುವ ಐಷಾರಾಮಿ ಕಾರುಗಳಲ್ಲಿ ರೇನ್ ಸೆನ್ಸಿಂಗ್ ವೈಪರ್‌ಗಳು, ಕತ್ತಲು ಕವಿಯುತ್ತಿದ್ದಂತೆ ಬೆಳಗುವ ಹೆಡ್‌ಲೈಟುಗಳು, ಒಳಗಿನ ಏರ್ ಕಂಡೀಶನರ್‌ನ ಉಷ್ಣಾಂಶವನ್ನು ಹೆಚ್ಚು ಕಡಿಮೆ ಮಾಡುವ ಆಧುನಿಕ ಮೈಕ್ರೊ ಸೆನ್ಸರ್‌ಗಳಿರುತ್ತವೆ. ಈ ಸಾಧನಗಳಿಗೆ ಮೈಕ್ರೊಸೆನ್ಸರ್‌ ಗಳನ್ನು ಅಳವಡಿಸಿ ವಿನ್ಯಾಸಗೊಳಿಸುವ ದೊಡ್ಡ ದೊಡ್ಡ ಉದ್ಯಮಗಳು ಎಲ್ಲೆಲ್ಲೂ ಇವೆ. ವಿಶ್ವದಾದ್ಯಂತವಿರುವ ಇಂಥ ಕಂಪನಿಗಳಿಗೆ ಪರಿಣತ ಕೆಲಸಗಾರರ – ತರಬೇತಿ ಹೊಂದಿದ ಜನರ ಅವಶ್ಯಕತೆ ಇದೆ.

ಸೆನ್ಸರ್‌ ತಂತ್ರಜ್ಞಾನ, ಉತ್ಪಾದನೆ, ಅಳವಡಿಕೆ, ಬಳಕೆ, ರಿಪೇರಿ, ರೀಸೈಕ್ಲಿಂಗ್ ಕಲಿಸುವ ಅನೇಕ ಆನ್‌ಲೈನ್ ಕೋರ್ಸ್‌ಗಳು ಶುರುವಾಗಿವೆ. ಖಾಸಗಿಯಾಗಿ ಕಲಿಯಲು ತುಂಬಾ ಖರ್ಚಾಗುತ್ತದೆ. ಕೇಂದ್ರ ಸರ್ಕಾರದ ‘ಸ್ವಯಂ‘(SWAYAM– Study Webs of Active – Learning for Young Aspiring Minds) ಯೋಜನೆಯಡಿಯಲ್ಲಿ ಅತ್ಯಂತ ಕಡಿಮೆ ಖರ್ಚು ಮತ್ತು ಅವಧಿಯಲ್ಲಿ ಸೆನ್ಸರ್‌ ಅಳವಡಿಕೆ ತಂತ್ರಜ್ಞಾನ ಕಲಿತು ಕೆಲಸ ಸಂಪಾದಿಸಿಕೊಳ್ಳಬಹುದು.

ಈ ಕೋರ್ಸ್ ಕಲಿಯಲು ಇಂಥದೇ ವಿದ್ಯಾರ್ಹತೆ ಬೇಕೆಂಬ ನಿಯಮವಿಲ್ಲ. ಆದರೆ ಮೂಲಭೂತ ಭೌತ ವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು ಯಂತ್ರವಿಜ್ಞಾನದ (ಮೆಕ್ಯಾನಿಕ್ಸ್)  ತಿಳುವಳಿಕೆ ಇರಬೇಕು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಂದು ಕ್ರೆಡಿಟ್ ಪಾಯಿಂಟ್ ಸಿಗುತ್ತದೆ.

* ಕೋರ್ಸ್‌ ಅವಧಿ: ನಾಲ್ಕು ವಾರಗಳು
* ದಾಖಲಾತಿಗೆ ಕೊನೆಯ ದಿನಾಂಕ: 31 ಜನವರಿ 2022
* ತರಗತಿ ಪ್ರಾರಂಭದ ದಿನಾಂಕ: 24 ಜನವರಿ 2022
* ಕೋರ್ಸ್ ಮುಕ್ತಾಯದ ದಿನಾಂಕ: 18 ಫೆಬ್ರವರಿ 2022
* ಪರೀಕ್ಷೆ ದಿನಾಂಕ: 27 ಮಾರ್ಚ್ 2022
* ಪರೀಕ್ಷಾ ಶುಲ್ಕ: ₹1,000 

ನಾಲ್ಕು ಮಾಡ್ಯೂಲ್‌ಗಳಲ್ಲಿ ಕಲಿಸಲಾಗುವ ಈ ಕೋರ್ಸ್‌ನಲ್ಲಿ ’ಮೆಮ್ಸ್‌’ (MEMS– ಮೈಕ್ರೊ ಎಲೆಕ್ಟ್ರೋಕೆಮಿಕಲ್ ಸಿಸ್ಟಮ್ಸ್) ಮತ್ತು ‘ನೆಮ್ಸ್‌‘(NEMS – ನ್ಯಾನೊ ಎಲೆಕ್ಟ್ರೋಕೆಮಿಕಲ್‌ ಸಿಸ್ಟಮ್ಸ್) ಗಳ ತತ್ವ – ಕಾರ್ಯವೈಖರಿಗಳ ಕುರಿತು ಪ್ರಾಥಮಿಕ ತಿಳುವಳಿಕೆ ದೊರಕು ತ್ತದೆ. ಇವುಗಳ ತಯಾರಿಕೆಯ ಬಗ್ಗೆಯೂ ಪ್ರಾತ್ಯಕ್ಷಿಕೆ ಮೂಲಕ ಹೇಳಿಕೊಡಲಾಗು ತ್ತದೆ. ವಿದ್ಯಾರ್ಥಿಗಳು 4 ಅಸೈನ್‌ಮೆಂಟ್‌ಗಳನ್ನು ಸಲ್ಲಿಸಬೇಕು.

ಪ್ರಮಾಣ ಪತ್ರವನ್ನು ಐಐಟಿ ಮದ್ರಾಸ್ ಮತ್ತು ಎನ್‌ಪಿಟಿಇಎಲ್‌(NPTEL- National Program on Technology Enhanced Learning) ಗಳು ಜಂಟಿಯಾಗಿ ನೀಡುತ್ತವೆ. ತರಗತಿಗಳನ್ನು ಭೋಪಾಲ್‌ನ ಐಐಎಸ್‌ಇಆರ್‌ (IISER) ಅಧ್ಯಾಪಕರು ನಡೆಸುತ್ತಾರೆ. ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗೆ https://onlinecourses.nptel.ac.in ನೋಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು