ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ | ಸಂವಿಧಾನದ ಆಶಯ ಬೆಳೆಸುತ್ತ...

ಭಾರತಿ ಕೊಪ್ಪ
Published 22 ಜನವರಿ 2024, 0:30 IST
Last Updated 22 ಜನವರಿ 2024, 0:30 IST
ಅಕ್ಷರ ಗಾತ್ರ

ಭಾರತದಲ್ಲಿ ಸಂವಿಧಾನವೇ ಸರ್ವೋಚ್ಚವಾದುದು. ನಮ್ಮ ಸಂವಿಧಾನದ ಮೂಲ ತತ್ವಗಳು, ಆಶಯಗಳು ಮತ್ತು ಸಿದ್ಧಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸುವ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿ ಭಾರತೀಯರೂ ಅರ್ಥೈಸಿಕೊಳ್ಳಬೇಕು.

ಎಳೆಯ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಗೌರವ ಬೆಳೆಸಬೇಕು. ಸಂವಿಧಾನದಲ್ಲಿ ತಿಳಿಸಿರುವ ಹಲವು ಅಂಶಗಳನ್ನು ಶಾಲಾ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಗಳಾಗಿ ಅಳವಡಿಸುವುದರಿಂದ, ಮಕ್ಕಳಲ್ಲಿ ಹಕ್ಕು ಮತ್ತು ಕರ್ತವ್ಯದ ಪ್ರಜ್ಞೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಲಿಂಗ ಸಮಾನತೆ: ಶಾಲಾ ಶಿಕ್ಷಣದ ಪ್ರತಿ ಹಂತದಲ್ಲೂ ಲಿಂಗ ಸಮಾನತೆಯ ಅಂಶಗಳನ್ನು ಕಾಪಾಡುವುದು ಅತ್ಯಗತ್ಯ. ಶಾಲೆಯ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು, ದೈನಂದಿನ ಕೆಲಸ ಕಾರ್ಯಗಳ ಹಂಚಿಕೆ ಮಾಡುವಾಗ ಹೆಣ್ಣು ಗಂಡು ತಾರತಮ್ಯವಿಲ್ಲದೆ ಹಂಚಿಕೆ ಮಾಡುವುದು ಬಹಳ ಮುಖ್ಯ. ಶಾಲಾ ಸ್ವಚ್ಛತಾ ಕೆಲಸಗಳಾದ ಕಸ ಗುಡಿಸುವುದು, ಆವರಣದ ಸ್ವಚ್ಛತೆ, ಗಿಡಗಳಿಗೆ ನೀರು ಹಾಕುವುದು, ಸಭಾ ಕಾರ್ಯಕ್ರಮಗಳನ್ನು ನಡೆಸುವಾಗ ವೇದಿಕೆಯ ಅಲಂಕಾರ ಇತ್ಯಾದಿ ಕೆಲಸಗಳನ್ನು ಗಂಡು-ಹೆಣ್ಣು ಇಬ್ಬರಿಗೂ ಸಮಾನವಾಗಿ ಹಂಚಿಕೆ ಮಾಡಿದಾಗ ಮಕ್ಕಳಲ್ಲಿ ಹೆಣ್ಣೆಂಬ ಕೀಳರಿಮೆಯಾಗಲಿ, ಬೇಧ ಭಾವವಾಗಲಿ ಮೂಡುವುದಿಲ್ಲ. ‌

ದೈಹಿಕ ಸಾಮರ್ಥ್ಯವನ್ನು ಒರೆಹಚ್ಚುವ ಕ್ರೀಡೆಗಳಾದ ಕಬಡ್ಡಿ, ಖೋಖೋ, ಕ್ರಿಕೆಟ್, ವಾಲಿಬಾಲ್‌ಗಳನ್ನು ಆಡಿಸುವಾಗ ಸಮಾನ ಆದ್ಯತೆ ನೀಡಬೇಕು. ಆಗ ಲಿಂಗ ಸಮಾನತೆಯ ಪರಿಕಲ್ಪನೆ ಎಳೆವೆಯಲ್ಲೇ ಮೂಡಲು ಸಹಕಾರಿಯಾಗುತ್ತದೆ.

ಮತದಾನದ ಪರಿಕಲ್ಪನೆ:

ಪ್ರಜಾಪ್ರಭುತ್ವದಲ್ಲಿ 18 ವರ್ಷ ತುಂಬಿದ ಭಾರತೀಯರು ಮತದಾನದ ಮೂಲಕ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಮಕ್ಕಳಲ್ಲಿ ಕುತೂಹಲ ಇರುತ್ತದೆ. ಮತದಾನ ಮತ್ತು ಚುನಾವಣೆ ಬಗ್ಗೆ ಓದಿ ತಿಳಿಯುವುದರೊಂದಿಗೆ, ತಾವೇ ಮಾಡಿ ಅನುಭವಾತ್ಮಕ ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ಶಾಲಾ ಮಂತ್ರಿಮಂಡಲ ರಚನೆ, ಮತದಾನದ ಪ್ರಕ್ರಿಯೆ ತಿಳಿಸುವ, ಸರ್ಕಾರದ ಆಡಳಿತದ ಕಲ್ಪನೆ ಮೂಡಿಸುವ ಪ್ರಮುಖ ವೇದಿಕೆಯಾಗಬೇಕು. ದೇಶದ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಮಾದರಿಯಲ್ಲಿಯೇ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಮತ ಯಾಚನೆ, ಗುಪ್ತ ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ ಈ ಎಲ್ಲಾ ಹಂತಗಳನ್ನು ಶಾಲಾ ಮಂತ್ರಿಮಂಡಲದ ರಚನೆಯಲ್ಲಿ ಅನುಸರಿಸುವುದರಿಂದ ಮಕ್ಕಳಲ್ಲಿ ಮತದಾನ ಮತ್ತು ಚುನಾವಣೆಯ ಪರಿಕಲ್ಪನೆ ಮೂಡುತ್ತದೆ.

ಅಣಕು ಸಂಸತ್:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಹೃದಯ ಇದ್ದಂತೆ. ದೇಶದ ಸಮಗ್ರ ಚಟುವಟಿಕೆಗಳ ಯೋಜನೆ, ಚರ್ಚೆ ಸಂಸತ್ತಿನ ಅಧಿವೇಶನದಲ್ಲಿ ನಡೆಯುತ್ತವೆ. ಶಾಲಾ ಹಂತದಲ್ಲಿ ಅಣಕು ಸಂಸತ್ ಅಧಿವೇಶನಗಳನ್ನು ನಡೆಸಿ, ಮಕ್ಕಳಿಗೆ ಸಂಸತ್ತಿನ ಕಲಾಪಗಳ ಅರಿವು ಮೂಡಿಸಬಹುದಾಗಿದೆ. ಸಭಾಧ್ಯಕ್ಷರ ಕಾರ್ಯ ವೈಖರಿ, ಆಡಳಿತ ಪಕ್ಷ, ವಿರೋಧ ಪಕ್ಷ, ಸಚಿವರ ಪ್ರಶ್ನೋತ್ತರ, ಚರ್ಚೆ ಇವು  ಮಕ್ಕಳಿಗೆ ಸಂಸತ್ ಕಲ್ಪನೆ ನೀಡುತ್ತವೆ.  

ಮಕ್ಕಳ ಹಕ್ಕುಗಳ ಸಂಘ

ಮೂಲಭೂತ ಹಕ್ಕುಗಳ ಅರಿವನ್ನು ಮಕ್ಕಳಲ್ಲಿ ಬೆಳೆಸಬೇಕು. ಸಂವಿಧಾನವು ನೀಡಿರುವ ಮೂಲ ಹಕ್ಕುಗಳಲ್ಲೊಂದಾದ ಶೋಷಣೆಯ ವಿರುದ್ಧದ ಹಕ್ಕಿನ ಪ್ರಜ್ಞೆ ಬೆಳೆಸುವಲ್ಲಿ ಮಕ್ಕಳ ಹಕ್ಕುಗಳ ಸಂಘ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ನಿರ್ದೇಶನದನ್ವಯ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂಘ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ನಾಲ್ಕನೇ ತರಗತಿಯಿಂದ ಪ್ರಾರಂಭಿಸಿ, ಪ್ರತಿ ತರಗತಿಯಿಂದ ಇಬ್ಬರು ಪ್ರತಿನಿಧಿಗಳನ್ನು (ಗಂಡು ಹೆಣ್ಣು ಸಮಾನ ಆದ್ಯತೆ)ಆಯ್ಕೆ ಮಾಡಲಾಗುತ್ತದೆ. ಇದರ ಸಂಚಾಲಕರಾಗಿ ಕ್ರಿಯಾಶೀಲ ಶಿಕ್ಷಕರೊಬ್ಬರಿರುತ್ತಾರೆ.  

ಮಕ್ಕಳಿಗೆ ಶಾಲೆಯಲ್ಲಿ ಮತ್ತು ಹೊರಗೆ ತಮ್ಮ ಮೇಲಾಗುವ ಅನ್ಯಾಯ, ದೌರ್ಜನ್ಯ, ಹಿಂಸೆ, ಶೋಷಣೆ, ಮೋಸ, ಒಟ್ಟಿನಲ್ಲಿ ತಮ್ಮ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅದನ್ನು ಗುರುತಿಸಲು, ಸೂಕ್ತ ವಿಧಾನದಲ್ಲಿ ಪ್ರತಿಭಟಿಸಲು, ದೂರು ದಾಖಲು ಮಾಡಲು ಈ ಸಂಘದ ಕಾರ್ಯ ಚಟುವಟಿಕೆಗಳು ಸಹಾಯಕವಾಗುತ್ತವೆ. ಶಾಲೆಗಳಲ್ಲಿ ದೂರು ಪೆಟ್ಟಿಗೆ, ಪ್ರಶ್ನೆ ಪೆಟ್ಟಿಗೆಗಳನ್ನು ಇಟ್ಟು ಅವುಗಳ ಸಮರ್ಪಕ ನಿರ್ವಹಣೆ ಮಾಡಿ ಮಕ್ಕಳ ಹಕ್ಕುಗಳಿಗೆ ಗೌರವ ನೀಡಬಹುದಾಗಿದೆ.

ಕರ್ತವ್ಯಗಳ‌ ಅರಿವು

ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳು ಮತ್ತು ಪ್ರಮುಖ ದಿನಾಚರಣೆಗನ್ನು ಆಚರಿಸುವಾಗ ಮಕ್ಕಳ ಸಕ್ರಿಯ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡಬೇಕು. ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನದ ಆದರ್ಶಗಳನ್ನು ಗೌರವಿಸುವುದರ ಜೊತೆಗೆ, ರಾಷ್ಟ್ರೀಯ ಹಬ್ಬಗಳಂದು ಬಹುತ್ವದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ.

ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿಯ ಗುಣಗಳನ್ನು ಬೆಳೆಸಬೇಕು.  ಶಾಲಾ ಪೀಠೋಪಕರಣಗಳು, ಶಾಲಾ ಕೈತೋಟ, ಆಟದ ಮೈದಾನ, ನೀರಿನ ಸಮರ್ಪಕ ಬಳಕೆ ಇತ್ಯಾದಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಕ್ಕಳಿಗೆ ನೀಡುವುದರಿಂದ ‘ನಮ್ಮ ಶಾಲೆ ’ ,‘ನಮ್ಮ ದೇಶ’ ಎಂಬ ಭಾವ ಬೆಳೆಯುತ್ತದೆ.

ಉದಾತ್ತ ಆದರ್ಶಗಳನ್ನು ಗೌರವಿಸುವುದು

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಅನುಸರಿಸುವುದು ಹಾಗೂ ಗೌರವಿಸುವುದು ಸಂವಿಧಾನಾತ್ಮಕ ಕರ್ತವ್ಯಗಳಲ್ಲಿ ಒಂದು. ಸ್ವಾತಂತ್ರ್ಯ ಹೋರಾಟಗಾರರ,ಮಹಾನ್ ನಾಯಕರ,ಆದರ್ಶ ಪುರುಷರ ಜನ್ಮ ದಿನಗಳನ್ನು ಆಚರಿಸುವುದು,ಅವರ ಕಥೆಗಳನ್ನು ಹೇಳುವುದು,ಭಾಷಣ-ಪ್ರಬಂಧದಂತಹ ಸ್ಪರ್ಧೆಗಳನ್ನು ಏರ್ಪಡಿಸುವುದು, ಘೋಷವಾಕ್ಯಗಳನ್ನು ಹೇಳಿಸುವುದು,ಪಾತ್ರಾಭಿನಯ ಮಾಡಿಸುವುದು ಇತ್ಯಾದಿಗಳು ಶಾಲಾ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ದೇಶ ರಕ್ಷಣೆಯ ಕಾಯಕವನ್ನು ಹಗಲಿರುಳು ನಡೆಸುತ್ತಿರುವ ಯೋಧರೊಂದಿಗೆ ಸಂವಾದ,ಸಂದರ್ಶನಗಳಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ದೇಶ ರಕ್ಷಣೆ, ದೇಶ ಪ್ರೇಮದ ಭಾವವು ಮಕ್ಕಳಲ್ಲಿ ಬಲಗೊಳ್ಳಲು ಸಹಕಾರಿಯಾಗುತ್ತದೆ.

ಭಾರತದ ಸಂವಿಧಾನವು ನೀಡಿರುವ ‘ಶಿಕ್ಷಣದ ಹಕ್ಕು ’ ಫಲಪ್ರದವಾಗಬೇಕು.ಪರಿಣಾಮಕಾರಿ ಶಿಕ್ಷಣ, ವಿಜ್ಞಾನ ಪ್ರಸರಣ, ಸುಸಂಸ್ಕೃತೀಕರಣ ಈ ಅಂಶಗಳನ್ನು ಶಾಲಾ ಶಿಕ್ಷಣದಲ್ಲಿ ರೂಢಿಸಬೇಕಿದೆ. ಕೇವಲ ವಿಷಯ ಮಾಹಿತಿಗಳನ್ನು ಯಾಂತ್ರಿಕವಾಗಿ ಕಂಠಪಾಠ ಮಾಡುವುದನ್ನೂ ಮೀರಿ ಶಿಕ್ಷಣ ಮುನ್ನಡೆಯಬೇಕು. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ರೂಢಿಸಿಕೊಳ್ಳುವ ಶೈಕ್ಷಣಿಕ ವಾತಾವರಣದ ನಿರ್ಮಾಣದತ್ತ ಚಿತ್ತ ಬೆಳೆಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT