ಶನಿವಾರ, ಅಕ್ಟೋಬರ್ 23, 2021
24 °C

ಕಲಿಕೆಯ ನಲಿವಿಗೆ ಉಪಯುಕ್ತ ಶೈಕ್ಷಣಿಕ ಆ್ಯಪ್‌ಗಳಿವು

ಟಿ. ಎ. ಬಾಲಕೃಷ್ಣ ಅಡಿಗ Updated:

ಅಕ್ಷರ ಗಾತ್ರ : | |

Prajavani

ಈ ಲೇಖನದಲ್ಲಿ ಕೆಲವು ಉಪಯುಕ್ತ ಶೈಕ್ಷಣಿಕ ಆ್ಯಪ್‌ಗಳ ಬಗ್ಗೆ ತಿಳಿದುಕೊಳ್ಳೋಣ:

ಖಾನ್ ಅಕಾಡೆಮಿ (Khan Academy): ಒಂದರಿಂದ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆಂದೇ ಅಮೆರಿಕಾದ ಸಲ್ಮಾನ್ ಖಾನ್ ಎಂಬುವರು ರೂಪಿಸಿದ ಈ ಉಚಿತ ಆ್ಯಪ್‌ ಈಗ ಅತ್ಯಂತ ಜನಪ್ರಿಯ. ಭಾರತಕ್ಕೆ ಸಂಬಂಧಿಸಿದಂತೆ ಕೇಂದ್ರದ ಎನ್‌ಸಿಇಆರ್‌ಟಿ
ಮತ್ತು ಸಿಬಿಎಸ್‌ಇ ಪಠ್ಯಕ್ರಮವನ್ನು ಅನುಸರಿಸಲಾಗಿದೆ. ಇದು ಉಚಿತ ಆ್ಯಪ್‌. ವಿಜ್ಞಾನ, ಗಣಿತ ಹಾಗೂ ಇತರ ಪ್ರಮುಖ ವಿಷಯಗಳಲ್ಲಿ ಪ್ರತಿಯೊಂದು ತರಗತಿಗೆ ನಿಗದಿತವಾಗಿರುವ ಪಠ್ಯಕ್ರಮಕ್ಕೆ ಅನುಗುಣವಾಗಿ ಅವಶ್ಯಕ ಮಾಹಿತಿಗಳನ್ನು ಇದರಲ್ಲಿ ನೀಡಲಾಗಿದೆ. ಪ್ರಮುಖ ಸಿದ್ಧಾಂತಗಳ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ನೀಡಲಾಗಿದೆ. ಹಂತಹಂತವಾಗಿ ಕಲಿಯಲು ಅನುಕೂಲವಾಗುವಂತೆ ವಿಷಯಗಳನ್ನು ವಿವರಿಸಲಾಗಿದೆ. ಪ್ರತಿ ವಿಷಯದಲ್ಲಿಯೂ ಸಾಕಷ್ಟು ವಿಡಿಯೊಗಳು, ಅಭ್ಯಾಸಗಳು ಹಾಗೂ ಘಟಕ ಪರೀಕ್ಷೆಗಳನ್ನು ಅಳವಡಿಸಲಾಗಿದೆ. ಅಭ್ಯಾಸಗಳು ‘ಅಂತರ್‌ ಕ್ರಿಯಾತ್ಮಕ’ (interactive) ರೀತಿಯಲ್ಲಿರುವುದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ, ಖುಷಿಯಿಂದ ಕಲಿಯುವುದು ಸಾಧ್ಯವಿದೆ. ಈ ಆ್ಯಪ್‌ನ ಮೂಲಕ ಶಿಕ್ಷಕರು ತರಗತಿಯ ಪ್ರತಿ ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಬಹುದು; ಅಗತ್ಯವಾದ ಮಾಹಿತಿ–ಸಲಹೆಗಳನ್ನು ನೀಡಬಹುದು. ಐ.ಐ.ಟಿ., ಜೆ.ಇ.ಇ. ಮತ್ತು ಜಿಮ್ಯಾಟ್ (GMAT)ನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲಿಚ್ಛಿಸುವವರಿಗೂ ಈ ಆ್ಯಪ್‌ ಉಪಯುಕ್ತ. ಇಂಗ್ಲಿಷ್ ಮಾತ್ರವಲ್ಲದೆ, ಹಿಂದಿ, ಕನ್ನಡ ಮುಂತಾದ ಅನೇಕ ಭಾರತೀಯ ಭಾಷೆಗಳಲ್ಲಿಯೂ ಲಭ್ಯ.

ಖಾನ್ ಅಕಾಡೆಮಿ ಕಿಡ್ಸ್ (Khan Academy Kids): ಎರಡರಿಂದ ಎಂಟು ವರ್ಷದವರೆಗಿನ ಮಕ್ಕಳಿಗಾಗಿಯೇ ರೂಪಿಸಲಾದ ವಿಶಿಷ್ಟ ಆ್ಯಪ್‌ ಇದು; ಉಚಿತ. ಮಕ್ಕಳು ನಲಿಯುತ್ತಾ ಕಲಿಯಲು ಅನುಕೂಲವಾಗುವಂತೆ ಈ ಆ್ಯಪ್‌ನಲ್ಲಿ ಸೃಜನಾತ್ಮಕ ಪಾಠಗಳು, ಪೂರಕವಾಗಿ ಅನಿಮೇಷನ್ ಮಾಡಲಾದ ವಿಡಿಯೊಗಳು, ಜೊತೆಗೆ ಗೇಮ್‍ಗಳನ್ನೂ ಅಳವಡಿಸಲಾಗಿದೆ. ರಂಜನೀಯ ಹಾಗೂ ನೀತಿಬೋಧಕ ಕಥೆಗಳನ್ನೂ ಅಳವಡಿಸಲಾಗಿದೆ. ಚಿಕ್ಕ ಮಕ್ಕಳು ಅಕ್ಷರಾಭ್ಯಾಸ ಮಾಡುವುದಕ್ಕೆ ಮುಂಚೆ ಕಲಿಯಬೇಕಾದ ಕೌಶಲಗಳಿಗೆ ಒತ್ತು ಕೊಡಲಾಗಿದೆ. ಭಾವನಾತ್ಮಕ ಹಾಗೂ ಸಾಮಾಜಿಕ ಕೌಶಲಗಳ ಬೆಳವಣಿಗೆಗೂ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ರಜಾ ಅವಧಿಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಮಾಡಿಸಬಹುದಾದ ಚಟುವಟಿಕೆಗಳ ಬಗ್ಗೆಯೂ ಮಾಹಿತಿಯನ್ನು ಹೊಂದಿದೆ. ಪೋಷಕರಿಗೂ ಈ ಆ್ಯಪ್‌ ಉಪಯುಕ್ತ.

ಪ್ಲಾಂಟ್‍ನೆಟ್ (PlantNet): ಯಾವುದೇ ಅಪರಿಚಿತ ಸಸ್ಯದ ವೈಜ್ಞಾನಿಕ ಹೆಸರು ಮತ್ತಿತರ ವಿವರಗಳನ್ನು ತಿಳಿದುಕೊಳ್ಳುವ ಇಚ್ಛೆ ಇರುವವರಿಗೆ ಅತ್ಯಂತ ಉಪಯುಕ್ತವಾದ ಆ್ಯಪ್‌. ಜೀವವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಈ ಆ್ಯಪ್‌ ಒಂದು ವರದಾನ. ಸಸ್ಯಗಳನ್ನು ವೈಜ್ಞಾನಿಕವಾಗಿ ಗುರುತಿಸಲು ಹಿಂದೆಲ್ಲ ಹಲವಾರು ಪುಸ್ತಕಗಳ ನೆರವು ಪಡೆಯಬೇಕಿತ್ತು; ವರ್ಗೀಕರಣತಜ್ಞರನ್ನು ಸಂಪರ್ಕಿಸಬೇಕಿತ್ತು. ಆದರೆ ಈಗ ಅದು ಬಹಳ ಸುಲಭ. ಸಸ್ಯದ ಫೋಟೊ ಒಂದನ್ನು ಕ್ಲಿಕ್ಕಿಸಿ ಈ ಆ್ಯಪ್‌ಗೆ ಅಪ್‌ಲೋಡ್ ಮಾಡಿದರೆ, ಕೆಲವೇ ಕ್ಷಣಗಳಲ್ಲಿ ಆ ಸಸ್ಯದ ರೂಢಿನಾಮ, ವೈಜ್ಞಾನಿಕ ಹೆಸರು ಮುಂತಾದ ವಿವರಗಳು ಒದಗುತ್ತವೆ! ಯಾವುದೇ ಸಸ್ಯದ ನಿರ್ದಿಷ್ಟ ಭಾಗಗಳಾದ ಎಲೆ, ಹೂವು, ಪುಷ್ಪಮಂಜರಿ ಅಥವಾ ಹಣ್ಣು – ಇವುಗಳ ಭಾವಚಿತ್ರಗಳನ್ನು ಕಳಿಸಿದರೂ ಸಾಕು, ಆ ಸಸ್ಯದ ಎಲ್ಲ ವಿವರಗಳನ್ನು ಪಡೆಯಬಹುದು. ತೋಟಗಾರಿಕೆ ಮತ್ತು ವ್ಯವಸಾಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗಷ್ಟೇ ಅಲ್ಲ, ಪರಿಸರಪ್ರೇಮಿಗಳಿಗೆ, ಕೈದೋಟ ಬೆಳೆಸಿದವರಿಗೆ, ಹಾಗೂ ಜನಸಾಮಾನ್ಯರಿಗೂ ಈ ಆ್ಯಪ್‌ ಬಹಳ ಉಪಯುಕ್ತ. ಈ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿದವರು ಸಸ್ಯ ಮತ್ತು ಕೃಷಿವಿಜ್ಞಾನಿಗಳು. ಹಾಗಾಗಿ, ಇದನ್ನು ‘ಸಿಟಿಜೆನ್ ಪ್ರಾಜೆಕ್ಟ್ ಆನ್ ಬಯೋಡೈವರ್ಸಿಟಿ’ (citizen project on biodiversity) ಎಂದು ಕರೆಯಲಾಗಿದೆ. ಈ ಆ್ಯಪ್‌ ಅನ್ನು ಉಚಿತವಾಗಿ ಡೌನ್‍ಲೋಡ್ ಮಾಡಿಕೊಂಡು ಸ್ಮಾರ್ಟ್‍ಫೋನ್, ಐ ಪ್ಯಾಡ್ ಅಥವಾ ಲ್ಯಾಪ್‍ಟಾಪ್‍ನಲ್ಲಿಯೂ ಬಳಸಬಹುದು.

ಐ ಕ್ಯಾನ್ (I Can): ಆಟಿಸಮ್, ಡಿಸ್ಲೆಕ್ಸಿಯಾ, ಮುಂತಾದ ಕಲಿಕಾ ನ್ಯೂನ್ಯತೆಗಳನ್ನು ಹೊಂದಿರುವ ಮಕ್ಕಳಿಗಾಗಿಯೇ ರೂಪಿಸಲಾಗಿರುವ ವಿಶಿಷ್ಟ ಆ್ಯಪ್‌ ‘ಐ ಕ್ಯಾನ್’. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಕುಟುಂಬದವರಿಗೆ ಈ ಆ್ಯಪ್‌ ಅತ್ಯಂತ ಉಪಯುಕ್ತ. ಅಂಥ ಮಕ್ಕಳಿಗೆ ಮನೆಯಲ್ಲೇ ಸ್ವತಂತ್ರವಾಗಿ ಪೋಷಕರು ಕಲಿಸಲು ಇದನ್ನು ಬಳಸಬಹುದು. ವಯೋಸಹಜವಾದ ಸಾಮಾಜಿಕ ಮತ್ತು ಶೈಕ್ಷಣಿಕ ಕೌಶಲಗಳನ್ನು ನಲಿಯುತ್ತಾ ಕಲಿಯುವ ಪ್ರಕ್ರಿಯೆಗೆ ಇದು ಪೂರಕವಾಗಿದೆ. ಈ ಆ್ಯಪ್‌ನಲ್ಲಿ ವಿಡಿಯೊಗಳು, ಪುಸ್ತಕಗಳು, ಗೇಮ್‌ಗಳು ಹಾಗೂ ಅನಿಮೇಷನ್‍ಗಳನ್ನು ಅಳವಡಿಸಲಾಗಿರುವುದರಿಂದ ಮಕ್ಕಳು ಸ್ವಪ್ರಚೋದನೆಯಿಂದಲೇ ಯಾವ ಅಡೆತಡೆಯಿಲ್ಲದೇ ಖುಷಿಯಿಂದ ಕಲಿಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು