ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುವ ಭಯವಿದೆಯೇ?: ಫೇಲಾದರೆ ತಪ್ಪೇನಿಲ್ಲ

ಡಾ.ವಿರೂಪಾಕ್ಷ ದೇವರಮನಿ
Published 31 ಡಿಸೆಂಬರ್ 2023, 23:45 IST
Last Updated 31 ಡಿಸೆಂಬರ್ 2023, 23:45 IST
ಅಕ್ಷರ ಗಾತ್ರ

ಓದು ವಿದ್ಯಾಭ್ಯಾಸವಿರಲಿ, ಉದ್ಯೋಗವಿರಲಿ, ಸಂಬಂಧಗಳಿರಲಿ ಮೊದಲ ಹಂತಗಳಲ್ಲಿ ಫೇಲಾಗುವುದು ಸಹಜ. ಆದರೆ ಆ ಸೋಲುಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿಕೊಂಡು ಮುಂದುವರೆಯುವುದೇ ಬದುಕು.

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಜನರ ದೃಷ್ಟಿಯಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಗಳಿಸಿದವರೆಲ್ಲ ಹೆಚ್ಚು ಅಂಕ ಪಡೆದವರಲ್ಲ. ಈ ಸಾಂಪ್ರದಾಯಿಕ ಕಲಿಕೆಯಲ್ಲಿ ಮಿನುಗಲಿಲ್ಲ. ಆದರೆ, ತಮ್ಮದೇ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ಸು ಕಾಣಲು ಸಾಧ್ಯವಾಯಿತು.

ಇಂದಿಗೂ ಭೌತವಿಜ್ಞಾನದ ದಿಗ್ಗಜ, ಐನ್‌ಸ್ಟೀನ್ ಶಾಲಾ ದಿನಗಳಲ್ಲಿ ಬುದ್ಧಿವಂತರಾಗಿರಲಿಲ್ಲ. ಓದಿನಲ್ಲಿರಲಿ ಆರಂಭದ ನಾಲ್ಕು ವರ್ಷಗಳಲ್ಲಿ ಮಾತೇ ಆಡುತ್ತಿರಲಿಲ್ಲವಂತೆ. ಏಳನೇ ತರಗತಿಯವರೆಗೆ ಸಾಮಾನ್ಯರಲ್ಲಿ ಸಾಮಾನ್ಯ ವಿದ್ಯಾರ್ಥಿ. ಓದು ಮುಗಿಸಿ ಶಿಕ್ಷಕ ವೃತ್ತಿಗೆ ಸೇರಲು ಹೋಗುವಾಗ ಅವರ ಮೇಲೆ ನಂಬಿಕೆಯಿರದ ಶಿಕ್ಷಕರು ಶಿಫಾರಸು ಮಾಡಲು ಹಿಂಜರಿದಿದ್ದರಂತೆ. 

ಆ್ಯಪಲ್  ಸಿಇಓ ಸ್ಟೀವ್ ಜಾಬ್ಸ್‌ ಕಥೆ ಇನ್ನೂ ರೋಚಕ. ಜನ್ಮ ನೀಡಿದ ಹೆತ್ತವರಿಂದ ದೂರವಾಗಿ ದತ್ತು ತೆಗೆದುಕೊಂಡ ಪಾಲಕರೊಡನೆ ಬೆಳೆದ ಜಾಬ್ಸ್ ಓದಿನಲ್ಲಿ ಬುದ್ಧಿವಂತರಾಗಿರಲಿಲ್ಲ. ಕಲಿಯಲು ಅಸಾಧ್ಯವೆನಿಸಿ  ಶಾಲೆ ಬದಲಿಸಿದರು. ಹೊಸ ಶಾಲೆಯಲ್ಲಿ ಸ್ನೇಹಿತರಿಲ್ಲದೆ ಒಂಟಿತನ ಅನುಭವಿಸಿದರಯ. ಬದುಕಿಗಾಗಿ ಮೆಕಾನಿಕ್, ಕೋಸ್ಟ್ ಗಾರ್ಡ್, ಕಾರ್ ಸೇಲ್ಸ್ ಮ್ಯಾನ್ ಇನ್ನಿತರ ಕೆಲಸಗಳನ್ನು ಮಾಡಿದರು. ಹೆತ್ತವರ ಪ್ರೀತಿ ಶಾಲಾ ಶಿಕ್ಷಕಿಯ ಮಾರ್ಗದರ್ಶನ, ಮಡದಿಯ ಸಾಂಗತ್ಯ ಆತನನ್ನು ಯಶಸ್ಸಿನ ದಡ ಮುಟ್ಟುವವರೆಗೆ ಕಾಪಾಡಿದ ದೋಣಿಗಳು.

ಬರ್ಕ್ ಶೈನ್ ನಲ್ಲಿ ತಾನು ಕಲಿಯುತ್ತಿದ್ದ ಸೇಂಟ್ ಜಾರ್ಜ್ ಸ್ಕೂಲ್‌ನಲ್ಲಿ ದಡ್ಡ ಎನಿಸಿಕೊಂಡು, ಶಿಕ್ಷೆ ಪಡೆದ ವಿದ್ಯಾರ್ಥಿ ಆ ದೇಶದ ಪ್ರಧಾನಿ ಎಂದರೆ ನೀವು ನಂಬುತ್ತೀರಾ? ಎರಡು ಬಾರಿ ಯುನೈಟೆಡ್ ಕಿಂಗ್ ಡಮ್‌ನ ಪ್ರಧಾನಿಯಾಗಿದ್ದ ಮಹಾಯುದ್ಧದ ಸಮಯದಲ್ಲಿ ಸಮರ್ಥವಾಗಿ ಅಧಿಕಾರ ನಡೆಸಿದ ವಿನ್ ಸ್ಟನ್ ಚರ್ಚಿಲ್ ಕಥೆಯಿದು. ಅವರ ತಪ್ಪುಗಳನ್ನೇ ಗುರುತಿಸಿ, ಎತ್ತಿ ತೋರಿಸಿದ ಶಾಲೆಯನ್ನು, ತನ್ನ ವೈಫಲ್ಯಕ್ಕೆ ಕಾರಣವಾದ ಬಾಲ್ಯದ ಶಿಕ್ಷಣವನ್ನು ದ್ವೇಷಿಸಿದ. ಮಿಲಿಟರಿ ಅಕಾಡೆಮಿಗೆ ಸೇರಲು ಬರೆದ ಪರೀಕ್ಷೆಯಲ್ಲೂ ಎರಡು ಬಾರಿ ಫೇಲಾಗಿ ಮೂರನೇ ಬಾರಿಗೆ ಉತ್ತೀರ್ಣರಾದವರು.

ಚರ್ಚಿಲ್ ಹೇಳುವಂತೆ ‘ಯಶಸ್ಸೆಂದರೆ ಒಂದು ಸೋಲಿನಿಂದ ಇನ್ನೊಂದು ಸೋಲಿನೆಡೆಗೆ ಉತ್ಸಾಹ ಕಳೆದುಕೊಳ್ಳದ ಪ್ರಯಾಣ. ಮುನ್ನುಗ್ಗುವ ಧೈರ್ಯ ಮಾತ್ರ ಮುಖ್ಯ’ ಎನ್ನುತ್ತಾರೆ ಅವರು.

ಸಾವಿರಾರು ಸಂಶೋಧನೆಗಳಿಗೆ ಕಾರಣಿಕರ್ತನಾದ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ಬಾಲ್ಯದಲ್ಲಿ ನಿಧಾನ ಪ್ರವೃತ್ತಿಯ ಮಗು, ದಡ್ಡ, ಅಂತಹ ಸಾಧನೆಯನ್ನು ಮಾಡದವ ಎನಿಸಿಕೊಂಡವರು. ಅಬ್ರಾಹಂ ಲಿಂಕನ್ ಅಧ್ಯಕ್ಷರಾಗುವ ಮೊದಲು ವ್ಯವಹಾರದಲ್ಲಿ ಅನೇಕ ವೈಫಲ್ಯಗಳನ್ನು ಕಂಡವರು. ರಾಜಕೀಯದಲ್ಲಿ ಮುಗ್ಗರಿಸಿದರೂ ಸಾವರಿಸಿಕೊಂಡು ಅಧ್ಯಕ್ಷರಾಗಿ ಹಿರಿಯ ರಾಜಕೀಯ ಮುತ್ಸದ್ಧಿಯೆನಿಸಿಕೊಂಡರು.

ವೈವಾಹಿಕ ಜೀವನದಲ್ಲಿ ವಿರಸ ಹೊಂದಿ, ಸಾಕಷ್ಟು ನೋವು ಅನುಭವಿಸಿ, ಸಣ್ಣ ಮಗುವಿನೊಂದಿಗೆ ಗಂಡನಿಂದ ಬೇರ್ಪಟ್ಟು ಅಕ್ಷರಶಃ ಬೀದಿ ಪಾಲಾದ ಜೆ.ಕೆ. ರೋಲಿಂಗ್ಸ್ ತನ್ನ ನೋವನ್ನು ಬರೆಯಲು ಬರವಣಿಗೆಯ ಮೊರೆ ಹೋದರು. ಜೀವನವೇ ಸಾಕೆನಿಸಿ ಆತ್ಮಹತ್ಯೆಗೂ ಪ್ರಯತ್ನಿಸಿದರು. ಆದರೆ ಆಕೆ ಬರೆದ ‘ಹ್ಯಾರಿ ಪಾಟರ್ಸ್’ ಕೃತಿ ಯಶಸ್ಸು ತಂದು ಕೊಟ್ಟು ಆಕೆಯನ್ನು ರಾತ್ರೋರಾತ್ರಿ ಆಗರ್ಭ ಶ್ರೀಮಂತಳನ್ನಾಗಿಸಿತು. ಆದರೆ ಅದಕ್ಕೂ ಮುನ್ನ ಹಲವಾರು ಪ್ರಕಾಶಕರು ಆ ಕೃತಿಯನ್ನು ಪ್ರಕಟಿಸಲು ನಿರಾಕರಿಸಿದ್ದು ಗಮನಾರ್ಹ.

ಮೈಕ್ರೋಸಾಫ್ಟ್ ನ ದಿಗ್ಗಜ ಬಿಲ್ ಗೇಟ್ಸ್, ಫೇಸ್‌ಬುಕ್‌ ಖ್ಯಾತಿಯ ಮಾರ್ಕ್ ಝುಕರ್ ಬರ್ಗ್, ತಮ್ಮ ಪದವಿಯನ್ನು ಮುಗಿಸಲು ಕಷ್ಟಪಟ್ಟು ವಿದ್ಯಾಭ್ಯಾಸಕ್ಕೆ ತಿಲಾಂಜಲಿಯನ್ನಿಟ್ಟವರು. ಮಾನವ ವಿಕಾಸದ ಕುರಿತು ಚರಿತ್ರಾರ್ಹ ಪ್ರಬಂಧಗಳನ್ನು ಮಂಡಿಸಿದ ಬೌರ್ಲ್ವ್ ಹಾರ್ದಿನ್ ಹೀಗೆ ಸೋತು ಗೆದ್ದವರ ಪಟ್ಟಿ ಮಾಡುತ್ತಾ ಕುಳಿತರೆ ನೂರಾರು ಉದಾಹರಣೆಗಳು ಸಿಗುತ್ತವೆ.

ಈ ಎಲ್ಲ ಉದಾಹರಣೆಗಳು, ಸೋಲನ್ನು ಸಮರ್ಥಿಸುವುದಿಲ್ಲ. ಆದರೆ ಗೆಲುವೆಂದರೆ ಅಂಕಗಳೇ ಅಂತಿಮ ಎಂದೂ ಹೇಳುವುದಿಲ್ಲ. ಸತತ ಪ್ರಯತ್ನ, ಸೋಲೊಪ್ಪದ ಅಚಲ ಛಲ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತವೆ ಈ ಕತೆಗಳು. ಇವರ ಬದುಕಿನಿಂದ ಕಲಿಯ ಬೇಕಾಗಿರುವುದು ಗೆಲುವಿನ ಮಂತ್ರಗಳನ್ನು.

ಗೆಲುವಿನ ಮಂತ್ರ

1 ಒಪ್ಪಿಕೊಳ್ಳುವಿಕೆ:

ನನ್ನ ಸೋಲಿಗೆ ಕಾರಣ ನಾನೇ, ಇತರರನ್ನು ದೂರಿ ಪ್ರಯೋಜನವಿಲ್ಲ. ನನಗಿರುವ ವಿದ್ಯಾರ್ಹತೆೆ, ನನಗಿರದ ಕೌಶಲಗಳನ್ನು ಒಪ್ಪಿಕೊಳ್ಳಬೇಕು.

2 ನವೀನ ಗುರಿಗಳ ಆಯ್ಕೆ:

ನನ್ನಲ್ಲಿರುವ ಕೌಶಲಗಳಿಗೆ ಬೇರೆಯದಾದ ಪ್ರಯತ್ನಗಳನ್ನು ಮಾಡಬೇಕು.  ಕೊರತೆಗಳನ್ನು ಮನಗಂಡು ವಾಸ್ತವಕ್ಕೆ ಹತ್ತಿರದ ಗುರಿಗಳನ್ನು ನಿರ್ಧರಿಸುವುದು.

3 ತಪ್ಪುಗಳಿಂದ ಕಲಿಯುವುದು:

ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಪರಿಗಣಿಸುವುದು. ತಮಗಾದ ಸೋಲುಗಳಿಂದ ಪಾಠಗಳನ್ನು ಕಲಿಯುವುದು. ನಡೆದ ಘಟನೆಯನ್ನು ಕೂಲಂಕುಶವಾಗಿ ವಿಶ್ಲೇಷಿಸಿ ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡುವುದು.

4 ಉತ್ತಮ ಯೋಜನೆಗಳು:

ಅಧ್ಯಯನದಿಂದ, ಸ್ವಂತ ಅನುಭವದಿಂದ, ತಪ್ಪುಗಳಿಂದ ಕಲಿತ ಪಾಠಗಳಿಂದ ಹೊಸ ಯೋಜನೆಯನ್ನು ರೂಪಿಸಿಕೊಳ್ಳುವುದು.

5 ಮರಳಿ ಯತ್ನವ ಮಾಡು:

ಗೆಲುವಿಗಾಗಿ ಪ್ರತಿಸಲವೂ ಹೊಸ ಉತ್ಸಾಹದಿಂದ ಪ್ರಯತ್ನಿಸುತ್ತಲೇ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT