ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸ್ಕಾಲರ್‌ಷಿಪ್‌ಗೆ ‘ಚಿನ್ನದ’ ಅವಕಾಶ

Last Updated 9 ಜನವರಿ 2022, 19:30 IST
ಅಕ್ಷರ ಗಾತ್ರ

ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ಮಾಡಲು ಮನಸ್ಸು ಇರುವ ಹೆಚ್ಚಿನವರನ್ನು ಕಾಡುವ ಪ್ರಮುಖ ಸಮಸ್ಯೆ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗೆ ತಗಲುವ ವೆಚ್ಚವನ್ನು ಆರ್ಥಿಕವಾಗಿ ಸರಿದೂಗಿಸುವುದು ಹೇಗೆ ಎಂಬುದು. ಕ್ರೀಡಾ ತರಬೇತಿಗೆ ಸೇರಿಸಿದರೆ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ ಅಥವಾ ಎರಡೂ ಕಡೆಗೆ ಸಮಯ ಹೊಂದಿಸಲು ಸಾಧ್ಯವಾಗದು ಎಂಬುದು ಸಾಮಾನ್ಯ ಗೊಣಗಾಟವಾದರೆ, ಕ್ರೀಡಾಪಟುಗಳನ್ನಾಗಿ ಮಾಡಲೇಬೇಕು ಎಂದು ಬಯಸುವವರನ್ನು ‘ಆರ್ಥಿಕ ಗೊಂದಲ’ ಕಾಡಿಯೇ ಕಾಡುತ್ತದೆ. ಆದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಕಾಸಿನ ಬಲ ಸಿಗುವ ವಿಚಾರಬಹಳಷ್ಟು ಮಂದಿಗೆ ಗೊತ್ತಿಲ್ಲ.

ಓದಿನ ಜೊತೆ ಕ್ರೀಡಾಂಗಣದಲ್ಲೂ ಸಾಧನೆ ಮಾಡುವವರಿಗೆ ಹಣದ ಕೊರತೆ ಉಂಟಾಗಬಾರದು, ಅದರಿಂದಾಗಿ ಶಿಕ್ಷಣ ಅಥವಾ ಕ್ರೀಡಾಸಾಮರ್ಥ್ಯ ಕುಂಠಿತಗೊಳ್ಳಬಾರದು ಎಂಬ ಕಾರಣದಿಂದ ಸರ್ಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಇದಕ್ಕೆ ಪೂರಕವಾಗಿ ಬಗೆಬಗೆಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಗಳು ಕೂಡ ಇವೆ.

ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿಯಂಥ ಯೋಜನೆಗಳು ಕರ್ನಾಟಕದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರ ನೀಡುವ ಸೌಲಭ್ಯಗಳು. 6ರಿಂದ 10ನೇ ತರಗತಿಯ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಿಯುಸಿಯಿಂದ ಉನ್ನತ ವ್ಯಾಸಂಗದಲ್ಲಿ ತೊಡಗಿರುವವರಿಗೆ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಮಾಡುವವರಿಗೆ ಶುಲ್ಕ ಮರುಪಾವತಿಯ ಅನುಕೂಲವಿದೆ. ಇದೇ ವೇಳೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನದ ಸೌಲಭ್ಯ ವಿದ್ಯಾರ್ಥಿಕ್ರೀಡಾಪಟುಗಳಿಗೂ ಲಭಿಸುತ್ತದೆ.

ಅರ್ಹತೆ ಏನು? ಯಾವಾಗ ಸಿಗುವುದು?

ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ, ಹಿಂದಿನ ವರ್ಷದ ಏಪ್ರಿಲ್‌ 1 ರಿಂದ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೂ ಮೊದಲಿನ ಮಾರ್ಚ್‌ ಕೊನೆಯ ವರೆಗಿನ ಅವಧಿಯಲ್ಲಿ ಸಾಧನೆ ಮಾಡಿರಬೇಕು ಎನ್ನುತ್ತಾರೆ ಕ್ರೀಡಾ ಕ್ಷೇಮಾಭಿವೃದ್ಧಿ ಯೋಜನೆಯ ಉಪನಿರ್ದೇಶಕ ಶ್ರೀನಿವಾಸ.

ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ (ಸ್ಯಾಕ್‌) ನೋಂದಾಯಿಸಿಕೊಂಡಿರುವ ಕ್ರೀಡಾಸಂಸ್ಥೆಗಳು ಆಯೋಜಿಸುವ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದವರು, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡವರು, ಖೇಲೊ ಇಂಡಿಯಾ ಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದವರು, ಸ್ಕೂಲ್ ಗೇಮ್ಸ್ ಫೆಡರೇಷನ್‌ ಆಯೋಜಿಸುವ ಕ್ರೀಡಾಕೂಟಗಳಲ್ಲಿ ರಾಜ್ಯಮಟ್ಟದಲ್ಲಿ ಚಿನ್ನ ಗೆದ್ದವರು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡವರು ವಿದ್ಯಾರ್ಥಿ‌ವೇತನಕ್ಕೆ ಅರ್ಹರು. ಅರ್ಹತೆ ಗಳಿಸಿದವರಿಗೆ ವಾರ್ಷಿಕ ₹ 10,000 ಸಿಗುತ್ತದೆ. ಶುಲ್ಕ ಮರುಪಾವತಿ ಯೋಜನೆಯಲ್ಲಿ ಗರಿಷ್ಠ ₹ 50,000ದಷ್ಟು ಮೊತ್ತ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಸಾಧಕರನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಪತ್ರಿಕೆಗಳಲ್ಲಿ ಈ ಕುರಿತು ಪ್ರಕಟಣೆ ನೀಡಲಾಗುತ್ತದೆ. ಕ್ರೀಡಾ ಸಂಸ್ಥೆಗಳಿಗೂ ಮಾಹಿತಿ ರವಾನಿಸಲಾಗುತ್ತದೆ. ಅರ್ಹತೆ ಇದ್ದ ಎಲ್ಲರಿಗೂ ‘ಪ್ರೋತ್ಸಾಹ’ ಸಿಗುತ್ತದೆ. ಇದಕ್ಕೆ ಸಂಖ್ಯಾ ಮಿತಿ ಇಲ್ಲ.

ಮಾಹಿತಿ https://dyes.karnataka.gov.inನಲ್ಲಿ ಲಭ್ಯ.

(ಮುಂದಿನವಾರ: ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿಯ ಇಲ್ಲ)

***

ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಸಾಧನೆ ಮಾಡುವವರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ‘ವಿದ್ಯಾರ್ಥಿ ವೇತನ‘ದಂತಹ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಅಂಥ ಯೋಜನೆಗಳನ್ನು ಈ ಸರಣಿಯಲ್ಲಿ ಪರಿಚಯಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT