ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನ ಶಾಲೆಗೆ ಹಸಿರು ಗೌರವ

Last Updated 25 ಜನವರಿ 2019, 19:45 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಳೆಅಂಕಸಮುದ್ರ ಗ್ರಾಮದಲ್ಲಿ 2008ರಲ್ಲಿ ಆರಂಭಗೊಂಡ ಸರ್ಕಾರಿ ಶಾಲೆ ಕೆಲವೇ ವರ್ಷಗಳಲ್ಲಿ ಹಸಿರುಮಯವಾಗಿದೆ.

ಕೇವಲ 60 ಮನೆಗಳಿರುವ ಈ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. 100 ಅಡಿ ಉದ್ದ ಮತ್ತು 70 ಅಡಿಗಳ ನಿವೇಶನದಲ್ಲಿ ಐದು ಕೊಠಡಿಗಳನ್ನು ನಿರ್ಮಿಸಲಾಗಿದೆ. ಉಳಿದ ಖಾಲಿ ಜಾಗವನ್ನೆಲ್ಲ ಹಸಿರಾಗಿಸಿ ಹಸಿರಿನ ಚಪ್ಪರವನ್ನೇ ನಿರ್ಮಿಸಿದಂತಿದೆ.

ಐದು ಸಿಲ್ವರ್‌ ವೃಕ್ಷಗಳು, ಆರು ಅಶೋಕ, ನಾಲ್ಕು ತೆಂಗು, ಮೂರು ಬದಾಮಿ, ಒಂದು ಚೆರ್ರಿ, ನಿಂಬೆ ಗಿಡಗಳು ಶಾಲೆಯ ಸೌಂದರ್ಯ ಹೆಚ್ಚಿಸಿವೆ. ಧ್ವಜ ಕಟ್ಟೆಯ ಸುತ್ತಲಿರುವ ಅಲಂಕಾರಿಕ ಸಸ್ಯಗಳು ಹೊಸ ಕಳೆ ತಂದುಕೊಟ್ಟಿವೆ.

ಒಂದರಿಂದ ಐದನೆ ತರಗತಿವರೆಗೂ ಇರುವ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದಾರೆ. ಈ ಶಾಲೆಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಸರ ಕಾಳಜಿಯಿಂದಾಗಿ 2014–15ರಲ್ಲಿ ಶಾಲೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ‘ಪರಿಸರ ಮಿತ್ರ ಹಸಿರು ಶಾಲೆ’ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದೆ. ಅಂದಿನಿಂದಲೂ ಇದುವರೆಗೂ ಹಸಿರು ಶಾಲೆಯಾಗಿಯೇ ಉಳಿದಿದೆ.

ಶಾಲೆಯ ಗೋಡೆಗಳನ್ನು ಸಾಮಾನ್ಯ ಜ್ಞಾನದ ಫಲಕದಂತೆ ಚಿತ್ರಿಸಲಾಗಿದೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಮಗ್ರ ಮಾಹಿತಿ, ದೇಶದ ಇದುವರೆಗಿನ ರಾಷ್ಟ್ರಪತಿಗಳ ಮಾಹಿತಿ ಇದೆ. ರಾಷ್ಟ್ರಪಕ್ಷಿ, ಪ್ರಾಣಿ ಸೇರಿದಂತೆ ಸ್ಥಳೀಯ ಸಂರಕ್ಷಿತಾ ಪಕ್ಷಿಧಾಮವನ್ನು ಬಿಂಬಿಸುವ ಚಿತ್ರಗಳೂ ಅಲ್ಲಿವೆ. ದೇಶ ಮತ್ತು ರಾಜ್ಯದ ನಕಾಶೆಗಳನ್ನು ಚಿತ್ರಿಸಲಾಗಿದೆ. ಜಿಲ್ಲೆಯ ಸಮಗ್ರ ವಿವರಗಳೂ ಇವೆ. ನೈಂಟಿಗೇಲ್, ಎಸ್‌.ರಾಧಾಕೃಷ್ಣನ್‌ ಸೇರಿದಂತೆ ಇತರೆ ಮಹನೀಯರ ಸುಭಾಷಿತಗಳನ್ನು ಗೋಡೆಯಲ್ಲಿ ಬರೆಸಲಾಗಿದೆ.

ಇಬ್ಬರೇ ಶಿಕ್ಷಕರಿದ್ದರೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಿಂದ ರಚಿತವಾದ ‘ಅರಳು ಮಾಸಿಕ’ ಕೈ ಬರಹದ ಗೋಡೆ ಪತ್ರಿಕೆಯನ್ನು ಪ್ರತಿ ತಿಂಗಳೂ ಹೊರತರಲಾಗುತ್ತದೆ. ಈ ಮೂಲಕ ಮಕ್ಕಳಲ್ಲಿ ಸುಪ್ತವಾಗಿರುವ ಚಿತ್ರಕಲೆ, ರಂಗೋಲಿ ಅನಾವರಣಗೊಂಡಿದೆ. ವಿವಿಧ ದಿನ ಪತ್ರಿಕೆಗಳ ತುಣುಕುಗಳನ್ನು ಅದರಲ್ಲಿ ಕಾಣಬಹುದಾಗಿದೆ. ಪತ್ರಿಕೆಗಳನ್ನು ಒಟ್ಟುಗೂಡಿಸಿ ವಾರ್ಷಿಕ ‘ವಿಶ್ವಚೇತನ’ ಪತ್ರಿಕೆಯನ್ನು ಹೊರ ತಂದಿದ್ದಾರೆ.

ಪ್ರತಿ ದಿನ ಶಾಲೆಯಲ್ಲಿ ಪ್ರಾರ್ಥನೆಯ ಬಳಿಕ ಸಂರಕ್ಷಿತ ಪಕ್ಷಿಧಾಮಕ್ಕೆ ವಲಸೆ ಬರುವ ವಿವಿಧ ಪಕ್ಷಿಗಳ ಮಾಹಿತಿಯನ್ನೂ ನೀಡಲಾಗುತ್ತಿದೆ. ಸ್ಥಳೀಯ ಯುವ ಬ್ರಿಗೇಡ್ ಸದಸ್ಯರು ಪಕ್ಷಿಗಳ ಮಾಹಿತಿ ಇರುವ ಫಲಕಗಳನ್ನು ಶಾಲೆಗೆ ಉಚಿತವಾಗಿ ನೀಡಿದ್ದಾರೆ.

ಹೊಸ ಅಂಕಸಮುದ್ರ ಶಾಲೆಯಲ್ಲಿ ಹೆಚ್ಚುವರಿ ಆಗಿ ಉಳಿದಿರುವ ಡೆಸ್ಕ್‌ಗಳನ್ನು ಶಾಲೆಯ ಶಿಕ್ಷಕರಾದ ಎಚ್‌.ಮುನೀರ್‌ ಬಾಷಾ ಮತ್ತು ಎ.ಗುರುಬಸವರಾಜ ಅಲ್ಲಿನ ಶಿಕ್ಷಕರ ಮನವೊಲಿಸಿ ಹತ್ತಕ್ಕೂ ಹೆಚ್ಚು ಡೆಸ್ಕ್‌ಗಳನ್ನು ತಂದಿದ್ದಾರೆ.

ಪ್ರತಿದಿನ ಮಧ್ಯಾಹ್ನದ ಬಿಸಿಯೂಟ ಸವಿಯುವ ಮುಂಚೆ ಶಾಲೆಯ ವಿದ್ಯಾರ್ಥಿಗಳು ಪರಸ್ಪರ ಕೈ ಬೆರಳಿನ ಉಗುರುಗಳನ್ನು ಪರೀಕ್ಷಿಸುವ ಮೂಲಕ ತಮ್ಮೊಳಗೆ ಸ್ವಚ್ಛತೆಯ ಪರಿಪಾಠವನ್ನು ಮೈಗೂಡಿಸಿಕೊಂಡಿದ್ದಾರೆ. ಶಾಲೆಯ ಮಂತ್ರಿ ಮಂಡಲವೂ ಇದೆ. ಸ್ವಚ್ಛತಾ ಮಂತ್ರಿ, ಪರಿಸರ ಮಂತ್ರಿಯೂ ಇದ್ದಾರೆ. ಶಾಲೆಯ ಬಿಡುವಿನ ವೇಳೆಯಲ್ಲಿ ಕೆಲ ವಿದ್ಯಾರ್ಥಿಗಳು ಗಿಡಗಳಿಗೆ ನೀರು ಹರಿಸಿದರೆ ಇನ್ನೂ ಕೆಲವರು ಸ್ವಚ್ಛತಾ ಕಾರ್ಯ ಮಾಡುವಲ್ಲಿ ನಿರತರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT