ಭಾನುವಾರ, ಆಗಸ್ಟ್ 14, 2022
24 °C

ಶಿಕ್ಷಣದ ಮಧ್ಯೆ ಪುಟ್ಟ ಬ್ರೇಕ್‌ ಎಷ್ಟು ಲಾಭದಾಯಕ?

ಕೀರ್ತಿ ಟಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಶಿಕ್ಷಣದ ಮಧ್ಯೆ ಒಂದು ವರ್ಷದ ಬ್ರೇಕ್‌ ಅಥವಾ ಗ್ಯಾಪ್‌ ಈಯರ್‌ ತೆಗೆದುಕೊಳ್ಳುವುದು ಭಾರತದ ಮಟ್ಟಿಗೆ ಹಿಂದೆ ಅಪರೂಪವಾಗಿತ್ತು. ಆದರೆ ಕಳೆದ ವರ್ಷ ಕೋವಿಡ್‌ ಶುರುವಾದಾಗ ಈ ರೀತಿ ಬ್ರೇಕ್‌ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ ಎನ್ನಬಹುದು. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿದ ನಂತರ ಅಥವಾ ಪದವಿ ಒಂದೆರಡು ವರ್ಷ ಓದಿದ ನಂತರ ಒಂದು ವರ್ಷವೋ, ಎರಡು ವರ್ಷವೋ ಶಿಕ್ಷಣದಿಂದ ವಿಮುಖರಾಗಿ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕೆಲವರು ಮನಸ್ಸು ಮಾಡುತ್ತಿದ್ದಾರೆ. ಪೋಷಕರ ದೃಷ್ಟಿಯಿಂದ ಇದೊಂದು ಸಮಯ ವ್ಯರ್ಥ ಮಾಡುವ ಪದ್ಧತಿ ಎನಿಸಿದರೂ ವಿದ್ಯಾರ್ಥಿಗಳು ಈ ಅವಧಿಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದು. ಅಂದರೆ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ಇನ್ನಷ್ಟು ವ್ಯಾಪಕ ಸಿದ್ಧತೆ ನಡೆಸಬಹುದು. ಜೊತೆಗೆ ಮಾನಸಿಕವಾಗಿ ತಯಾರಾಗಬಹುದು ಎನ್ನುತ್ತಾರೆ ತಜ್ಞರು.

ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ನಂತರ ಪಿಯುಸಿವರೆಗೆ ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರ ಮೇಲ್ವಿಚಾರಣೆಯಲ್ಲಿ ಓದುತ್ತಿರುತ್ತಾರೆ. ಓದಿನತ್ತ ಹೆಚ್ಚು ಗಮನವನ್ನೂ ನೀಡಬೇಕಾಗುತ್ತದೆ. ಆದರೆ ಪದವಿ, ಅದು ವೃತ್ತಿಪರ ಕೋರ್ಸ್‌ ಇರಲಿ ಅಥವಾ ಸಾಂಪ್ರದಾಯಿಕ ಪದವಿ ಕೋರ್ಸ್‌ ಆಗಿರಲಿ, ವಿದ್ಯಾರ್ಥಿಗಳು ಸ್ವಂತ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿರುತ್ತಾರೆ. ತಮ್ಮದೇ ಆದ ಆಸಕ್ತಿ, ಅನುಕೂಲ ನೋಡಿಕೊಂಡು ಮುಂದಿನ ಶಿಕ್ಷಣದ ಬಗ್ಗೆ ಆಲೋಚಿಸುವವರೂ ಇದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳು ಈ ಹಂತದಲ್ಲಿ ಮಧ್ಯೆ ಬ್ರೇಕ್‌ ತೆಗೆದುಕೊಂಡರೂ, ಭಾರತದಲ್ಲಿ ಪದವಿ ನಂತರ, ಅಂದರೆ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಸೇರಿಕೊಳ್ಳುವ ಮುನ್ನ ಇಂತಹ ಬ್ರೇಕ್‌ ತೆಗೆದುಕೊಳ್ಳುವವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಯಾವುದಾದರೂ ಉದ್ಯೋಗಕ್ಕೆ ಸೇರುವುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವುದು... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮತ್ತೆ ಶಿಕ್ಷಣ ಮುಂದುವರಿಸುವ ಯುವಕ/ ಯುವತಿಯರಿದ್ದಾರೆ.

ಇನ್ನು ಕೆಲವರು ಪಿಯುಸಿಯಲ್ಲಿ ಒಳ್ಳೆಯ ಅಂಕ ಬರದಿದ್ದರೆ, ತಮ್ಮ ಅಂಕಗಳಿಗೆ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ಸಿಗದಿದ್ದರೆ ಮತ್ತೆ ಪಿಯುಸಿ ಪರೀಕ್ಷೆಗೆ ಕೂತು ಹೆಚ್ಚು ಅಂಕ ಗಳಿಸಲು ಯತ್ನಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇದೇ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ.

ಎಂಜಿನಿಯರಿಂಗ್‌ ಓದುತ್ತಿದ್ದ ಗೌತಮಿ ಗುಪ್ತಾ ನಾಲ್ಕನೇ ಸೆಮಿಸ್ಟರ್‌ ನಂತರ ಬ್ರೇಕ್‌ ತೆಗೆದುಕೊಂಡಳು. ಕಾರಣ, ಒಂದಿಷ್ಟು ಸಾಫ್ಟ್‌ ಕೌಶಲಗಳಲ್ಲಿ ಪರಿಣತಿ ಪಡೆಯಬೇಕಿತ್ತು, ಜೊತೆಗೆ ಒಂದು ಸ್ವಯಂ ಸೇವಾ ಸಂಸ್ಥೆಗಾಗಿ ಪ್ರಾಜೆಕ್ಟ್‌ ಕೂಡ ಮಾಡಿ ಅನುಭವ ಪಡೆಯಬೇಕಿತ್ತು. ಹೀಗಾಗಿ ಒಂದು ವರ್ಷದ ನಂತರ ಐದನೇ ಸೆಮಿಸ್ಟರ್‌ಗೆ ಸೇರಿಕೊಂಡಳು. ಜೆಇಇ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಬೆಂಗಳೂರಿನ ರುಚಿ ಪದಕಿ ಒಂದು ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಿ ನಂತರ ಮತ್ತೆ ಜೆಇಇ ಪರೀಕ್ಷೆಗೆ ಕೂತು ಐಐಟಿಯಲ್ಲಿ ಪ್ರವೇಶ ಗಿಟ್ಟಿಸಿಕೊಂಡಳು.

ಪದವಿ ಓದಿದ ನಂತರ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಸೇರುವುದೆಂದರೆ ಹೆಚ್ಚಿನ ಶುಲ್ಕ, ಪರವೂರಲ್ಲಿ ವಸತಿ– ಊಟದ ಖರ್ಚು ಭರಿಸುವುದು ಹಲವರಿಗೆ ಹೊರೆಯೇ ಸರಿ. ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಉದ್ಯೋಗ ಮಾಡಿ ಹಣ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಈ ಬ್ರೇಕ್‌ ನೆರವಾಗುತ್ತದೆ.

ಈಗ ಕೋವಿಡ್‌ನಿಂದಾಗಿ ಬ್ರೇಕ್‌ ತೆಗೆದುಕೊಂಡವರ ವಿಷಯಕ್ಕೆ ಬರೋಣ. ಹೆಚ್ಚಿನವರು ಆನ್‌ಲೈನ್‌ ತರಗತಿಗಳ ಮೂಲಕ ಶಿಕ್ಷಣ ಮುಂದುವರಿಸಿದ್ದಾರೆ. ಆದರೆ ಕಾದು ನೋಡಿ ಮರಳಿ ಕಾಲೇಜು ಸೇರಿಕೊಳ್ಳುವ ನಿರ್ಧಾರ ಮಾಡಿರುವ ಕೆಲವು ವಿದ್ಯಾರ್ಥಿಗಳೂ ಇದ್ದಾರೆ. ಈ ಸಂದರ್ಭವನ್ನು ಆನ್‌ಲೈನ್‌ನಲ್ಲಿ ಸಣ್ಣಪುಟ್ಟ ಕೋರ್ಸ್‌ ಮಾಡಿಕೊಳ್ಳುತ್ತ, ತಮ್ಮ ಸ್ವಂತ ಹವ್ಯಾಸಗಳಲ್ಲಿ ತೊಡಗಿಸಿಕೊಂಡವರೂ ಇಲ್ಲದಿಲ್ಲ.

ಏನೆಂದರೆ ಈ ಬ್ರೇಕ್‌ ತೆಗೆದುಕೊಳ್ಳುವುದು ವಿದ್ಯಾರ್ಥಿ ಹಾಗೂ ಅವರ ಮನೆಯವರ ಮನಃಸ್ಥಿತಿಯನ್ನು ಅವಲಂಬಿಸಿದೆ. ಜೊತೆಗೆ ಈ ಅವಧಿಯಲ್ಲಿ ಅದನ್ನು ಲಾಭದಾಯಕವಾಗಿ ಬಳಸಿಕೊಂಡರೆ ಮುಂದಿನ ಶಿಕ್ಷಣ ಹಾಗೂ ವೃತ್ತಿಗೆ ಅನುಕೂಲವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು