ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾನ್ವೇಷಣೆ: ವೈರಸ್ ಎಂದರೇನು?

Published 20 ಆಗಸ್ಟ್ 2023, 23:30 IST
Last Updated 20 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಆ........ಆಕ್ಷೀ....... ಮೂಗು ಸೋರುತ್ತಿದೆ, ಸೀನು ಬರುತ್ತಿದೆ, ಜ್ವರ ಬಂದಿದೆ, ಮುಂತಾದ ಲಕ್ಷಣಗಳು ಕಂಡು ಬಂದರೆ ‘ಇದು  ವೈರಸ್ ಸೋಂಕಿನಿಂದಾಗಿದೆ’ ಎನ್ನುತ್ತೇವೆ. ಈ ವೈರಸ್‌ ಸೋಂಕು ತಗುಲಿದವರು ಸೀನಿದಾಗ, ಕೆಮ್ಮಿದಾಗ ಹೊರ ಹೊಮ್ಮುವ ಹನಿಗಳ ಮೂಲಕ ಬೇರೆಯವರಿಗೂ ಹರಡುತ್ತವೆ. ಕೋವಿಡ್‌ ಸೋಂಕು ಹರಡಿದ್ದು ನಿಮಗೆ ನೆನಪಿರಬೇಕಲ್ಲವಾ ?

ಅಂದ ಹಾಗೆ, ಈ ವೈರಸ್‌ಗಳು ಜೀವಿ ಮತ್ತು ನಿರ್ಜೀವಿಗಳಂತೆ ನೆಲೆಸಿರುತ್ತವೆ. ಇವು ಆತಿಥೇಯ ಜೀವಕೋಶದ ಹೊರಗೆ ನಿರ್ಜೀವಿಯಂತೆ ಇರುತ್ತವೆ. ಸೋಂಕು ಆದಾಗ ಜೀವಕೋಶಗಳಲ್ಲಿ ಜೀವಿಗಳಂತೆ ಸಂತಾನಭಿವೃದ್ಧಿ ಮಾಡುತ್ತವೆ.

ಭೂಮಿಯ ಪರಿಸರದಲ್ಲಿ ಜೀವವಿಕಾಸವಾಗುವಾಗ ವಿವಿಧ ರಾಸಾಯನಿಕಗಳ ಮಿಶ್ರಣಗಳು ತಯಾರಾದವು. ಇಂಗಾಲ, ಜಲಜನಕ, ಆಮ್ಲಜನಕ ಮತ್ತು ಸಾರಜನಕ ಪರಮಾಣುಗಳು ಹಲವಾರು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸಿ ವಿವಿಧ ಅಣುಗಳ ಉತ್ಪಾದನೆಯಾದವು.  ಈ ರೀತಿಯ ವಿಭಿನ್ನ ಅಣುಗಳು ಸಂಯೋಜನೆಗೊಂಡು ಜೀವರಾಶಿಗಳ ವಿಕಾಸಕ್ಕೆ ಕಾರಣವಾಯಿತು ಎಂದು ವಿಜ್ಞಾನಿಗಳು ಅರ್ಥೈಸಿದ್ದಾರೆ. ಈ ಹಿನ್ನಲೆಯಲ್ಲಿ ವೈರಸ್‌ಗಳು ಬಹು ಮುಖ್ಯ ಅಂಶಗಳೆಂದು ಪರಿಗಣಿಸಲ್ಪಟ್ಟಿವೆ.

ವೈರಸ್‌ಗಳು ಅತೀ ಸಣ್ಣದಾದ, ಸರಳವಾದ, ಯಾವುದೇ ಜೀವಕೋಶಗಳಿಲ್ಲದ, ನ್ಯೂಕ್ಲಿಯಿಕ್ ಆಮ್ಲ ಮತ್ತು ಪ್ರೊಟಿನ್‌ಗಳ ಮಿಶ್ರಣಗಳಾಗಿದ್ದು, ಜೀವಿಗಳಲ್ಲಿ ಸೊಂಕು ಉಂಟು ಮಾಡುತ್ತವೆ. ಅಂದರೆ ಇವು ಕಡ್ಡಾಯವಾಗಿ ಪರಾವಲಂಬಿಗಳು. ವೈರಸ್ ಎಂದರೆ ವಿಷ ಎಂದು ಅರ್ಥ. ಅವುಗಳ ಆಕಾರ, ಗಾತ್ರ ಮತ್ತು ಅತಿಥೇಯ ಜೀವಿಗಳನ್ನು ಬಳಸುವಿಕೆಯಲ್ಲಿ ಸಾಕಷ್ಟು ವೈವಿಧ್ಯವಿದೆ.

ಗುಣಲಕ್ಷಣಗಳು

ವೈರಸ್‌ಗಳು ರೋಗಕಾರಕಗಳಾಗಿದ್ದು ಪ್ರಾಣಿಗಳು, ಸಸ್ಯಗಳು, ಪಾಚಿಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟರಿಯಾಗಳಲ್ಲೂ ರೋಗವನ್ನುಂಟು ಮಾಡುತ್ತವೆ! ಸಂಪೂರ್ಣವಾಗಿ ತಯಾರಾಗಿರುವ ಪ್ರಬುದ್ಧ ವೈರಸ್ ಕಣಗಳನ್ನು ವಿರಿಯಾನ್ ((Virion) ಎನ್ನುತ್ತಾರೆ. ವೈರಸ್‌ಗಳು ನ್ಯೂಕ್ಲಿಯೋಕ್ಯಾಪ್ಸಿಡ್ (Nucleocapsid) ರಚನೆಯನ್ನು ಹೊಂದಿವೆ. ಇದರಲ್ಲಿ ವಂಶವಾಹಿಗಳಾಗಿ ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಅಮ್ಲ (ಡಿಎನ್‌ಎ) ಅಥವ ರೈಬೋನ್ಯೂಕ್ಲಿಯಿಕ್ ಅಮ್ಲ (ಆರ್‌ಎನ್‌ಎ)ವಿರುತ್ತದೆ. ಇದನ್ನು ಸುತ್ತುವರಿದ ಪ್ರೋಟಿನ್ ರಕ್ಷಣ ಕವಚ (ಕ್ಯಾಪ್ಸಿಡ್) ಇರುತ್ತದೆ. ವೈರಸ್‌ಗಳಿಗೆ ಅತಿಥೇಯ ಜೀವಕೋಶಗಳಿಲ್ಲದೆ ಸಂತಾನಭಿವೃದ್ಧಿ ಸಾಧ್ಯವಿಲ್ಲ. ಇವುಗಳನ್ನು ಜೀವಿ-ನಿರ್ಜೀವಿಗಳ ನಡುವಿನ ಕೊಂಡಿಯೆಂದೇ ಪರಿಗಣಿಸಲಾಗಿದೆ. ವೈರಸ್‌ಗಳು ಅತೀ ಸಣ್ಣ ಕಣಗಳಾಗಿದ್ದು ಗಾತ್ರದಲ್ಲಿ ಕೇವಲ 10 ರಿಂದ 400 ನ್ಯಾನೊಮೀಟರ್‌ಗಳಲ್ಲಿರುತ್ತವೆ (1 ಮೀ = 109 ನ್ಯಾನೋ ಮೀ. ಅಂದರೆ ಒಂದು ಮೀಟರ್‌ನ್ನು ಶತಕೋಟಿ ಭಾಗಗಳನ್ನಾಗಿ ಮಾಡಿದಾಗ ಬರುವ ಒಂದು ಭಾಗವೇ 1 ನ್ಯಾನೋ ಮೀ.). ಇವುಗಳನ್ನು ನೋಡಲು ಎಲೆಕ್ಟಾçನ್ ಸೂಕ್ಷö್ಮದರ್ಶಕ ಯಂತ್ರವೇ ಬೇಕು.

ವೈರಸ್‌ಗಳ ಸಂತಾನಭಿವೃದ್ಧಿ

ವೈರಸ್‌ಗಳು ತಮ್ಮ ಅತಿಥೇಯ ಜೀವಕೋಶಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ಹಾಗಾಗಿ ಗಾಳಿ, ನೀರು, ಆಹಾರ, ಮತ್ತು ಇತರೆ ವಾಹಕಗಳ ಮೂಲಕ ಇವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಅತಿಥೇಯ ಜೀವಕೋಶಗಳ ಹೊರಗೆ ಏನೂ ಮಾಡಲಾಗದ ವೈರಸ್‌ಗಳು ಜೀವಕೋಶದ ಒಳಗೆ ಅಲ್ಲೋಲಕಲ್ಲೋಲವನ್ನೇ ಉಂಟುಮಾಡುತ್ತವೆ. ಮೊದಲಿಗೆ ಯಾಂತ್ರಿಕವಾಗಿ ಸೂಕ್ತ ಜೀವಕೋಶಗಳ ಪೊರೆಗೆ ವಿರಿಯಾನ್‌ಗಳು ಅಂಟಿಕೊಳ್ಳುತ್ತವೆ.  ನಂತರ ತನ್ನಲ್ಲಿರುವ ವಂಶವಾಹಿಗಳನ್ನು ಅತಿಥೇಯ ಜೀವಕೋಶದ ಒಳಗೆ ತೂರಿಸುತ್ತವೆ. ಈ ರೀತಿ ಜೀವಕೋಶಗಳೊಳಗೆ ಬಂದ ವೈರಸ್‌ನ ವಂಶವಾಹಿಗಳು ಅತಿಥೇಯ ಜೀವಕೋಶಗಳ ಬೆಳವಣಿಗೆಗೆ ಅಗತ್ಯವಿರುವ ಕಿಣ್ವಗಳನ್ನು ಬಳಸಿಕೊಂಡು ತನ್ನದೇ ವಂಶವಾಹಿಗಳಿಂದ ತನಗೆ ಬೇಕಾದ ನ್ಯೂಕ್ಲಿಯಿಕ್ ಆಮ್ಲ ಮತ್ತು ಪ್ರೊಟೀನ್‌ಗಳನ್ನು ಉತ್ಪಾದಿಸುತ್ತವೆ. ಒಂದು ಅತಿಥೇಯ ಜೀವಕೋಶದಲ್ಲಿ ನೂರರಿಂದ ಸಾವಿರಾರು ವಿರಿಯಾನ್‌ಗಳು ಉತ್ಪತ್ತಿಗೊಂಡು ಆ ಜೀವಕೋಶವನ್ನೇ ಒಡೆದು ಹೊರಬಂದು ಸೋಂಕನ್ನು ಹರಡುತ್ತವೆ.  ಈ ಕ್ರಿಯೆಯಿಂದ ಅತಿಥೇಯ ಜೀವಿಯಲ್ಲಿ ತೊಂದರೆಗಳುಂಟಾಗುತ್ತದೆ.

ಮಾನವನಲ್ಲಿ ಬರುವ ವೈರಸ್ ರೋಗಗಳೆಂದರೆ ಶೀತ, ದಡಾರ (Measles), ಮಂಗನಬಾವು (Mumps), ರೇಬಿಸ್, ಕಾಮಾಲೆ (Hepatitis), ಹರ್ಪಿಸ್, ಡೆಂಗ್ಯೂ, ಕೊವಿಡ್ ಮುಂತಾದವುಗಳು. ಸಸ್ಯಗಳಲ್ಲಿ ಬರುವ ವೈರಸ್ ರೋಗಗಳು ತಂಬಾಕಿನ ಶಬಲಚಿತ್ರ (Mosaic), ಆಲೂಗಡ್ಡೆಯ ಎಲೆ ಸುರುಳಿ (Leaf roll), ಬೆಂಡೆ ಗಿಡದ ಹಳದಿ ನರ ಶಬಲಚಿತ್ರ (Yellow vein mosaic) ಮುಂತಾದವುಗಳು. ವೈರಸ್ ಸೊಂಕನ್ನು ನಿಭಾಯಿಸುವುದು ಕಷ್ಟಸಾಧ್ಯ. ಮಾನವರಲ್ಲಿ ಲಸಿಕೆಗಳಿಂದ ವೈರಸ್ ರೋಗಗಳು ಬಾರದಂತೆ ತಡೆಗಟ್ಟಬಹುದು. ಸಸ್ಯಗಳಲ್ಲಿ ರೋಗ-ಭಾದಿತ ಗಿಡಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗ ಹರಡುವುದನ್ನು ತಡೆಯಬಹುದು.

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT