ಭಾನುವಾರ, ಜನವರಿ 23, 2022
27 °C

ನಿಮಗಿದು ಗೊತ್ತೆ? ಶೀಘ್ರಲಿಪಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಪ್ರಜಾವಾಣಿ ವಾತೆ೯ Updated:

ಅಕ್ಷರ ಗಾತ್ರ : | |

ಸಂಕೇತಗಳು ಅಥವಾ ಚಿಹ್ನೆಗಳನ್ನು ಉಪಯೋಗಿಸಿ ಅತ್ಯಂತ ವೇಗದಲ್ಲಿ ಬರೆಯುವ ವಿಧಾನಕ್ಕೆ ‘ಶೀಘ್ರಲಿಪಿ’ ಎಂದು ಹೆಸರು. ಈ ವಿಧಾನದಲ್ಲಿ ಅಕ್ಷರಗಳು, ಪದಗಳು ವಾಕ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಬರೆಯಬಹುದು. ಶೀಘ್ರಲಿಪಿಗೆ ಸ್ಟೆನೊಗ್ರಫಿ, ಟ್ರ್ಯಾಕಿಗ್ರಫಿ ಮತ್ತು ಬ್ರ್ಯಾಕಿಗ್ರಫಿ ಎಂಬ ಹೆಸರುಗಳೂ ಇವೆ. ಈ ಲಿಪಿ ಬಹಳ ಉಪಯುಕ್ತವಾಗಿರುವುದರಿಂದ ವಿಶ್ವದ ಹಲವು ಕೈಗಾರಿಕಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಸಲಾಯಿತು.

ಗ್ರೀಕ್‌ ಇತಿಹಾಸಕಾರ ಜೆನೊಫನ್(Xenophon) ಮೊಟ್ಟ ಮೊದಲು ಈ ಶೀಘ್ರಲಿಪಿಯನ್ನು ಬಳಸಿದರೆಂಬುದು ಅನೇಕ ಇತಿಹಾಸಕಾರರ ಅಭಿಪ್ರಾಯ. ಇವರು ಸಾಕ್ರೆಟಿಸ್‌ನ ಸಂವಾದಗಳನ್ನು ಶೀಘ್ರಲಿಪಿಯಲ್ಲಿ ಬರೆದರು.
ಕ್ರಿ. ಪೂ. 63ರಲ್ಲಿ ರೋಮ್‌ನ ಮಾರ್ಕಸ್ ಟುಲಿಯಸ್ ಟಿರೊ ಲ್ಯಾಟಿನ್ ಭಾಷೆಯನ್ನು ಶೀಘ್ರಲಿಪಿಯಲ್ಲಿ ಬರೆದ. ಆತ ಶೀಘ್ರಲಿಪಿಯ ಒಂದು ನಿಘಂಟನ್ನೂ ಸಿದ್ಧಪಡಿಸಿದ್ದಾನೆ.

17ನೇ ಶತಮಾನದಲ್ಲಿ ಶೀಘ್ರಲಿಪಿಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಯಿತು. ಜಾನ್ ವಿಲ್ಲಿಸ್‌ನನ್ನು ಆಧುನಿಕ ಶೀಘ್ರಲಿಪಿಯ ಪಿತಾಮಹನೆಂದು ಪರಿಗಣಿಸಲಾಗಿದೆ.

ಕೈಗಾರಿಕಾಭಿವೃದ್ಧಿಯಿಂದಾಗಿ ಶೀಘ್ರಲಿಪಿಗಾರರಿಗೆ ಬೇಡಿಕೆ ಹೆಚ್ಚಿತು. 18ನೇ ಶತಮಾನದಲ್ಲಿ ಶೀಘ್ರಲಿಪಿಯನ್ನು ವ್ಯವಸ್ಥಿತವಾಗಿ ರೂಪಿಸಲಾಯಿತು. ಆದರೆ ಬ್ರಿಟಿಷ್ ಶೀಘ್ರಲಿಪಿಕಾರ ಸ್ಯಾಮ್ಯುಯೆಲ್ ಟೇಲರ್ 1786ರಲ್ಲಿ ಅಭಿವೃದ್ಧಿಪಡಿಸಲಾದ ಶೀಘ್ರಲಿಪಿ ಪದ್ಧತಿಯನ್ನು ಫ್ರೆಂಚ್, ಸ್ಪಾನಿಷ್, ಪೋರ್ಚುಗೀಸ್, ಇಟಾಲಿಯನ್, ಸ್ವೀಡಿಷ್, ಜಪಾನಿ, ಡಚ್ ಮತ್ತು ಇತರೆ ಭಾಷೆಗಳಲ್ಲಿ ಅಂಗೀಕರಿಸಲಾಯಿತು. 1837ರಲ್ಲಿ ಟೇಲರ್ ರೂಪಿಸಿದ ಪದ್ಧತಿಯ ಆಧಾರದ ಮೇಲೆ ಸರ್ ಐಸಾಕ್ ಪಿಟ್‌ಮನ್‌ ಶೀಘ್ರಲಿಪಿಯ ಆಧುನಿಕ ಪದ್ಧತಿಯನ್ನು ಅಭಿವೃದ್ಧಿಪಡಿಸಿದರು.

ಐರ್ಲೆಂಡಿನ ಜಾನ್‌ಗ್ರೆಗ್, 1888ರಲ್ಲಿ ಮತ್ತೊಂದು ಬಗೆಯ ಶೀಘ್ರಲಿಪಿ ಪದ್ಧತಿಯನ್ನು ಕಂಡುಹಿಡಿದರು. ಈ ಪದ್ಧತಿ ವೃತ್ತಗಳು, ಕೊಕ್ಕೆಗಳು ಮತ್ತು ವಂಕಿಗಳ ಆಧಾರದಿಂದ ಈ ಲಿಪಿ ತಯಾರಾಗಿತ್ತು. 1893ರಲ್ಲಿ ಈ ಪದ್ಧತಿಯನ್ನು ಅಮೆರಿಕದಲ್ಲಿ ಬೆಳಕಿಗೆ ತರಲಾಯಿತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು