ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ರೈಲಲ್ಲ, ಸರ್ಕಾರಿ ಶಾಲೆ!

Last Updated 27 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಕೆಂಪು, ಹಳದಿಬಣ್ಣದಿಂದ ಕೂಡಿದ ಎಂಜಿನ್‌, ಹಿಂದೆ ನೀಲಿಬಣ್ಣದ ಬೋಗಿಗಳು. ಒಳಗೆ ಪ್ರವೇಶ ಮಾಡಲು ಬಾಗಿಲು, ಇನ್ನೊಂದೆಡೆ ಕಿಟಕಿಗಳು... ಅರೇರೇ ಇದೇನು ರೈಲುಗಾಡಿಯ ಬಗ್ಗೆ ಹೇಳ್ತಾ ಇದೀನಿ ಅಂದುಕೊಂಡ್ರಾ? ಖಂಡಿತ ಅಲ್ಲ, ಇದು ಸರ್ಕಾರಿ ಪ್ರಾಥಮಿಕ ಶಾಲೆಯ ಕಥೆ.

ರೈಲಿನಂತೆ ಅತ್ಯಾಕರ್ಷವಾಗಿ, ಸುಂದರವಾಗಿ, ಬಣ್ಣ ಬಣ್ಣದಿಂದ ಕೂಡಿರುವ ಈ ಶಾಲೆಯ ಹೆಸರು‘ಮರಿಗೆಮ್ಮ ದಿಬ್ಬಿ ತಾಂಡಾ ಎಕ್ಸ್‌ಪ್ರೆಸ್‌’.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮರಿಗೆಮ್ಮ ದಿಬ್ಬಿ ತಾಂಡಾದ ಸರ್ಕಾರಿ ಶಾಲೆಯನ್ನು ಶಿಕ್ಷಕರು ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಣದ ಹಿತೈಷಿಗಳು ಸೇರಿ ರೈಲುಬಂಡಿ–ಶಾಲೆಯನ್ನಾಗಿ ರೂಪಿಸಿದ್ದಾರೆ. ಆ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಿ, ಶಾಲೆಯ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿದ ಶಿಕ್ಷಕರ ಸೃಜನಶೀಲತೆ ಮತ್ತು ಕಲಿಕೆಯ ಬದ್ಧತೆಯನ್ನು ನಿಜಕ್ಕೂ ಮೆಚ್ಚಲೇಬೇಕು.

‘ರೈಲುಬೋಗಿಯಂತಿರುವ ಕೊಠಡಿ
ಯೊಳಗೆ ಕುಳಿತಾಗ ಮಗುವಿನ ಮನಸ್ಸು ಉಲ್ಲಾಸಗೊಳ್ಳುತ್ತದೆ. ರೈಲಿನಲ್ಲಿ ಕುಳಿತು ಪಾಠ ಕೇಳುವ ಅನುಭವ ಮಕ್ಕಳಿಗೆ ಸಿಗುತ್ತದೆ. ಇದರಿಂದ ಮಕ್ಕಳು ಖುಷಿಯಾಗಿ ಶಾಲೆಗೆ ಬರುತ್ತಾರೆ’ ಎಂಬುದು ಶಿಕ್ಷಕರ ಅಭಿಪ್ರಾಯವಾಗಿತ್ತು. ಅವರ ಅಭಿಪ್ರಾಯವನ್ನು ಮಕ್ಕಳು ಸುಳ್ಳು ಮಾಡಲಿಲ್ಲ.ಶಾಲೆಗೆ ಬರಲು ನಿರಾಸಕ್ತಿ ತೋರುತ್ತಿದ್ದ ಮಕ್ಕಳೆಲ್ಲ ಈಗ ಶಾಲೆಯ ಕಡೆ ಮುಖ ಮಾಡುತ್ತಿದ್ದಾರೆ. ರೈಲು ಎಂದರೆ ಹೇಗಿರುತ್ತದೆ ಎಂಬುದನ್ನು ನೋಡದ ಈ ತಾಂಡಾದ ಮಕ್ಕಳು ತುಂಬಾ ಖುಷಿಯಾಗಿ ಶಾಲೆಗೆ ಬರುತ್ತಿದ್ದಾರೆ. ಅವರಲ್ಲಿ ಲವಲವಿಕೆ, ಕಲಿಯುವ ಆಸಕ್ತಿ ಇಮ್ಮಡಿಗೊಂಡಿದೆ.

‘ಶಾಲೆಯನ್ನು ಟ್ರೈನ್ ಮಾದರಿಯಲ್ಲಿ ಬದಲಾಯಿಸಿದ್ದು ನಮ್ಮನ್ನು ಉತ್ಸಾಹಿಗಳನ್ನಾಗಿ ಮಾಡಿದೆ. ನಮಗೆ ಕಲಿಯುವ ಆಸಕ್ತಿ ಈಗ ಹೆಚ್ಚಾಗಿದೆ. ಕಾಂಪೌಂಡ್‌ ಗೋಡೆಗಳ ಮೇಲೆ ವಿವಿಧ ಬಗೆಯ ಪ್ರಾಣಿ, ಪಕ್ಷಿಗಳ, ಕೀಟಗಳ, ವಾಹನಗಳ ಚಿತ್ರಗಳನ್ನು ಬಿಡಿಸಿ (ಚಿತ್ರಿಸಿ) ವಿದ್ಯಾರ್ಥಿಗಳಿಗೆ ಅವುಗಳ ಬಗ್ಗೆ ತಿಳಿವಳಿಕೆ ಕೊಡುತ್ತಿದ್ದಾರೆ’ ಎನ್ನುತ್ತಾರೆ, ವಿದ್ಯಾರ್ಥಿಗಳಾದ ಸಾವಿತ್ರಿ ಮತ್ತು ದೇವರಾಜ್ ಚವ್ಹಾಣ.

ತಿಂಗಳು ಬಂತೆಂದರೆ ಸಾಕು ‘ಸಂಬಳ ಆಯ್ತಲ್ವಾ’ – ಎನ್ನುವ ಕೆಲವು ಶಿಕ್ಷಕರ ನಡುವೆ ಈ ಶಾಲೆಯ ಶಿಕ್ಷಕವೃಂದದ ವಿದ್ಯಾರ್ಥಿಗಳ ಬಗ್ಗೆ ಇರುವ ಕಳಕಳಿ ಪ್ರಶಂಸಾರ್ಹ. ದಿನೇ ದಿನೇ ಹಾಜರಾತಿ ಕಡಿಮೆಯಾಗುತ್ತಿದೆ. ಅದನ್ನು ತಡೆಯಲು ಬೇರೆ ದಾರಿ ಏನು – ಎಂದು ಯೋಚಿಸುತ್ತಿದ್ದಾಗ ಅವರಿಗೆ ಹೊಳೆದಿದ್ದು ಈ ಉಪಾಯ. ಶಿಕ್ಷಣ ಇಲಾಖೆ ಹಣ ನೀಡುವುದಿಲ್ಲ ಎಂಬುದನ್ನು ಅರಿತು ತಮ್ಮ ವೇತನದಲ್ಲಿಯೇ, ಗ್ರಾಮಸ್ಥರ ಸಹಕಾರದೊಂದಿಗೆ ಈ ಅತ್ಯಾಕರ್ಷಕ ಶಾಲೆಯನ್ನು ನಿರ್ಮಿಸಿದ್ದಾರೆ.

ಅಂದು ಶಾಲೆಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ 150. ಆದರೆ ದಿನ ಕಳೆದಂತೆ ಹಾಜರಾತಿ 70, 65ಕ್ಕೆ ಕುಸಿಯುತ್ತಾ ಹೋಯಿತು. ಈಗ ನಿತ್ಯದ ಹಾಜರಾತಿ 145ಕ್ಕೆ ಬಂದಿದೆ.

ಹೀಗಿದ್ದಾಗಲೂ ಈ ಶಾಲೆ ಸಮಸ್ಯೆಗಳನ್ನು ಹೊದ್ದು ಮಲಗಿದೆ. 1ರಿಂದ 8ನೇ ತರಗತಿಯವರೆಗೆ ಇಲ್ಲಿ ಶಿಕ್ಷಣ ಸಿಗುತ್ತಿದೆ. ಕೇವಲ‌ ನಾಲ್ಕು ಜನ ಕಾಯಂ ಶಿಕ್ಷಕರಿದ್ದಾರೆ. ಮೂರು ಜನ ಅತಿಥಿ ಶಿಕ್ಷಕರಿದ್ದಾರೆ. ಹಾಜರಾತಿ ಹೆಚ್ಚಿಸಿದ ಈ ಶಾಲೆಯ ಬಗ್ಗೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹೆಚ್ಚಿನ‌ ಆದ್ಯತೆ ನೀಡಿ ಈ ಶಾಲೆಯನ್ನು ಇನ್ನಷ್ಟು ಬಲಪಡಿಸಬೇಕಿದೆ.

ಶಾಲೆಗೆ ಈ ರೀತಿಯ ಹೊಸ ಪ್ರಯೋಗ ಮಾಡಿದ್ದರಿಂದ ದಿನ‌ನಿತ್ಯ ಓಡಾಡುವ ಜನ ಶಾಲೆಯ ಮುಂದೆ ನಿಂತು ಮೊಬೈಲ್‌ಗಳಲ್ಲಿ ಸೆಲ್ಪೀ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಈಗ ಈ ಪ್ರಯೋಗ ಪಕ್ಕದ ಶಾಲೆಗಳಿ ವಿಸ್ತರಿಸಿದೆ. ಮೂರು ಶಾಲೆಗಳು ಇದೇ ಮಾದರಿಯಲ್ಲಿ ತಯಾರಾಗುತ್ತಿದ್ದರೆ, ಇನ್ನೊಂದು ಶಾಲೆ ಬಸ್ ಮಾದರಿಯಲ್ಲಿ ಸಿದ್ದಗೊಳ್ಳುತ್ತಿದೆ. ಶಿಕ್ಷಣ ಉಳಿಸಲು ಬದ್ಧತೆ ಮೆರೆದ ಮರಿಗೆಮ್ಮ ದಿಡ್ಡಿ ತಾಂಡಾದ ಶಿಕ್ಷಕರಿಗೆ, ಗ್ರಾಮಸ್ಥರಿಗೆ ಅಭಿನಂದನೆಗಳು ಸಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT