ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿಶಾಸ್ತ್ರ: ಕುಕೂ ಹಕ್ಕಿಗಳ ಬಾಡಿಗೆ ಬಾಣಂತನ

Last Updated 8 ಮೇ 2022, 19:30 IST
ಅಕ್ಷರ ಗಾತ್ರ

ಕೃಷ್ಣನ ನಿಜವಾದ ತಾಯಿ ದೇವಕಿಯಾದರೂ ಅವನ ಪಾಲನೆ-ಪೋಷಣೆ ಮಾಡಿದ್ದು ಯಶೋದೆಯೆಂದು ನಮ್ಮ ಪುರಾಣಗಳಲ್ಲಿರುವ ಸಂಗತಿ. ಆದರೆ ಕೋಗಿಲೆ ಜಾತಿಗೆ ಸೇರಿದ ಹಕ್ಕಿಗಳು ಈ ಕ್ರಮವನ್ನೇ ಪಾಲಿಸುತ್ತವೆ. ಈ ರೀತಿಯ ಬಾಡಿಗೆ ಬಾಣಂತನಕ್ಕೆ ಬೇಕಾದ ಜೀವನಶೈಲಿಯ ಹೊಂದಾಣಿಕೆ ಮಾಡಿಕೊಂಡಿರುವುದು ಜೀವಿಗಳ ವಿಕಾಸದಲ್ಲಿ ಆಶ್ಚರ್ಯಕರವಾದ ವಿಚಾರ.

ಬಹುತೇಕ ಹಕ್ಕಿಗಳು ತಮ್ಮ ಕೌಶಲದಿಂದ ಗೂಡು ಕಟ್ಟಿ, ಮೊಟ್ಟೆಗಳನ್ನಿಟ್ಟು, ಮರಿಗಳನ್ನು ಸ್ವತಂತ್ರವಾಗುವ ತನಕ ಪೋಷಣೆ ಮಾಡುತ್ತವೆ. ಆದರೆ ಕುಕಿಲಿಡೇ ಕುಟುಂಬಕ್ಕೆ ಸೇರಿದ ಕುಕೂ ಜಾತಿಯ ಹಕ್ಕಿಗಳು ಇದಾವುದರ ತಾಪತ್ರಯಗಳೇ ಬೇಡವೆಂದು ಸಂತಾನಾಭಿವೃದ್ಧಿಗೋಸ್ಕರ ಪರಾವಲಂಬಿಗಳಾಗುವ (Brood parasitism) ಉಪಾಯವನ್ನು ಬೆಳೆಸಿಕೊಂಡಿವೆ. ಮೂಲತಃ ಗೂಡು ಕಟ್ಟಲು ಬಾರದ ಈ ಹಕ್ಕಿಗಳು ಮರಿಗಳ ಪೋಷಣೆಯನ್ನು ಮಾಡಲಾರವು. ಹಾಗಾಗಿ ತನ್ನ ಸಂತತಿಯ ಉಳಿವಿಗಾಗಿ ಇವು ತನ್ನ ಮರಿಗಳಿಗೆ ಬೇರೆ ಬೇರೆ ಹಕ್ಕಿಗಳನ್ನು ಬಾಡಿಗೆ ತಂದೆ-ತಾಯಿಯರನ್ನಾಗಿ ಪಡೆಯುತ್ತವೆ. ಇಂತಹ ಹಕ್ಕಿಗಳೆಂದರೆ ಕೋಗಿಲೆ, ಕೋಗಿಲೆಚಾಣ, ಕುಕೂಟ ಮುಂತಾದವುಗಳು. ಇವು ಬೇರೆಲ್ಲಾ ವಿಷಯಗಳಲ್ಲಿ ಇತರೆ ಹಕ್ಕಿಗಳನ್ನು ಹೋಲುತ್ತಿದ್ದರೂ ಸಂತಾನಾಭಿವೃದ್ಧಿ ವಿಷಯದಲ್ಲಿ ಮಾತ್ರ ಸೋಮಾರಿಗಳು. ಆದರೆ ಸಂತತಿಯ ಉಳಿವಿಗಾಗಿ ಜಾಣತನ ತೋರುತ್ತವೆ. ಕಾಗೆ, ಉಲಿಯಕ್ಕಿ, ಹರಟೆಮಲ್ಲ ಮುಂತಾದ ಹಕ್ಕಿಗಳನ್ನು ಈ ಕುಕೂ ಹಕ್ಕಿಗಳು ಬಾಡಿಗೆ ತಾಯಿಯರನ್ನಾಗಿ ಮಾಡಿಕೊಳ್ಳುತ್ತವೆ. ಬಾಡಿಗೆ ತಾಯಿಯಾಗುವ ಹಕ್ಕಿ ಪ್ರಭೇದದ ಸಂತಾನೋತ್ಪತ್ತಿ ಕಾಲವನ್ನು ಸಹ ಈ ಕುಕೂ ಜಾತಿಯ ಹಕ್ಕಿಗಳು ಅನುಸರಿಸುತ್ತವೆ.

ಮಿಲನದ ನಂತರ ಮೊಟ್ಟೆ ಇಡುವ ಮೊದಲು ಕುಕೂ ಹಕ್ಕಿಗಳು ತನ್ನ ಮರಿಗಳಿಗೆ ಬೇಕಾದ ಅತಿಥೇಯ ಹಕ್ಕಿಗಳ ಗೂಡುಗಳನ್ನು ಹುಡುಕುತ್ತವೆ. ಕುಕೂ ತಂದೆ ಹಕ್ಕಿಯು ಅತಿಥೇಯ ಹಕ್ಕಿಗಳ ಗೂಡಿನತ್ತ ಹೋಗಿ ಅಲ್ಲಿರುವ ಮೊಟ್ಟೆಗಳಿನ್ನಿಟ್ಟು ಕಾವು ಕೊಡುವಂತಹ ಹಕ್ಕಿಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಆಗ ಗೂಡಿನಲ್ಲಿರುವ ಹಕ್ಕಿಯು ಈ ಗಂಡು ಹಕ್ಕಿಯನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ಸಮಯವನ್ನೇ ಕಾಯುತ್ತಿದ್ದ ಹೆಣ್ಣು ಕುಕೂ ಹಕ್ಕಿಯೂ ತನ್ನದಲ್ಲದ ಗೂಡಿನಲ್ಲಿ ಮೊಟ್ಟೆಯನ್ನಿಡುತ್ತದೆ. ಇದೇ ರೀತಿ ವಿವಿಧ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟು ಬಿಟ್ಟರೆ ತನ್ನ ತಾಯ್ತನದ ಕೆಲಸ ಮುಗಿಯಿತು.

ಇವುಗಳ ಮೊಟ್ಟೆಗಳು ಗಾತ್ರ ಮತ್ತು ಬಣ್ಣದಲ್ಲಿ ತಾನು ಆಯ್ಕೆ ಮಾಡಿಕೊಂಡ ಅತಿಥೇಯ ಹಕ್ಕಿಯ ಮೊಟ್ಟೆಯಂತೆ ಇರುವುದರಿಂದ ಅವು ಗೂಡಿಗೆ ಹಿಂದಿರುಗಿದಾಗ ತನ್ನ ಗೂಡಿನಲ್ಲಿರುವ ಬೇರೆ ಹಕ್ಕಿಯ ಮೊಟ್ಟೆಯನ್ನು ಗುರುತಿಸದೇ ಕಾವು ಕೊಡಲಾರಂಭಿಸುತ್ತವೆ. ಅತಿಥೇಯ ಹಕ್ಕಿಯ ಮೊಟ್ಟೆಗಳಿಂದ ಮರಿಗಳು ಹೊರಬರುವ ಒಂದೆರಡು ದಿನ ಮೊದಲೇ ಕುಕೂ ಹಕ್ಕಿಗಳ ಮರಿಗಳು ಹೊರಬರುತ್ತವೆ. ಕುಕೂ ಮರಿಗಳು ತಮ್ಮ ಪ್ರಕೃತಿದತ್ತವಾದ ಸ್ವಭಾವದಿಂದ ತನ್ನ ಸುತ್ತ ಇರುವ ಅತಿಥೇಯ ಹಕ್ಕಿಗಳ ಮೊಟ್ಟೆ/ಮರಿಗಳನ್ನು ಗೂಡಿನಿಂದ ಹೊರದೂಡುತ್ತವೆ. ಅತಿಥೇಯ ತಂದೆ-ತಾಯಿಯರು ತರುವ ಆಹಾರವನ್ನು ಮೊದಲು ಪಡೆದು ಶೀಘ್ರದಲ್ಲಿ ಬೆಳೆಯುತ್ತಾ ಹೋಗುತ್ತವೆ. ಮರಿಗಳನ್ನು ತನ್ನದು ಮತ್ತು ಪರರದ್ದು ಎಂಬುದನ್ನು ಪರಿಗಣಿಸದೆ ಪೋಷಕರು ಆಹಾರವನ್ನು ತಂದು ಎಲ್ಲಾ ಮರಿಗಳನ್ನು ಪೋಷಣೆ ಮಾಡುತ್ತವೆ.

ಮರಿಗಳು ಬೆಳೆದಂತೆ ಮರಿ ಕುಕೂ ಹಕ್ಕಿಯೂ ಬಾಡಿಗೆ ತಾಯಿ-ತಂದೆಯರಿಗಿಂತ ದೊಡ್ಡದಾಗಿ ಬೆಳೆದರೂ ಇವುಗಳ ಪೋಷಣೆ ನಿಲ್ಲುವುದಿಲ್ಲ. ಒಂದು ಸಾರಿ ಸ್ವತಂತ್ರವಾಗಿ ಜೀವಿಸುವುದನ್ನು ಕಲಿತ ಕುಕೂ ಹಕ್ಕಿಗಳು ಬಾಡಿಗೆ ತಂದೆ-ತಾಯಿಯರನ್ನು ಮರೆತು ಸ್ವತಃ ಜೀವನ ನಿರ್ವಹಣೆ ಮಾಡುತ್ತವೆ. ಸೂಕ್ತ ಕಾಲದಲ್ಲಿ ಸಂಗಾತಿಯನ್ನು ಕೂಡಿ ತನ್ನ ವಂಶಾವಳಿಗಳಲ್ಲಿ ಬಂದಿರುವ ಗುಣದಂತೆ ಸಂತಾನಾಭಿವೃದ್ಧಿಗೋಸ್ಕರ ಪರಾವಲಂಬಿ ಜೀವನ ನಡೆಸುತ್ತವೆ.

ಈ ಎಲ್ಲಾ ವಿಷಯಗಳನ್ನು ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆಗೆ ಸೇರಿದ ವಿಜ್ಞಾನಿಗಳು ನಿಸ್ತಂತು ತಂತ್ರಜ್ಞಾನ ಬಳಸಿ ಸಣ್ಣ ಕ್ಯಾಮೆರಾಗಳನ್ನು ಅತಿಥೇಯ ಹಕ್ಕಿಗಳ ಗೂಡಿನಲ್ಲಿರಿಸಿ ಅಧ್ಯಯನ ಮಾಡಿದ್ದಾರೆ. ಜೀವಿಗಳ ವಿಕಾಸದಲ್ಲಿ ಅತಿಥಿ ಮತ್ತು ಅತಿಥೇಯ ಹಕ್ಕಿಗಳು ತಮ್ಮ ಪ್ರಬೇಧಗಳನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿವೆ. ಕೆಲವು ಅತಿಥೇಯ ಹಕ್ಕಿಗಳ ಪ್ರಬೇಧಗಳು ಈ ರೀತಿಯ ಪರಾವಲಂಬಿ ಹಕ್ಕಿಗಳಿಂದ ತಪ್ಪಿಸಿಕೊಳ್ಳಲು ತಮ್ಮ ಸಂತಾನೋತ್ಪತ್ತಿ ಕಾಲವನ್ನು ಮತ್ತು ಮೊಟ್ಟೆಗಳ ಆಕಾರ, ಗಾತ್ರ, ಬಣ್ಣಗಳನ್ನು ಮಾರ್ಪಾಡು ಮಾಡಲು ಆರಂಭಿಸಿವೆ. ಅದರೂ ಕುಕೂ ಹಕ್ಕಿಗಳ ಸಂತಾನ ಯಾವುದೇ ಶ್ರಮವಿಲ್ಲದೆ ಪರವಾಲಂಬಿಗಳಾಗಿ ಬೆಳೆಯುತ್ತವೆ. ಪ್ರಕೃತಿಯ ಮೂಸೆಯಲ್ಲಿ ಅರಳಿದ ಸೋಜಿಗವಲ್ಲವೇ ಇದು?

(ಲೇಖಕರು: ಪ್ರಾಧ್ಯಾಪಕರು, ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT