ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೇದ ತೊರೆದ ಯು.ಜಿ.ಸಿ.

Last Updated 16 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಬಹಳ ದಿನಗಳ ಹಿಂದೆಯೇ ದೂರಶಿಕ್ಷಣ ಹಾಗೂ ರೆಗ್ಯೂಲರ್ ಶಿಕ್ಷಣ ಪದ್ಧತಿಯ ನಡುವೆ ತರತಮವಿಲ್ಲ, ದೂರಶಿಕ್ಷಣಕ್ಕೂ ಕಾನೂನಿನ ಮಾನ್ಯತೆ ಇದೆ – ಎಂದು ದೇಶದ ಉನ್ನತ ಶಿಕ್ಷಣ ನಿಯಂತ್ರಣ ಸಂಸ್ಥೆ ನಿಗದಿಮಾಡಿತ್ತು. ಅದರಂತೆಯೇ ದೂರಶಿಕ್ಷಣದ ಮೂಲಕ ಪದವಿ ಪಡೆದ ವಿದ್ಯಾರ್ಥಿಗಳು, ಸಾಮಾನ್ಯ ವಿದ್ಯಾರ್ಥಿಗಳೊಡನೆ ಶಿಕ್ಷಣ, ಉದ್ಯೋಗ – ಸೇರಿದಂತೆ ಎಲ್ಲ ಕಡೆಯೂ ಸ್ಪರ್ಧೆ ಮಾಡುತ್ತಿದ್ದರು. ಇದು ವಾಸ್ತವವೇ ಆಗಿದ್ದರೂ, ದೂರಶಿಕ್ಷಣದ ವಿದ್ಯಾಕ್ರಮವನ್ನು ಸಮಾಜವು ಅಳುಕಿನ ಕಣ್ಣಿನಡಿಯಲ್ಲಿಯೇ ನೋಡಲಾಗುತ್ತಿತ್ತು. ಮೆರಿಟ್ ಏನಿದ್ದರೂ ರೆಗ್ಯೂಲರ್ ಶಿಕ್ಷಣಕ್ಕೆ ಮಾತ್ರ ಎಂಬ ಮನೋಧರ್ಮವೇ ಹೆಚ್ಚಾಗಿದ್ದುದು ಸುಳ್ಳಲ್ಲ. ದೂರಶಿಕ್ಷಣ ವಿದ್ಯಾರ್ಥಿಗಳು ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ ಮೇಲೂ, ಉನ್ನತ ಹುದ್ದೆಗಳನ್ನು ಪಡೆದಾಗಿಯೂ, ಈ ದೂರಶಿಕ್ಷಣದ ಮೇಲೆ ಇದ್ದ ‘ಕ್ಷೀಣಮಾಪನ’ ಮುಂದುವರೆದಿತ್ತು.

ಭೇದ ತೊರೆದ ಯು.ಜಿ.ಸಿ.

ಪ್ರಸ್ತುತ ಯು.ಜಿ.ಸಿ.ಯ ದಿಟ್ಟ ಹೆಜ್ಜೆಯು ದೂರಶಿಕ್ಷಣ ವಿದ್ಯಾರ್ಥಿಗಳು ದೀರ್ಘ ನಿಟ್ಟುಸಿರು ಬಿಡುವಂತೆ ಮಾಡಿದೆ. ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಮೊದಲಬಾರಿ ದೂರಶಿಕ್ಷಣ ಕ್ರಮಕ್ಕೊಂದು ಅಧೀಕೃತ ನಿಯಮಾವಳಿ ತರುವ ಮೂಲಕ, ದೇಶೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯೆಡೆಗೆ ಮುಖಮಾಡಿದೆ. ಇನ್ನು ಮುಂದೆ ಎಲ್ಲ ದೂರಶಿಕ್ಷಣ ಸಂಸ್ಥೆಗಳು ಕೂಡ ಯು.ಜಿ.ಸಿ. (ಓ.ಡಿ.ಎಲ್ - 2017 ರೆಗ್ಯೂಲೇಷನ್ಸ್) ನಿಯಮಾವಳಿಗಳ ಅನುಸಾರವಾಗಿಯೇ ಶಿಕ್ಷಣ ನೀಡಬೇಕಾಗಿದೆ. ರೆಗ್ಯೂಲರ್ ಶಿಕ್ಷಣ ಕ್ರಮಕ್ಕೆ ಸರಿಸಮಾನದ ನಿಯಮಗಳೇ ಅವಕ್ಕೂ ಅನ್ವಯವಾಗಲಿವೆ. ಈ ಮಾದರಿಯ ಶಿಕ್ಷಣವನ್ನು ಕಡ್ಡಾಯ ಮಾಡುವ ಮೂಲಕ ಯು.ಜಿ.ಸಿ.ಯು ರೆಗ್ಯೂಲರ್ ಮತ್ತು ದೂರಶಿಕ್ಷಣದ ನಡುವಿನ ತರತಮವನ್ನುಸರಿಸಿ, ಈ ಎರಡೂ ಶಿಕ್ಷಣ ಕ್ರಮಗಳ ನಡುವೆ ಸಾಮ್ಯತೆಯನ್ನು ರೂಪಿಸಿದೆ.

ಏನಿದೂ ಓ.ಡಿ.ಎಲ್. 2017 ನಿಯಮಾವಳಿ

ಯು.ಜಿ.ಸಿ.ಯು ಸೆಕ್ಷನ್ 26(1),2017ರನ್ವಯ ದೂರಶಿಕ್ಷಣಕ್ಕೆ ಏಕರೂಪದ ನಿಯಮಗಳನ್ನು ಸೃಜಿಸಿದೆ. ಇದರ ಅನುಸಾರ ದೇಶದ ಎಲ್ಲ ದೂರಶಿಕ್ಷಣ ಸಂಸ್ಥೆಗಳು (ಮಾನ್ಯತೆ ಪಡೆದ) ಪ್ರವೇಶಾತಿ, ಸಂಪರ್ಕ ಕಾರ್ಯಕ್ರಮಗಳು, ಪರೀಕ್ಷೆಗಳನ್ನು ನಿಗದಿತ ದಿನಾಂಕಗಳಲ್ಲಿಯೇ ನಿರ್ವಹಿಸತಕ್ಕದ್ದು. ಯಾವುದೇ ವೇಳಾಪಟ್ಟಿಯನ್ನು ಯು.ಜಿ.ಸಿ.ಯ ಪೂರ್ವಾನುಮತಿ ಪಡೆಯದೇ ಸ್ವಯಂ ಮಾರ್ಪಾಟು ಮಾಡಿಕೊಳ್ಳುವಂತಿಲ್ಲ, ಜೊತೆಗೆ ಕಡ್ಡಾಯವಾಗಿ ಹೊಸ ಮಾದರಿಯ ಶೈಕ್ಷಣಿಕ ಕ್ರಮಗಳನ್ನು ಅನುಸರಿಸಿಯೇ ಪ್ರವೇಶವನ್ನು ನೀಡಬೇಕಾಗಿರುತ್ತದೆ.

ತಾತ್ಕಾಲಿಕ ಶೈಕ್ಷಣಿಕ ಯೋಜನೆ ವಿಶ್ವವಿದ್ಯಾನಿಲಯದ ವಿವಿಧ ಶಿಕ್ಷಣ ಕ್ರಮಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ಶೈಕ್ಷಣಿಕ ಯೋಜನೆಯನ್ನು ಈ ಕೆಳಕಂಡಂತೆ ನೀಡಿದೆ. (ಯು.ಜಿ.ಸಿ. ಏಕರೂಪ ನಿರ್ದೇಶನ)

ಕ್ರ. ಸಂ. ಶೈಕ್ಷಣಿಕ ಚಟುವಟಿಕೆಗಳು ವಾರ್ಷಿಕ ಶಿಕ್ಷಣ ಕ್ರಮ ಬಿ.ಎ./ಬಿ.ಕಾಂ./ಬಿ.ಲಿಬ್.ಐ.ಎಸ್ಸಿ. ವಾರ್ಷಿಕ ಶಿಕ್ಷಣ ಕ್ರಮ ಎಂ.ಎ.,/ಎಂ.ಕಾಂ./ ಎಂ.ಲಿಬ್.ಐ.ಎಸ್ಸಿ.

1. ಪ್ರವೇಶ ಪ್ರಕಟಣೆ ಮತ್ತು ವಿವರಣಾ ಪುಸ್ತಕ ವಿತರಣೆ ಆಗಸ್ಟ್ 4ನೇ ವಾರ 2018

2. ಪ್ರವೇಶಾತಿ ಆಗಸ್ಟ್ 4ನೇ ವಾರ 2018

3. ಸ್ವಯಂ ಕಲಿಕಾ ಸಾಮಗ್ರಿ ವಿತರಣೆ ಪ್ರವೇಶಾತಿ ಸಮಯದಲ್ಲಿ

4. ಸಂಪರ್ಕ ಕಾರ್ಯಕ್ರಮ / ಸಮಾಲೋಚನೆ ಜನವರಿ-2019 ರಿಂದ ಮೇ-2019

5. ಪರೀಕ್ಷಾ ಪ್ರಕಟಣೆ ಮೇ-2019

6. ನಿಬಂಧಗಳ ಸಲ್ಲಿಕೆ ಮಾರ್ಚ್-2019 ರಿಂದ ಏಪ್ರಿಲ್-2019

7. ಪರೀಕ್ಷೆ ಜೂನ್/ಜುಲೈ 2019

8 ಪರೀಕ್ಷಾ ಫಲಿತಾಂಶ ಪ್ರಕಟಣೆ ಜುಲೈ 2019

ರೆಗ್ಯೂಲರ್ ಶಿಕ್ಷಣ ಕ್ರಮದ ಸಾಮ್ಯತೆ

ಓ.ಡಿ.ಎಲ್.-2017 ನಿಯಮಾವಳಿಗಳನ್ವಯ ರೆಗ್ಯೂಲರ್ ಮಾದರಿಯ ನಿಯಮಗಳನ್ನು ದೂರಶಿಕ್ಷಣ ವ್ಯವಸ್ಥೆಯು ಅನುಸರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿಂದೆ ಇದ್ದಂತೆ ಪ್ರತಿ ದೂರಶಿಕ್ಷಣ ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತ್ಯೇಕತಾ ನಿಯಮಗಳನ್ನು ರೂಪಿಸಿಕೊಳ್ಳುವಂತಿಲ್ಲ. ಬದಲಾಗಿ ದೇಶದ ಎಲ್ಲಾ ದೂರಶಿಕ್ಷಣ ಸಂಸ್ಥೆಗಳಿಗೆ ಏಕನಿಯಮ ಮತ್ತು ಸಂಹಿತೆ ಅನ್ವಯವಾಗುತ್ತದೆ. ಪ್ರಾದೇಶಿಕವಾಗಿ ಬೇರೆಬೇರೆ ರಾಜ್ಯಗಳು ಪ್ರತ್ಯೇಕವಾಗಿ ಪ್ರವೇಶಾತಿ ಮಾಡುವ ಅವಕಾಶಕ್ಕೆ ಯು.ಜಿ.ಸಿ. ನಿರ್ಬಂಧ ಹೇರಿದೆ. ಪ್ರವೇಶಾತಿ, ಪರೀಕ್ಷೆ, ಬೋಧನಾವಧಿ, ಪ್ರಾಕ್ಟಿಕಲ್ ಅವಧಿಗಳನ್ನು ಯು.ಜಿ.ಸಿ. ನಿರ್ಧರಿಸಿ ಆದೇಶ ಹೊರಡಿಸಿದೆ.

ನವನಿಯಮಗಳು

* ಪಿ.ಯು.ಸಿ. ಅಥವಾ 10+2 ಕಡ್ಡಾಯ.

* ವಯಸ್ಸಿನ ಆಧಾರದ ಶಿಕ್ಷಣಕ್ರಮ ರದ್ದು.

* ವಿದ್ಯಾರ್ಥಿಗಳ ನಡತೆ ಪತ್ರದ ಮುಚ್ಚಳಿಕೆ ಸಲ್ಲಿಸುವುದು ಕಡ್ಡಾಯ.

* ಇಡೀ ದೇಶಕ್ಕೆ ಒಂದೇ ವೇಳಾಪಟ್ಟಿ ನಿಗದಿ.

* ಎನ್.ಎ.ಡಿ. (NAD) ಮಾದರಿಯಲ್ಲೇ ಪ್ರವೇಶಾತಿ ನಿಗದಿ.

* ಮೂರು ಹಂತದ ಶೈಕ್ಷಣಿಕ ವ್ಯವಸ್ಥೆ ಕಡ್ಡಾಯ (ಕೇಂದ್ರ ಸ್ಥಾನ, ಪ್ರಾದೇಶಿಕ ಕೇಂದ್ರ, ಕಲಿಕಾ ಸಹಾಯಾರ್ಥಿ ಕೇಂದ್ರ)

* ಶಿಕ್ಷಕರ ಮೌಲ್ಯಮಾಪನ ಕಡ್ಡಾಯ (ವಿದ್ಯಾರ್ಥಿಗಳಿಂದ ಪ್ರಾದೇಶಿಕ ಕೇಂದ್ರಗಳ ಮೂಲಕ)

* ಅಧ್ಯಯನ ಸಾಮಗ್ರಿಗಳ ಮೌಲ್ಯಮಾಪನ ಕಡ್ಡಾಯ.

* ಕಲಿಕಾ ಸಹಾಯಾರ್ಥಿ ಕೇಂದ್ರಗಳ ಬದಲು ಪ್ರಾದೇಶಿಕ ಕೇಂದ್ರಗಳಿಗೆ ಅಂತರಿಕ ನಿಬಂಧನೆಗಳನ್ನು ಸಲ್ಲಿಸುವುದು ಕಡ್ಡಾಯ (ಪಾರದರ್ಶಕತೆ ಕಾಯ್ದುಕೊಳ್ಳಲು)

* ಸೆಕ್ಷನ್26(1) ಓ.ಡಿ.ಎಲ್.ನಿಯಮಾವಳಿಗಳ ಅನುಷ್ಠಾನ ಕಡ್ಡಾಯ.

* ಲ್ಯಾಟರಲ್ ಎಂಟ್ರಿ (ಪಾರ್ಶ್ವ ಪ್ರವೇಶ) ರದ್ದತಿ.

* ವಿದ್ಯಾರ್ಥಿಗಳು ಸುಳ್ಳು ಜಾತಿ, ವಯಸ್ಸು ಇತರೆ ಮಾಹಿತಿಗಳನ್ನು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವ ಕಾನೂನು ಅಧಿಕಾರ ಸೃಷ್ಟಿ.

* ಶಿಕ್ಷಣ ಕ್ರಮಗಳ ಶ್ರೇಯಾಂಕ ನೀಡಿಕೆ ಪದ್ದತಿ ಕಡ್ಡಾಯ. (ನಾಲ್ಕು ಶ್ರೇಯಾಂಕದ ಪತ್ರಿಕೆ, 120 ಗಂಟೆಗಳ ಹಾಗೂ ಆರು ಶ್ರೇಯಾಂಕದ ಪತ್ರಿಕೆ 180 ಗಂಟೆಗಳ ಅಧ್ಯಯನ ಅವಧಿ ಹೊಂದುವುದು ಕಡ್ಡಾಯ)

* ಪ್ರವೇಶಾತಿಗೆ 10+2 ನಿಗದಿ (ಶಿಶುವಿಹಾರ ಶಿಕ್ಷಣ ಕ್ರಮ ಹೊರತುಪಡಿಸಿ)

* ಎಲ್ಲಾ ಶಿಕ್ಷಣ ಕ್ರಮದ ವಿದ್ಯಾರ್ಥಿಗಳು ಭಾರತ ಸಂವಿಧಾನ, ಮಾನವ ಹಕ್ಕುಗಳು ಮತ್ತು ಪರಿಸರ ಅಧ್ಯಯನ ಹಾಗೂ ಬೇಸಿಕ್ ಕಂಪ್ಯೂಟರ್ ಪತ್ರಿಕೆಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು.

* ಮುದ್ರಿತ ಸ್ವಯಂ ಕಲಿಕಾ ಸಾಮಗ್ರಿ ಕಡ್ಡಾಯ.

* ಶ್ರವ್ಯಕಾರ್ಯಕ್ರಮ ಕಡ್ಡಾಯ

* ಸಮಾಲೋಚನೆ, ಸಂವಹನ ಕಾರ್ಯಕ್ರಮ ಕಡ್ಡಾಯ.

* ಆಂತರಿಕ ಅಂಕಗಳ ಪುನರ್ ಕೋರಿಕೆಗೆ ಫಲಿತಾಂಶ ಪ್ರಕಟದ ನಂತರ ಮೂವತ್ತು ದಿವಸಗಳ ನಿಗದಿ ಕಡ್ಡಾಯ.

* ಕೌಶಲ ಅಭಿವೃದ್ದಿ ಕಾರ್ಯಕ್ರಮ ಆಯೋಜನೆ ಕಡ್ಡಾಯ.(2 ಕ್ರೆಡಿಟ್ಸ್ ನಿಗದಿ)

* ಶೈಕ್ಷಣಿಕ ವೇಳಾಪಟ್ಟಿ ಏಕರೂಪ.

* ಆರೋಗ್ಯ ಕೇಂದ್ರ, ವಿದ್ಯಾರ್ಥಿನಿಲಯ ಹಾಗೂ ಮಹಿಳಾ ವಿದ್ಯಾರ್ಥಿನಿಲಯ ಸ್ಥಾಪನೆ ಕಡ್ಡಾಯ.

* ಶಿಕ್ಷಣ ಕ್ರಮ ಪೂರ್ಣಗೊಳಿಸಲು ಎನ್+2 ನಿಗದಿ (ಶೈಕ್ಷಣಿಕ ಅವಧಿಗೆ ಎರಡು ವರ್ಷ ಹೆಚ್ಚು ಸಮಯ
ಮಾತ್ರ.)

* ಕೃಪಾಂಕ ನೀತಿ ಕಡ್ಡಾಯ.

* ಗರಿಷ್ಠ 10 ರ‍್ಯಾಂಕ್‌ ಮಾತ್ರ ನೀಡಲು ಅವಕಾಶ.

* ಆಂತರಿಕ ಗುಣಮಟ್ಟ ಭರವಸೆ ಕೇಂದ್ರ (ಐ.ಕ್ಯೂ.ಎ.ಸಿ.) ಸ್ಥಾಪನೆ ಕಡ್ಡಾಯ.

* ಸ್ವಯಂ ಅನುಷ್ಠಾನ ಕಡ್ಡಾಯ.

* ಡಿಜಿಟಲ್ ಮಾನಿಟರಿಂಗ್ ಘಟಕ ಸ್ಥಾಪನೆ ಕಡ್ಡಾಯ.

* ರಾಷ್ಟ್ರೀಯ ಶೈಕ್ಷಣಿಕ ಠೇವಣಿ ಕೋಶ (ನ್ಯಾಡ್) ಕಡ್ಡಾಯ.

* ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯದೊಂದಿಗೆ ಸಹಯೋಗ ಮತ್ತು ಸಂವರ್ಧನ ಕಡ್ಡಾಯ.

* ಸಂಪನ್ಮೂಲ ವ್ಯಕ್ತಿಗಳಿಗೆ ಶೈಕ್ಷಣಿಕ ಮೇರಿಟ್ ನಿಗದಿ ಕಡ್ಡಾಯ.

ಈ ಎಲ್ಲ ಕ್ರಮಗಳಿಂದಾಗಿ ದೂರಶಿಕ್ಷಣ ಮತ್ತು ರೆಗ್ಯೂಲರ್ ಶಿಕ್ಷಣದ ನಡುವೆ ಸ್ವಲ್ಪವೂ ವ್ಯತ್ಯಾಸ ಇಲ್ಲವಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಕರ್ನಾಟಕದಲ್ಲಿ ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ’ ಮತ್ತು ‘ಮಂಗಳೂರು ವಿ.ವಿ.ಗೆ’ ಮಾತ್ರ ಮಾನ್ಯತೆ ನೀಡಿರುವುದು. ಯು.ಜಿ.ಸಿ. ದೂರಶಿಕ್ಷಣಕ್ಕೆ ಕಾನೂನು ಹಾಗೂ ಸಾಂವಿಧಾನಿಕ ಮಾನ್ಯತೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಗುರುತ್ತರ ಜವಾಬ್ದಾರಿ ಇರುವ ಈ ಹೊತ್ತಿನಲ್ಲಿ, ಯು.ಜಿ.ಸಿ.ಯ ಪರಿಣಾಮಕಾರಿ ಹೆಜ್ಜೆ ಸುಶಿಕ್ಷಿತ ಭಾರತ ಸೃಷ್ಟಿಗೆ ನಾಂದಿ ಹಾಡಿದೆ.

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ’ ಪರಿಷ್ಕೃತ ನಿಯಮಾವಳಿಗೆ ಬದ್ಧವಾಗಿ ಪ್ರವೇಶಾತಿಯನ್ನು ದಿನಾಂಕ: 27-08-2018ರಿಂದ ಆರಂಭಿಸಿದ್ದು, ದಿನಾಂಕ: 01-10-2018ಕ್ಕೆ ಪ್ರವೇಶಾತಿ ದಿನಾಂಕ ಮುಕ್ತಾಯವಾಗುವುದರಿಂದ ವಿಶ್ವವಿದ್ಯಾನಿಲಯದ ಕೇಂದ್ರ ಕಛೇರಿ ಮೈಸೂರು ಹಾಗೂ ರಾಜ್ಯದ ಇಪ್ಪತ್ತು ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿಯನ್ನು ಪಡೆಯಬಹುದು. ಕ.ರಾ.ಮು.ವಿ.ಗೆ 2018-19ನೇ ಸಾಲಿನಿಂದ ಐದು ವರ್ಷಗಳ ಕಾಲ ಮಾನ್ಯತೆ ನೀಡಿರುವುದನ್ನು ಯು.ಜಿ.ಸಿ.ಯ ಅಧಿಕೃತ ವೆಬ್‍ಸೈಟ್‍ನಲ್ಲಿ ನೋಡಬಹುದಾಗಿದೆ. ಯಾವುದೇ ಸಹಯೋಗ ಸಂಸ್ಥೆಗಳಲ್ಲಿ ಪ್ರವೇಶಾತಿಯನ್ನು ಹೊಂದುವುದು ನಿಷಿದ್ಧ ಹಾಗೂ ವಿ.ವಿ. ಯಾವುದೇ ಸಂಸ್ಥೆಗಳ ಜೊತೆ ಸಹಯೋಗ ಹೊಂದಿರುವುದಿಲ್ಲ. ಈ ಕುರಿತು ಎಚ್ಚರ ವಹಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ.

ಸುಧಾಕರ್ ಹೊಸಳ್ಳಿ
ಸುಧಾಕರ್ ಹೊಸಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT