‘ರಾಜ್ಯದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಎರಡು ಹಾಗೂ ಸರ್ಕಾರಿ ಸ್ವಾಮ್ಯದ 24 ವೈದ್ಯಕೀಯ ಕಾಲೇಜುಗಳಿವೆ. ಬಾಗಲಕೋಟೆ ರಾಮನಗರ ಮತ್ತು ಕನಕಪುರದಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಸಂಪೂರ್ಣ ಸುಸಜ್ಜಿತ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಆರ್ಥಿಕ ದುರ್ಬಲ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಸೀಟು ನೀಡುವುದು ಹಾಗೂ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಇನ್ನಷ್ಟು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆದಿದೆ.
ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ವೈದ್ಯಕೀಯ ಸೀಟುಗಳ ಹಂಚಿಕೆ ಕ್ರಮಬದ್ಧವಾಗಿ ನಡೆಯುತ್ತದೆ. ಪ್ರಸಕ್ತ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 4007 ಸೀಟುಗಳು ಹಂಚಿಕೆಗೆ ಲಭ್ಯವಾಗಿವೆ. ಬೆಂಗಳೂರಿನ ಎಂವಿಜೆ ಕಲಬುರಗಿಯ ಮಹದೇವಪ್ಪ ರಾಂಪುರೆ ದಕ್ಷಿಣ ಕನ್ನಡ ಜಿಲ್ಲೆಯ ಕೆ. ವೆಂಕಟರಮಣ ಗೌಡ ಮತ್ತು ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೆಚ್ಚುವರಿಯಾಗಿ ಮಂಜೂರು ಮಾಡಿದೆ. ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾದ ನಂತರ ಒಟ್ಟು ಒಂಬತ್ತು ಕಾಲೇಜುಗಳ 450 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿವೆ.