ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾತ್ಮಕ ಕಲಿಕೆಗೆ ಹೊಸ ಹಾದಿ: ಮೇಘಶಾಲಾ ಶೈಕ್ಷಣಿಕ ಆ್ಯಪ್‌

ಕ್ರಿಯಾತ್ಮಕ ಕಲಿಕೆಗೆ ಹೊಸ ಹಾದಿ
Last Updated 30 ಮೇ 2021, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಪಾಠ ಸುಲಭವಾಗಿ ಅರ್ಥವಾಗಬೇಕಾದರೆ ಬೋಧನ ವಿಧಾನ ಸೃಜನಶೀಲತೆಯಿಂದ ಕೂಡಿರಬೇಕು. ಶಿಕ್ಷಕರು ಇಂತಹ ಕ್ರಿಯಾತ್ಮಕ ವಿಧಾನಗಳನ್ನು ಅಳವಡಿಸಿಕೊಂಡರೆ ಮಕ್ಕಳು ಬಹು ಬೇಗೆ ಗ್ರಹಿಸುವರಲ್ಲದೇ, ಅವರ ಕಲಿಕೆಗೆ ಅನುಕೂಲ ಎಂಬುದು ಈಗಾಗಲೇ ಸಾಬೀತಾಗಿದೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರಿನ ಮೇಘಶಾಲಾ ಸಂಸ್ಥೆ ಸರಳವಾದ ಪಠ್ಯಕ್ರಮವನ್ನು ರೂಪಿಸಿದೆ; ಒಂದರಿಂದ 8ನೇ ತರಗತಿವರೆಗಿನ ಪಾಠವನ್ನು ಮಿತಿಗೊಳಿಸಿ ಮಕ್ಕಳು ಹಾಗೂ ಶಿಕ್ಷಕರು ಇಬ್ಬರಿಗೂ ನೆರವಾಗುವಂತೆ ಪಠ್ಯಕ್ರಮವಿರುವ ಉಚಿತ ಆ್ಯಪ್‌ ಸಿದ್ಧಪಡಿಸಿದೆ.

ಪಠ್ಯಕ್ರಮ

2014ರಲ್ಲಿ ಆರಂಭವಾದ ಮೇಘಶಾಲಾ ಸಂಸ್ಥೆಯು ಶೈಕ್ಷಣಿಕ ಮೊಬೈಲ್ ಹಾಗೂ ವೆಬ್‌ ಆ್ಯಪ್‌ಗಳನ್ನು ಸಿದ್ಧಪಡಿಸಿದ್ದು, ಕನ್ನಡ ಹಾಗೂ ಹಿಂದಿ ಭಾಷಾ ಪಠ್ಯ ಬಿಟ್ಟು ಉಳಿದೆಲ್ಲಾ ವಿಷಯಗಳ ಪಠ್ಯಗಳು ಇದರಲ್ಲಿ ಲಭ್ಯವಿವೆ. ಉತ್ತಮ ಶಿಕ್ಷಕರು ಹಾಗೂ ಸುಸಜ್ಜಿತ ತರಗತಿ ಕೊಠಡಿಯ ಪರಿಕಲ್ಪನೆಯಲ್ಲಿ ಆರಂಭವಾದ ಈ ಆ್ಯಪ್‌ ಅನ್ನು ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಚಿತವಾಗಿ ಬಳಸಿಕೊಳ್ಳಬಹುದು. ಒಮ್ಮೆ ಅಂತರ್ಜಾಲದ ಸಹಾಯದಿಂದ ಪಾಠಗಳನ್ನು ಡೌನ್‌ಲೋಡ್‌ ಮಾಡಿ ಇರಿಸಿಕೊಂಡರೆ ನಮಗೆ ಬೇಕಾದಾಗ ಬಳಸಬಹುದು. ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಈ ಆ್ಯಪ್‌ ಅನ್ನು ಬಳಸುತ್ತಿದ್ದಾರೆ.

‘ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರದ ಪಠ್ಯಕ್ರಮಕ್ಕೆ ಅನುಗುಣವಾಗಿ ಹೊಸ ಪಠ್ಯಕ್ರಮವನ್ನು ರೂಪಿಸಿದೆ ಮೇಘಶಾಲಾ. ಸರ್ಕಾರದ ಪಠ್ಯಕ್ರಮಕ್ಕೆ ವಿಡಿಯೊ ಹಾಗೂ ಫೋಟೊಗಳನ್ನು ಸೇರಿಸಿ ಅದನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ’ ಎನ್ನುತ್ತಾರೆ ಸಂಸ್ಥೆಯ ರೂವಾರಿ, ಬೆಂಗಳೂರು ಮೂಲದ ಜ್ಯೋತಿ ತ್ಯಾಗರಾಜನ್‌. ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ಶಿಕ್ಷಕಿಯಾಗಿ ಕೆಲಸ ಮಾಡಿರುವ ಜ್ಯೋತಿ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ 40 ವರ್ಷಗಳ ಅನುಭವವಿದೆ.

ಮೇಘಶಾಲಾದೊಂದಿಗೆ ಬೆಂಗಳೂರಿನ ಆಂಟಮ್ ಎಜ್ಯುಕೇಷನ್ ಅಂಡ್ ಟೆಕ್ ಕಂಪನಿಯ ಅರ್ಜುನ್ ಮತ್ತು ಸ್ತುತಿ ಅಗರವಾಲಾ ಕೂಡ ಕೈ ಜೋಡಿಸಿದ್ದಾರೆ.

ಶಿಕ್ಷಕರಿಗೆ ನೆರವು

ಕಡಿಮೆ ಸಮಯದಲ್ಲಿ ಶಿಕ್ಷಕರು ತರಗತಿಯಲ್ಲಿ ಬೋಧಿಸಲು ಸಿದ್ಧರಾಗುವ ನಿಟ್ಟಿನಲ್ಲಿ ಮೂರು ಪರಿಕಲ್ಪನೆಗಳನ್ನು ಇಲ್ಲಿ ರೂಪಿಸಲಾಗಿದೆ. ಇದರಲ್ಲಿ ಯಾಕೆ, ಹೇಗೆ, ಏನು ಎಂಬ ಮೂರು ಅಂಶಗಳಿರುತ್ತವೆ. ಒಂದೇ ಸ್ಲೈಡ್‌ನಲ್ಲಿ ಕಡಿಮೆ ಸಮಯದಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಗೆ ನೆರವಾಗಲು ಇದು ಸಹಾಯ ಮಾಡುತ್ತದೆ.

ಮಕ್ಕಳಿಗೆ ಯೋಚಿಸಲು, ಕಲಿಯಲು ನೆರವಾಗುವಂತೆ ಚಟುವಟಿಕೆಗಳ ಆಧಾರದ ಮೇಲೆ ಈ ಆ್ಯಪ್‌ನಲ್ಲಿ ಪಾಠಗಳನ್ನು ರೂಪಿಸಲಾಗಿದೆ. ಇದರಲ್ಲಿ ಒಟ್ಟು 5500 ಪಾಠಗಳಿವೆ. ಈಗಾಗಲೇ ಈ ಆ್ಯಪ್‌ ಅನ್ನು ಸುಮಾರು 20 ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಗೂಗಲ್ ಪ್ಲೇಸ್ಟೋರ್‌ನಿಂದ Meghashala Online ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ವೆಬ್‌ನಲ್ಲಿ http://meghshala.online ನಲ್ಲಿ ನೋಡಬಹುದು.

ತರಗತಿ ಚೇತರಿಕೆ ಕಾರ್ಯಕ್ರಮ

ಕಳೆದ ಒಂದೂವರೆ ವರ್ಷದಿಂದ ಮಕ್ಕಳಿಗೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಆ ಕಾರಣಕ್ಕೆ ಮಕ್ಕಳು ಹಿಂದಿನ ಪಾಠಗಳನ್ನೂ ಮರೆತಿದ್ದಾರೆ. ಹೀಗಾಗಿ ‘ಸೇತುಬಂಧ’ ಕಾರ್ಯಕ್ರಮದಂತೆ ತರಗತಿ ಚೇತರಿಕೆ ಕಾರ್ಯಕ್ರಮವನ್ನು ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ಇದು ಆರು ವಾರಗಳ ಕಾರ್ಯಕ್ರಮ. ಇದನ್ನೂ ಕೂಡ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ವಿವರಣೆ ನೀಡುತ್ತಾರೆ ಮೇಘಶಾಲಾದ ಶಿಕ್ಷಕ ನಾಗರಾಜ್‌ ಬೇವೂರ್. ಈ ತರಗತಿ ಚೇತರಿಕಾ ಕಾರ್ಯಕ್ರಮವನ್ನು ‘ಆಂಟಮ್’ ಸಂಸ್ಥೆಯ ಸಹಯೋಗದಲ್ಲಿ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT