ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ವಿಜ್ಞಾನದಲ್ಲಿ ಎಂಎಸ್‌ಸಿ: ಉದ್ಯೋಗಾವಕಾಶಗಳೇನು?

Last Updated 8 ಮೇ 2022, 19:30 IST
ಅಕ್ಷರ ಗಾತ್ರ

1. ನಾನು ಪರಿಸರ ವಿಜ್ಞಾನದಲ್ಲಿ ಎಂಎಸ್‌ಸಿ ಮಾಡುತ್ತಿದ್ದೇನೆ. ನನಗೆ ನನ್ನ ಮುಂದಿನ ನಡೆಯ ಬಗ್ಗೆ ಗೊಂದಲವಿದೆ. ನಾನು ಪಿಎಚ್‌ಡಿ ಮಾಡುವುದೋ ಅಥವಾ ಕೆಲಸಕ್ಕೆ ಸೇರುವುದೋ? ಕೆಲಸಕ್ಕೆ ಸೇರುವುದಾದರೆ, ಯಾವ ರೀತಿಯ ಕೆಲಸ ಆಯ್ಕೆ ಮಾಡಿಕೊಳ್ಳಲಿ? ಎಂಸ್‌ಸಿ ಪರಿಸರ ವಿಜ್ಞಾನದಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಸ್ನಾತಕೋತ್ತರ ಪದವಿಯ ನಂತರ ಪರಿಸರ ವಿಜ್ಞಾನಿ, ಪರಿಸರ ಎಂಜಿನಿಯರ್, ಪರಿಸರ ಜೀವಶಾಸ್ತ್ರಜ್ಞ, ಪರಿಸರ ಪತ್ರಕರ್ತ ಇತ್ಯಾದಿ ವೃತ್ತಿಗಳ ಅವಕಾಶಗಳಿವೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಗಣಿಗಳು, ಪರಮಾಣು ಘಟಕಗಳು, ರಸಗೊಬ್ಬರ ಸ್ಥಾವರಗಳು, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ ಉದ್ದಿಮೆಗಳು, ಆಹಾರ ಸಂಸ್ಕರಣಾ ಘಟಕಗಳು, ಜಲ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳು, ಸರೋವರ ಸಂರಕ್ಷಣಾ ಇಲಾಖೆಗಳು, ನಗರ ಪ್ರಾಧಿಕಾರಗಳು ಇತ್ಯಾದಿ ವಲಯಗಳಲ್ಲಿ ನಿಮ್ಮ ಆಸಕಿ, ಅಭಿರುಚಿಯಂತೆ ವೃತ್ತಿಯನ್ನು ಅರಸಬಹುದು ಹಾಗೂ ಹೆಚ್ಚಿನ ತಜ್ಞತೆಗಾಗಿ, ಪಿಎಚ್‌ಡಿ ಮಾಡಬಹುದು.

2. ನಾನು ಪಿಯುಸಿಗೆ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ಕಾಲೇಜಿನ ಆಯ್ಕೆಯಲ್ಲಿ ಗೊಂದಲವಿದೆ. ದಯವಿಟ್ಟು, ಬೆಂಗಳೂರಿನ ಉತ್ತಮ ಕಲಾ ಕಾಲೇಜುಗಳ ಕುರಿತು ಮಾಹಿತಿ ನೀಡಿ.

ಹೆಸರು, ಊರು ತಿಳಿಸಿಲ್ಲ

ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ ಹಾಗೂ ಕಾಲೇಜು ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ. https://www.youtube.com/c/EducationalExpertManagementCareerConsultant

3. ನಾನು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನುಇಂಗ್ಲಿಷ್ ಮಾಧ್ಯಮದಲ್ಲಿ ಬರೆದಿದ್ದೇನೆ. ಉತ್ತಮ ಅಂಕ ಗಳಿಸುವ ಭರವಸೆ ಇದೆ. ಪಿಯುಸಿ (ಪಿಸಿಎಂಬಿ) ಓದುತ್ತೇನೆ. ನನಗೆ ಎಂಬಿಬಿಎಸ್, ಎಂಜಿನಿಯರಿಂಗ್ ಓದುವುದರಲ್ಲಿ ಆಸಕ್ತಿ ಇಲ್ಲ. ಪದವಿಯ ನಂತರ ಕೋಚಿಂಗ್ ಪಡೆಯುವ ಮೂಲಕ ಕೆಎಎಸ್, ಐಎಎಸ್ ಮಾಡುವ ಗುರಿ ಹೊಂದಿದ್ದೇನೆ. ಹಾಗಾಗಿ, ಪಿಯುಸಿ ನಂತರ ನನ್ನ ಆಯ್ಕೆ ಯಾವುದಿರಬೇಕು?

ನಿಖಿತಾ ಎಂ ನಾಯ್ಕ್, ಹರಪನಹಳ್ಳಿ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿರುವಾಗಲೇ ಕೆಎಎಸ್, ಐಎಎಸ್ ಮಾಡಬೇಕೆನ್ನುವ ನಿಮ್ಮ ಗುರಿ ಶ್ಲಾಘನೀಯ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸಂಸ್ಥೆಗಳು ನಡೆಸುವ ಈ ಪರೀಕ್ಷೆಗಳ ನಂತರ ಅಖಿಲ ಭಾರತ, ಗ್ರೂಪ್ ಎ, ಗ್ರೂಪ್ ಬಿ ಸೇರಿದಂತೆ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿನ ಹುದ್ದೆಗಳ ವರ್ಗೀಕರಣವಿದೆ. ಆದ್ದರಿಂದ, ಈ ಎರಡೂ ಪರೀಕ್ಷೆಗಳ ಮೂಲಕ ಲಭ್ಯವಿರುವ ಹುದ್ದೆಗಳ ಅವಕಾಶಗಳನ್ನು ಗಮನಿಸಿ, ನಿಮಗೆ ಯಾವುದು ಸೂಕ್ತ ಎಂದು ಗುರುತಿಸಿ, ಅದಕ್ಕೆ ಅನುಗುಣವಾಗಿ ಪದವಿ ಕೋರ್ಸ್ ಮಾಡುವುದು ಒಳ್ಳೆಯದು. ಪದವಿಯಲ್ಲಿ ಓದುವ ವಿಷಯಕ್ಕೂ ಐಎಎಸ್ ಪರೀಕ್ಷೆಯ ಐಚ್ಚಿಕ ವಿಷಯಕ್ಕೂ ಸಾಮ್ಯತೆಯಿದ್ದರೆ, ನಿಮ್ಮ ಗುರಿಯ ಸಾಧನೆಗೆ ಸಹಾಯವಾಗುತ್ತದೆ. ಈ ಪರೀಕ್ಷೆಗಳ ಮಾದರಿ, ಐಚ್ಚಿಕ ವಿಷಯಗಳು, ಪಠ್ಯಕ್ರಮ ಇತ್ಯಾದಿಗಳಲ್ಲಿ ಆಗಿಂದಾಗ್ಗೆ ತಿದ್ದುಪಡಿಗಳಾಗುವ ಸಾಧ್ಯತೆಯಿರುತ್ತದೆ. ನೀವು ಪಿಯುಸಿ ಮಾಡಿದ ನಂತರ, ಈ ಬದಲಾವಣೆಗಳನ್ನು ಗಮನಿಸಿ, ಪದವಿಯ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

4. ಈ ವರ್ಷ ನಾನು 10ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆ ಬರೆಯುತ್ತಿರುವೆ. ನನಗೆ ಆಸ್ಟ್ರೋ ಫಿಸಿಕ್ಸ್ ವಿಷಯದಲ್ಲಿ ಆಸಕ್ತಿ ಇದೆ. ಹಾಗಾಗಿ, ಮುಂದೆ ಯಾವ ಕೋರ್ಸ್ ಸೇರಬಹುದು? ವಂದನೆಗಳು.

ಯೋಗೀಶ್ ಎಂ, ಕೆಂಗೇರಿ ಉಪನಗರ, ಬೆಂಗಳೂರು

5. ನನಗೆ ಇಸ್ರೊಗೆ ಸೇರಬೇಕು ಆಗಬೇಕು ಎನ್ನುವ ಆಸೆ ಇದೆ. ಆದ್ದರಿಂದ, 10ನೇ ತರಗತಿ ನಂತರ ಏನು ಮಾಡಬೇಕು?

ಭರತ್, ಊರು ತಿಳಿಸಿಲ್ಲ

ಪಿಯುಸಿ ಹಂತದಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡು ಬಿಇ/ಬಿಟೆಕ್/ಬಿಎಸ್‌ಸಿ ಪದವಿಯ ನಂತರ ಸ್ನಾತಕೋತ್ತರ ಕೋರ್ಸ್ ಮಾಡಬೇಕು. ಇದಾದ ನಂತರ ಇಂಡಿಯನ್ ಸ್ಪೇಸ್ ರಿಸರ್ಚ್ ಸಂಸ್ಥೆ (ಇಸ್ರೊ) ಮತ್ತು ಆಸ್ಟ್ರೋ ಫಿಸಿಕ್ಸ್ ಸಂಬಂಧಿತ ಇತರ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು ಹಾಗೂ, ಹೆಚ್ಚಿನ ತಜ್ಞತೆಗಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಆಸ್ಟ್ರೋ ಫಿಸಿಕ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಗಳಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪಿಎಚ್‌ಡಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.careerindia.com/how-to/how-to-become-a-space-scientist-in-isro-explore-isro-jobs-and-space-science-colleges-in-india/articlecontent-pf10061-025486.html

6. ಪಿಯುಸಿ ಮತ್ತು ಟಿಸಿಚ್ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ 25 ವರ್ಷಗಳ ಸೇವೆ ಸಲ್ಲಿಸಿದ್ದು, ಕುವೆಂಪು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಹಿಂದಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತೇನೆ. ‘ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಶಿಕ್ಷಕರ ಪಾತ್ರ’ ಪ್ರಬಂಧ ಮಂಡಿಸಬೇಕೆಂದಿದ್ದೇನೆ. ಯಾರನ್ನು ಸಂಪರ್ಕಿಸಬೇಕು?

ಹೆಸರು, ಊರು ತಿಳಿಸಿಲ್ಲ

ನೀವು ಮಂಡಿಸಬೇಕೆಂದಿರುವ ಪ್ರಬಂಧದ ಉದ್ದೇಶದ ಬಗ್ಗೆ ಸ್ಪಷ್ಟತೆಯಿರಲಿ. ಪ್ರಬಂಧ ಪ್ರಕಟಿಸುವ ನಿಟ್ಟಿನಲ್ಲಿ ಈ ಸಲಹೆಗಳನ್ನು ಗಮನಿಸಿ:
• ನಿಮ್ಮ ಉದ್ದೇಶಕ್ಕೆ ಅನುಗುಣವಾಗಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆ (ಜರ್ನಲ್), ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಪಟ್ಟಿಯನ್ನು ಮಾಡಿ.

• ಪತ್ರಿಕೆಗಳ ವಿಶ್ವಾಸಾರ್ಹತೆ, ಪ್ರಖ್ಯಾತಿ, ವ್ಯಾಪ್ತಿ, ಪ್ರಸರಣೆ ಮತ್ತು ಇನ್ನಿತರ ಪ್ರಕಟಿತ ಪ್ರಬಂಧ ಮತ್ತು ಲೇಖನಗಳ ಗುಣಮಟ್ಟದ ಬಗ್ಗೆ ಸಂಶೋಧಿಸಿ.

• ಪತ್ರಿಕೆಗಳ ನಿಯಮ, ನಿಭಂದನೆಗಳನ್ನು ಗಮನಿಸಿ ಯಾವ ಪತ್ರಿಕೆಯಲ್ಲಿ ಪ್ರಬಂಧವನ್ನು ಪ್ರಕಟಿಸಿದರೆ ನಿಮ್ಮ ಉದ್ದೇಶ ನೆರವೇರುತ್ತದೆ ಎಂದು ತೀರ್ಮಾನಿಸಿ, ಆ ಪತ್ರಿಕೆಯ ಸಂಪಾದಕೀಯ ಮಂಡಳಿಯನ್ನು ಸಂಪರ್ಕಿಸಿ.

• ನಿಷ್ಪಕ್ಷವಾದ ಆಲೋಚನೆಗಳು, ಪರ್ಯಾಯ ಚಿಂತನೆಗಳಿದ್ದು ಪ್ರಬಂಧ ಸವಿಸ್ತಾರವಾಗಿಯೂ, ವಿಶಿಷ್ಟವಾಗಿಯೂ ಮೂಡಿಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT