ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ನೀಟ್‌: ರಾಜ್ಯದ ವಿದ್ಯಾರ್ಥಿಗಳು 1.49 ಲಕ್ಷ

Published 4 ಮೇ 2024, 0:10 IST
Last Updated 4 ಮೇ 2024, 0:10 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಆಯೋಜಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಭಾನುವಾರ (ಇದೇ 5ರಂದು) ದೇಶದಾದ್ಯಂತ ನಡೆಯಲಿದ್ದು, ರಾಜ್ಯದ 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಪಶುವೈದ್ಯಕೀಯ, ಹೋಮಿಯೊಪಥಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ‘ನೀಟ್‌’ ನಡೆಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 15 ಸಾವಿರದಷ್ಟು ಹೆಚ್ಚಳವಾಗಿದೆ. 

ಕರ್ನಾಟಕದ 29 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಸೇರಿ 13 ಭಾಷೆಗಳಲ್ಲಿ ‘ನೀಟ್‌’ ಬರೆಯಲು ಅವಕಾಶವಿದೆ.

ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಕೇಂದ್ರಗಳನ್ನು ತಲುಪಬೇಕು. ಯಾವುದೇ ಆಭರಣಗಳನ್ನು ಧರಿಸಬಾರದು. ಬಾಲಕರು ಅರ್ಧ ತೋಳಿನ ಅಂಗಿ, ಸರಳವಾದ ಪ್ಯಾಂಟ್ ಧರಿಸಬೇಕು. ಸರಳವಾದ ತಿಳಿ ಬಣ್ಣದ ಡೆನಿಮ್‌ ಪ್ಯಾಂಟ್ ಮತ್ತು ಅರ್ಧ ತೋಳಿನ ಬಟ್ಟೆಯನ್ನು ಧರಿಸಲು ಬಾಲಕಿಯರಿಗೆ ಅನುಮತಿಸಲಾಗಿದೆ. ಬಟ್ಟೆಗಳ ಮೇಲಿನ ಗುಂಡಿಗಳು ಮಧ್ಯಮ ಗಾತ್ರದಲ್ಲಿರಬೇಕು ಎಂದು ಸೂಚಿಸಲಾಗಿದೆ.

ಪರೀಕ್ಷಾ ಕೊಠಡಿಯೊಳಗೆ ಯಾವುದೇ ಡಿಜಿಟಲ್‌ ಸಾಧನಗಳು, ಕ್ಯಾಲ್ಕ್ಯುಕೇಟರ್, ಕೈಗಡಿಯಾರ, ಹ್ಯಾಂಡ್‌ಬ್ಯಾಗ್, ಬೆಲ್ಟ್, ಕ್ಯಾಪ್, ಜ್ಯಾಮಿತಿ, ಪೆನ್ಸಿಲ್ ಬಾಕ್ಸ್, ಇಯರ್‌ಫೋನ್, ಬ್ಲೂಟೂತ್, ಮೈಕ್ರೊಫೋನ್‌ಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT