ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಮಸ್ಯೆಯಿದ್ದರೆ ಯಾವ ಕೋರ್ಸ್ ಮಾಡಬಹುದು?

Last Updated 16 ಆಗಸ್ಟ್ 2021, 3:35 IST
ಅಕ್ಷರ ಗಾತ್ರ

1. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮಾಡುತ್ತಿದ್ದೇನೆ. ಆರ್ಥಿಕ ಸಮಸ್ಯೆಯಿರುವುದರಿಂದ ಕಡಿಮೆ ಶುಲ್ಕದ ಯಾವ ಕೋರ್ಸ್ ಮಾಡಿದರೆ ಉತ್ತಮ ಎಂದು ತಿಳಿಸಿ.

ಹೆಸರು ತಿಳಿಸಿಲ್ಲ, ಶೃಂಗೇರಿ.

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ವೃತ್ತಿಯ ಬಗ್ಗೆ ಚಿಂತಿಸಿ. ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಜೊತೆಗೆ, ನಿಮಗೆ ಸಹಾಯವಾಗಬಹುದಾದ ಅನೇಕ ಅರೆಕಾಲಿಕ ಕೆಲಸಗಳನ್ನು ಕೂಡಾ ಮಾಡಬಹುದು. ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಹಾಗಾಗಿ, ನಿಮ್ಮ ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಸಾಧಕರ ಕಥೆಗಳನ್ನು ಓದಿ, ವಿಡಿಯೊಗಳನ್ನು ವೀಕ್ಷಿಸಿ; ಸ್ವಯಂ ಪ್ರೇರಣೆಯನ್ನು ಬೆಳೆಸಿಕೊಂಡು ನೀವೂ ಒಬ್ಬ ಸಾಧಕರಾಗಿ.

2. ನಾನು ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಮಾಡಿ ರಿಸರ್ಚ್ ಅಂಡ್ ಅನಾಲಿಸಿಸ್‌ ವಿಂಗ್‌ (ರಾ) ಅಥವಾ ಇಂಟೆಲಿಜೆನ್ಸ್ ಬ್ಯೂರೋ (ಐಬಿ)ಗೆ ಸೇರಬೇಕೆಂದುಕೊಂಡಿದ್ದೇನೆ. ಎಂಜಿನಿಯರಿಂಗ್‌ನಲ್ಲಿ ಯಾವ ಬ್ರ್ಯಾಂಚ್ ಓದಬೇಕು? ಕೆಲಸಕ್ಕೆ ಯಾವ ಪರೀಕ್ಷೆಗಳನ್ನು ಬರೆಯಬೇಕು?

ಪೃಥ್ವಿ, ಊರು ತಿಳಿಸಿಲ್ಲ.

ರಾ ಮತ್ತು ಐಬಿ ಸರ್ಕಾರಿ ವಲಯದ ಪ್ರತಿಷ್ಠಿತ ಸಂಸ್ಥೆಗಳು. ಹಾಗಾಗಿ, ಇಲ್ಲಿನ ಹುದ್ದೆಗಳ ನೇಮಕಾತಿಗೆ ಕಠಿಣವಾದ ಪ್ರಕ್ರಿಯೆಯಿದೆ. ಯಾವುದೇ ಪದವಿಯ ನಂತರ ಐಬಿ ಸಂಸ್ಥೆಗಾದರೆ ಕೇಂದ್ರ ಗೃಹ ಸಚಿವಾಲಯ ನಡೆಸುವ ಐಬಿ ಎಸಿಐಒ ಪರೀಕ್ಷೆಯನ್ನು ಬರೆಯಬೇಕು. ರಾ ಸಂಸ್ಥೆಗೆ ವೃತ್ತಿ ಸಂಬಂಧಿತ ಅನುಭವವಿರಬೇಕು ಮತ್ತು ಗ್ರೂಪ್ ಎ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಬರೆಯಬೇಕು. ಸಾಮಾನ್ಯವಾಗಿ ಇನ್ನಿತರ ಸರ್ಕಾರಿ ಇಲಾಖೆಗಳಿಂದ ಅನುಭವಿ ಅಧಿಕಾರಿಗಳನ್ನು ರಾ ಸಂಸ್ಥೆಗೆ ನೇಮಕಾತಿ ಮಾಡಿಕೊಳ್ಳುವ ವಾಡಿಕೆಯಿದೆ.

3. ನಾನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಈಗಷ್ಟೇ ಮುಗಿಸಿದ್ದು, ಆಕಾಶವಾಣಿ ಅಥವಾ ದೂರದರ್ಶನ ವಾಹಿನಿಯಲ್ಲಿ ನಿರೂಪಕಿ/ ವಾಯ್ಸ್ ಓವರ್ ಆರ್ಟಿಸ್ಟ್ ಆಗಬೇಕೆಂದುಕೊಂಡಿದ್ದೇನೆ. ಈ ವಿಭಾಗದಲ್ಲಿ ಸರ್ಕಾರಿ ಕೆಲಸ ಪಡೆಯಲು ಯಾವ ಸ್ಪರ್ಧಾತ್ಮಕ ಪರೀಕ್ಷೆಗಳಿವೆ?

ಪಲ್ಲವಿ ಎಸ್.ಜಿ., ಬಾಗಲಕೋಟೆ.

ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ಕೆಲಸಗಳಿಗೆ ವೃತ್ತಿ ಸಂಬಂಧಿತ ಅನುಭವ ಮತ್ತು ಅರ್ಹತೆಯಿರಬೇಕು. ಸಾಮಾನ್ಯವಾಗಿ ಲಿಖಿತ ಪರೀಕ್ಷೆ, ಸ್ಕ್ರೀನ್ ಟೆಸ್ಟ್ ಮತ್ತು ಸಂದರ್ಶನದ ಮುಖಾಂತರ ನೇಮಕಾತಿಯಾಗುತ್ತದೆ. ಕೆಲವೊಮ್ಮೆ, ಕಾಂಟ್ರ್ಯಾಕ್ಟ್ ನೇಮಕಾತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://prasarbharati.gov.in/

4. ನಾನು ಪಿಯುಸಿ ಮುಗಿಸಿ ಬಿಬಿಎ (ಏವಿಯೇಷನ್) ಮಾಡಬೇಕೆಂದುಕೊಂಡಿದ್ದೇನೆ. ನನಗೆ ಈ ಕೋರ್ಸ್ ಮತ್ತು ಉದ್ಯೋಗದ ಕುರಿತು ಮಾಹಿತಿ ನೀಡಿ.

ಸಂಜಯ್, ಶಿವಮೊಗ್ಗ.

ಬಿಬಿಎ (ಏವಿಯೇಷನ್) ಕೋರ್ಸಿನಲ್ಲಿ ಏರ್‌ಲೈನ್ಸ್ ಸಂಬಂಧಿತ ವಿಷಯಗಳ ಬಗ್ಗೆ ಅಂದರೆ ಏರ್‌ಪೋರ್ಟ್ ಮ್ಯಾನೇಜ್‌ಮೆಂಟ್, ಸೆಕ್ಯೂರಿಟಿ, ಇನ್ಫರ್ಮೇಷನ್ ಸಿಸ್ಟಮ್ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಕಾರ್ಗೊ ಇತ್ಯಾದಿಗಳ ಕುರಿತು ಜ್ಞಾನಾರ್ಜನೆಯಾಗುತ್ತದೆ. ಹಾಗಾಗಿ, ಈ ಕೋರ್ಸ್ ನಂತರ ಏರ್‌ಲೈನ್ಸ್ ಮತ್ತು ಏರ್‌ಪೋರ್ಟ್‌ಗಳಲ್ಲಿ ಉದ್ಯೋಗಾವಕಾಶಗಳಿವೆ. ಆದರೆ, ಈಗ ಕೋವಿಡ್ ಕಾರಣದಿಂದ ಏರ್‌ಲೈನ್ಸ್ ಉದ್ದಿಮೆ ಸಂಕಷ್ಟದಲ್ಲಿದೆ. ಆದರೆ, ಇನ್ನೆರಡು ಮೂರು ವರ್ಷಗಳಲ್ಲಿ ಪುನಶ್ಚೇತನಗೊಂಡು ಪ್ರಗತಿಯ ಹಾದಿಗೆ ಬರುವ ನಿರೀಕ್ಷೆಯಿದೆ.

5. ನಾನು ಬಿಬಿಎ ಅಂತಿಮ ವರ್ಷದಲ್ಲಿದ್ದು ಮುಂದೆ ಎಂಬಿಎ (ಎಚ್‌ಆರ್) ಮಾಡಲು ಇಚ್ಛಿಸಿದ್ದೇನೆ. ಈ ಕೋರ್ಸ್ ನಂತರ ಉದ್ಯೋಗದ ಅವಕಾಶಗಳ ಕುರಿತು ತಿಳಿಸಿ.

ಆಸ್ಮ ಭಾನು, ಮೈಸೂರು.

ಆದಷ್ಟು, ಕ್ಯಾಂಪಸ್ ನೇಮಕಾತಿ ಇರುವ, ಉತ್ತಮ ರ‍್ಯಾಂಕಿಂಗ್ ಇರುವ ಪ್ರತಿಷ್ಠಿತ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಬೇಕು. ಈ ಮಾಹಿತಿಯನ್ನು ಅನೇಕ ಮಾಧ್ಯಮಗಳು ಅಂತರ್ಜಾಲದಲ್ಲಿ ಪ್ರಕಟಿಸುತ್ತವೆ.

ಎಂಬಿಎ (ಎಚ್‌ಆರ್) ಪದವೀಧರರಿಗೆ ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಅನುಭೂತಿ, ತಾಳ್ಮೆ, ಯೋಜನಾ ಶಕ್ತಿ, ಸಮಯದ ನಿರ್ವಹಣೆ, ಉತ್ತಮ ಸಂವಹನ, ಅಂತರ್ ವೈಯಕ್ತಿಕ ನೈಪುಣ್ಯತೆ, ನಾಯಕತ್ವದ ಕೌಶಲ ಸೇರಿದಂತೆ ಸಕಾರಾತ್ಮಕ ಮನೋಭಾವ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿದೆ. ಇವುಗಳನ್ನು ಉದ್ಯೋಗದ ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ.

ಸರ್ಕಾರಿ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಯುಪಿಎಸ್‌ಸಿ/ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಅನ್ವೇಷಿಸಬಹುದು.

6. ನಾನು ಪಿಯುಸಿ ಕಾಮರ್ಸ್ 2018ರಲ್ಲಿ ಉತ್ತರ ಪ್ರದೇಶದಿಂದ ಪಾಸಾಗಿದ್ದೇನೆ. ಈಗ ನಾನು ಬಿಎ ಅಥವಾ ಯಾವ ಕೋರ್ಸ್ ಮಾಡಬಹುದು?

ಮಾನಸ, ತುಮಕೂರು.

ನೀವು ಬಿಕಾಂ, ಬಿಎ, ಬಿಸಿಎ, ಬಿಬಿಎ, ಸಿಎ, ಎಸಿಎಸ್, ಐಸಿಎಂಎ ಕೋರ್ಸ್‌ಗಳನ್ನು ಮಾಡಬಹುದು.

7. ನಾನು ಬಿಎ ಮೊದಲ ವರ್ಷದಲ್ಲಿದ್ದೇನೆ ಮತ್ತು ಪೊಲೀಸ್ ಅಧಿಕಾರಿಯಾಗಬೇಕಾದರೆ ಯಾವ ಪರೀಕ್ಷೆಯನ್ನು ಬರೆಯಬೇಕು?

ಸುನೀಲ್ ಎಲ್, ಊರು ತಿಳಿಸಿಲ್ಲ.

ಪೊಲೀಸ್ ಇಲಾಖೆಗೆ ಸಂಬಂಧಿತ ಅನೇಕ ವಿಭಾಗಗಳಿವೆ ಮತ್ತು ಅನುಭವ, ಅರ್ಹತೆಯ ಆಧಾರದ ಮೇಲೆ ಹುದ್ದೆಗಳಿವೆ. ದೇಹದಾರ್ಢ್ಯತೆ, ಪೂರ್ವಭಾವಿ, ಫೈನಲ್ಸ್ ಸೇರಿದಂತೆ ಅನೇಕ ಹಂತಗಳ ಪರೀಕ್ಷೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://rec21.ksp-online.in/

8. ಕರ್ನಾಟಕದಲ್ಲಿ ಪದವಿಯ ನಂತರ ಅನ್ವಯವಾಗುವ ಹುದ್ದೆಗಳಿಗೆ ನಡೆಸುವ ರೈಲ್ವೆ ಪರೀಕ್ಷೆಗಳ ಬಗ್ಗೆ ತಿಳಿಸಿ.

ವಿಷ್ಣು ನಾಯಕ, ಊರು ತಿಳಿಸಿಲ್ಲ.

ರೈಲ್ವೇಸ್ ಹುದ್ದೆಗಳ ನೇಮಕಾತಿ, ಮೂರು ಹಂತದ ಪರೀಕ್ಷೆಗಳ ಮೂಲಕ ನಡೆಯುತ್ತದೆ.

1. ಕಂಪ್ಯೂಟರ್ ಬೇಸ್ಡ್ ಟೆಸ್ಟ್‌, ಹಂತ-1: ಎಲ್ಲಾ ಹುದ್ದೆಗಳಿಗೆ ಅನ್ವಯ.

2. ಕಂಪ್ಯೂಟರ್ ಬೇಸ್ಡ್ ಟೆಸ್ಟ್‌, ಹಂತ-2: ಆಯಾ ಹುದ್ದೆಗಳಿಗೆ ಅನ್ವಯವಾಗುವ ಪರೀಕ್ಷೆ.

3. ವೈದ್ಯಕೀಯ ಪರೀಕ್ಷೆ/ ದಾಖಲೆಗಳ ಪರಿಶೀಲನೆ.

ಪರೀಕ್ಷೆಯ ಮಾದರಿ, ವಿಷಯಸೂಚಿಕೆ ಮತ್ತು ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://rrbbnc.gov.in/

9. ನಾನು ಬಿಇ ( ಇಸಿಇ) ಮುಗಿಸಿದ್ದೇನೆ ಮತ್ತು ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ. ಮುಂದಿನ ಕೋರ್ಸ್ ಅಥವಾ ಸರ್ಕಾರಿ ಕೆಲಸಗಳ ಬಗ್ಗೆ ತಿಳಿಸಿ.

ಮನೋಜ್ ಕೆ, ಊರು ತಿಳಿಸಿಲ್ಲ.

ಯಾವುದೇ ಕೋರ್ಸ್ ಮಾಡುವ ಮುಂಚೆ ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿ ಜೀವನದ ಯೋಜನೆಯನ್ನು ಮಾಡಿದರೆ ಪದವಿಯ ನಂತರ ಮುಂದೇನು ಎನ್ನುವ ಯಾವುದೇ ಗೊಂದಲಗಳಿರುವುದಿಲ್ಲ. ಹಾಗಾಗಿ, ಈಗಲೂ ನಿಮಗಿರುವ ಅವಕಾಶಗಳ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ನಿಮ್ಮ ವೃತ್ತಿ ಜೀವನದ ಯೋಜನೆಯನ್ನು ರೂಪಿಸಿ.

ಬಿಇ ಪದವಿಯ ಆಧಾರದ ಮೇಲೆ ಯುಪಿಎಸ್‌ಸಿ/ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸಬಹುದು. ಖಾಸಗಿ ಕ್ಷೇತ್ರದ ಟೆಲಿಕಮ್ಯೂನಿಕೇಷನ್ಸ್, ಎಲೆಕ್ಟ್ರಾನಿಕ್ಸ್, ಐಟಿ, ಮೊಬೈಲ್, ಇಂಟರ್‌ನೆಟ್ ಕಂಪನಿಗಳಲ್ಲಿ ಉದ್ಯೋಗವನ್ನು ಅರಸಬಹುದು. ವೃತ್ತಿ ಜೀವನದ ಯೋಜನೆಯಂತೆ ವಿದ್ಯಾಭ್ಯಾಸವನ್ನು ಮುಂದುವರೆಸುವುದಾದರೆ ಎಂಇ, ಎಂಟೆಕ್, ಎಂಬಿಎ ಸೇರಿದಂತೆ ಅನೇಕ ಉನ್ನತ ಶಿಕ್ಷಣದ ಕೋರ್ಸ್‌ಗಳನ್ನು ಮಾಡಬಹುದು.

10. ಪ್ಯಾರಾ ಮೆಡಿಕಲ್ ಕೋರ್ಸ್ ಬಗ್ಗೆ ತಿಳಿಸಿ.

ವಿನಯ್, ಊರು ತಿಳಿಸಿಲ್ಲ.

ಈಗ ಹೆಚ್ಚಿನ ಬೇಡಿಕೆಯಿರುವ ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕೆಲವು ಪ್ಯಾರಾ ಮೆಡಿಕಲ್ ಕೋರ್ಸ್‌ಗಳೆಂದರೆ ಬಿಎಸ್‌ಸಿ ( ನರ್ಸಿಂಗ್, ಫಿಸಿಯೋಥೆರಪಿ, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಕ್ ಕೇರ್, ಅನಸ್ತೀಷಿಯ ಇತ್ಯಾದಿ).

ಸಾಮಾನ್ಯವಾಗಿ, ಇವೆಲ್ಲವೂ 3-4 ವರ್ಷದ ಕೋರ್ಸ್‌ಗಳು ಮತ್ತು ಕೋರ್ಸ್ ಮುಗಿದ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಸ್, ಲ್ಯಾಬೊರೇಟರೀಸ್, ಮೆಡಿಕಲ್ ಕಾಲೇಜುಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ಮಾಹಿತಿಗಾಗಿ, ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡನ್ನು ಸಂಪರ್ಕಿಸಿ.

11. ಮದುವೆಯಾಗುವ ಹುಡುಗನ ಜಾತಿ ಕುರುಬ ಆಗಿದ್ದು, ಹುಡುಗಿಯ ಜಾತಿ ನಾಯಕ (ಎಸ್‌ಟಿ) ಆಗಿದ್ದಾಗ, ಸರ್ಕಾರಿ ನೌಕರಿಯನ್ನು ಯಾವ ಜಾತಿಯ ಆಧಾರದ ಮೇಲೆ ಪಡೆಯಬಹುದು.

ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಅರ್ಜಿದಾರರ ಜಾತಿಗೆ ಅನ್ವಯಿಸುವ ಮೀಸಲಾತಿಯ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಪ್ರಯತ್ನಿಸಬೇಕು.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT