ಬುಧವಾರ, ಜುಲೈ 6, 2022
23 °C
ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಅವರೊಂದಿಗೆ ಪ್ರಜಾವಾಣಿ ಫೋನ್ ಇನ್

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದಕ್ಕೆ: ಗುಲಬರ್ಗಾ ವಿ.ವಿ. ಕುಲಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ 352 ಕಾಲೇಜುಗಳಲ್ಲಿ ವಿವಿಧ ಸೆಮಿಸ್ಟರ್ ಪರೀಕ್ಷೆ ಬರೆಯಲಿರುವ 24 ಸಾವಿರ ಪೈಕಿ 4 ಸಾವಿರ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಆಂತರಿಕ ಅಂಕಗಳು ಇನ್ನೂ ವಿಶ್ವವಿದ್ಯಾಲಯದ ಪೋರ್ಟಲ್‌ಗೆ ಸಲ್ಲಿಕೆಯಾಗಿಲ್ಲ. ಅವರು ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕುಲಪತಿ ಪ್ರೊ.ದಯಾನಂದ ಅಗಸರ  ಸ್ಪಷ್ಟಪಡಿಸಿದರು.

‘‍ಪ್ರಜಾವಾಣಿ’ ಕಲಬುರಗಿ ಕಚೇರಿಯಲ್ಲಿ ಶನಿವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ‍‍ಪರೀಕ್ಷೆಯನ್ನು ನಾಲ್ಕನೇ ಬಾರಿ ಮುಂದೂಡಿರುವ ಬಗ್ಗೆ ಬೀದರ್ ಜಿಲ್ಲೆ ಹಳ್ಳಿಖೇಡದ ವಿದ್ಯಾರ್ಥಿ ಚಂದ್ರಶೇಖರ, ವಿದ್ಯಾರ್ಥಿ ನಾಯಕಿ ಸ್ನೇಹಾ ಕಟ್ಟಿಮನಿ, ಸೇಡಂನ ನಾಗೇಶ್ ಸೇರಿ ಹಲವು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಬಳಿಕ ಪಠ್ಯಕ್ರಮ ರಚನೆ, ಕೋವಿಡ್ ನಿಮಿತ್ತ ಹೇರಲಾದ ಲಾಕ್‌ಡೌನ್‌ ಸೇರಿ ವಿವಿಧ ಕಾರಣಗಳಿಗಾಗಿ ತರಗತಿಗಳನ್ನು ತಡವಾಗಿ ಅರಂಭಿಸಲಾಗಿದ್ದು, ಎನ್‌ಇಪಿ ಜಾರಿಯಲ್ಲಿನ ಕೆಲ ಗೊಂದಲಗಳಿಂದ ಪರೀಕ್ಷೆಗಳು ತಡವಾಗಿದ್ದು ನಿಜ. ಅದರ ಜೊತೆಗೆ ವಿದ್ಯಾರ್ಥಿಗಳ ಮಾಹಿತಿ ವಿಶ್ವವಿದ್ಯಾಲಯಕ್ಕೆ ತಲುಪಿಲ್ಲ. ಕೊನೆಯ ಬಾರಿ ಎಲ್ಲ ಪದವಿ ಕಾಲೇಜುಗಳ ಪ್ರಾಚಾರ್ಯರಿಗೆ ವಿದ್ಯಾರ್ಥಿಗಳ ಆಂತರಿಕ ಅಂಕಗಳು ಹಾಗೂ ಹಾಜರಾತಿ ಮಾಹಿತಿ ಕಳಿಸಲು 24 ಗಂಟೆ ಗಡುವು ವಿಧಿಸಲಾಗಿದ್ದು, ಆ ನಂತರವೂ ಕಳಿಸದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಅವಕಾಶ ಸಿಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯ ಸದಾ ಸಿದ್ಧವಿದೆ. ಆದರೆ, ಕಾಲೇಜುಗಳು ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪರೀಕ್ಷೆಗಳನ್ನು ಮೇ 24ಕ್ಕೆ ಮುಂದೂಡಲಾಗಿದೆ. ನಿಗದಿಯಂತೆ ಅದೇ ದಿನ ಪರೀಕ್ಷೆ ನಡೆಯಲಿವೆ. ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ಕುಲಪತಿ ಅವರು ನೀಡಿದ ಉತ್ತರದ ಆಯ್ದ ಭಾಗ ಹೀಗಿದೆ.

* ಚಂದ್ರಕಾಂತ, ಮಹಾಗಾಂವ್ ಕ್ರಾಸ್: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮನಶಾಸ್ತ್ರ ಅಧ್ಯಯನಕ್ಕೆ ಅವಕಾಶವಿದೆಯೇ?

–ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಮನಶಾಸ್ತ್ರದ ಬಗ್ಗೆ ತಿಳಿವಳಿಕೆ ನೀಡುವ ಪಠ್ಯಗಳಿವೆ. ಏಕೆಂದರೆ, ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ಇಂದು ಅಗತ್ಯವಾಗಿದ್ದರಿಂದ ಯಾವುದೇ ಕೋರ್ಸ್‌ ಪಡೆದಿರುವ ವಿದ್ಯಾರ್ಥಿಯೂ ಇದನ್ನು ಕಡ್ಡಾಯವಾಗಿ ಅಧ್ಯಯನ ಮಾಡಲು ಶಿಕ್ಷಣ ನೀತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

* ಬಿ.ಎಂ. ರಾವೂರ, ಕಲಬುರಗಿ: ವಿಶ್ವವಿದ್ಯಾಲಯದ ಆವರಣದಲ್ಲಿರುವ ವಸತಿ ನಿಲಯಗಳ ಪರಿಸ್ಥಿತಿ ಸರಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

– ವಿಶ್ವವಿದ್ಯಾಲಯದ ಆವರಣದಲ್ಲಿ ವಸತಿ ನಿಲಯಗಳಿದ್ದರೂ ಅವುಗಳ ನಿರ್ವಹಣೆ ಆಯಾ ಇಲಾಖೆಗಳೇ ಮಾಡುತ್ತವೆ. ಯಾವ ಸೌಕರ್ಯಗಳ ಕೊರತೆ ಇದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಆ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.

* ರಮೇಶ ಧುತ್ತರಗಿ, ಚಿಂಚೋಳಿ: ಗುಲಬರ್ಗಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸಸಿ ನೆಡುವ ಮೂಲಕ ಹಸಿರು ವಾತಾವರಣ ನಿರ್ಮಿಸಲು ಯಾವ ಯೋಜನೆ ರೂಪಿಸಿದ್ದೀರಿ?

–ವಿಶ್ವವಿದ್ಯಾಲಯದ ಆವರಣದಲ್ಲಿ ಈ ಬಾರಿ ಒಂದು ಸಾವಿರ ಸಸಿಗಳನ್ನು ನೆಡುವ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಪ್ರಾದೇಶಿಕ ಅರಣ್ಯಾಧಿಕಾರಿಗಳ ಜೊತೆ ಚರ್ಚಿಸಿರುವೆ. ಕೆಲವೇ ದಿನಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವವಿದ್ಯಾಲಯದ ಪ್ರವೇಶದ್ವಾರದಿಂದಲೇ ಹಸಿರಾಗಿಸಲು ಕ್ರಮ ಕೈಗೊಳ್ಳಲಾಗುವುದು.

* ಆನ್‌ಲೈನ್‌ನಲ್ಲಿ ಹಾಲ್‌ಟಿಕೆಟ್‌ ಬರುತ್ತಿಲ್ಲ, ಕಾರಣವೇನು?‌

– ವಿಶ್ವವಿದ್ಯಾಲಯದ 24 ಸಾವಿರ ವಿದ್ಯಾರ್ಥಿಗಳಲ್ಲಿ ಈವರೆಗೆ 20 ಸಾವಿರ ಮಂದಿ ಮಾತ್ರ ನಿಗದಿತ ಶುಲ್ಕ ಭರಿಸಿದ್ದಾರೆ. ಇನ್ನೂ 4 ಸಾವಿರ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಅಲ್ಲದೇ, ನಿಮ್ಮ ಕಾಲೇಜುಗಳಿಂದ ಶುಲ್ಕ ಮಾಹಿತಿ, ಹಾಜರಿ ಮಾಹಿತಿ ಎಲ್ಲವೂ ಆನ್‌ಲೈನ್‌ನಲ್ಲಿ ಅಪ್ಲೋಡ್‌ ಆಗಬೇಕು. ಆಗ ಮಾತ್ರ ಹಾಲ್‌ಟಿಕೆಟ್‌ ಡೌನ್‌ಲೋಡ್‌ ಆಗುತ್ತದೆ. ಇಂಥ ಕೆಲಸಗಳನ್ನು ಆಯಾ ಕಾಲೇಜು ಪ್ರಾಂಶುಪಾಲರೇ ಮಾಡಬೇಕು. ಗೊಂದಲ ಇರುವವರು ಕಾಲೇಜುಗಳಲ್ಲಿ ವಿಚಾರಿಸಿ ಪರಿಹಾರ ಮಾಡಿಕೊಳ್ಳಿ.

‘ಪ್ರಜಾವಾಣಿ’ಗೆ ಧನ್ಯವಾದಗಳ ಹೊಳೆ

ಫೋನ್‌ ಇನ್‌ ಕಾರ್ಯಕ್ರಮ ಶುರುವಾಗುವ ಎರಡು ಗಂಟೆ ಮುಂಚಿನಿಂದಲೇ ವಿದ್ಯಾರ್ಥಿಗಳಿಂದ ಕರೆಗಳು ಶುರುವಾದವು. ಫೋನ್ ಇನ್ ಮುಗಿದ ಬಳಿಕ ಸಂಜೆಯವರೆಗೂ ಫೋನ್‌ ಕರೆಗಳ ಪ್ರವಾಹವೇ ಹರಿಯಿತು. ಹಲವು ವಿದ್ಯಾರ್ಥಿಗಳು, ಪಾಲಕರು ಕೂಡ ಅವಕಾಶ ಕಲ್ಪಿಸಿಕೊಟ್ಟ ‘ಪ್ರಜಾವಾಣಿ’ಗೆ ಕೃತಜ್ಞತೆ ಸಲ್ಲಿಸಿದರು.

ಕುಲಪತಿ ಪ್ರೊ. ದಯಾನಂದ ಅಗಸರ, ‘ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರೊಂದಿಗೆ ವಿಶ್ವವಿದ್ಯಾಲಯವನ್ನು ‘ಪ್ರಜಾವಾಣಿ’ ಬೆಸೆದಿದೆ. ವಿದ್ಯಾರ್ಥಿಗಳಲ್ಲಿದ್ದ ಆತಂಕ ದೂರ ಮಾಡಲು ಸಾಧ್ಯವಾಯಿತು. ಪ್ರಜಾವಾಣಿಗೆ ಧನ್ಯವಾದ’ ಎಂದರು.

ಎರಡು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಉನ್ನತ ಶಿಕ್ಷಣ ಇಲಾಖೆ ಅನುಮೋದನೆ ನೀಡಿದ್ದು, ಎರಡು ತಿಂಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರೊ.ದಯಾನಂದ ಅಗಸರ ಭರವಸೆ ನೀಡಿದರು.

30 ವರ್ಷಗಳಿಂದ ಬೋಧಕೇತರ ಸಿಬ್ಬಂದಿ ನೇಮಕವಾಗಿಲ್ಲ. ಮುಂದಿನ ದಿನಗಳಲ್ಲಿ ಅದಕ್ಕೂ ಅವಕಾಶ ಸಿಗಬಹುದು. ಸದ್ಯಕ್ಕೆ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಫ್ಲೊರೋಸಿಸ್‌ ವಿಭಾಗದ ಸಲಹೆಗಾರರಾದ ಡಾ.ರೇಖಾ ಚೌಧರಿ ಪ್ರಶ್ನಿಸಿದರು.

ವಿಶ್ವವಿದ್ಯಾಲಯ ಎಂದರೆ ಕೇವಲ ಕ್ಯಾಂಪಸ್‌ ಅಲ್ಲ

‘ಬಹುತೇಕ ಮಂದಿ ವಿಶ್ವವಿದ್ಯಾಲಯ ಎಂದರೆ, ಕಲಬುರಗಿಯಲ್ಲಿರುವ ಕ್ಯಾಂಪಸ್‌ ಎಂದು ಭಾವಿಸಿದ್ದಾರೆ. ಇದು ತಪ್ಪು.  ಎಲ್ಲ 352 ಕಾಲೇಜು, ಅವುಗಳ ಪ್ರಾಂಶುಪಾಲರು, ಬೋಧಕರು, ಸಿಬ್ಬಂದಿ, ವಿಶ್ವವಿದ್ಯಾಲಯ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಬಳಗ ಎಲ್ಲವೂ ಸೇರಿ ಒಂದು ವಿಶ್ವವಿದ್ಯಾಲಯವಾಗುತ್ತದೆ. ಹಾಗಾಗಿ, ಇಲ್ಲ ಎಲ್ಲರಿಗೂ ಸಮಾನ ಜವಾಬ್ದಾರಿಗಳು ಇರುತ್ತವೆ. ಎಲ್ಲರೂ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ

ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಆದರೆ, ಗುಣಮಟ್ಟದ ಶಿಕ್ಷಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಬಗ್ಗೆ ಏನು ಕ್ರಮ ವಹಿಸಿದ್ದೀರಿ ಎಂದು ಕೆಲವು ಪಾಲಕರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಲಪತಿ, ‘ಕಲ್ಯಾಣ ಕರ್ನಾಟಕ ಭಾಗ ಶಿಕ್ಷಣದಲ್ಲಿ ಹಿಂದುಳಿದಿದೆ ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ, ಅದು ಪೂರ್ಣ ಸತ್ಯವಲ್ಲ. ನಮ್ಮಲ್ಲಿ ಆಸಕ್ತರು, ಬುದ್ಧಿವಂತರು, ಪ್ರತಿಭಾವಂತರು ಇದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುತ್ತಿದ್ದೇವೆ’ ಎಂದರು.

‘ವಿ.ವಿ.ಗೆ ಕೆಕೆಆರ್‌ಡಿಬಿ ಹಣ ನೀಡಲಿ’

‘ಗುಲಬರ್ಗಾ ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ. ಪ್ರತಿ ಸಲ ಸರ್ಕಾರಕ್ಕೆ ಕೊಡಲಾಗುವುದಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ವಿ.ವಿ.ಗೆ ಅನುದಾನ ನೀಡಿದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದು ಪ್ರೊ. ದಯಾನಂದ ಅಗಸರ ಅಭಿಪ್ರಾಯಪಟ್ಟರು.

‘ಮೂಲಸೌಕರ್ಯ ಪೂರೈಸಲು ಹಣ ನೀಡಲು ಅವಕಾಶವಿಲ್ಲ ಎಂದು ಕೆಕೆಆರ್‌ಡಿಬಿ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ನಿಯಮದಲ್ಲಿ ತಿದ್ದುಪಡಿ ಮಾಡಿಯಾದರೂ ಅನುದಾನ ನೀಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.