ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಯ ನಂಟು ನಿತ್ಯ ನಿರಂತರ

Published 11 ಅಕ್ಟೋಬರ್ 2023, 23:50 IST
Last Updated 11 ಅಕ್ಟೋಬರ್ 2023, 23:50 IST
ಅಕ್ಷರ ಗಾತ್ರ

ಸುಮಾರು 90 ರ ದಶಕದವರೆಗೂ ಪ್ರತಿ ಸಣ್ಣ ಸಣ್ಣ ಹಳ್ಳಿಯಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಕಾಣುತ್ತಿದ್ದ ಕೆಂಪು ಬಣ್ಣದ ಡಬ್ಬ ಇಂದು ಬೆರಳೆಣಿಕೆಯಷ್ಟು ಮಾತ್ರ ಕಾಣ ಸಿಗುತ್ತಿದೆ. ಹೌದು,ಅಂಚೆ ಮೂಲಕ ಪತ್ರ ಎಂಬ ಜನಸಾಮಾನ್ಯರ ಮಿತ್ರ ಇಂದು ಪತ್ರ ವ್ಯವಹಾರ ಮರೆಯಾಗಿ ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ಕಾಣದಂತಾಗಿದೆ.ಆದರೂ ಅಂಚೆ ಕಛೇರಿ ಒದಗಿಸುವ ಹಲವಾರು ಸೌಲಭ್ಯಗಳು ಸದಾ ಜನಸ್ನೇಹಿಯಾಗಿವೆ.ಪ್ರತಿ ವರ್ಷ ಅಕ್ಟೋಬರ್ 9 ನ್ನು ವಿಶ್ವ ಅಂಚೆ ದಿನ ಎಂಬುದಾಗಿ ಆಚರಿಸುವ ಮೂಲಕ ಅಂಚೆಯ ಅನನ್ಯ ಸೇವೆಯನ್ನು ಗೌರವಿಸಲಾಗುತ್ತದೆ.

ಪತ್ರ ಬರಹ ಕಲೆ

ಕಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪತ್ರ ಬರವಣಿಗೆಯ ವಿಧಾನವನ್ನು ಕಲಿಸಿಕೊಡಲಾಗುತ್ತದೆ. ಆದರೆ ಕೇವಲ ಪರೀಕ್ಷಾ ದೃಷ್ಟಿಯಿಂದ ಇದನ್ನು ಕಲಿಯುವ ಮಕ್ಕಳು ಕ್ರಮೇಣ ಪತ್ರ ಬರವಣಿಗೆಯ ಅಭ್ಯಾಸವನ್ನು ಕೈಬಿಡುತ್ತಾರೆ. ಪದವಿ ಶಿಕ್ಷಣ ಪಡೆದರೂ ವ್ಯಾವಹಾರಿಕ ಪತ್ರ ಬರೆಯಲು ಕಷ್ಟ ಪಡುವ ಬಹಳಷ್ಟು ಯುವ ಜನತೆ ನಮ್ಮ ನಡುವೆ ಇದ್ದಾರೆ. ಹಾಗಾಗಿ ಪತ್ರ ಬರಹ ಕೇವಲ ಪರೀಕ್ಷಾ ಅಂಕಗಳಿಗೆ ಸೀಮಿತವಾಗಿ ಕಲಿಯದೆ ಅದನ್ನು ರೂಢಿಗತ ಮಾಡಿಕೊಂಡಾಗ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗ ವ್ಯಾವಹಾರಿಕ ಕೆಲಸಗಳಿಗೆ ಅನುಕೂಲವಾಗುತ್ತದೆ.ಜಗತ್ತಿನ ಅನೇಕ ಮಹಾನ್ ಸಾಧಕರು ಬರೆದ ಪತ್ರಗಳು ಇಂದಿಗೂ ಬರಹಗಾರರಿಗೆ ಪ್ರೇರಕ ಶಕ್ತಿಯಾಗಿವೆ.ಕುವೆಂಪುರವರು ಮಗ ತೇಜಸ್ವಿಯವರಿಗೆ ಬರೆದ ಪತ್ರ,ನೆಹರುರವರು ಜೈಲಿನಲ್ಲಿದ್ದಾಗ ಮಗಳು ಇಂದಿರಾ ಗಾಂಧಿಯವರಿಗೆ ಬರೆದ ಪತ್ರ, ಅಬ್ರಹಾಂ ಲಿಂಕನ್ ತನ್ನ ಮಗನನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಮಾಡಿಕೊಂಡ ಕಳಕಳಿಯ ವಿನಂತಿ ಪತ್ರ,ಇತ್ಯಾದಿ ಪತ್ರಗಳು ಇಲ್ಲಿ ಉಲ್ಲೇಖನೀಯ.ವೈಯಕ್ತಿಕ ಪತ್ರ ಮತ್ತು ವ್ಯಾವಹಾರಿಕ ಪತ್ರಗಳನ್ನು ಬರೆಯುವಾಗ ನಿರ್ದಿಷ್ಟ ಒಕ್ಕಣೆ ಕ್ರಮವನ್ನು ಅನುಸರಿಸಿ ಬರೆಯಬೇಕಿದೆ.ಅಂಚೆಯ ಪತ್ರ ಬರಹದಲ್ಲಿ ಒಕ್ಕಣೆ, ವಿಳಾಸ,ಪಿನ್ ಕೋಡ್ ಇವುಗಳ ಬಳಕೆ ಬಹಳ ಮುಖ್ಯವಾದುದು.

ವಿಶ್ವ ಅಂಚೆ ದಿನ

ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ಜನರ ದೈನಂದಿನ ಜೀವನದಲ್ಲಿ ಅಕ್ಷರಗಳೊಂದಿಗೆ ಕ್ರಾಂತಿಕಾರಿ ಸಂವಹನ ವಿಧಾನದ ರಚನೆಯನ್ನು ಗುರುತಿಸಲು ಈ ದಿನ ವಿಶೇಷವಾಗಿ ಆಚರಿಸಲ್ಪಡುತ್ತದೆ .1874 ರಲ್ಲಿ ಸ್ವಿಟ್ಜರ್ಲ್ಯಾಂಡ್ ನ ಬರ್ನ್ ನಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಸ್ಥಾಪನೆಯ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.1969 ರ ಅಕ್ಟೋಬರ್ 9 ರಂದು ವಿಶ್ವ ಅಂಚೆ ಒಕ್ಕೂಟವು ಜಪಾನ್ ನ ಟೋಕಿಯೋದಲ್ಲಿ ಈ ದಿನಾಚರಣೆಯನ್ನು ಆಚರಿಸುವಂತೆ ಘೋಷಿಸಿತು.

ಮಕ್ಕಳಿಗಾಗಿ PM ಕೇರ್ಸ್ ಯೋಜನೆ

COVID-19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಅಥವಾ ಉಳಿದಿರುವ ಪೋಷಕರು ಅಥವಾ ಕಾನೂನು ಪಾಲಕರು ಅಥವಾ ದತ್ತು ಪಡೆದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಬೆಂಬಲಿಸಲು ಮಕ್ಕಳಿಗಾಗಿ PM ಕೇರ್ಸ್ ಯೋಜನೆಯನ್ನು 2021 ರಲ್ಲಿ ಆರಂಭಿಸಲಾಯಿತು. ಈ ಯೋಜನೆಯ ಉದ್ದೇಶವು ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ಸುಸ್ಥಿರ ರೀತಿಯಲ್ಲಿ ಖಚಿತಪಡಿಸುವುದು ಮತ್ತು ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಸಕ್ರಿಯಗೊಳಿಸುವುದು, ಶಿಕ್ಷಣದ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಮತ್ತು 23 ವರ್ಷ ವಯಸ್ಸಿನವರೆಗೆ ಆರ್ಥಿಕ ಬೆಂಬಲದೊಂದಿಗೆ ಸ್ವಾವಲಂಬಿ ಅಸ್ತಿತ್ವಕ್ಕೆ ಅವರನ್ನು ಸಜ್ಜುಗೊಳಿಸುವುದಾಗಿದೆ.ಇಲ್ಲಿ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲಾಗುತ್ತದೆ ಮತ್ತು PM CARES ನಿಧಿಯಿಂದ ಮುಂಗಡ ಮೊತ್ತದ ಪಾವತಿಯನ್ನು ಮಾಡಲಾಗುತ್ತದೆ. ಠೇವಣಿ ಮೊತ್ತವು ₹ 10 ಲಕ್ಷಗಳು ಮತ್ತು ಫಲಾನುಭವಿಯು 18 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳು ₹ 4000 ಮಾಸಿಕ ಸ್ಟೈಫಂಡ್ ಅನ್ನು ಪಡೆಯುತ್ತಾರೆ. ಅದರ ನಂತರ, ಅವರು 23 ವರ್ಷ ವಯಸ್ಸಿನವರೆಗೆ ₹ 10 ಲಕ್ಷಗಳ ಮಾಸಿಕ ಆದಾಯ ಖಾತೆಯ ಯೋಜನೆಯ ಪ್ರಕಾರ ಬಡ್ಡಿಯನ್ನು ಗಳಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆ

ಹೆಸರೇ ಸೂಚಿಸುವಂತೆ ಇದು ಹೆಣ್ಣು ಮಕ್ಕಳಿಗಾಗಿಯೇ ಇರುವ ಯೋಜನೆ.10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಈ ಖಾತೆಯನ್ನು ತೆರೆಯಬಹುದು. ಯೋಜನೆಯನ್ನು ಪೋಷಕರು ಇಬ್ಬರು ಪುತ್ರಿಯರಿಗೆ ಮಾತ್ರ ತೆರೆಯಬಹುದು. ವಾರ್ಷಿಕ ಕನಿಷ್ಠ 250 ರೂಪಾಯಿ ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದು.ಈ ಯೋಜನೆ ಪ್ರಾರಂಭವಾದ ದಿನಾಂಕದಿಂದ 21 ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ. ಖಾತೆಯ ಬಾಕಿ ಮೊತ್ತದ 50 ಪ್ರತಿಶತದವರೆಗೆ ಭಾಗಶಃ ಹಿಂಪಡೆಯುವಿಕೆಯನ್ನು ಹೆಣ್ಣು ಮಗುವಿನ ಶಿಕ್ಷಣದ ವೆಚ್ಚಕ್ಕೆ 18 ವರ್ಷ ಪೂರೈಸಿದ ನಂತರ ಪಡೆದುಕೊಳ್ಳಬಹುದಾಗಿದೆ. ಒಂದು ಮಗುವಿಗೆ ಕೇವಲ ಒಂದೇ ಖಾತೆ ತೆರೆಯಲು ಅವಕಾಶವಿದೆ.ಖಾತೆ ತೆರೆದ ನಂತರ  ಗರಿಷ್ಠ ರೂ.೧,೫೦,೦೦೦ ಗಳನ್ನು ಖಾತೆಗೆ ತುಂಬಬಹುದು . ರೂ 250 ಕ್ಕಿಂತ ಕಡಿಮೆ ಹಣವನ್ನು ತುಂಬಿದರೆ ಅಥವಾ ಆ ವರ್ಷ ಖಾತೆಗೆ ಹಣವೇ ತುಂಬದಿದ್ದ ಪಕ್ಷದಲ್ಲಿ ರೂ.೫೦ ದಂಡವನ್ನಾಗಿ ಪಾವತಿಸಬೇಕು. ಹೆಣ್ಣು ಮಗು ಹತ್ತು ವರ್ಷ ಪೂರೈಸಿದ ನಂತರ ಆಕೆಯೇ ಆ ಖಾತೆಯನ್ನು ನಿಭಾಯಿಸಬಹುದು.

ಅಂಚೆ ಕಛೇರಿಯಲ್ಲಿ ಇತರ ಉಳಿತಾಯ ಯೋಜನೆಗಳು

ಅಂಚೆ ಕಚೇರಿ ಮೂಲಕ ಹಲವಾರು ಉಳಿತಾಯ ಯೋಜನೆಗಳನ್ನು ನಿರ್ವಹಿಸಬಹುದು.ಪೋಸ್ಟ್ ಆಫೀಸ್ ಉಳಿತಾಯ ಖಾತೆ ,ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD ),ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ ,ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ ,ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಇತ್ಯಾದಿ.

ಅಂಚೆ ಚೀಟಿ ಸಂಗ್ರಹದ ಹವ್ಯಾಸ

ಅಂಚೆಚೀಟಿಗಳು ವೈವಿಧ್ಯಮಯವಾಗಿರುವುದರಿಂದ ಅಂಚೆ ಚೀಟಿ ಸಂಗ್ರಹ ಒಂದು ಉತ್ತಮ ಹವ್ಯಾಸವಾಗಿದೆ.ವಿದೇಶಿ ಅಂಚೆ ಚೀಟಿಗಳನ್ನೂ ಸಂಗ್ರಹಿಸಬಹುದು. ಅಂಚೆ ಚೀಟಿ ಸಂಗ್ರಹದ ಆಸಕ್ತಿ ಇರುವವರು ಅಂಚೆ ಇಲಾಖೆಯಲ್ಲಿ ನಿಗದಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಂಡರೆ,ಇಲಾಖೆ ಯಾವುದೇ ಹೊಸ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರೂ ಅದನ್ನು ನೋಂದಣಿ ಮಾಡಿಕೊಂಡವರಿಗೆ ಕಳುಹಿಸಿಕೊಡಲಾಗುತ್ತದೆ.

ಪುರಾಣ ಮತ್ತು ರಾಜಮಹಾರಾಜರ ಕಾಲದಲ್ಲಿ ಪಾರಿವಾಳದ ಮೂಲಕ ಸುದ್ದಿಯನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಿಸುವ ಕಾಲಘಟ್ಟದಿಂದ ಇಂದಿನ ವಿದ್ಯುನ್ಮಾನ ಆಧಾರಿತ ವಿವಿಧ ಸೇವೆಯವರೆಗೂ ಅಂಚೆ ವ್ಯವಸ್ಥೆ ತನ್ನದೇ ಆದ ಛಾಪು ಮೂಡಿಸಿದೆ. ಮಕ್ಕಳು ಕೇವಲ ಪುಸ್ತಕದ ಓದಿಗೆ ತಮ್ಮ ಕಲಿಕಾ ಅವಧಿಯನ್ನು ಸೀಮಿತಗೊಳಿಸಿಕೊಳ್ಳದೆ,ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಸೇವೆಗಳ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT