ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಚ್ವಾಯಿ: ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆ

ಯು.ಟಿ. ಆಯಿಶಾ ಫರ್ಝಾನ
Published 29 ನವೆಂಬರ್ 2023, 22:50 IST
Last Updated 29 ನವೆಂಬರ್ 2023, 22:50 IST
ಅಕ್ಷರ ಗಾತ್ರ

ಪಿಚ್ವಾಯಿ ಕಲಾಪ್ರಕಾರವು ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆಯಾಗಿದೆ. ಇದು ಧಾರ್ಮಿಕ ಪರಂಪರೆಯ ಸಾಂಪ್ರದಾಯಿಕ ಚಿತ್ರಕಲೆ.

‘ಪಿಚ್ವಾಯಿ’ ಎಂಬ ಪದವು ಸಂಸ್ಕೃತ ಪದಗಳಾದ ‘ಪಿಚ್’ (ಹಿಂಭಾಗ) ಮತ್ತು ‘ವೈಸ್’(ನೇತಾಡುವಿಕೆ) ಗಳಿಂದ ಮೂಡಿದ್ದು, ಇದು ನಾಥದ್ವಾರ ದೇವಸ್ಥಾನಗಳಲ್ಲಿ ಕೃಷ್ಣನ ಶ್ರೀನಾಥಜಿ ರೂಪವನ್ನು ಅಲಂಕರಿಸುವ ಹಿನ್ನೆಲೆಯಲ್ಲಿ ಬಳಸುವ ಕಲೆಯಾಗಿದೆ. 

ಸುದೀರ್ಘ ಇತಿಹಾಸವಿರುವ ಈ ಚಿತ್ರಕಲೆಯು 17ನೇ ಶತಮಾನದ್ದು. ಪುಷ್ಟಿ ಮಾರ್ಗ ಅಥವಾ  ವಲ್ಲಭ ಸಂಪ್ರದಾಯ ಪಂಥದ ಭಕ್ತಿ ಆಚರಣೆಗಳ ಭಾಗವಾಗಿದೆ. 

ಈ ಕಲೆಯ ಲಕ್ಷಣಗಳು

ಗಾಢ ಬಣ್ಣಗಳು: ಪಿಚ್ವಾಯಿ ಕಲಾಕೃತಿಗಳು ಗಾಢಬಣ್ಣಕ್ಕೆ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ನೈಸರ್ಗಿಕವಾದ ಗಾಢ ನೀಲಿ, ಕೆಂಪು, ಕೇಸರಿ ಮತ್ತು ಹೊನ್ನಿನ ಬಣ್ಣಗಳನ್ನು ಬಳಸಲಾಗುತ್ತದೆ.  

ಧಾರ್ಮಿಕ ಅನುಭೂತಿ : ಪಿಚ್ವಾಯಿ ಕಲೆಗಳಲ್ಲಿ ಪ್ರಧಾನವಾಗಿ ಶ್ರೀಕೃಷ್ಣನ ಜೀವನದ ಕಥೆಗಳನ್ನು ರೂಪಿಸಲಾಗುತ್ತದೆ. ವಿವಿಧ ರಾಸ್ ಲೀಲಾಗಳು (ದೈವಿಕ ನೃತ್ಯಗಳು) ಮತ್ತು ಬಾಲ್ಯ ಮತ್ತು ಯೌವನದ ಪ್ರಸಂಗಗಳನ್ನು ಬಣ್ಣಗಳಲ್ಲಿ ನಿರೂಪಿಸಲಾಗುತ್ತದೆ.  ಹಲವು ದೇಗುಲಗಳಲ್ಲಿ ಶ್ರೀಕೃಷ್ಣ ಪರಮಾತ್ಮನ ಬದುಕನ್ನು ವಿವರಿಸುವ ಚಿತ್ರವಾಗಿಯೂ ಬಳಕೆಯಾಗುತ್ತದೆ. 

ಸಂಕೀರ್ಣ ವಿವರಗಳು : ಪಿಚ್ವಾಯಿ ಚಿತ್ರಗಳಲ್ಲಿ ಸಂಕೀರ್ಣ ವಿವರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.  ವೇಷಭೂಷಣ, ಆಭರಣಗಳು ಮತ್ತು ದೇವತಾಪುರುಷ ಹಾಗೂ ಸ್ತ್ರೀಯರ ಭಾವಾಭಿವ್ಯಕ್ತಿಯನ್ನು ಸೂಕ್ಷ್ಮವಾಗಿ ಹಿಡಿದಿಡಲಾಗುತ್ತದೆ. ಇದನ್ನು ರಚಿಸುವ ಕಲಾವಿದರು ಆಧ್ಯಾತ್ಮಿಕ ಭಾವಕ್ಕೆ ಹೆಚ್ಚು ಒತ್ತು ನೀಡುತ್ತಾರೆ. 

 ಬಟ್ಟೆಯ ಬಳಕೆ : ಪಿಚ್ವಾಯಿ ಕಲೆಯನ್ನು ವಿಶಿಷ್ಟವಾಗಿ ಬಟ್ಟೆಯ ಮೇಲೆ ಅದರಲ್ಲಿಯೂ ಹತ್ತಿ  ಅಥವಾ ರೇಷ್ಮೆ ಬಟ್ಟೆಗಳ ಮೇಲೆ ಬಿಡಿಸಲಾಗುತ್ತದೆ. ಇಲ್ಲಿ ಬಟ್ಟೆಯೇ ಕ್ಯಾನ್ವಾಸ್‌. ಈ ಕಲೆಯಲ್ಲಿ  ಬಳಸುವ ಬಟ್ಟೆಗಳು ಸಾಕಷ್ಟು ದೊಡ್ಡದಾಗಿದ್ದು ಇವುಗಳನ್ನು ಮುಖ್ಯ ದೇವತೆಯ ಹಿಂದೆ ದೇವಾಲಯದ ಗೋಡೆಗಳ ಮೇಲೆ ನೇತುಹಾಕುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.

 ಭಕ್ತಿ ಕಲೆ: ಪಿಚ್ವಾಯಿ ಚಿತ್ರಗಳು ಕೇವಲ ಒಂದು ಕಲಾಪ್ರಕಾರವಾಗಿರದೇ ಅವು ಪುಷ್ಟಿ ಮಾರ್ಗ ಪಂಥದ ಭಕ್ತಿ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ. ಹಬ್ಬಗಳು, ಆಚರಣೆಗಳು ಮತ್ತು ನಿರ್ದಿಷ್ಟ ಋತುಗಳನ್ನು ಆಚರಿಸಲು ಅವುಗಳನ್ನು ಬಳಸಲಾಗುತ್ತದೆ. 

ಸಂಕೇತ ಸಾರ: ಪಿಚ್ವಾಯಿ ಕಲೆಯು ಮುಖ್ಯವಾಗಿ ಹಲವು ಸಂಕೇತಗಳ ಸಾರವಾಗಿದೆ. ಬಣ್ಣಗಳಲ್ಲಿ ಸಂಕೇತವನ್ನು ಬಳಸಿ ನಿರ್ದಿಷ್ಟ ಕಥೆಯನ್ನು ನಿರೂಪಿಸುವ ಕುಸುರಿಯಾಗಿದೆ. ಕೃಷ್ಣ ಪರಮಾತ್ಮನ ಬಾಲ್ಯದ ಲೀಲಾವಳಿಗಳಿಂದ ಹಿಡಿದು ಕೃಷ್ಣ ರಾಧೆಯ ದೈವಿಕ ಪ್ರೇಮದ ಹಲವು ಪ್ರಸಂಗಗಳನ್ನು ಈ ಕಲೆಯಲ್ಲಿ ನಿರೂಪಿಸಲಾಗಿದೆ. ‌

 ಕಲಾತ್ಮಕ ಅಭಿವ್ಯಕ್ತಿಯಾಗಿರದೆ ಆರಾಧನೆಯ ಪ್ರಬಲ ಮಾಧ್ಯಮವಾಗಿಯೂ ಪಿಚ್ವಾಯಿ ಕಲೆ ಬೆಳೆದು ನಿಂತಿದೆ. ನಾಥದ್ವಾರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿಗೂ ಪ್ರತಿಭಾವಂತ ಕಲಾವಿದರು ಈ ಶ್ರೀಮಂತ ಕಲಾಪರಂಪರೆಯನ್ನು ಸಂರಕ್ಷಿಸಿ, ಮುನ್ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT