ಶನಿವಾರ, ಮೇ 21, 2022
23 °C

ಸ್ವಯಂ ಉದ್ಯೋಗದ ಅವಕಾಶಗಳೇನು?

ವಿ. ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

1 ಇತ್ತೀಚೆಗೆ ಅಂತಿಮ ಪದವಿ ಮಗಿಸಿದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗಕ್ಕೆ ಮಾರ್ಗಗಳು ಇವೆಯೇ?

 ಶಿವರಾಜ ಎಂ.ಕೆ., ಗದಗ.

ಮುಂದಿನ ಭವಿಷ್ಯವನ್ನು ರೂಪಿಸಲು ಸ್ವಯಂ ಉದ್ಯೋಗ ಒಂದು ಶ್ಲಾಘನೀಯ ಮತ್ತು ಅನುಕರಣೀಯ ಮಾರ್ಗ. ನಿಮ್ಮ ಜ್ಞಾನ, ಕೌಶಲ, ಆಸಕ್ತಿ ಮತ್ತು ಅವಕಾಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವ ಉದ್ಯಮ ನಿಮಗೆ ಸೂಕ್ತ ಎಂದು ಮೊದಲು ಗುರುತಿಸಬೇಕು. ಹೆಚ್ಚು ಬಂಡವಾಳವಿಲ್ಲದ ಅನೇಕ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಜೊತೆಗೆ ನವೋದ್ಯಮಗಳ (ಸ್ಟಾರ್ಟ್‌ಅಪ್) ಅವಕಾಶಗಳೂ ಹೇರಳವಾಗಿವೆ. ಗ್ರಾಹಕರ ಬೇಡಿಕೆ ಅಥವಾ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ಉತ್ಪನ್ನ ಅಥವಾ ಸೇವೆಯನ್ನು ಗುರುತಿಸುವುದು ಮತ್ತು ಉದ್ಯಮವನ್ನು ಸಮರ್ಪಕವಾಗಿ ನಿರ್ವಹಿಸುವುದು ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ.

ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಮತ್ತು ಸ್ವಯಂ ಉದ್ಯೋಗಾಕಾಂಕ್ಷಿಗಳನ್ನು ಉತ್ತೇಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳ ಅಡಿಯಲ್ಲಿ ಪಿಎಂಇಜಿಪಿ ಸೇರಿದಂತೆ ಅನೇಕ ಯೋಜನೆಗಳಿವೆ. ಕೌಶಲಾಭಿವೃದ್ಧಿ, ಸಾಲ, ಧನಸಹಾಯ ಇತ್ಯಾದಿ ಸರ್ಕಾರದ ಸೌಲಭ್ಯಗಳನ್ನು ನಿಮ್ಮ ಯೋಜನೆಗೆ ಅನುಗುಣವಾಗಿ ಉಪಯೋಗಿಸಿಕೊಳ್ಳಬೇಕು. ಇವೆಲ್ಲವನ್ನೂ ನೀವೇ ನಿರ್ವಹಿಸಲು ಕಷ್ಟವೆನಿಸಿದರೆ ಉದ್ಯಮ ಸಮಾಲೋಚಕರು ಅಥವಾ ಮಾರ್ಗದರ್ಶಕರ ಬೆಂಬಲವನ್ನು ಪಡೆಯಬಹುದು.

2 ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದೇನೆ. ಮುಂದೆ ಎಂಎಸ್ ಮಾಡುವಂತೆ ಪೋಷಕರು ಹೇಳುತ್ತಿದ್ದಾರೆ. ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಯಾವ ಎಂಎಸ್ ಕೋರ್ಸ್ ಇದೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ದಯ ಮಾಡಿ ಪಠ್ಯ, ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಭಾರತದಲ್ಲೇ ಎಂಎಸ್ ಮಾಡಬೇಕು ಎಂದಿದ್ದೇನೆ.

ದರ್ಶನ್ ಬಿ., ಊರು ತಿಳಿಸಿಲ್ಲ.

ಐಐಟಿ ಸೇರಿದಂತೆ ದೇಶದ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಬಂಧಿತ ಎಂಎಸ್ ಕೋರ್ಸ್ ಮಾಡುವ ಅವಕಾಶಗಳಿವೆ. ಈ ಕೋರ್ಸ್ ಮಾಡಲು ಜಿಎಟಿಇ (ಗೇಟ್) ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://engineering.careers360.com/colleges/list-of-ms-in-mechanical-eng...

ಇದಲ್ಲದೆ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯ ನಂತರ ಎಂಇ ಅಥವಾ ಎಂಟೆಕ್ ಕೋರ್ಸ್ ಕೂಡಾ ಮಾಡಬಹುದು.

3 ಸರ್, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ಕ್ಷೇತ್ರಗಳಲ್ಲಿನ ಅವಕಾಶಗಳೇನು? ಈ ಕೋರ್ಸ್‌ಗಳು ಭವಿಷ್ಯದಲ್ಲಿ ಉಪಯುಕ್ತವೇ?

ದೈವಿಕ್ ಎಂ., ಹಾಸನ.

ವೈದ್ಯಕೀಯ ವಿಜ್ಞಾನ ಒಂದು ವಿಸ್ತಾರವಾದ ಕ್ಷೇತ್ರ. ವಿಶೇಷವಾದ ಸಾಮರ್ಥ್ಯವಿರುವ ವ್ಯಕ್ತಿಗಳು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ನೆರವಾಗುವ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ಕ್ಷೇತ್ರದಲ್ಲಿ ವೃತ್ತಿಯನ್ನು ಬಯಸುವುದಾದರೆ, 4 ವರ್ಷದ ಬಿಪಿಒ ಕೋರ್ಸ ಅನ್ನು ಮಾಡಬೇಕು. ಕೋರ್ಸ್ ಮಾಡಿದ ನಂತರ, ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ತರಬೇತಿ ಇರುತ್ತದೆ. ಈ ಕೋರ್ಸ್ ನಂತರ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು, ಪುನರ್ವಸತಿ ಕೇಂದ್ರಗಳು, ಶುಶ್ರೂಷ ಕೇಂದ್ರಗಳಲ್ಲಿ ಉದ್ಯೋಗವನ್ನು ಅರಸಬಹುದು ಅಥವಾ ಇದೇ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ತಜ್ಞತೆಯನ್ನು ಪಡೆದುಕೊಳ್ಳಬಹುದು. ಸದ್ಯಕ್ಕೆ ನಿಯಮಿತವಾದ ಬೇಡಿಕೆಯಿದ್ದರೂ ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಸೃಷ್ಟಿಯಾಗುವ ಲಕ್ಷಣಗಳಿವೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ:

https://www.careers360.com/careers/orthotist-and-prosthetist

4 ಸರ್, ನಾನು ಈ ವರ್ಷ ಎಂಜಿನಿಯರಿಂಗ್ (ಸಿವಿಲ್) ಮುಗಿಸಿದ್ದೇನೆ. ಬ್ಯಾಂಕ್ ಪರೀಕ್ಷೆಗಳ ಬಗ್ಗೆ ಮಾಹಿತಿ ತಿಳಿಸಿ.

ಕಿರಣ್, ಬೆಂಗಳೂರು.

ಪದವಿಯ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಗಳಿಗೆ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ನೇಮಕಾತಿ ಆಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://www.collegedekho.com/articles/upcoming-bank-exams

5 ನನ್ನ ಎತ್ತರ 166.5 ಸೆ.ಮೀ ಇದೆ. ಹುದ್ದೆಗಳಿಗೆ 168 ಸೆ.ಮೀ. ಎತ್ತರ ಕಡ್ಡಾಯವೇ? ಹಾಗಾದರೆ ನಾನು ಕೆಎಸ್‌ಪಿ ಉದ್ಯೋಗಕ್ಕೆ ಅರ್ಹ ಅಲ್ಲವೇ? ನನ್ನ ವಿದ್ಯಾರ್ಹತೆ ಬಿಇ (ಮೆಕ್ಯಾನಿಕಲ್-2021).

ಸಂಜಯ್ ಕುಮಾರ್, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಪೊಲಿಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಕನಿಷ್ಠ 168 ಸೆ.ಮೀ. ಎತ್ತರ ಕಡ್ಡಾಯವಾಗಿರುತ್ತದೆ. ಆದರೆ, ಯುಪಿಎಸ್‌ಸಿ ಪರೀಕ್ಷೆಯ ಮುಖಾಂತರ ಆಯ್ಕೆಯಾಗುವ ಐಪಿಎಸ್ ಅಧಿಕಾರಿಗಳಿಗೆ 165 ಸೆ.ಮೀ. ಎತ್ತರ ಕಡ್ಡಾಯವಿರುತ್ತದೆ. ನೀವು ಕೆಎಎಸ್ ಪರೀಕ್ಷೆಯ ಮುಖಾಂತರ ರಾಜ್ಯದ ಗೃಹ ಇಲಾಖೆಯ ಇನ್ನಿತರ ಹುದ್ದೆಗಳಿಗೂ ಪ್ರಯತ್ನಿಸಬಹುದು.

6 ನನ್ನ ವಯಸ್ಸು 32. ಸದ್ಯದ ಪರಿಸ್ಥಿತಿಯಲ್ಲಿ ನಾನೊಬ್ಬ ನಿರುದ್ಯೋಗಿ. ನಾನು ಸ್ವಯಂ-ಉದ್ಯೋಗಿ ಆಗಲು ಬಯಸುವೆ. ಇತ್ತೀಚೆಗಷ್ಟೇ ಬಿಎ ಪರೀಕ್ಷೆ ಬರೆದಿರುವೆ. ನಾನು ಲಾಯರ್ ಪರೀಕ್ಷೆ ತಗೆದುಕೊಳ್ಳಬಹುದೇ? ಅರ್ಹತೆಗಳ ಬಗ್ಗೆ ಮಾಹಿತಿ ಹಾಗೂ ವಯಸ್ಸಿನ ಮಿತಿಯನ್ನು ತಿಳಿಸಿಕೊಡಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ.

ವಿನಯ್, ಊರು ತಿಳಿಸಿಲ್ಲ.

ಅನೇಕ ಉಚ್ಛ ನ್ಯಾಯಾಲಯಗಳಲ್ಲಿ ವಯೋಮಿತಿ ನಿಬಂಧನೆ ಕುರಿತ ಅರ್ಜಿಗಳ ವಿಚಾರಣೆ ನಡೆದ ನಂತರ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಲು ಇದ್ದ 30 ವರ್ಷದ ಗರಿಷ್ಠ ವಯೋಮಿತಿಯನ್ನು ಸಡಿಲಿಸಲಾಗಿದ್ದು ಈಗ ಯಾವುದೇ ವಯೋಮಿತಿಯ ನಿಬಂಧನೆಯಿಲ್ಲ ಎಂಬ ವರದಿಯಿದೆ. ಆದರೂ, ಅನೇಕ ಕಾಲೇಜುಗಳಲ್ಲಿ ಹಳೆಯ ವಯೋಮಿತಿಯ ಉಲ್ಲೇಖವೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ, ಖಚಿತವಾದ ಮಾಹಿತಿಗಾಗಿ ನೀವು ಸೇರಬಯಸುತ್ತಿರುವ ಕಾಲೇಜಿನಲ್ಲಿ ವಿಚಾರಿಸಿ. ಬಿಎ ಪದವಿಯ ಕೋರ್ಸ್ ನಂತರ ಎಲ್‌ಎಲ್‌ಬಿ ಕೋರ್ಸ್ ಮಾಡಿ ಲಾಯರ್ ವೃತ್ತಿಯನ್ನು ಅನುಸರಿಸಲು ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಪಾಸಾಗಿ ನೋಂದಾಯಿಸಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು