ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಗಾವಲಿಗೆ ‘ಸ್ಕೂಲ್‌ ಸ್ಮಾರ್ಟ್‌’

Last Updated 2 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಶಾಲೆಗೆಂದು ಮನೆಯಿಂದ ಹೊರಟ ಮಗು ಶಾಲೆಯನ್ನು ಸುರಕ್ಷಿತವಾಗಿ ತಲುಪಿದೆಯಾ? ಶಾಲಾ ವಾಹನದಲ್ಲಿ ಮಗುವಿಗೆ ಅಸುರಕ್ಷತೆ ಕಾಡಿದೆಯಾ? ಶಾಲಾ ಆವರಣದಲ್ಲಿ ಮಗು ಯಾವುದಾದರೂ ಅಪಾಯಕ್ಕೆ ಸಿಲುಕಿದೆಯಾ? ಇಂಥ ಹಲವು ಆತಂಕ ಮತ್ತು ಅನುಮಾನಗಳು ಪೋಷಕರನ್ನು ಕಾಡುವುದುಂಟು.

ಅದೇ ರೀತಿ ಶಾಲಾ ವಾಹನ ಮತ್ತು ಶಾಲಾ ಆವರಣದಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡುಮಕ್ಕಳು ಯಾವುದೇ ಅವಘಡಗಳಿಗೆ ತುತ್ತಾಗದಂತೆ ಎಚ್ಚರವಹಿಸುವುದು ಶಾಲಾ ಆಡಳಿತ ಮಂಡಳಿಗಳಿಗೂ ಸವಾಲಿನ ವಿಷಯವೇ ಸರಿ.

ಮಕ್ಕಳ ಸುರಕ್ಷೆ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ, ಕೇಂದ್ರ ಸರ್ಕಾರಗಳು ಮತ್ತು ಸಿಬಿಎಸ್‌ಇ, ಐಸಿಎಸ್‌ಇ ಕಟ್ಟುನಿಟ್ಟಾದ ಹಲವು ನಿಯಮಾವಳಿಗಳನ್ನು ರಚಿಸಿವೆ. ಆದರೆ ಅವುಗಳ ಯಥಾವತ್ ಪಾಲನೆ ಅಷ್ಟು ಸುಲಭವಲ್ಲ ಎಂಬುದು ಶಿಕ್ಷಣ ಸಂಸ್ಥೆಗಳ ವಾದ.

ಹಲವಾರು ಶಾಲೆಗಳು ಪೋಷಕರ ವಿಶ್ವಾಸಗಳಿಸಲು ಮಕ್ಕಳ ಸುರಕ್ಷತೆಗೆ ವಿವಿಧ ಕ್ರಮಗಳನ್ನು ತೆಗೆದುಕೊಂಡಿವೆ. ಶಾಲಾ ವಾಹನಗಳಲ್ಲಿ ಜಿಪಿಎಸ್‌ ಅಳವಡಿಕೆ, ಶಾಲಾ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ, ಬಹುಮಹಡಿ ಕಟ್ಟಡಗಳಿದ್ದರೆ ಗ್ರಿಲ್‌ಗಳನ್ನು ಅಳವಡಿಸಿ ಭದ್ರತೆ ಒದಗಿಸಿವೆ. ಇಷ್ಟೆಲ್ಲ ಇದ್ದರೂ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಕೆಲ ಶಾಲೆಗಳಲ್ಲಿ ನಡೆದಿರುವ ಅವಘಡಗಳು ಪೋಷಕರು, ಶಾಲಾ ಆಡಳಿತ ಮಂಡಳಿಗಳನ್ನು ತಲ್ಲಣಗೊಳಿಸಿವೆ. ಎಷ್ಟೇ ಭದ್ರತಾ ಕ್ರಮಗಳನ್ನು ಕೈಗೊಂಡರೂ ಶಾಲಾ ಮಕ್ಕಳ ಮೇಲೆ ವಿವಿಧ ಬಗೆಯ ಶೋಷಣೆ, ಅಸುರಕ್ಷತಾ ವಾತಾವರಣದ ಬಗ್ಗೆ ಆಗಾಗ ದೂರುಗಳು ದಾಖಲಾಗುತ್ತಲೇ ಇವೆ.

ಇದಕ್ಕೆ ಪರಿಹಾರವೊಂದನ್ನು ನಗರದ ಐಟಿ ಸಲ್ಯೂಷನ್‌ ಕಂಪನಿಯಾದ ‘ಎನರ್ಜಿವಿನ್‌ ಟೆಕ್ನಾಲಜೀಸ್‌ ಲಿಮಿಟೆಡ್‌’ ರೂಪಿಸಿದೆ. ಮಕ್ಕಳು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ಹಿಂದಿರುಗುವವರೆಗೂ ಅವರ ಸುರಕ್ಷೆ ಸೇರಿದಂತೆ ಚಲನವಲನಗಳ ಮೇಲೆ ನಿಗಾ ಇಟ್ಟು ಖಚಿತ ಮಾಹಿತಿಯನ್ನು ಪೋಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ನೀಡುವಂತಹ ‘ಸ್ಕೂಲ್‌ಸ್ಮಾರ್ಟ್‌’ ವ್ಯವಸ್ಥೆಯನ್ನು ಪರಿಚಯಿಸಿದೆ.

ಏನಿದು ಸ್ಕೂಲ್‌ಸ್ಮಾರ್ಟ್‌?: ಇದು ವಿದ್ಯಾರ್ಥಿ ಅಥವಾ ಮಕ್ಕಳನ್ನು ಸ್ವಯಂ ಚಾಲಿತವಾಗಿ ಟ್ರ್ಯಾಕಿಂಗ್‌ ಮಾಡುವ ವಿಧಾನ. ವಿದ್ಯಾರ್ಥಿಗಳ ಸುರಕ್ಷತೆಯ ಭರವಸೆಯನ್ನು ಅವರ ಪೋಷಕರು ಮತ್ತು ಶಾಲೆಗೆ ನೀಡುವ ಅತ್ಯಾಧುನಿಕ ವ್ಯವಸ್ಥೆ. ಆರ್‌ಎಫ್‌ಐಡಿ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌), ಜಿಪಿಎಸ್‌ , ಜಿಪಿಆರ್‌ಎಸ್‌ (ಜನರಲ್‌ ಪ್ಯಾಕೆಟ್‌ ರೇಡಿಯೊ ಸರ್ವಿಸ್‌), ಮೊಬೈಲ್‌ ಆ್ಯಪ್‌, ಡಿವಿಆರ್‌ (ಡಿಜಿಟಲ್‌ ವಿಡಿಯೊ ರೆಕಾರ್ಡರ್‌) ತಂತ್ರಜ್ಞಾನಗಳನ್ನು ಆಧರಿಸಿ ಈ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ. ಇದು ಶಾಲೆಯ ಪ್ರತಿ ವಿದ್ಯಾರ್ಥಿಯ ಮೇಲೆ ಕಣ್ಗಾವಲಿಡಲು ನೆರವಾಗುತ್ತದೆ.

ವಿದ್ಯಾರ್ಥಿಗಳಿಗೆ ನೀಡಲಾಗುವ ಐ.ಡಿ ಕಾರ್ಡ್‌ನಲ್ಲಿ ಪುಟಾಣಿ ಪಿಸಿಬಿ (ಪ್ರಿಂಟೆಡ್‌ ಸರ್ಕ್ಯುಟ್‌ ಬೋರ್ಡ್‌) ಮತ್ತು ಚಿಕ್ಕ ಬ್ಯಾಟರಿ ಅಳವಡಿಸಲಾಗಿರುತ್ತದೆ. ಇದರ ಸಹಾಯದಿಂದ ‘ಸ್ಕೂಲ್‌ಸ್ಮಾರ್ಟ್‌’ ತಂತ್ರಜ್ಞಾನವು ವಿದ್ಯಾರ್ಥಿಗಳ ಚಲನವಲನದ ಮೇಲೆ ನಿಗಾ ಇಡುತ್ತದೆ.

‘ಸ್ಕೂಲ್‌ಬಸ್‌’ ಮೇಲೆ ಕಣ್ಗಾವಲು: ಮಗು ಮನೆಯಿಂದ ಹೊರಟು ಶಾಲಾ ವಾಹನ ಹತ್ತುತ್ತಿದ್ದಂತೆ ‘ಸ್ಕೂಲ್‌ಸ್ಮಾರ್ಟ್’ನ ಕಾರ್ಯ ಆರಂಭವಾಗುತ್ತದೆ. ವಾಹನದಲ್ಲಿ ಇನ್‌ಸ್ಟಾಲ್‌ ಮಾಡಿರುವ ಸಿಸಿಟಿವಿ ಕ್ಯಾಮೆರಾ ಮತ್ತು ಆರ್‌ಎಫ್‌ಐಡಿ ಸೆನ್ಸರ್‌ ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. ಶಾಲಾ ವಾಹನ ಯಾವ ಮಾರ್ಗದಲ್ಲಿ ಚಲಿಸುತ್ತಿದೆ ಎಂಬುದು ಪೋಷಕರಿಗೆ ಗೊತ್ತಾಗುತ್ತದೆ. ಅಲ್ಲದೆ ವಾಹನದೊಳಗಿನ ಸಂಪೂರ್ಣ ಚಿತ್ರಣವನ್ನು ಶಾಲಾ ಆಡಳಿತ ಮಂಡಳಿ ನೇರವಾಗಿ ವೀಕ್ಷಿಸುವ ಸೌಲಭ್ಯವೂ ಇದೆ. ಇದರಿಂದ ವಿದ್ಯಾರ್ಥಿ ಮತ್ತು ವಾಹನದ ಮೇಲೆ ಸುಲಭವಾಗಿ ನಿಗಾ ಇಡಬಹುದು. ವಾಹನದೊಳಗೆ ಚಾಲಕ ಅಥವಾ ಇತರ ವಿದ್ಯಾರ್ಥಿಗಳ ವರ್ತನೆಯನ್ನೂ ಗಮನಿಸಬಹುದು.

ವಾಹನದಲ್ಲಿ ‘ಪ್ಯಾನಿಕ್‌ ಬಟನ್‌’ ಅಳವಡಿಸಲಾಗಿರುತ್ತದೆ. ಅವಘಡ ಅಥವಾ ಅಚಾತುರ್ಯಗಳು ಸಂಭವಿಸಿದಾಗ ಈ ಬಟನ್‌ ಒತ್ತಿದರೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗೆ ಕೂಡಲೇ ಮಾಹಿತಿ ರವಾನೆಯಾಗುತ್ತದೆ.

ಕ್ಯಾಂಪಸ್‌ನಲ್ಲಿ ನಿಗಾ: ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ರವೇಶಿಸುತ್ತಿದ್ದಂತೆಯೇ ಅವರ ಪೋಷಕರ ಮೊಬೈಲ್‌ಗೆ ಈ ಕುರಿತು ಮಾಹಿತಿ ಹೋಗುತ್ತದೆ. ಅಲ್ಲದೆ ಶಾಲಾ ಆವರಣದಲ್ಲಿ ಅವರು ಎಲ್ಲೆಲ್ಲಿ ಇದ್ದಾರೆ (ಶಾಲಾ ಕೊಠಡಿ, ಗ್ರಂಥಾಲಯ, ಸಭಾಂಗಣ, ಕ್ರೀಡಾಂಗಣ, ಶೌಚಾಲಯ...) ಎಂಬುದರ ಮಾಹಿತಿಯನ್ನೂ ಈ ಅತ್ಯಾಧುನಿಕ ತಂತ್ರಜ್ಞಾನ ಖಚಿತವಾಗಿ ಒದಗಿಸುತ್ತದೆ.

ಸ್ವಯಂಚಾಲಿತ ಹಾಜರಾತಿ: ಸಾಂಪ್ರದಾಯಿಕ ಹಾಜರಾತಿ ವಿಧಾನವನ್ನು ‘ಸ್ಕೂಲ್‌ಸ್ಮಾರ್ಟ್‌’ ಬದಲಿಸಲಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುವ ಜವಾಬ್ದಾರಿಯಿಂದ ಶಿಕ್ಷಕರನ್ನು ಮುಕ್ತಗೊಳಿಸುತ್ತದೆ. ವಿದ್ಯಾರ್ಥಿಯು ತರಗತಿಯ ಕೊಠಡಿ ಪ್ರವೇಶಿಸುತ್ತಿದ್ದಂತೆಯೇ ಸ್ವಯಂ ಚಾಲಿತವಾಗಿ ಹಾಜರಾತಿ ದಾಖಲಾಗುತ್ತದೆ. ತಿಂಗಳವಾರು ವಿದ್ಯಾರ್ಥಿಗಳ ಹಾಜರು ಮತ್ತು ಗೈರು ಹಾಜರಿನ ದತ್ತಾಂಶ ಕ್ಷಣ ಮಾತ್ರದಲ್ಲಿ ಪೋಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಸಿಗುತ್ತದೆ. ದತ್ತಾಂಶ ತಿದ್ದುವುದಕ್ಕೆ ಅಥವಾ ತಪ್ಪು ಮಾಹಿತಿ ನೀಡುವುದಕ್ಕೆ ಇದರಲ್ಲಿ ಅವಕಾಶ ಇಲ್ಲ.

ಶಾಲೆಗೆ ಭೇಟಿ ನೀಡುವ ಪೋಷಕರ ಮತ್ತು ವೀಕ್ಷಕರ ನಿರ್ವಹಣಾ ವ್ಯವಸ್ಥೆಯನ್ನೂ ಈ ತಂತ್ರಜ್ಞಾನ ಒಳಗೊಂಡಿದೆ. ಇದಕ್ಕಾಗಿ ಡಿಜಿಟಲ್‌ ಮತ್ತು ಫೋಟೊಗ್ರಾಫಿಕ್‌ ದಾಖಲಾತಿಗಳನ್ನು ಇದು ನಿರ್ವಹಿಸಲಿದೆ. ಶಾಲೆಯ ಭದ್ರತಾ ವ್ಯವಸ್ಥೆ ಬಲಪಡಿಸಲು ಇದು ನೆರವಾಗುತ್ತದೆ.

ವ್ಯಕ್ತಿಯ ಚಹರೆ ಗುರುತಿಸಲು ನೆರವು

ಶಾಲಾ ವಾಹನದಿಂದ ಮನೆಗೆ ಬರುವ ಮಕ್ಕಳನ್ನು ಕರೆದುಕೊಳ್ಳುವ ವ್ಯಕ್ತಿಗೆ ಭಾವಚಿತ್ರ ಹೊಂದಿರುವ ಗುರುತಿನ ಚೀಟಿ ಸಾಮಾನ್ಯವಾಗಿ ನೀಡಲಾಗುತ್ತದೆ. ಒಂದು ವೇಳೆ ಆ ವ್ಯಕ್ತಿಯೂ ಮನೆಯಲ್ಲಿ ಇಲ್ಲದಿದ್ದಾಗ ಮಕ್ಕಳನ್ನು ಯಾರು ಕರೆದುಕೊಳ್ಳಬೇಕು ಎಂಬ ಗೊಂದಲ ಪೋಷಕರಿಗೆ ಬರುವುದು ಸಹಜ. ಆಗ ಶಾಲೆಗೆ ಕರೆ ಮಾಡಿ, ಪರ್ಯಾಯ ವ್ಯವಸ್ಥೆಗಳನ್ನು ಅವರು ಮಾಡಬೇಕಾಗುತ್ತದೆ. ಈ ರೀತಿಯ ಗೊಂದಲಗಳಿಗೆ ‘ಸ್ಕೂಲ್‌ಸ್ಮಾರ್ಟ್‌’ ವಿಧಾನದಲ್ಲಿ ಪರಿಹಾರವಿದೆ. ಶಾಲಾ ಪೋಷಕರು ತಮ್ಮ ಮೊಬೈಲ್‌ನಲ್ಲಿನ ಈ ‘ಆ್ಯಪ್‌’ ಮೂಲಕ ನಿರ್ದಿಷ್ಟ ವ್ಯಕ್ತಿಯ ಫೋಟೊವನ್ನು ‘ಅಪ್‌ಲೋಡ್‌’ ಮಾಡಿದರೆ, ಅದು ಬಸ್‌ನಲ್ಲಿನ ನಿರ್ವಹಣಾ ವ್ಯಕ್ತಿ, ಶಾಲಾ ಆಡಳಿತ ಮಂಡಳಿಯ ಮೊಬೈಲ್‌ನಲ್ಲಿ ಬಿತ್ತರವಾಗುತ್ತದೆ. ಆ ವ್ಯಕ್ತಿಯ ಚಹರೆಯನ್ನು ಗುರುತಿಸಿ ಮಗುವನ್ನು ಅವರ ಬಳಿ ಕಳುಹಿಸಲು ಇದು ನೆರವಾಗುತ್ತದೆ.

ತಲಾ ₹ 1,200ರಿಂದ 1,500 ವೆಚ್ಚ

ಅತ್ಯಾಧುನಿಕ ತಂತ್ರಜ್ಞಾನ ಬಳಸಿರುವ ‘ಸ್ಕೂಲ್‌ಸ್ಮಾರ್ಟ್‌’ ಮಕ್ಕಳ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಪೋಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಖಾತರಿ ನೀಡುತ್ತದೆ. 2011ರಲ್ಲಿ ಆರಂಭವಾದ ನಮ್ಮ ಕಂಪನಿ 2013ರಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿತು. ಬೆಂಗಳೂರಿನ ಶೆರ್‌ವುಡ್‌ ಹೈಸ್ಕೂಲ್‌ ಸೇರಿದಂತೆ ದೇಶದಾದ್ಯಂತ 50ಕ್ಕೂ ಹೆಚ್ಚು ಶಾಲೆಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಮಕ್ಕಳ ಸುರಕ್ಷತೆಗೆ ಒತ್ತು ನೀಡುವ ಈ ತಂತ್ರಜ್ಞಾನ ದುಬಾರಿಯೂ ಅಲ್ಲ. ಪ್ರತಿ ಮಗುವಿಗೆ ವರ್ಷಕ್ಕೆ ₹ 1,200ರಿಂದ 1,500 ಖರ್ಚಾಗಬಹುದು ಎನ್ನುತ್ತಾರೆ ಎನರ್ಜಿವಿನ್‌ ಟೆಕ್ನಾಲಜೀಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿರಾವ್‌ ಸರಿಪಳ್ಳಿ. ಸಂಪರ್ಕ: 953813900. ಮಾಹಿತಿಗೆ– www.skoolsmart.net

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT