ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಯಿಂಗ್‌: ಭಾರತಕ್ಕೆ ಮತ್ತೆ 2 ಕಂಚು- ಮಹಿಳೆಯರ ವಿಭಾಗದಲ್ಲಿ ನಿರಾಸೆ

Published 25 ಸೆಪ್ಟೆಂಬರ್ 2023, 13:28 IST
Last Updated 25 ಸೆಪ್ಟೆಂಬರ್ 2023, 13:28 IST
ಅಕ್ಷರ ಗಾತ್ರ

ಹಾಂಗ್‌ ಝೌ: ಭಾರತದ ರೋಯಿಂಗ್ ಪಟುಗಳು ಏಷ್ಯನ್‌ ಕ್ರೀಡಾಕೂಟದಲ್ಲಿ ಮತ್ತೆ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಇದರೊಂದಿಗೆ ಸೋಮವಾರ ಮುಕ್ತಾಯಗೊಂಡ ಜಲಸಾಹಸ ಕ್ರೀಡೆಯಲ್ಲಿ ಭಾರತ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಂತೆ ಆಯಿತು.

ಈ ಹಿಂದಿನ (ಜಕಾರ್ತಾ) ಕ್ರೀಡೆಗಳಲ್ಲಿ ಭಾರತ ಒಂದು ಚಿನ್ನ, ಎರಡು ಕಂಚಿನ ಪದಕಗಳನ್ನು ಪಡೆದಿತ್ತು. ಆದರೆ ಈ ಬಾರಿ ಚಿನ್ನ ಕೈತಪ್ಪಿದೆ. ಎರಡು ಬೆಳ್ಳಿ, ಮೂರು ಕಂಚಿನ ಪದಕಗಳೊಂದಿಗೆ ಒಟ್ಟಾರೆ ಐದನೇ ಸ್ಥಾನ ಪಡೆದಿದೆ. ಕಳೆದ ಬಾರಿ ಭಾರತ ಆರನೇ ಸ್ಥಾನ ಪಡೆದಿತ್ತು.

‌ಆತಿಥೇಯ ಚೀನಾ ಒಟ್ಟು 11 ಚಿನ್ನ, ಎರಡು ಬೆಳ್ಳಿ ಗೆದ್ದುಕೊಂಡು ಪಾರಮ್ಯ ಮೆರೆಯಿತು. ಉಜ್ಬೇಕಿಸ್ತಾನ (2–4–1) ಎರಡನೇ ಸ್ಥಾನ ಪಡೆಯಿತು.

ಹುಟ್ಟುದೋಣಿ ಕ್ವಾರ್ಟ್ರೆಟ್‌ (ನಾಲ್ಕು ಮಂದಿಯ) ವಿಭಾಗದಲ್ಲಿ ಜಸ್ವಿಂದರ್ ಸಿಂಗ್‌, ಭೀಮ್ ಸಿಂಗ್, ಪುನೀತ್ ಕುಮಾರ್ ಮತ್ತು ಆಶೀಷ್ ಗೊಲಿಯಾನ್ ಅವರಿದ್ದ ತಂಡಕ್ಕೆ ಸ್ವಲ್ಪದರಲ್ಲೇ ಬೆಳ್ಳಿಯ ಪದಕ ಕೈತಪ್ಪಿತು.

ಪುರುಷರ ಕ್ವಾಡ್ರಾಪಲ್ ಸ್ಕಲ್ಸ್ ವಿಭಾಗದಲ್ಲಿ ಸತ್ನಾಮ್ ಸಿಂಗ್, ಪರ್ಮಿಂದರ್‌ ಸಿಂಗ್, ಜಾಕರ್ ಖಾನ್ ಮತ್ತು ಸುಖಮೀತ್ ಸಿಂಗ್ ಅವರನ್ನು ಒಳಗೊಂಡ ತಂಡ 6ನಿ.08.61 ಸೆ.ಗಳ ಅವಧಿಯೊಡನೆ ಮೂರನೇ ಸ್ಥಾನ ಗಳಿಸಿತು. ಚಿನ್ನ ಗೆದ್ದ ಚೀನಾ ಸ್ಪರ್ಧಿಗಳು 6ನಿ.02.65 ಸೆ.ಗಳಲ್ಲಿ ಗುರಿತಲುಪಿದರೆ, ಉಜ್ಬೇಕಿಸ್ತಾನ (6:04.64) ಎರಡನೇ ಸ್ಥಾನ ಪಡೆಯಿತು. 2000 ಮೀ. ದೂರದ ಈ ರೇಸ್‌ನಲ್ಲಿ ಕೊನೆಯ 500 ಮೀ. ಉಳಿದಾಗ ಭಾರತದ ಸ್ಪರ್ಧಿಗಳು ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಂದರು.

ಪುರುಷರ ಫೋರ್‌ ಸ್ಪರ್ಧೆಯಲ್ಲೂ ಅಂತಿಮ 500 ಮೀ. ಇದ್ದಾಗ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಉತ್ತಮ ಸಮನ್ವಯ ಸಾಧಿಸಿ 6ನಿ.10.81 ಸೆ.ಗಳಲ್ಲಿ ಮೂರನೆ ತಂಡವಾಗಿ ಗುರಿತಲುಪಿತು. ಉಜ್ಬೇಕಿಸ್ತಾನ ತಂಡ 6:04.96 ಅವಧಿಯೊಡನೆ ಚಿನ್ನ ಗೆದ್ದರೆ, ಚೀನಾ (6:10.04) ಎರಡನೇ ಸ್ಥಾನ ಪಡೆಯಿತು.

ಪುರುಷರ ಸಿಂಗಲ್ ಸ್ಕಲ್ಸ್‌ ಸ್ಪರ್ಧೆಯಲ್ಲಿ ಭಾರತದ ಬಲರಾಜ್ ಪನ್ವರ್‌ ಸ್ವಲ್ಪದರಲ್ಲೇ ಕಂಚಿನ ಪದಕ ಕಳೆದುಕೊಂಡರು. ಕರ್ನಾಲ್‌ನ 24 ವರ್ಷದ ಬಲರಾಜ್ ಕೊನೆಯ 500 ಮೀ. (ಒಟ್ಟು ದೂರ: 2,000 ಮೀ.) ಇದ್ದಾಗ ನಾಲ್ಕನೇ ಸ್ಥಾನಕ್ಕೆ (7:08.79) ಸರಿದರು. ಅವರಿಗಿಂತ 9 ಸೆಕೆಂಡು ಬೇಗನೇ ತಲುಪಿದ ಹಾಂಗ್‌ಕಾಂಗ್‌ನ ಹಿನ್‌ ಚುನ್‌ ಚಿಯು ಅವರು (7:00.55) ಕಂಚಿನ ಪದಕ ಪಡೆದರು. ಚೀನಾದ ಲಿಯಾಂಗ್‌ ಝಾಂಗ್‌ (6:57.06) ಅವರು ಚಿನ್ನ, ಜಪಾನ್‌ನ ರಿಯುಟಾ ಅರಕಾವಾ (6:59.79) ಬೆಳ್ಳಿಯ ಪದಕ ಗೆದ್ದುಕೊಂಡರು.

ಹುಟ್ಟುದೋಣಿ ‘ಮಹಿಳೆಯರ ಎಂಟು’ ವಿಭಾಗದಲ್ಲಿ ಭಾರತ, ಐದು ತಂಡಗಳ ಪೈಕಿ ಕೊನೆಯ ಸ್ಥಾನ (7:05.71ಸೆ) ಗಳಿಸಿತು. ಚೀನಾ 6ನಿ.33.61 ಸೆ.ಗಳ ಅವಧಿಯೊಡನೆ ಆರಾಮವಾಗಿ ಚಿನ್ನ ಗೆದ್ದುಕೊಂಡಿತು. ನಾಲ್ಕನೇ ಸ್ಥಾನ ಪಡೆದ ಥಾಯ್ಲೆಂಡ್‌ ಸ್ಪರ್ಧಿಗಳು, ಭಾರತ ತಂಡಕ್ಕಿಂತ 15 ಸೆ. ಬೇಗ ಗುರಿಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT