ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯೂ ಕೌಶಲವೂ: ಬಿಡುವನ್ನು ಅತ್ಯಂತ ಉಪಯುಕ್ತವಾಗಿ ಕಳೆಯಲು ಯೋಜಿಸಿ

Last Updated 25 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ರಜೆ ಎಂಬ ಶಬ್ದವನ್ನು ಕೇಳಿದ ತಕ್ಷಣ ಮನಸ್ಸಿಗೆ ಒಂದು ಬಗೆಯ ರೋಮಾಂಚನಭರಿತವಾದ ಆನಂದ ಉಂಟಾಗುತ್ತದೆ.

ಅರೆ! ಇದೇಕೆ ಹೀಗೆ - ಎಂದು ಯೋಚಿಸಿದಾಗ ಹೊಳೆಯುವ ಅಂಶ ಏನೆಂದರೆ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವುದಕ್ಕಾಗಿ ಮನುಷ್ಯ ಒಂದು ಚೌಕಟ್ಟನ್ನು ಹಾಕಿಕೊಂಡಿರುತ್ತಾನೆ. ಬೆಳಿಗ್ಗೆ ಇಂತಿಷ್ಟು ಗಂಟೆಗೆ ಏಳಲೇಬೇಕು, ತಕ್ಷಣವೇ ಪ್ರಾತರ್ವಿಧಿಗಳನ್ನು ಪೂರೈಸಿ ಸಿದ್ಧನಾಗಬೇಕು, ತಿಂಡಿ-ಊಟ, ಅವುಗಳಿಗಾಗಿ ಡಬ್ಬಿಗಳಲ್ಲಿ ತುಂಬಿಕೊಳ್ಳುವುದು, ಇತ್ಯಾದಿ ಕೆಲಸಗಳು ಗಡಿಬಿಡಿಯಿಂದ ನಡೆಯಬೇಕು. ಮತ್ತೆ ಸಂಜೆಯವರೆಗೆ ಶಾಲೆ-ಕಾಲೇಜು, ಆಫೀಸು-ಬ್ಯಾಂಕು ಇತ್ಯಾದಿ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಆ ವೇಳೆಯಲ್ಲಿ ಅಲ್ಲಿನ ಶಿಸ್ತು-ನಿಯಮಗಳಿಗೆ ಒಳಪಟ್ಟು ಕರ್ತವ್ಯಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳು ತಮ್ಮ ಶಾಲೆ-ಕಾಲೇಜುಗಳಲ್ಲಿ ಪಾಠ-ಪ್ರವಚನಗಳಿಗೆ ಹಾಜರಾಗಬೇಕು. ಸಂಜೆ ಮತ್ತೆ ಹೋಮ್‌ವರ್ಕ್‌ ಇತ್ಯಾದಿ ಅಭ್ಯಾಸಗಳಲ್ಲಿ ಮುಳುಗಿಕೊಳ್ಳಬೇಕು. ಇಂತಹ ಪುನರಾವರ್ತನೆಗೊಳ್ಳುವ ದಿನಚರಿಯಿಂದ ಮನಸ್ಸು ಬಹಳ ಬೇಗ ಆಯಾಸಕ್ಕೆ ಒಳಗಾಗುತ್ತದೆ. ಇವೆಲ್ಲದರ ಕೊನೆಗೆ ಪರೀಕ್ಷೆ ಎನ್ನುವ ಇನ್ನೂ ಹೆಚ್ಚಿನ ಒತ್ತಡವನ್ನು ಅನುಭವಿಸಿದ ನಂತರ ರಜೆಯ ಬಿಡುವು ದೊರಕುತ್ತದೆ.

ಆಗಷ್ಟೇ ಪರೀಕ್ಷೆಯ ತಲ್ಲಣವನ್ನು, ಓದಿ ನೆನಪಿಟ್ಟುಕೊಳ್ಳುವ ಹೆಚ್ಚಿನ ಆಯಸವನ್ನು, ಮರೆತರೇನು ಗತಿ – ಎನ್ನುವ ಭಯನಿರ್ವಹಣೆಯನ್ನು ಮುಗಿಸಿ ನಿರಾಳವಾಗುವ ಮಿದುಳು ‘ರಜೆ’ ಎನ್ನುವ ಬಿಡುವನ್ನು ಬಹಳ ಸಂತೋಷದಿಂದ ಎದುರುಗೊಳ್ಳುತ್ತದೆ. ಹೆಚ್ಚಿನ ಸಮಯದ ನಿದ್ರೆ, ರುಚಿಯಾದ ಊಟ-ತಿಂಡಿ, ಪಠ್ಯಪುಸ್ತಕದ ಓದಿನಿಂದ ಬಿಡುಗಡೆ – ಇವೆಲ್ಲವೂ ರಜೆಯನ್ನು ಪ್ರೀತಿಸಲಿಕ್ಕೆ ಇರುವ ಹಲವಾರು ಕಾರಣಗಳು. ಆದರೆ ಒಂದೆರಡು ದಿನಗಳ ನಂತರ ಮನಸ್ಸು ಈ ಬಿಡುವನ್ನೂ ಬೇಸರ ಎಂದು ಭಾವಿಸಲು ಶುರು ಮಾಡುತ್ತದೆ. ಏಕೆಂದರೆ ಚಟುವಟಿಕೆಗಳೇ ಇಲ್ಲದೇ ಬದುಕುವುದೆಂದರೆ ಅದು ಸಮಯ ಹರಣ. ಅಂದರೆ ಅಮೂಲ್ಯವಾದ ಕಾಲವನ್ನು ಏನೂ ಮಾಡದೇ ಕಳೆಯುವುದು ಒಂದು ಬಗೆಯ ಅಪರಾಧವೇ ಆಗುತ್ತದೆ. ಸಾಮಾನ್ಯವಾಗಿ 5ರಿಂದ 15ರ ವಯಸ್ಸಿನವರೆಗೆ ವ್ಯಕ್ತಿಗಳ ಮಿದುಳು ಅತ್ಯಂತ ಕ್ರಿಯಾಶೀಲವಾಗಿದ್ದು ಎಲ್ಲವನ್ನೂ ಗ್ರಹಿಸಬಲ್ಲುದು, ನೆನಪಿಟ್ಟುಕೊಳ್ಳಬಲ್ಲುದು. ಆದ್ದರಿಂದ ಈ ವಯಸ್ಸಿನ ಮಕ್ಕಳು ತಮ್ಮ ರಜೆಯ ಬಿಡುವನ್ನು ಅತ್ಯಂತ ಉಪಯುಕ್ತವಾಗಿ ಕಳೆಯಲು ಯೋಜನೆ ಹಾಕಿಕೊಳ್ಳುವುದು ಒಳ್ಳೆಯದು.

ಭಾರತೀಯ ಜ್ಞಾನಪರಂಪರೆಯನ್ನು ಗಮನಿಸಿದರೆ ಅದರ ಅಗಾಧ ಹರಹನ್ನೂ, ಆಳ-ವಿಸ್ತಾರಗಳನ್ನೂ ನೋಡಿದರೆ ವಿಸ್ಮಯವುಂಟಾಗುತ್ತದೆ. ಖಗೋಳಶಾಸ್ತ್ರ, ಆಯುರ್ವೇದ, ಜ್ಯೋತಿಷ್ಯ, ವಚನಸಾಹಿತ್ಯ, ನೃತ್ಯ-ಸಂಗೀತ-ನಾಟಕಗಳಂತಹ ಕಲೆಗಳು, ನೇಕಾರಿಕೆ-ಹೊಲಿಗೆ-ಬಣ್ಣಗಾರಿಗೆ-ಬಡಿಗತನ-ಕಮ್ಮಾರಿಕೆ-ಕುಂಬಾರಿಕೆಗಳಂತಹ ಕಸುಬುಗಳು, ಗುಡಿಗಾರಿಕೆ, ಶಿಲ್ಪ ಕೆತ್ತನೆ, ಚಾಪೆ ಹೆಣೆಯುವುದು ಮುಂತಾದ ಕೌಶಲಗಳು ಇವೆಲ್ಲವನ್ನೂ ಶಾಲೆಗಳಲ್ಲಿ ಪಠ್ಯದ ರೂಪದಲ್ಲಿ ಕಲಿಸಲು ಸಾಧ್ಯವಿಲ್ಲ. ಆದರೆ ಸುಸ್ಥಿರ ಜೀವನಕ್ಕೆ ಇವುಗಳಲ್ಲಿ ಅನೇಕ ತಿಳಿವಳಿಕೆಗಳು ಬೇಕಾಗುತ್ತವೆ. ಒಂದು ಕಾಲದಲ್ಲಿ ಕುಲಕಸುಬುಗಳಾಗಿದ್ದ ಇಂತಹ ಅನೇಕ ಕೌಶಲಗಳು ಸಮಾಜದ ಅಸಡ್ಡೆಗೆ ತುತ್ತಾಗಿ ನಾಶವಾಗುತ್ತಿವೆ. ಎಲ್ಲರೂ ಏಕರೂಪದ ಶಿಕ್ಷಣ ಪಡೆದು ಆಧುನಿಕ ಉದ್ಯೋಗಗಳಲ್ಲಿ ತೊಡಗಿಕೊಳ್ಳುವ ತುರುಸಿನ ಸ್ಪರ್ಧೆಗೆ ಇಳಿದಿರುವುದರಿಂದ ಪಾರಂಪರಿಕ ಕೌಶಲಗಳು ಆಯಾ ಕುಟುಂಬಗಳಲ್ಲಿ ಮುಂದುವರೆಯುತ್ತಿಲ್ಲ. ಆದರೆ ಒಟ್ಟೂ ಜನಜೀವನದ ಅಭಿರುಚಿಯನ್ನು ಗಮನಿಸಿದಾಗ ಅಂತಹ ವಸ್ತುಗಳಿಗೆ ಅಪಾರವಾದ ಬೇಡಿಕೆಯಿದೆ. ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದನ್ನು, ಮನೆಯ ಗೋಡೆಗಳ ಮೇಲೆ ಹಸೆ ಬರೆಯುವುದನ್ನು, ಬಿದಿರು ಬುಟ್ಟಿಗಳನ್ನು ಲ್ಯಾಂಪ್ ಶೇಡ್ ತರಹ ಬಳಸುವುದನ್ನು ಈಗ ಎಲ್ಲರೂ ಅನುಕರಿಸಿಕೊಂಡು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಇಂತಹ ಕೌಶಲಗಳನ್ನು ಮಕ್ಕಳು ಕಲಿತರೆ ಒಳ್ಳೆಯದಲ್ಲವೆ?

ರಜೆಯ ಅವಧಿಯಲ್ಲಿ ತರಬೇತಿಯನ್ನು ಪಡೆದುಕೊಂಡರೆ ಇಂತಹ ಕೆಲವಾದರೂ ಕೌಶಲಗಳನ್ನು ತಮ್ಮದಗಿಸಿಕೊಳ್ಳಬಹುದು. ಭರತನಾಟ್ಯ, ಯಕ್ಷಗಾನ, ಮೂಡಲಪಾಯ, ಸಮರಕಲೆ, ನಾಟಕ ಇತ್ಯಾದಿ ಯಾವುದಾದರೊಂದು ಕಲೆಯನ್ನು ಅಭ್ಯಾಸ ಮಾಡಿದರೆ ಮನೋರಂಜನೆಯ ಜೊತೆಗೆ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗುತ್ತದೆ. ಸಂಸ್ಕೃತ, ಜರ್ಮನ್, ಫ್ರೆಂಚ್ ಇತ್ಯಾದಿ ಭಾಷೆಗಳನ್ನು ಕಲಿತುಕೊಂಡರೆ ಭವಿಷ್ಯದಲ್ಲಿ ವಿದೇಶ ವಾಸ ಸುಲಭವಾಗುತ್ತದೆ. ಕಂಪ್ಯೂಟರ್ ಭಾಷೆಗಳ ಕಲಿಕೆಯಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ಪ್ರಕೃತಿಗೆ ಹತ್ತಿರವಾಗುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ.

ಗಿಡ-ಮರಗಳನ್ನು ನೆಡುವ, ಬೆಳೆಸುವ, ಪಶು-ಪಕ್ಷಿಗಳನ್ನು ಪ್ರೀತಿಸುವ-ಪಾಲಿಸುವ ತನ್ಮೂಲಕ ನಿಸರ್ಗ ಸಾಮರಸ್ಯದ ರಹಸ್ಯವನ್ನು ತಿಳಿದುಕೊಳ್ಳಬೇಕಾದ ತುರ್ತು ನಿರ್ಮಾಣವಾಗಿದೆ. ಆದ್ದರಿಂದ ತಮ್ಮ ಬಂಧು-ಬಳಗದಲ್ಲಿ ಯಾರಾದರೂ ಕೃಷಿಕರಿದ್ದರೆ ಅಂತಹವರ ಮನೆಗಳಿಗೆ ಹೋಗಿ ಉಳಿದುಕೊಂಡು ಮಣ್ಣು-ನೀರು-ಹೊಲ-ತೋಟ-ಕಾಡುಗಳನ್ನು ಹತ್ತಿರದಿಂದ ಗಮನಿಸಿ, ಪ್ರೀತಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಆಧುನಿಕ ಶಿಕ್ಷಣ ಪದ್ಧತಿ ಮನುಷ್ಯನನ್ನು ಸ್ವ-ಕೇಂದ್ರಿತನನ್ನಾಗಿ ನೋಡುವಂತೆ ಕಲಿಸುತ್ತಿದೆ. ಅವಿಭಕ್ತ ಕುಟುಂಬಗಳು ಕಲಿಸುತ್ತಿದ್ದ ಹೊಂದಾಣಿಕೆ-ತ್ಯಾಗ-ಸಮಷ್ಟಿ ಪ್ರೀತಿಯ ಭಾವಗಳು ಮರೆಯಾಗುತ್ತಿವೆ. ಆದ್ದರಿಂದ ರಜೆಯಲ್ಲಿ ಎರಡು-ಮೂರು ಕುಟುಂಬಗಳು ಒಂದೆಡೆ ಉಳಿಯುವ ಅವಕಾಶವನ್ನು ಸೃಷ್ಟಿ ಮಾಡಿಕೊಂಡರೆ ಆ ಮಟ್ಟಿಗಾದರೂ ಮಕ್ಕಳು ಹೊಂದಾಣಿಕೆಯ ಭಾವವನ್ನು ಬೆಳೆಸಿಕೊಳ್ಳಬಲ್ಲರು. ‘ನನ್ನ ಟವೆಲ್, ನನ್ನ ರೂಮು, ನನ್ನ ಟಿ.ವಿ.’ – ಅಂತೆಲ್ಲ ಏಕಸ್ವಾಮ್ಯದ ಭಾವದಲ್ಲಿ ಬೆಳೆಯುವ ಮಗು ಬದುಕಿನಲ್ಲಿ ಏನನ್ನೂ ಹಂಚಿಕೊಳ್ಳಲಾರದು, ಸಹಿಸಿಕೊಳ್ಳಲಾರದು. ಹಂಚಿಕೊಳ್ಳುವುದರಲ್ಲಿ ಇರುವ ಸುಖವನ್ನು ಅರ್ಥ ಮಾಡಿಸಿದರೆ ಸಾಂಘಿಕ ಬದುಕಿನ ಆದರ್ಶವನ್ನು ಪುನರ್ ಸ್ಥಾಪಿಸಬಹುದು.

ಕಂಪ್ಯೂಟರ್ ಗೇಮುಗಳು, ಟಿ.ವಿ. ಸರಣಿಯ ಕಾರ್ಟೂನುಗಳು ಇವುಗಳನ್ನು ಮಾತ್ರ ತಮ್ಮ ಮನೋರಂಜನೆಗಳಾಗಿ ಮಾಡಿಕೊಂಡಿರುವ ನಗರದ ಮಕ್ಕಳಿಗೆ ದೈಹಿಕ ಕ್ರೀಡೆಗಳ ಪರಿಚಯವೇ ಇಲ್ಲದಂತಾಗಿದೆ. ಶಾರೀರಿಕ ಶ್ರಮದಿಂದ ಉಂಟಾಗುವ ಲಾಭಗಳಿಂದ ಅವರು ವಂಚಿತರಾಗುತ್ತಿದ್ದಾರೆ. ರಜೆಯ ಅವಧಿಯಲ್ಲಾದರೂ ಬೆಳಿಗ್ಗೆ-ಸಂಜೆಯ ವೇಳೆಯಲ್ಲಿ ಕಬಡ್ಡಿ, ಖೋ ಖೋ, ಫುಟ್‌ಬಾಲ್, ಹಾಕಿ ಇಂತಹ ಆಟಗಳಲ್ಲಿ ತೊಡಗಿಕೊಂಡರೆ ದೇಹಕ್ಕೆ ವ್ಯಾಯಾಮದ ಜೊತೆಗೆ ಗುಂಪು ಆಟದ ಸೋಲು-ಗೆಲುವುಗಳು, ಕಷ್ಟ-ಸುಖಗಳು, ತಂಡವಾಗಿ ಆಡುವಾಗ ಬೇಕಾಗುವ ಹೊಂದಾಣಿಕೆಗಳು ಅರ್ಥವಾಗುತ್ತವೆ. ಒಂದೇ ಮಗುವಾಗಿ ಅಪ್ಪ-ಅಮ್ಮನ ಕಣ್ಮಣಿಯಾಗಿ ಬೆಳೆಯುವ ಮಗುವಿನ ಮಾನಸಿಕ ಸ್ಥಿತಿಯನ್ನು ಭವಿಷ್ಯದಲ್ಲಿ ಸಮಾಜದ ನಡುವೆ ಆರೋಗ್ಯಕರ ಹೊಂದಾಣಿಕೆಯೊಂದಿಗೆ ಬದುಕಲು ಸಿದ್ಧ ಮಾಡಬೇಕಾಗಿರುವುದು ಬಹಳ ಮಹತ್ವದ ಸಂಗತಿ.

ಆಧುನಿಕ ಬದುಕಿನ ಸಂಕೀರ್ಣತೆಯಿಂದ ಗಂಡಿರಲಿ, ಹೆಣ್ಣಿರಲಿ ಅಡುಗೆ, ಮನೆ ಸ್ವಚ್ಛತೆ, ಡ್ರೈವಿಂಗ್, ಸ್ವಿಮ್ಮಿಂಗ್, ಸಣ್ಣ-ಪುಟ್ಟ ರಿಪೇರಿಗಳು ಎಲ್ಲರಿಗೂ ಅವಶ್ಯಕವಾದ ವಿದ್ಯೆಗಳಾಗಿವೆ. ಅವುಗಳನ್ನು ರಜೆಯ ಬಿಡುವಿನಲ್ಲಿ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಪ್ರವಾಸವಂತೂ ಜಗತ್ತನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಅರ್ಧ ಆಯುಷ್ಯವನ್ನು ನಿದ್ದೆಯಲ್ಲಿಯೇ ಕಳೆಯುವ ಮನುಷ್ಯ ಎಚ್ಚರವಿದ್ದಾಗಲಾದರೂ ಪ್ರತಿ ನಿಮಿಷವೂ ಉಪಯುಕ್ತವಾಗುವಂತೆ ಕಳೆಯುವ ನಿಟ್ಟಿನಲ್ಲಿ ಉದ್ಯುಕ್ತನಾಗಬೇಕು ಎಂಬುದು ನಾವೆಲ್ಲರೂ ನೆನಪಿಡಬೇಕಾದ ಸತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT