ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್ ವಾಸ್ತವ! ಇದರ ಉದ್ಯಮ ಸ್ವರೂಪ ಅಗಾಧ

Last Updated 14 ಡಿಸೆಂಬರ್ 2021, 22:50 IST
ಅಕ್ಷರ ಗಾತ್ರ

ಮುಂದಿನ ವರ್ಷದಲ್ಲಿ ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಆಗ್ಮೆಂಟೆಡ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿ ಉದ್ಯಮ ಸುಮಾರು ₹ 14 ಸಾವಿರ ಕೋಟಿ ಆಗಲಿದೆ ಎಂದು ಊಹಿಸಲಾಗಿದೆ.

ಶಾಲೆ, ತರಗತಿಯ ಕೋಣೆಗಳು, ಕಪ್ಪುಹಲಗೆಗಳೆಲ್ಲವೂ ಈ ಕೋವಿಡ್ ಕಾಲದಲ್ಲಿ ಡಿಜಿಟಲ್‌ ಸ್ಪರ್ಶ ಪಡೆದುಕೊಂಡವು. ತರಗತಿಗಳು ಖಾಲಿಯಾಗಿ, ಬೆಂಚ್‌ಗಳ ಜಾಗದಲ್ಲಿ ಮೊಬೈಲ್‌, ಕಂಪ್ಯೂಟರ್‌ಗಳು ಬಂದು ಕೂತಿದ್ದವು. ಆದರೆ, ಈ ಕೋವಿಡ್ ಕಾಲಕ್ಕೂ ಸ್ವಲ್ಪ ಹಿಂದಿನಿಂದಲೇ ಒಂದು ತಂತ್ರಜ್ಞಾನ ನಿಧಾನವಾಗಿ ಶಿಕ್ಷಣಕ್ಷೇತ್ರವನ್ನು ಅಮೂಲಾಗ್ರವಾಗಿ ಬದಲಿಸುವ ಕಡೆಗೆ ಹೆಜ್ಜೆ ಇಡುತ್ತಿತ್ತು. ಕೋವಿಡ್‌ಗೂ ಮೊದಲು ‘ವರ್ಚುವಲ್ ರಿಯಾಲಿಟಿ’ ಹಾಗೂ ‘ಆಗ್ಮೆಂಟೆಡ್‌ ರಿಯಾಲಿಟಿ’ ಎಂಬ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾಗಿ ಕಾಣಿಸಿಕೊಳ್ಳಲು ಇನ್ನೂ ಹಲವು ವರ್ಷಗಳು ಬೇಕು ಎಂದು ಹೇಳಲಾಗುತ್ತಿತ್ತಾದರೂ, ಕೋವಿಡ್‌ನಿಂದಾಗಿ ಈ ತಂತ್ರಜ್ಞಾನಗಳ ಹೆಜ್ಜೆ ವೇಗವಾಗಿದೆ.

ಏನಿದು ವರ್ಚುವಲ್‌ ರಿಯಾಲಿಟಿ?

ವರ್ಚುವಲ್ ರಿಯಾಲಿಟಿ (ವಿಆರ್‌) ಎಂಬುದು ‘ನೋಡಿ ಕಲಿ ಮಾಡಿ ತಿಳಿ’ ಎಂಬ ಹಳೆಯ ಕಲ್ಪನೆಯನ್ನೇ ಮರುರೂಪಿಸುವ ವಿಧಾನ. ಇತಿಹಾಸದ ಪಾಠದಲ್ಲಿ ಐತಿಹಾಸಿಕ ಸ್ಥಳಗಳನ್ನೇ ವರ್ಚುವಲ್ ರಿಯಾಲಿಟಿಯಲ್ಲಿ ಮರುಸೃಷ್ಟಿ ಮಾಡಿ ಅದರಲ್ಲಿ ವಿದ್ಯಾರ್ಥಿಯನ್ನು ನಿಲ್ಲಿಸಿ ಆತನಿಗೆ ಪಾಠ ಹೇಳಬಹುದು. ಒಂದು ವಾಸ್ತುಶಿಲ್ಪದ ಬಗ್ಗೆ ತಿಳಿಯಬೇಕೆಂದರೆ, ಅದರ ಮಾದರಿ ಇರುವಲ್ಲಿಗೇ ಹೋಗಬೇಕೆಂದಿಲ್ಲ. ತರಗತಿಯಲ್ಲೇ ಕುಳಿತು ಅಲ್ಲಿಗೆ ಹೋದ ಅನುಭವವನ್ನು ಪಡೆಯಬಹುದು ಮತ್ತು ವಿಸ್ತೃತವಾಗಿ ಅಧ್ಯಯನ ಮಾಡಬಹುದು.

ಅನುಭವಕ್ಕೆ ಇಲ್ಲಿ ಆದ್ಯತೆ. ಸಾಮಾನ್ಯವಾಗಿ ಓದಿ, ಕೇಳಿ, ನೋಡಿ ಬರೆಯುವುದಕ್ಕಿಂತ ಹೊಸ ಅಂಶ ‘ಅನುಭವ’ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ವಿದ್ಯಾರ್ಥಿ ಹೆಚ್ಚು ಸಕ್ರಿಯವಾಗಿ ಕಲಿಯಲು ಅನುಕೂಲ ಮಾಡಿಕೊಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ದೊಡ್ಡ ದೊಡ್ಡ ಕಂಪನಿಗಳಿಗೂ ಆಸಕ್ತಿ

ಸದ್ಯಕ್ಕೆ ಗೂಗಲ್‌ನಲ್ಲಿ ಹಲವು ನಗರಗಳಲ್ಲಿ ವರ್ಚುವಲ್ ಫೀಲ್ಡ್‌ ಟ್ರಿಪ್‌ ನಡೆಸಬಹುದು. ‘ಸ್ಟ್ರೀಟ್ ವ್ಯೂ’ ಎಂಬ ಗೂಗಲ್‌ ಸೇವೆಯನ್ನೇ ಇದಕ್ಕೂ ಬಳಸಲಾಗಿದೆ. ಇನ್ನು ಭಾರತದಲ್ಲಿ ರಿಲಾಯನ್ಸ್‌ ಸಂಸ್ಥೆ ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವು ಸಂಸ್ಥೆಗಳನ್ನು ರಿಲಾಯನ್ಸ್‌ ಖರೀದಿ ಮಾಡಿದೆ. ಫೇಸ್‌ಬುಕ್‌ ಕೂಡ ‘ಒಕುಲಸ್’ ಎಂಬ ವಿಆರ್‌ ಹೆಡ್‌ಸೆಟ್‌ಗಳನ್ನು ತಯಾರಿಸುವ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಹಾಗೂ ತನ್ನದೇ ವಿಆರ್‌ ಸಿಸ್ಟಮ್ ಸಿದ್ಧಪಡಿಸಿದೆ. ಒಕುಲಸ್ ಹೆಡ್‌ಸೆಟ್‌ ಬಳಸಿಕೊಂಡು ಫೇಸ್‌ಬುಕ್ ಅನ್ನು ವಿಆರ್‌ ಹೆಡ್‌ಸೆಟ್‌ನಲ್ಲಿ ಬಳಕೆ ಮಾಡಬಹುದು.

ಮುಂದಿನ ವರ್ಷದಲ್ಲಿ ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಆಗ್ಮೆಂಟೆಡ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿ ಉದ್ಯಮ ಸುಮಾರು ₹ 14 ಸಾವಿರ ಕೋಟಿ ಆಗಲಿದೆ ಎಂದು ಊಹಿಸಲಾಗಿದೆ. ಅಂದರೆ, ಇದು ಎಷ್ಟು ದೊಡ್ಡ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರವನ್ನು ಆವರಿಸಿಕೊಳ್ಳಲಿದೆ ಎಂಬುದರ ಅಂದಾಜಾದೀತು.

ಉನ್ನತ ಶಿಕ್ಷಣದಲ್ಲಿ ಹೆಚ್ಚು ಪ್ರಭಾವ

ವರ್ಚುವಲ್ ರಿಯಾಲಿಟಿಯ ಜೊತೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಮತ್ತು ಆಗ್ಮೆಂಟೆಡ್‌ ರಿಯಾಲಿಟಿ ಕೂಡ ಸೇರಿದರೆ ಅದನ್ನು ಮಿಕ್ಸೆಡ್ ರಿಯಾಲಿಟಿ ಎನ್ನಲಾಗುತ್ತದೆ. ಈ ಮಿಕ್ಸೆಡ್ ರಿಯಾಲಿಟಿ ಈಗ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಿದೆ. ಸಾಮಾನ್ಯವಾಗಿ ಯಾವುದೇ ತಂತ್ರಜ್ಞಾನ ಮೊದಲು ಉನ್ನತ ಶಿಕ್ಷಣಕ್ಕೆ ಬಂದು, ನಂತರ ಮಾಧ್ಯಮಿಕ ಹಾಗೂ ಪ್ರಾಥಮಿಕ ಶಿಕ್ಷಣ ವಲಯಕ್ಕೆ ವಿಸ್ತಾರವಾಗುವುದು ಸಹಜ. ಮಿಕ್ಸೆಡ್ ರಿಯಾಲಿಟಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಹಾಗೂ ಕಂಪನಿಗಳು ಕೆಲಸ ಮಾಡುತ್ತಿವೆ.

ಕೆಲವು ಉದಾಹರಣೆಗಳು

ವಿಜ್ಞಾನದ ಹಲವು ಪರಿಕಲ್ಪನೆಗಳನ್ನು ಈಗ ವಾಸ್ತವವಾಗಿಸಬಹುದು. ಉದಾಹರಣೆಗೆ, ಚಂಡಮಾರುತ ಹೇಗೆ ಉತ್ಪತ್ತಿಯಾಗುತ್ತದೆ ಮತ್ತು ಅದು ಹೇಗೆ ಸಾಗುತ್ತದೆ ಎಂಬುದನ್ನು ಆಗ್ಮೆಂಟೆಡ್‌ ರಿಯಾಲಿಟಿ ಮೂಲಕ ತರಗತಿಯಲ್ಲೇ ಪ್ರಾಯೋಗಿಕವಾಗಿ ತೋರಿಸಬಹುದು. ಅಷ್ಟೇ ಅಲ್ಲ, ಜೇನುಗೂಡಿನಲ್ಲಿ ಜೇನುನೊಣಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಮಾದರಿಯನ್ನೂ ಪ್ರಾಯೋಗಿಕವಾಗಿ ತೋರಿಸಬಹುದು.

ಸ್ಕೈವ್ಯೂ ಎಂಬ ಆಪ್‌ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಮೊಬೈಲ್‌ನಲ್ಲಿ ಇಳಿಸಿಕೊಂಡು ಆಕಾಶಕ್ಕೆ ಹಿಡಿದರೆ, ಯಾವ ನಕ್ಷತ್ರ, ಗ್ರಹಗಳು ಎಲ್ಲೆಲ್ಲಿ ಇವೆ ಎಂಬುದನ್ನು ತೋರಿಸಿ ಹೇಳುತ್ತದೆ.

ವಿಜ್ಞಾನದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಈ ಹಿಂದೆ ಕಪ್ಪೆಗಳನ್ನು ಹಿಡಿದುತಂದು ಲ್ಯಾಬ್‌ನಲ್ಲಿ ಅವುಗಳ ಹೊಟ್ಟೆ ಸೀಳುತ್ತಿದ್ದವು. ಆದರೆ, ಈಗ ಫ್ರಾಗ್ಗಿಪೀಡಿಯಾ ಆ್ಯಪ್‌ ನಮಗೆ ಕಪ್ಪೆಯ ಎಲ್ಲ ಅಂಗಾಂಗವನ್ನೂ ಎಆರ್‌ ತಂತ್ರಜ್ಞಾನದ ಮೂಲಕ ಒದಗಿಸುತ್ತದೆ.

ಮೈಕ್ರೋಸಾಫ್ಟ್‌ನ ಹಾಲೋಲೆನ್ಸ್‌ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಿಕ್ಸೆಡ್‌ ರಿಯಾಲಿಟಿಯಲ್ಲಿ ಮಾನವನ ದೇಹದ ಅಧ್ಯಯನಕ್ಕೆ ಪ್ಲಾಟ್‌ಫಾರಂ ಅನ್ನು ನಿರ್ಮಾಣ ಮಾಡಿಕೊಟ್ಟಿದೆ.

ಸ್ಟೇಜ್‌ನ ಮೇಲೆ ನಿಂತು ಭಾಷಣ ಮಾಡಲು ಹೆದರಿಕೆ ಇರುವವರಿಗೆ ಆ ಭಯವನ್ನು ಹೋಗಲಾಡಿಸಲು ವರ್ಚುವಲ್ ಸ್ಪೀಚ್ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದೆ. ಈ ವೇದಿಕೆಯ ಎದುರು ಇರುವವರೆಲ್ಲ ವರ್ಚುವಲ್ ಜನರು. ಇವರ ಎದುರಿಗೆ ಮಾತನಾಡಿ ವೇದಿಕೆಯ ಮೇಲೆ ಮಾತನಾಡುವ ಭಯವನ್ನು ನಿವಾರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT