ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ನೇ ಖಂಡ ಗೊತ್ತೆ? ‘ಝೀಲ್ಯಾಂಡಿಯಾ’

Published 5 ಅಕ್ಟೋಬರ್ 2023, 0:09 IST
Last Updated 5 ಅಕ್ಟೋಬರ್ 2023, 0:09 IST
ಅಕ್ಷರ ಗಾತ್ರ

ಈ ವರೆಗೆ ವಿಶ್ವದಲ್ಲಿದ್ದ 7 ಖಂಡಗಳ ಪಟ್ಟಿಗೆ ಮತ್ತೊಂದು ಖಂಡ ಸೇರ್ಪಡೆಯಾಗಿದೆ. 375 ವರ್ಷಗಳಿಂದ ನಮ್ಮ ಜ್ಞಾನದಿಂದ ಕಾಣೆಯಾಗಿದ್ದ ಹೊಸ ಖಂಡವನ್ನು ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಹೊಸ ಖಂಡಕ್ಕೆ ‘ಝೀಲ್ಯಾಂಡಿಯಾ’ ಎಂದು ಹೆಸರಿಡಲಾಗಿದೆ. ಹೊಸ ಖಂಡವು ಶೇ 94ರಷ್ಟು ನೀರಿನ ಅಡಿಯಲ್ಲಿದೆ ಹಾಗೂ ನ್ಯೂಜಿಲೆಂಡ್‌ನಂತೆ ಕೆಲ ದ್ವೀಪಗಳ ಗುಂಪನ್ನು ಹೊಂದಿದೆ.

ಝೀಲ್ಯಾಂಡಿಯಾ  ಪ್ರಾಚೀನ ಮಹಾಖಂಡವಾದ ಗೊಂಡ್ವಾನಾದ ಭಾಗವಾಗಿತ್ತು ಎಂಬುದು ವಿಶೇಷ. ಝೀಲ್ಯಾಂಡಿಯಾ ವಿಶಾಲವಾದ ಖಂಡವಾಗಿದ್ದು, ಮಡಗಾಸ್ಕರ್‌ಗಿಂತ ಆರು ಪಟ್ಟು ದೊಡ್ಡದಾಗಿದೆ. 1.89 ದಶಲಕ್ಷ ಚದರ ಮೈಲುಗಳು ಅಥವಾ 4.9 ದಶಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.

ಹೆಸರು ಬಂದಿದ್ದು ಹೀಗೆ: ಝೀಲ್ಯಾಂಡಿಯಾ ಎಂಬ ಇಂಗ್ಲಿಷ್ ಪದವು ನ್ಯೂಜಿಲೆಂಡ್‌ನ ಲ್ಯಾಟಿನೇಟ್ ಮೂಲದ್ದಾಗಿದೆ. 1990ರ ದಶಕದ ಮಧ್ಯಭಾಗದಲ್ಲಿ ಈ ಹೆಸರನ್ನು ರೂಪಿಸಲಾಯಿತು. ಮಾವೋರಿ ಭಾಷೆಯಲ್ಲಿ ಈ ಭೂಪ್ರದೇಶವನ್ನು ‘ತೆ ರಿಯು-ಎ-ಮೌಯಿ’ ಎಂದು ಹೆಸರಿಸಲಾಗಿದೆ. ಇದರರ್ಥ ‘ಮೌಯಿ ಬೆಟ್ಟಗಳು, ಕಣಿವೆಗಳು ಮತ್ತು ಬಯಲು ಪ್ರದೇಶಗಳು’ ಎಂಬರ್ಥ ನೀಡುತ್ತದೆ.

ಸಂಪನ್ಮೂಲಗಳು :ಝೀಲ್ಯಾಂಡಿಯಾವು ಸಾಕಷ್ಟು ಆರ್ಥಿಕ ಸಂಪನ್ಮೂಲ ಹೊಂದಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದ ಕಡಲತೀರದ ಮೀನುಗಾರಿಕೆ ಇದೆ ಮತ್ತು ಅನಿಲ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ತಾರಾನಕಿ ಬಳಿಯ ನ್ಯೂಜಿಲೆಂಡ್ ಮಾಯಿ ಅನಿಲ ಕ್ಷೇತ್ರವು ದೊಡ್ಡದು. 2007ರಲ್ಲಿ ಗ್ರೇಟ್ ಸೌತ್ ಬೇಸಿನ್‌ನಲ್ಲಿ ತೈಲ ಪರಿಶೋಧನೆಗಾಗಿ ಅನುಮತಿಯನ್ನು ನೀಡಲಾಯಿತು. ಕಡಲಾಚೆಯ ಖನಿಜ ಸಂಪನ್ಮೂಲಗಳಲ್ಲಿ ಕಬ್ಬಿಣಾಂಶಭರಿತ ಮರಳು, ಬೃಹತ್ ಜ್ವಾಲಾಮುಖಿ ಸಲ್ಫೈಡ್‌ಗಳು ಮತ್ತು ಫೆರೋಮಾಂಗನೀಸ್ ಗಂಟು ನಿಕ್ಷೇಪಗಳು ಸೇರಿವೆ.

ಭೂವೈಜ್ಞಾನಿಕ ಉಪವಿಭಾಗಗಳು ಝೀಲ್ಯಾಂಡಿಯಾವನ್ನು ಸಾಂದರ್ಭಿಕವಾಗಿ ವಿಜ್ಞಾನಿಗಳು ಎರಡು ಪ್ರದೇಶಗಳಾಗಿ ವಿಂಗಡಿಸಿದ್ದಾರೆ. ಒಂದು ಉತ್ತರ ಝಿಲ್ಯಾಂಡಿಯಾ ಅಥವಾ ಪಶ್ಚಿಮ ಪ್ರಾಂತ್ಯ. ಇನ್ನೊಂದು ದಕ್ಷಿಣ ಝಿಲ್ಯಾಂಡಿಯಾ ಅಥವಾ ಪೂರ್ವ ಪ್ರಾಂತ್ಯ. ಈ ಎರಡು ವೈಶಿಷ್ಟ್ಯಗಳನ್ನು ಆಲ್ಫೈನ್‌ ಫಾಲ್ಟ್ ಮತ್ತು ಕೆರ್ಮಾಡೆಕ್ ಟ್ರೆಂಚ್ ಮತ್ತು ಬೆಣೆಯಾಕಾರದ ಹಿಕುರಂಗಿ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸಲಾಗಿದೆ.

2022ರ ಹೊತ್ತಿಗೆ, ಝೀಲ್ಯಾಂಡಿಯಾದ ಒಟ್ಟು ಮಾನವ ಜನಸಂಖ್ಯೆಯು ಸರಿಸುಮಾರು 5.4 ದಶಲಕ್ಷ ಆಗಿದೆ. ಸುಮಾರು 1.7 ದಶಲಕ್ಷ ಜನಸಂಖ್ಯೆ ಹೊಂದಿರುವ ಆಕ್ಲೆಂಡ್ ದೊಡ್ಡ ನಗರವಾಗಿದ್ದು, ಖಂಡದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗ ಹೊಂದಿದೆ.

ಪತ್ತೆ ಹಚ್ಚಿದ್ದು ಹೀಗೆ

ಎಂಟನೇ ಖಂಡದ ಬಹುಭಾಗವು ನೀರಿನಲ್ಲಿ ಮುಳುಗಿರುವುದರಿಂದ ಸಾಗರ ತಳದಲ್ಲಿನ ಬಂಡೆಗಳ ಮಾದರಿಗಳ ದತ್ತಾಂಶಗಳಿಂದ ಝೀಲ್ಯಾಂಡಿಯಾದ ಹೊಸ ನಕ್ಷೆ ರೂಪಿಸಲಾಗಿದೆ. ಅನೇಕ ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರನ್ನು ಒಳಗೊಂಡ ಅಂತರರಾಷ್ಟ್ರೀಯ ತಂಡವು ಝೀಲ್ಯಾಂಡಿಯಾದ ಸಂಸ್ಕರಿಸಿದ ನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ.

ಹೊಸ ಖಂಡವನ್ನು ಅಧ್ಯಯನ ಮಾಡುವುದು ವಿಜ್ಞಾನಿಗಳಿಗೆ ಸವಾಲಾಗಿತ್ತು. ಏಕೆಂದರೆ ಖಂಡದ ಬಹುಭಾಗವು ನೀರಿನಲ್ಲಿ ಮುಳುಗಿತ್ತು. ಸಮುದ್ರದ ತಳದಿಂದ ಬೆಳೆದ ಬಂಡೆಗಳು ಮತ್ತು ಕೆಸರು ಮಾದರಿಗಳ ಸಂಗ್ರಹಗಳನ್ನು ಅಧ್ಯಯನಕ್ಕೆ ಒಳಪಡಿಸಿದರು. ಹಲವಾರು ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರನ್ನು ಒಳಗೊಂಡಿರುವ ವಿಭಿನ್ನ ಸಂಶೋಧನಾ ತಂಡವು ಉತ್ತರ ಝೀಲ್ಯಾಂಡಿಯಾದ  ಮೇಲೆ ಗಮನ ಕೇಂದ್ರೀಕರಿಸಿತ್ತು. ನಿರ್ದಿಷ್ಟವಾಗಿ ಆಸ್ಟ್ರೇಲಿಯಾದ ಕರಾವಳಿಯ ದಕ್ಷಿಣ ಪೆಸಿಫಿಕ್‌ನಲ್ಲಿರುವ ಫೇರ್‌ವೇ ರಿಡ್ಜ್ ಪ್ರದೇಶ, ಝೀಲ್ಯಾಂಡ್‌ನ ಉತ್ತರದ ತುದಿ. ಅಲ್ಲಿ ಜ್ವಾಲಾಮುಖಿ ಮತ್ತು ಸೆಡಿಮೆಂಟರಿ ರಚನೆಗಳ ಮಿಶ್ರಣವನ್ನು ಒಳಗೊಂಡಿರುವ 25 ಮಿಲಿಯನ್ ವರ್ಷಗಳವರೆಗೆ ಒಣ ಭೂಮಿಯಿಂದ ಸ್ಪರ್ಶಿಸದ ಪ್ರಾಚೀನ ಬಂಡೆಗಳನ್ನು  ಭೂವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

 ರಸಾಯನವಿಜ್ಞಾನ ಮತ್ತು ವಿಕಿರಣಶೀಲ ಐಸೊಟೋಪ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಮೂಲಕ, ಅವರು ಬಂಡೆಗಳ ವಯಸ್ಸನ್ನು ನಿರ್ಧರಿಸಿದರು. ಆರಂಭಿಕ ಕ್ರಿಟೇಶಿಯಸ್‌ನಿಂದ ಉಂಡೆಗಳನ್ನೂ, ಕ್ರಿಟೇಶಿಯಸ್‌ನಿಂದ ಮರಳುಗಲ್ಲು ಮತ್ತು ಈಯೋಸೀನ್‌ನಿಂದ ಕಿರಿಯ ಬಸಾಲ್ಟ್‌ಗಳನ್ನು ಪತ್ತೆಹಚ್ಚಿದರು. ಅಸ್ಪಷ್ಟ ಭೂಪ್ರದೇಶವಾಗಿದ್ದ ಝೀಲ್ಯಾಂಡಿಯಾವನ್ನು ವಿಭಿನ್ನ ಭೌಗೋಳಿಕತೆಯಿಂದ ನಿರೂಪಿಸಲ್ಪಟ್ಟ ಪ್ರದೇಶವಾಗಿ ಪರಿವರ್ತಿಸಿದರು.

ಪಶ್ಚಿಮ ಅಂಟಾರ್ಕ್ಟಿಕಾ ಹಾಗೂ ಸುತ್ತಮುತ್ತಲಿನ ಸಾಗರ ತಳದಲ್ಲಿನ ಕಾಂತೀಯ ವೈಪರೀತ್ಯಗಳನ್ನು ಪರಿಶೀಲಿಸಿ, ಅದರ ಪ್ರಾಚೀನ ವಿಸ್ತರಣೆ ಮತ್ತು ದಿಕ್ಕಿನ ಪಲ್ಲಟಗಳ ಮೇಲೆ ಬೆಳಕು ಚೆಲ್ಲಿದರು. ಹೀಗೆ ವಿವಿಧ ಅಧ್ಯಯನಗಳ ನಂತರ ಇದೊಂದು ಮುಳುಗಿದ ಹಾಗೂ ಅತಿ ತೆಳು ಖಂಡ ಎಂದು ಅಂತಿಮಗೊಳಿಸಿದರು. ನವೀಕರಿಸಿದ ನಕ್ಷೆಯು ಝೀಲ್ಯಾಂಡಿಯಾ ಖಂಡವನ್ನು ರೂಪಿಸುವ ಮ್ಯಾಗ್ಮ್ಯಾಟಿಕ್ ಆರ್ಕ್ ಅಕ್ಷದ ಸ್ಥಳವನ್ನು ಮತ್ತು ಹಲವಾರು ಪ್ರಮುಖ ಭೂವೈಜ್ಞಾನಿಕ ಲಕ್ಷಣಗಳನ್ನು ತೋರಿಸಿದೆ.

1642ರಲ್ಲಿ ಡಚ್ ಪರಿಶೋಧಕ ಅಬೆಲ್ ಟ್ಯಾಸ್ಮನ್ ಝೀಲ್ಯಾಂಡಿಯಾ ಖಂಡದ ಬಗ್ಗೆ ಒಂದಿಷ್ಟು ಅನುಮಾನ  ವ್ಯಕ್ತಪಡಿಸಿದ್ದರು. ಆದರೆ ನಿರ್ದಿಷ್ಟ ಅಧ್ಯಯನದ ಕೊರತೆಯಿಂದ ಅದು ಅಂತಿಮಗೊಂಡಿರಲಿಲ್ಲ. 1995 ರಲ್ಲಿ ಬ್ರೂಸ್ ಲ್ಯುಯೆಂಡಿಕ್ ಅವರು ಝೀಲ್ಯಾಂಡಿಯಾದ ಹೆಸರು ಮತ್ತು ಪರಿಕಲ್ಪನೆಯನ್ನು ಪುನರ್ ಪ್ರಸ್ತಾಪಿಸಿದರು. ಉಪಗ್ರಹದ ಚಿತ್ರಗಳ ಆಧಾರದ ಮೇಲೆ 2021ರ ಅಧ್ಯಯನವು ಝೀಲ್ಯಾಂಡಿಯಾವು ಭೂವಿಜ್ಞಾನಿಗಳು ಹಿಂದೆ ಭಾವಿಸಿದ್ದಕ್ಕಿಂತ ಎರಡು ಪಟ್ಟು ಹಳೆಯದು. ಅಂದರೆ ಅದು ಒಂದು ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ ಎಂದು ಸೂಚಿಸುತ್ತದೆ ಎಂದು ತೀರ್ಮಾನಿಸಿದರು. ಸುಮಾರು 23 ದಶಲಕ್ಷ ವರ್ಷಗಳ ಹಿಂದೆ ಭೂಪ್ರದೇಶವು ಸಂಪೂರ್ಣವಾಗಿ ಮುಳುಗಿ ಹೋಗಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. 2017ರಿಂದ ಪ್ರಾರಂಭವಾದ ಅಧ್ಯಯನ 2023ರಲ್ಲಿ ಮುಕ್ತಾಯಗೊಂಡಿದ್ದು, ಹೊಸ ನಕ್ಷೆಯನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT