ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಪಾಸಾದ್ರೆ ಸಂತೋಷ, ಫೇಲಾದ್ರೆ ಚಿಂತೆಬೇಡ, ಇನ್ನೊಮ್ಮೆ ಯತ್ನಿಸಿ

Last Updated 26 ಏಪ್ರಿಲ್ 2019, 12:39 IST
ಅಕ್ಷರ ಗಾತ್ರ

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ. ಮೌಲ್ಯಮಾಪನ ನಿರಾತಂಕವಾಗಿ ನಡೆದರೆ ತಿಂಗಳ ನಂತರ ಎಸ್ಸೆಸ್ಸೆಲ್ಸಿ ಫಲಿತಾಂಶವೂ ಬರಬಹುದು.

ವಿದ್ಯಾರ್ಥಿಗಳಲ್ಲಿ ಪಾಲಕರಲ್ಲಿ ಸಹಜವಾಗಿ ಸ್ವಲ್ಪ ಟೆನ್ಷನ್ ಶುರುವಾಗಿದೆ. ಆದರೆ ನೆನಪಿಡಬೇಕಾದ ಸಂಗತಿಯೆಂದರೆ ನಾವು ಎಷ್ಟು ಬೇಕೋ ಅಷ್ಟು ಮಾತ್ರ ಪ್ರಾಮುಖ್ಯತೆಯನ್ನು ಈ ಫಲಿತಾಂಶಗಳಿಗೆ ನೀಡಬೇಕು. ಯಾಕೆಂದರೆ ಅದೊಂದೇ ನಮ್ಮ ಜೀವನವನ್ನು ನಿರ್ಧರಿಸುವಂತದ್ದಲ್ಲ.

ಫಲಿತಾಂಶ ನೋಡುವ ಮುನ್ನ ಒಂದಷ್ಟು ಅಂಶಗಳ ಕಡೆ ನಿಮ್ಮ ಗಮನವಿರಲಿ. ಫಲಿತಾಂಶ ನೋಡುವ ವೆಬ್ ಸೈಟ್ ಅಧಿಕೃತವಾಗಿರಲಿ. ಯಾವುದೇ ಮಾಧ್ಯಮವಿರಲಿ ನಿಮ್ಮ ಫಲಿತಾಂಶ ಸಮಧಾನಚಿತ್ತರಾಗಿ ನೀವೇ ನೋಡಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಅತೀಯಾದ ಉದ್ವಿಗ್ನತೆ , ಭಯ ಅಥವಾ ಆತ್ಮವಿಶ್ವಾಸ ಯಾವುದೂ ಒಳ್ಳೆಯದಲ್ಲ. ನಿಮ್ಮ ಫಲಿತಾಂಶವನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಿ ನೋಡಲು ಹೋಗಬೇಡಿ. ಉಳಿದವರ ಅಂಕಗಳನ್ನು ಕಟ್ಟಿಕೊಂಡು ನಿಮಗೆ ಆಗಬೇಕಾದ್ದಾದರೂ ಏನು? ಸರಿಯಾಗಿ ಉತ್ತರಿಸಿದ್ದರೂ ನಿಮಗೆ ಕಡಿಮೆ ಅಂಕ ಬಂದಿದೆ ಎಂದರೆ ಮರು ಮೌಲ್ಯಮಾಪನಕ್ಕೂ ಅವಕಾಶವಿದೆ ಎನ್ನುವುದನ್ನು ಮರೆಯದಿರಿ.

ಆಕಸ್ಮಾತ್ ನಪಾಸಾದಿರಿ ಅಂತಾದರೆ ಅದಕ್ಕೆ ವಿವಿಧ ಕಾರಣಗಳಿರಬಹುದು. ಆದರೆ ನೆನಪಿರಲಿ ನೀವು ಫೇಲ್ ಆಗಿರೋದು ಶಿಕ್ಷಣರಂಗದ ಒಂದು ಪರೀಕ್ಷೆಯಲ್ಲಿ ಮಾತ್ರ ನಿಮ್ಮ ಜೀವನದಲ್ಲಿ ಅಲ್ಲ. ಅದನ್ನು ನೀವು ತೀರಾ ಅವಮಾನಕರ ಎಂದು ಭಾವಿಸುವುದು ಖಂಡಿತಾ ತಪ್ಪು. ನಿಜಕ್ಕೂ ನಮ್ಮ ಫಲಿತಾಂಶದ ಬಗೆಗೆ ಉಳಿದವರು ಕೇಳುವಾಗ ನಾವು ಫೇಲ್ ಅನ್ನಲು ಖಂಡಿತಾ ಮುಜುಗರ ಆಗುತ್ತೆ. ಅವಮಾನ ಅನ್ನಿಸಲೂ ಬಹುದು. ಆದರೆ ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಳ್ಳಿ. ಬೇರೆಯವರು ಕೇಳುವ ಮೊದಲೇ ಈಬಾರಿ ನನ್ನಿಂದ ಒಂದು ಸಣ್ಣ ಮಿಸ್ಟೇಕ್ ಆಯಿತು. ಹಾಗಾಗಿ ರಿಸಲ್ಟ್ ಹೋಯ್ತು ಮರಾಯ್ರೆ ಏನೂ ಮಾಡೋಕಾಗಲ್ಲ. ಮುಂದೆ ಸರಿ ಮಾಡ್ತೀನಿ ಅಂತ ನೀವೆ ಒಂದು ಆತ್ಮವಿಶ್ವಾಸದ ಧ್ವನಿಯಲ್ಲಿ ಹೇಳಿಬಿಡಿ. ಆತ್ಮವಿಶ್ವಾಸವೆಂದರೆ ಅದು ಉಡಾಫೆ ಆಗದಿರಲಿ.

ಮುಂದೇನು ಮಾಡುತ್ತಿ ಅಂತೆಲ್ಲಾ ಕೇಳುವವರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡುತ್ತಾ ಕುಳಿತುಕೊಳ್ಳಬೇಡಿ. ನಿಮಗೆ ಮುಂದಿನ ಭವಿಷ್ಯದ ಬಗೆಗೆ ಯೋಚಿಸಲು ನಿಮ್ಮ ಬಳಿ ಬೇಕಾದಷ್ಟು ಸಮಯವಿದೆ. ಮತ್ತು ನಿಮ್ಮ ಬದುಕನ್ನು ಬಹಳ ಸುಂದರವಾಗಿ ರೂಪಿಸಿಕೊಳ್ಳಲು ನೂರಾರು ದಾರಿಗಳು ತೆರೆದುಕೊಂಡೇ ಇರುತ್ತವೆ. ಅದನ್ನು ಬಿಟ್ಟು ಕೇವಲ ಪರೀಕ್ಷೆಯೊಂದರಲ್ಲಿ ಫೇಲಾದೆ ಅಥವಾ ಕಡಿಮೆ ಅಂಕ ಗಳಿಸಿದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವಕ್ಕೆ ಒಳಗಾಗುವುದು ಮೂರ್ಖತನ. ಅಂತಹ ನಿರ್ಧಾರಗಳಿಂದ ನಮ್ಮ ಹೆತ್ತವರಿಗೆ ಪ್ರೀತಿ ಪಾತ್ರರಿಗೆ ಮತ್ತಷ್ಟು ಶಾಶ್ವತವಾದ ನೋವನ್ನು ಕೊಡುವುದು ಕೊಡುವುದು ಸರಿಯಲ್ಲ ಅಲ್ಲವೆ? ನಿಮ್ಮ ಈ ಒಂದು ಸಣ್ಣ ತಪ್ಪಿಗೆ ಅವರಲ್ಲಿ ಕ್ಷಮೆ ಖಂಡಿತಾ ಇದ್ದೇ ಇರುತ್ತದೆ. ಅಷ್ಟಕ್ಕೂ ಮುಂದೆ ಅವರನ್ನು ನೋಡಿಕೊಳ್ಳಬೇಕಾದವರು ಅವರ ಸುಖದುಃಖಗಳಿಗೆ ಸ್ಪಂದಿಸಬೇಕಾದವರು ನಾವೇ ಅಲ್ಲವೇ? ಈಸಬೇಕು ಇದ್ದು ಜೈಸಬೇಕು. ಸೋಲು ಗೆಲುವು ಇರುವಂತಾದ್ದೆ. ನಮ್ಮ ಪ್ರಯತ್ನಗಳು ಮಾತ್ರ ನಿರಂತರವಾಗಿರಬೇಕು. ಮತ್ತು ನಮ್ಮ ಗುರಿ ಗೆಲುವಿನೆಡೆಗಿರಬೇಕು. ಹಾಗಾದಾಗ ಒಂದಲ್ಲ ಒಂದು ದಿನ ಯಶಸ್ಸು ಕಟ್ಟಿಟ್ಟ ಬುತ್ತಿ.

ಅಂದಹಾಗೆ ಫೇಲಾದ ವಿದ್ಯಾರ್ಥಿಗಳನ್ನು ವ್ಯಂಗ್ಯವಾಗಿ ನೋಡುವುದಾಗಲಿ, ಅವರ ಬಗೆಗೆ ಇತರರ ಬಳಿ ಗುಸು ಗುಸು ಮಾತನಾಡುವುದಾಗಲಿ ಅಥವಾ ಅವರನ್ನು ಸಂಪೂರ್ಣ ಕಡೆಗಣಿಸುವುದಾಗಲಿ ಮಾಡಬೇಡಿ. ಸಾಧ್ಯವಾದರೆ ಅವರಿಗೊಂದಿಷ್ಟು ಧೈರ್ಯವನ್ನು ತುಂಬಿ. ಭರವಸೆಯನ್ನು ನೀಡಿರಿ. ಫೇಲಾದ ವಿದ್ಯಾರ್ಥಿ/ನಿ ಮನೆಗೆ ಫೋನು ಮಾಡಿ ಪದೇ ಪದೇ ವಿಚಾರಣೆ ಮಾಡುವ ಗೋಜಿಗೆ ಹೋಗಬೇಡಿ. ಒಮ್ಮೆ ಕಾಲ್ ರಿಸೀವ್ ಮಾಡಿಲ್ಲ ಎಂದಾದಲ್ಲಿ ಮತ್ತೆ ಮತ್ತೆ ಕಾಲ್ ಮಾಡುತ್ತಲೇ ಇರಬೇಡಿ. ಸಾಧ್ಯವಾದಲ್ಲಿ ಅವರನ್ನು ನೇರವಾಗಿ ಭೇಟಿಯಾಗಿ ಒಂದಿಷ್ಟು ಭರವಸೆಯ ಮಾತುಗಳನ್ನಾಡುವುದು ಉತ್ತಮ. ಪರಿಸ್ಥಿತಿ ಅರಿತು ಪ್ರತಿಕ್ರಿಯಿಸುವ ಜಾಣ್ಮೆ ನಿಮ್ಮಲ್ಲಿರಲಿ.

ಇಂತಹ ಸಂದರ್ಭಗಳಲ್ಲಿ ಹೆತ್ತವರು ಸ್ವಲ್ಪ ವ್ಯವಧಾನದಿಂದ ವರ್ತಿಸಬೇಕು. ನಿಮ್ಮ ಮಕ್ಕಳ ಬದಲಾವಣೆಗಳನ್ನು ಸೂಕ್ಷವಾಗಿ ಗಮನಿಸುತ್ತಿರಿ. ಒಮ್ಮೆಗೆ ಬೈದರೂ ಮತ್ತೆ ಅವರನ್ನು ಕುಳ್ಳಿರಿಸಿಕೊಂಡು ಅವರಲ್ಲಿ ಹೊಸ ಭರವಸೆ ತುಂಬುವ ಏನನ್ನಾದರೂ ಸಾಧಿಸುವ ಆತ್ಮವಿಶ್ವಾಸ ನೀಡುವ ಮಾತುಗಳನ್ನಾಡಿ. ನಿಮ್ಮ ಜೊತಗೆ ನಾವು ಸದಾ ಇರುತ್ತೀವಿ ಎನ್ನುವ ಧೈರ್ಯವನ್ನು ಕೊಡಿರಿ. ಅವರನ್ನು ಏಕಾಂಗಿಯಾಗಿರಲು ಬಿಡಬೇಡಿ. ಅವರೊಂದಿಗೆ ಫಲಿತಾಂಶ ಬಿಟ್ಟು ಬೇರೆ ವಿಷಯಗಳ ಬಗೆಗೆ ಎಂದಿನಂತೆ ಚರ್ಚಿಸಿ. ಸ್ವಲ್ಪ ದಿನ ಕಳೆದರೆ ಹೊಸ ದಾರಿ ಹೊಸ ಹೊಳವು ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಅದಕ್ಕೆ ಅವಕಾಶ ಮಾಡಿಕೊಡುವಲ್ಲಿ ನಾವು ಸಿದ್ದರಾಗಿರಬೇಕು. ಅಷ್ಟೆ. ಅದಕ್ಕೆ ಹೇಳಿದ್ದು ಪರೀಕ್ಷೆಯ ಫೇಲು ಜೀವನದ ಸೋಲಲ್ಲ ಅಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT