ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವಿನಂಥ ಕತ್ತುಳ್ಳ ಡಾರ್ಟರ್ ಪಕ್ಷಿ!

Last Updated 28 ಮಾರ್ಚ್ 2019, 6:08 IST
ಅಕ್ಷರ ಗಾತ್ರ

ವಿಭಿನ್ನ ಜೀವನಶೈಲಿ ಮತ್ತು ಆಕರ್ಷಕ ದೇಹ ರಚನೆಯಿಂದಗಮನ ಸೆಳೆಯುವ ಪಕ್ಷಿ ಪ್ರಭೇದಗಳು ಹಲವು ಇವೆ. ಅಂಥವುಗಳಲ್ಲಿ ನೀರು ಕಾಗೆ ಕೂಡ ಒಂದು. ಸಂಸ್ಕೃತದಲ್ಲಿ ಇದನ್ನು ಜಲಕಾಕ ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಡಾರ್ಟರ್ ಬರ್ಡ್ (Dorter Bird) ಎನ್ನುತ್ತಾರೆ. ಅನ್‌ಹಿಂಗಿಡೆ (Anhingidae) ಕುಟುಂಬಕ್ಕೆ ಸೇರಿದ ಈ ಹಕ್ಕಿಯ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ.

ಸ್ವಾರಸ್ಯಕರ ಸಂಗತಿಗಳು

* ಜೀವಿತಾವಧಿಯಲ್ಲಿ ಒಂದು ಬಾರಿ ತನ್ನ ಎಲ್ಲ ಗರಿಗಳನ್ನು ಉದುರಿಸಿಕೊಳ್ಳುತ್ತದೆ. ಮತ್ತೆ ಹೊಸದಾಗಿ ಗರಿಗಳು ಮೂಡುವ ತನಕ ಇದಕ್ಕೆ ಹಾರಲು ಆಗುವುದಿಲ್ಲ.

* ಬೇಟೆಯನ್ನು ಬೆಂಬತ್ತಿ ಹೋಗುವಾಗ ಸುಮಾರು ಎರಡು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಯೇ ಇರುವ ಸಾಮರ್ಥ್ಯ ಹೊಂದಿದೆ.

* ಮರಿಗಳು ಹಾರುವುದನ್ನು ಕಲಿಯುವುದಕ್ಕಿಂತ ಮೊದಲು ಈಜಾಡುವುದನ್ನು ಕಲಿಯುತ್ತವೆ!

ಹೇಗಿರುತ್ತದೆ?

ಇದರ ಉದ್ದನೆಯ ಕತ್ತು ಮತ್ತು ತಲೆ ಹಾವನ್ನು ಹೋಲುತ್ತದೆ. ಇದು ನೀರಿನಲ್ಲಿ ಮುಳುಗಿ ಕತ್ತನ್ನಷ್ಟೇ ಮೇಲಕ್ಕೆತ್ತಿ ಸಾಗುವಾಗ ಹಾವಿನಂತೆ ಕಾಣುತ್ತದೆ. ಹೀಗಾಗಿ ಇದಕ್ಕೆ ‘ಸ್ನೇಕ್ ಬರ್ಡ್' ಎಂದು ಕರೆಯುತ್ತಾರೆ. ನೀರಿನಲ್ಲಿ ಹೆಚ್ಚು ಹೊತ್ತು ಮುಳುಗಿದ್ದರೂ ಹಾನಿಯಾಗದ ಗರಿಗಳು ಇವಕ್ಕೆ ಪೃಕೃತಿ ದತ್ತ ಕೊಡುಗೆ. ಬಲವಾದ ಕೊಕ್ಕು, ಸದೃಢ ಜಾಲಪಾದಗಳನ್ನು ಹೊಂದಿದ್ದು, ಚುರುಕು ಕಣ್ಣು, ಮತ್ತು ಉತ್ತಮವಾದ ಶ್ರವಣ ಶಕ್ತಿಯನ್ನು ಹೊಂದಿದೆ.

ಆಹಾರ

ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ಹೆಚ್ಚಾಗಿ ಮೀನು, ಈಲ್‌, ಸಣ್ಣ ಹಾವುಗಳನ್ನು ತಿನ್ನುತ್ತದೆ. ಇವಷ್ಟೇ ಅಲ್ಲದೇ ನೀರಿನಲ್ಲಿ ತೇಲಿಬರುವ ಎಲ್ಲ ಮೃತ ಪ್ರಾಣಿಗಳನ್ನೂ ಭಕ್ಷಿಸುತ್ತದೆ.

ಎಲ್ಲಿದೆ?

ಇವು ಹೆಚ್ಚಾಗಿ ಉಷ್ಣವಲಯದ ಸರೋವರ, ನದಿ, ಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ. ಲಗೂನ್ ಮತ್ತು ಮ್ಯಾಂಗ್ರೂವ್‌ ಅರಣ್ಯಗಳಲ್ಲಿ ಕಂಡುಬರುತ್ತವೆ. ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ವರ್ತನೆ ಮತ್ತು ಜೀವನಕ್ರಮ

ನೀರಿನಿಂದ ಮೇಲಕ್ಕೆದ್ದು ಜಿಗಿಯುವ ಮೀನುಗಳನ್ನು ತಿನ್ನುವುದು ಈ ಹಕ್ಕಿಯ ವೈಶಿಷ್ಟ್ಯ. ಇದು ತಮ್ಮ ಒದ್ದೆಯಾದ ರೆಕ್ಕೆಗಳನ್ನು ಒಣಗಿಸಿಕೊಳ್ಳಲು ಮರದ ಟೊಂಗೆಗಳ ಮೇಲೆ ಅಥವಾ ಬಂಡೆಗಳ ಮೇಲೆ ವಿರಮಿಸುತ್ತದೆ. ನೀರಿರುವ ಪ್ರದೇಶಕ್ಕೆ ಹೊಂದಿಕೊಂಡು ಗೂಡು ನಿರ್ಮಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ವಲಸೆ ಹೋಗುತ್ತವೆ. ಹಾರುವಾಗ ಗುಂಪಿನಲ್ಲಿ ಒಂದು ಹಕ್ಕಿ ಮುಂದಕ್ಕೆ, ಉಳಿದವು ಅದರ ಹಿಂದೆ ಬಾಣದ ಮಾದರಿಯಲ್ಲಿ ಹಾರುತ್ತದೆ. ರಾತ್ರಿಯಾದಂತೆ ಎತ್ತರದ ಮರಗಳ ಮೇಲೆ ಆಶ್ರಯ ಪಡೆಯುತ್ತವೆ. ನಿಶ್ಯಬ್ದವಾಗಿರುವುದು ಇವುಗಳ ಸ್ವಭಾವ.

ಸಂತಾನೋತ್ಪತ್ತಿ

ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ಹಕ್ಕಿ ವರ್ಷದಲ್ಲಿ ಒಮ್ಮೆಗೆ 2 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಅವುಗಳಿಗೆ 25 ರಿಂದ 30 ದಿನಗಳವರೆಗೆ ಕಾವು ಕೊಡುತ್ತದೆ. ಮರಿಗಳಿಗೆ ಆಹಾರ ಉಣಿಸುವ ಜವಾಬ್ದಾರಿಯೂ ತಾಯಿ ಹಕ್ಕಿಯದ್ದೇ. ಇವು ಪ್ರೌಢಾವಸ್ಥೆಗೆ ತಲುಪಲು ಸುಮಾರು ಎರಡು ವರ್ಷ ಬೇಕು. ವಾಸಸ್ಥಾನಗಳ ನಾಶದಿಂದ ಇವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಈಗಾಗಲೇ ಇದು ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಪಟ್ಟಿಗೆ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT